ದೀಪಾವಳಿಯಲ್ಲಿ `ಢಂ~ ಎನ್ನಿಸಲು ಮಕ್ಕಳಿಗೆ ಲಕ್ಷ್ಮಿಪಟಾಕಿ, ಆನೆಪಟಾಕಿ, ಸುರುಸುರುಬತ್ತಿ ಮುಂತಾದ ನಮುನಮೂನಿ ಪಟಾಕಿಗಳನ್ನು ಮನೆಗೆ ತಂದಿದ್ದ ತೆಪರೇಸಿ. ಆದರೆ ಮಕ್ಕಳದ್ದು ಒಂದೇ ಹಠ. ನಮಗೆ ಈ ರಮಾದೇವಿ ಕಾಲದ ಪಟಾಕಿಗಳು ಬೇಡ, ಹೊಸ ಫ್ಯಾನ್ಸಿ ಪಟಾಕಿಗಳು ಬೇಕು. ಪಾಕಿಸ್ತಾನದಲ್ಲಿ ಪಟಾಕಿ ಹಚ್ಚಿದ್ರೆ, ಅಮೇರಿಕದಲ್ಲಿ `ಢಂ~ ಅನ್ನಬೇಕು, ಆತರಹ ಪಟಾಕಿ ಕೊಡಿಸು ಎಂದು ದುಂಬಾಲು ಬಿದ್ದವು.
ಇದೊಳ್ಳೆ ಫಜೀತಿಯಾಯ್ತಲ್ಲ, ಪಟಾಕಿ ಪರ‌್ಮೇಶಿ ಇವನ್ನೆಲ್ಲ ವಾಪಾಸ್ ತಗೋತಾನೋ ಇಲ್ಲವೋ ಎಂದು ಪೇಚಾಡಿದ ತೆಪರೇಸಿ, ನೋಡೋಣ ಎಂದು ಮಕ್ಕಳನ್ನೂ ಕರೆದುಕೊಂಡು ಪಟಾಕಿ ಅಂಗಡಿಗೆ ಹೋದ.
`ನೋಡಪ್ಪಾ ಪರ‌್ಮೇಶಿ, ಮಕ್ಕಳಿಗೆ ಈ ಹಳೆ ಕಾಲದ ಪಟಾಕಿಗಳು ಬೇಡವಂತೆ. ಹೊಸ ತರದ ಫ್ಯಾನ್ಸಿ ಪಟಾಕಿಗಳು ಇದಾವಾ?~ ತೆಪರೇಸಿ ವಿಚಾರಿಸಿದ.
ಪರ‌್ಮೇಶಿಗೆ ಖುಷಿಯಾಯಿತು. `ಓ ಇದಾವೆ ಬನ್ನಿ ಸಾ, ಎಲ್ಲ ಹೊಸ ಸ್ಟಾಕು. ಮೊನ್ನೆ ತಾನೇ ಮಾರ್ಕೆಟ್‌ಗೆ ಬಿಟ್ಟಿದಾರೆ. ಆದ್ರೆ ಸ್ವಲ್ಪ ದುಬಾರಿ~ ಎಂದ ಉತ್ಸಾಹದಿಂದ.
`ಆಗ್ಲಿ ತೋರ‌್ಸಪ್ಪ~ ಎಂದ ತೆಪರೇಸಿ, `ಲೇ ನೋಡ್ರೋ, ನಿಮಗೆ ಯಾವುದು ಇಷ್ಟ ಆಗುತ್ತೆ ತಗೊಳ್ರಿ~ ಎಂದು ಮಕ್ಕಳಿಗೆ ಹೇಳಿದ.
ಪರ‌್ಮೇಶಿ ಬಾಕ್ಸ್ ಒಂದರ ಸೀಲ್ ಓಪನ್ ಮಾಡಿ `ನೋಡಿ ಸಾ, ಇದು ಲೇಟೆಸ್ಟ್ ಬಿಜೆಪಿ ಪಟಾಕಿ. ಕಮಲದ ಬ್ರ್ಯಾಂಡು. ಇದಕ್ಕೆ ಬೆಂಕಿ ತಗುಲಿಸಿದ್ರೆ ಭಾರೀ ಸೌಂಡ್‌ನೊಂದಿಗೆ ಕಮಲ ಇಬ್ಭಾಗ ಆಗಿ ಸೈಕಲ್ ಆಚೆ ಬರುತ್ತೆ. ಮಕ್ಕಳು ಸಖತ್ ಎಂಜಾಯ್ ಮಾಡ್ತಾರೆ~ ಎಂದ.
ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ `ಪಪ್ಪಾ ಇದು ಚೆನ್ನಾಗಿದೆ, ಇದರ ಜೊತೆಗೆ ಸೈಕಲ್ ಪಟಾಕಿನೂ ಕೊಡ್ಸು~ ಎಂದವು.
ತಕ್ಷಣ ಪರ‌್ಮೇಶಿ `ಸೈಕಲ್ ಪಟಾಕಿ ಇನ್ನೂ ಬಂದಿಲ್ಲ ಕಣ್ರೋ, ಹಾವೇರೀಲಿ ಡಿಸೆಂಬರ್‌ನಲ್ಲಿ ಮಾರ್ಕೆಟ್‌ಗೆ ಬಿಡ್ತಾರಂತೆ. ಅದರ ಬದ್ಲು ಇದನ್ನ ತಗೊಳ್ಳಿ, ರಾಮುಲು ಪಟಾಕಿ ಅಂತ. ಹಚ್ಚಿದ್ರೆ `ಢಂ~ ಅನ್ನಲ್ಲ. ಆದ್ರೆ 108 ಆ್ಯಂಬುಲೆನ್ಸ್ ಸೌಂಡ್ ಬರ‌್ತಾನೇ ಇರುತ್ತೆ. ಮಧ್ಯೆ ಮಧ್ಯೆ `ಅಂದ್ರೆಗಿನಾ ಅಂದ್ರೆಗಿನಾ~ ಅಂತಿರುತ್ತೆ. ಒಳ್ಳೆ ಮಜ ಅಲ್ವಾ?~ ಎಂದ.
`ಚೆನ್ನಾಗಿದೆ, ಇದೂ ಇರ‌್ಲಿ, ಮತ್ಯಾವುದಿದೆ?~
`ಇದು ನೋಡಿ ಸಾ, ಗೊಂಬೆ ಪಟಾಕಿ. ಕಾಂಗ್ರೆಸ್ ಬ್ರ್ಯಾಂಡು. ಮನಮೋಹನ ಅಂತ ಹೆಸರಿಟ್ಟಿದೀವಿ. ಇದಕ್ಕೆ ಸೋನಿಯಾ ಬ್ರ್ಯಾಂಡ್ ಊದಿನ ಕಡ್ಡಿಯಿಂದ ಬೆಂಕಿ ಹಚ್ಚಿದ್ರೆ ಮಾತ್ರ `ಢಂ~ ಅನ್ನುತ್ತೆ. ಇಲ್ಲಾಂದ್ರೆ ಟುಸುಮುರಗಿ. ಜಪ್ಪಯ್ಯ ಅಂದ್ರೂ ಸಿಡಿಯಲ್ಲ.~
`ಪಪ್ಪಾ ಇದು ಬೇಡ~ ಎಂದವು ಮಕ್ಕಳು. ಸರಿ, ಬೇರೆ ತೋರ‌್ಸಪ್ಪ~ ಎಂದ ತೆಪರೇಸಿ.
`ಓಕೆ ಇದು ನೋಡಿ ಸಾ, `ಢಂ~ ಪಟಾಕಿ, `ಢುಂ~ ಪಟಾಕಿ ಅಂತ. ಹೊಸದಾಗಿ ಬಿಟ್ಟಿದಾರೆ. `ಢಂ~ ಪಟಾಕಿ ಒಬಾಮ ಬ್ರ್ಯಾಂಡು. ಒಂದು ಸಲ ಹಚ್ಚಿದ್ರೆ ಎರಡೆರಡು ಸಲ `ಢಂ~ ಅನ್ನುತ್ತೆ. ಡಬ್ಬಲ್ ಧಮಾಕಾ! ಇನ್ನೊಂದು `ಢುಂ~ ಪಟಾಕಿ, ಜಯಲಲಿತಾ ಬ್ರ್ಯಾಂಡು. ಯಾವಾಗ್ಲು ನೀರು, ನೀರು ಅಂತಿರುತ್ತೆ. ಸೌಂಡೂ ಜಾಸ್ತಿ. ಕೊಡ್ಲಾ?~ ಎಂದ ಪರಮೇಶಿ.
`ಬೇಡಪ್ಪ, ಮಕ್ಕಳ ಕಿವಿ ಹಾಳಾದ್ರೆ ಕಷ್ಟ. ಬೇರೆ ಒಳ್ಳೇದು ಇದ್ರೆ ತೋರ‌್ಸು~ ತೆಪರೇಸಿ ತಲೆ ಕೊಡವಿದ.
`ಸರಿ, ಇನ್ನೊಂದಿದೆ `ಐಸ್ ಪಟಾಕಿ, ನೈಸ್ ಪಟಾಕಿ~ ಅಂತ. ನೈಸ್ ಪಟಾಕಿ ದೇವೇಗೌಡರ ಬ್ರ್ಯಾಂಡು. ದೇವೇಗೌಡ್ರ ಹೆಸರು ಹೇಳಿದ್ರೆ ಸಾಕು `ಢಂ~ ಅಂತ ಸಿಡಿಯುತ್ತೆ. ಇಲ್ಲಾಂದ್ರೆ ಇಲ್ಲ. ಐಸ್ ಪಟಾಕಿ ಶೆಟ್ಟರ್ ಬ್ರ್ಯಾಂಡು. ಎಷ್ಟು ಕಡ್ಡಿ ಕೆರೆದ್ರೂ ಸಿಡಿಯಲ್ಲ. ನೋಡೋಕಷ್ಟೆ ಪಟಾಕಿ, ಆದ್ರೆ ಪಟಾಕಿ ಅಲ್ಲ. ಬೇರೆ ಪಟಾಕಿಗಳ ಜೊತೆ ಇಟ್ಟು ಬೆಂಕಿ ಹಚ್ಚಿದ್ರೆ ಮಾತ್ರ ಲೈಟಾಗಿ `ಢಂ~ ಅನ್ನುತ್ತೆ. ಮಕ್ಕಳು ಧೈರ‌್ಯವಾಗಿ ಹೊಡೀಬಹುದು~ ವಿವರಿಸಿದ ಪರಮೇಶಿ. ಮಕ್ಕಳು ಬೇಡ ಅಂತ ತಲೆ ಅಲ್ಲಾಡಿಸಿದವು.
`ಆಯ್ತು, ಇದು ಬೇಡ. ಈಶ್ವರಪ್ಪ ಬ್ರ್ಯಾಂಡ್ ಅಂತ ಒಂದಿದೆ ನೋಡ್ತೀರಾ? ಇದಕ್ಕೆ ಊದಿನ ಕಡ್ಡಿ ಹಿಡಿದು ಬೆಂಕಿ ಹಚ್ಚೋದು ಬೇಕಿಲ್ಲ. ಇದರ ಮುಂದೆ ಟಿ.ವಿ. ಮೈಕ್ ಹಿಡಿದ್ರೆ ಸಾಕು, ಢಂ, ಢುಂ, ಗುರ್, ಟುಸ್ ಪುಸ್ ಅಂತ ನೂರೆಂಟು ನಮೂನಿ ಸೌಂಡ್ ಮಾಡುತ್ತೆ. ಮಕ್ಕಳು, ದೊಡ್ಡೋರ‌್ನ ಜೊತೆಗಿಟ್ಕಂಡೇ ಹಚ್ಚಿಸ್ಬೇಕು. ಕೊಡ್ಲಾ?~ ಪರ‌್ಮೇಶಿ ಕೇಳಿದ. ಮಕ್ಕಳು ಗಾಬರಿಯಾದವು.
ಪರ‌್ಮೇಶಿಗೆ ಅರ್ಥವಾಯಿತು. ಬೇರೆ ನಾಲ್ಕೈದು ಬ್ರ್ಯಾಂಡ್ ಪಟಾಕಿಗಳನ್ನ ಒಟ್ಟಿಗೇ ತೆಗೆದಿಟ್ಟು `ನೋಡಿ ಮಕ್ಕಳೇ ಇದು `ನೀಲಂ ಪಟಾಕಿ, ಪೂನಂ ಪಟಾಕಿ~ ಅಂತ. ನೀಲಂ ಚಂಡಮಾರುತ ತಣ್ಣಾಗಾಯ್ತು ಈಗ ಪೂನಂ ಅನ್ನೋ ರೂಪದರ್ಶಿ ಸೌಂಡ್ ಮಾಡ್ತಾ ಇದೆ. ಇದು ಬೇಡ ಅಂದ್ರೆ ಇದು ತಗೊಳ್ಳಿ `ಮಡೆ ಪಟಾಕಿ, ಎಡೆ ಪಟಾಕಿ~ ಅಂತ. ಮಡೆಗೆ ಬೆಂಕಿ ಹಚ್ಚಿದ್ರೆ ಎಡೆಯಲ್ಲಿ `ಢಂ~ ಅನ್ನುತ್ತೆ. ಇದೂ ಬೇಡ್ವಾ? ಇದನ್ನ ನೋಡಿ `ಐಲ್ ಪಟಾಕಿ, ಜೈಲ್ ಪಟಾಕಿ~ ಅಂತ. ಐಲ್ ಪಟಾಕಿ ವರ್ತೂರು ಬ್ರ್ಯಾಂಡು.
ಯದ್ವಾ ತದ್ವಾ, ಉಲ್ಟಾ ಪಲ್ಟಾ ಸಿಡಿಯುತ್ತೆ. ಯಾರನ್ನೂ ನೋಡೋದಿಲ್ಲ ಜಾಡಿಸಿಬಿಡುತ್ತೆ. ಜೈಲ್ ಪಟಾಕಿ ಗಣಿ ಧಣಿ ಬ್ರ್ಯಾಂಡು. ಸದ್ಯಕ್ಕೆ ಸಿಡಿಯೋದಿಲ್ಲ. ಜೈಲಲ್ಲಿದ್ದೂ ಇದ್ದೂ ಮೆತ್ತಗಾಗಿದೆ. ಯಾವುದು ಕೊಡ್ಲಿ?~ ಎಂದ. ಮಕ್ಕಳು ಮಾತೇ ಆಡಲಿಲ್ಲ.
`ಸಾಕಪ್ಪ ಪರ‌್ಮೇಶಿ, ಎಂಥೆಂಥ ಬ್ರ್ಯಾಂಡ್ ಬಂದಿದಾವೆ, ನಂಗೆ ಗೊತ್ತೇ ಇರ‌್ಲಿಲ್ಲ. ಮಕ್ಕಳಿಗೆ ತೊಂದರೆ ಆಗದೇ ಇರೋ ಅಂಥ ಪಟಾಕಿ ಕೊಡು ಸಾಕು~ ಎಂದ ತೆಪರೇಸಿ.
`ಇಷ್ಟಕ್ಕೇ ಹಿಂಗಂತೀರಲ್ಲ ಸಾ, ಇನ್ನೂ ಒಳ್ಳೊಳ್ಳೆ ಬ್ರ್ಯಾಂಡ್ ಇದಾವೆ. ದೊಡ್ಡ ದೊಡ್ಡ ಗೋಡೆಗಳನ್ನೇ ಕೆಡವಿ ಹಾಕೋ ಅಂಥ ಕೇಜ್ರಿವಾಲ್ ಬಾಂಬ್ ಇದೆ. ಎರಡೂ ಕಾಲು ಹೊರಗಿಟ್ಟು ಮನೆಯೊಳಗೆ ಹಚ್ಚೋ ಅಂಥ ಯಡ್ಯೂರಪ್ಪ ಟೈಂ ಬಾಂಬ್ ಇದೆ. ಕತ್ತಿ ಪಟಾಕಿ, ಬತ್ತಿ ಪಟಾಕಿ, ರೇಣುಕಾಚಾರ‌್ಯರ ಡ್ಯಾನ್ಸ್ ಪಟಾಕಿ... ಒಂದಾ ಎರಡಾ...~ ಪರ‌್ಮೇಶಿ ಪಟ್ಟಿ ಒಪ್ಪಿಸಿದ.
`ಈ `ಢಂ~ ಪಟಾಕಿಗಳು ಬೇಡ, ತಣ್ಣಗೆ ಖುಷಿ ಕೊಡೋ ಅಂಥವಿದ್ರೆ ಕೊಡಪ್ಪ ಸಾಕು~ ತೆಪರೇಸಿಗೆ ಸಾಕಾಗಿ ಹೋಗಿತ್ತು.
`ಇದು ನೋಡಿಸಾ, ಆಕಾಶಪುಟ್ಟಿ. ಶೋಭಕ್ಕನ ಬ್ರ್ಯಾಂಡು. ಮೇಲೆ ನೇತಾಕಿದ್ರೆ ಕರೆಂಟಿಲ್ಲದಿದ್ರೂ ನಗ್ತಾ ನಗ್ತಾ ಬೆಳಕು ಕೊಡುತ್ತೆ. ಇದು ನಿತ್ಯಾನಂದರ ಕ್ಯಾಂಡ್ಲು. ಅಂದ್ರೆ ಸುರುಸುರು ಬತ್ತಿ. ಎಂಥ ಸ್ಕ್ಯಾಂಡ್ಲುಗಳಿಗೂ ಬಗ್ಗದೆ, ಜೈಲಿಗೆ ಹಾಕಿದ್ರೂ ಕುಗ್ಗದೆ ನಗ್ತಾನೇ ಇರುತ್ತೆ ಕೊಡ್ಲಾ? ಎಂದ ಪರ‌್ಮೇಶಿ.
`ನಮಗೆ ಜಂಪಿಂಗ್ ಪಟಾಕಿ ಬೇಕು. ಕೋತಿಗಳು ಮರದಿಂದ ಮರಕ್ಕೆ ಹಾರ‌್ತಾವಲ್ಲ, ಆ ತರಹ. ಇದ್ಯಾ?~ ಮಕ್ಕಳು ಕೇಳಿದವು.
`ಓ, ಅದೂ ಇದೆ~ ಎಂದ ಪರ‌್ಮೇಶಿ, `ಇದು ನೋಡಿ `ಪಕ್ಷಾಂತರ ಪಟಾಕಿ~ ಅಂತ. ಬಿಜೆಪಿಯಿಂದ ಕೆ.ಜೆ.ಪಿ.ಗೆ, ಬಿಜೆಪಿಯಿಂದ ಬಿಎಸ್ಸಾರ್‌ಗೆ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ, ಕಾಂಗ್ರೆಸ್‌ನಿಂದ ಬಿಜೆಪಿಗೆ... ಹೆಂಗೆ ರಾಜಕಾರಣಿಗಳು ಅಲ್ಲಿಂದಿಲ್ಲಿಗೆ ಹಾರ‌್ತಾ ಇರ‌್ತಾರೋ ಹಾಗೆ ಈ ಪಟಾಕಿ ಕೂಡ ಮರದಿಂದ ಮರಕ್ಕೆ ಹಾರುತ್ತೆ. ಒಂದ್ಸಲ ಹಚ್ಚಿಬಿಟ್ರೆ ಸಾಕು, ಒಂದು ರೌಂಡ್ ಹೋಗಿ ಬಂದುಬಿಡುತ್ತೆ~ ಎಂದ.
`ಹೌದಾ? ಬೊಂಬಾಟಾಗಿದೆ, ನಮಗೆ ಪಕ್ಷಾಂತರ ಪಟಾಕಿನೇ ಬೇಕು~ ಎಂದವು ಮಕ್ಕಳು.
`ಕೊಡ್ತೀನಿ, ಆದ್ರೆ ಒಂದು ಕಂಡೀಶನ್, ಇವನ್ನ ನೆಲದ ಮೇಲೆ ಹಚ್ಚಂಗಿಲ್ಲ...~
`ಮತ್ತೆ?~
`ಮರದ ಮೇಲೇ ಹಚ್ಚಬೇಕು. ಕೊಡ್ಲಾ?~ ಎಂದ ಪರಮೇಶಿ.
`ಹೋಗಿ ಅಂಕಲ್, ನಮಗೆ ಈ ಕೋತಿಗಳ ಸಹವಾಸ ಬೇಡ~ ಎಂದವು ಮಕ್ಕಳು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.