ADVERTISEMENT

ವ್ಯಕ್ತಿ ಸ್ಮರಣೆ : ಕಾರ್ಟ್‌ಮನ್ ರಾಮಸ್ವಾಮಿ

ಮೇರಿ ಜೋಸೆಫ್
Published 22 ಸೆಪ್ಟೆಂಬರ್ 2012, 19:30 IST
Last Updated 22 ಸೆಪ್ಟೆಂಬರ್ 2012, 19:30 IST
ವ್ಯಕ್ತಿ ಸ್ಮರಣೆ : ಕಾರ್ಟ್‌ಮನ್ ರಾಮಸ್ವಾಮಿ
ವ್ಯಕ್ತಿ ಸ್ಮರಣೆ : ಕಾರ್ಟ್‌ಮನ್ ರಾಮಸ್ವಾಮಿ   

ಮ್ಯಾನೇಜ್‌ಮೆಂಟ್ ಯುಗಕ್ಕೂ ಎತ್ತಿನಗಾಡಿಗೂ ಯಾವುದೇ ಸಂಬಂಧವಿಲ್ಲ. ಆದರೆ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿದ್ದರೂ ಎತ್ತಿನಗಾಡಿಗೆ ತನ್ನದೇ ಹೊಸ ಪರಿಕಲ್ಪನೆ ನೀಡಿದ ಪ್ರೊ. ಎನ್. ಎಸ್. ರಾಮಸ್ವಾಮಿ ಹಳೆ ಬೇರು, ಹೊಸ ಚಿಗುರುಗಳ ಸಮ್ಮಿಶ್ರಣ.
ಇತ್ತೀಚೆಗೆ ನಿಧನರಾದ ರಾಮಸ್ವಾಮಿ (86) ಅವರ ಬಹುಮುಖ ವ್ಯಕ್ತಿತ್ವವನ್ನು ಬಣ್ಣಿಸ ಹೊರಟರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಉದ್ದನೆಯ ಬಿಳಿ ಗಡ್ಡದ, ಕುರ್ತಾ, ಪೈಜಾಮ ಧರಿಸಿದ ಈ ಸರಳ ವ್ಯಕ್ತಿ ದೇಶ ವಿದೇಶದ ವೇದಿಕೆ ಹತ್ತಿದರೆಂದರೆ ಕೇವಲ ಮ್ಯಾನೇಜ್‌ಮೆಂಟ್ ಮಾತ್ರವಲ್ಲ, ಭಾರತೀಯ ಪರಂಪರೆ, ಪರಿಸರ ಸಂರಕ್ಷಣೆ, ಆಯುರ್ವೇದ  ಸೇರಿದಂತೆ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿದ್ದರೂ ಪರಿಸರದೊಂದಿಗೆ ಬೆರೆತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದರು.

ಭಾರತೀಯ ಪರಂಪರೆಯ ಪೋಷಕರಾಗಿ ಇಂಡಿಯನ್ ಹೆರಿಟೇಜ್ ಅಕಾಡೆಮಿ (ಐಎಚ್‌ಎ) ಸ್ಥಾಪಿಸಿದರು. ಪ್ರಾಣಿಗಳ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಯನ್ನೇ ತನ್ನ ಉಸಿರಾಗಿಸಿಕೊಂಡರು.

ಪೊಲೀಸ್ ಅಧಿಕಾರಿಯಾಗಿದ್ದ ಎನ್. ಶ್ರೀನಿವಾಸ ಅಯ್ಯರ್ ಹಾಗೂ ಲಕ್ಷ್ಮಿ (ಧನಲಕ್ಷ್ಮಿ ಬ್ಯಾಂಕ್ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಎ. ಎಸ್.ಮಹಾದೇವ ಅಯ್ಯರ್ ಅವರ ಪುತ್ರಿ) ಅವರ ಪುತ್ರನಾಗಿ ರಾಮಸ್ವಾಮಿ ಅವರು 1926 ಮಾರ್ಚ್ 2 ರಂದು ತ್ರಿಶೂರಿನಲ್ಲಿ ಜನಿಸಿದರು.
 
ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಹಾಗೂ ಎಂಜಿನಿಯರಿಂಗ್ ಪೂರ್ತಿಗೊಳಿಸಿದ ಬಳಿಕ ಮುಂಬೈಯ ಟಾಟಾ , ವೋಲ್ಟಾಸ್, ಎಸಿಸಿ ಮುಂತಾದ ಸಂಸ್ಥೆಗಳಲ್ಲಿ ಕನ್ಸಲ್ಟಂಟ್ ಆಗಿ ಸೇವೆ ಸಲ್ಲಿಸಿದ್ದರು. ಅಮೆರಿಕದ ಗ್ಲಾಸ್ಗೋ ಮತ್ತು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಗಳಿಸಿದ ಬಳಿಕ ಭಾರತಕ್ಕೆ ಮರಳಿದ ಅವರು 1962ರಲ್ಲಿ ಮುಂಬೈ ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್‌ನ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿ  ಬಳಿಕ ಮುಂಬೈಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಎಂಜಿನಿಯರಿಂಗ್ (ಎನ್‌ಐಟಿಐಇ) ನಿರ್ದೇಶಕರಾದರು.

1949ರಲ್ಲಿ ರಾಜಂ ಪಾರ್ವತಿ ಅವರನ್ನು ವಿವಾಹವಾದ ರಾಮಸ್ವಾಮಿ ದಂಪತಿಗೆ ಇಬ್ಬರು ಮಕ್ಕಳು. ರಾಜನ್ ಶ್ರೀನಿವಾಸನ್ (ಇಂಡಸ್ ಬಯೋಟೆಕ್, ಪುಣೆ) ಮತ್ತು ರಜನಿ ಚಂದ್ರಶೇಖರನ್ (ಅಮೆರಿಕ).

1972ರಲ್ಲಿ ಬೆಂಗಳೂರು ಐಐಎಂನ ಸ್ಥಾಪಕ ನಿರ್ದೇಶಕ, 1972ರಿಂದ 75ರವರೆಗೆ ಏಕಕಾಲದಲ್ಲಿ ಎನ್‌ಐಟಿಐಇ ಹಾಗೂ ಐಐಎಂ -ಬಿಯ ನಿರ್ದೇಶಕರಾಗಿದ್ದರು. ಆರಂಭಿಕ ಹಂತವಾಗಿ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ  ಐಐಎಂ ಕಾರ್ಯನಿರ್ವಹಿಸುತ್ತಿದ್ದಾಗಲಿಂದ ಹಿಡಿದು ಪ್ರಸ್ತುತ ಬನ್ನೇರುಘಟ್ಟದ ವಿಶಾಲ ಕ್ಯಾಂಪಸ್‌ಗೆ ವರ್ಗಾವಣೆ ಹೊಂದುವವರೆಗೂ ರಾಮಸ್ವಾಮಿ ಅದರ ಬೆನ್ನೆಲುಬಾಗಿದ್ದರು.

1986ರಲ್ಲಿ ಹುದ್ದೆಯಿಂದ ನಿವೃತ್ತರಾದರೂ ತನ್ನ ಬದುಕಿನ ಕನಸುಗಳನ್ನು ಇಂಡಿಯನ್ ಹೆರಿಟೇಜ್ ಅಕಾಡೆಮಿ ( ಯೋಗ, ನೃತ್ಯ, ಸಂಗೀತ ಚಿತ್ರರಚನೆ ಮುಂತಾದವುಗಳನ್ನು ಇಲ್ಲಿ ಕಲಿಸಲಾಗುತ್ತದೆ ) ಮತ್ತು ಕಾರ್ಟ್‌ಮನ್ (ಸೆಂಟರ್ ಫಾರ್ ಆ್ಯಕ್ಷನ್, ರೀಸರ್ಚ್ ಆ್ಯಂಡ್ ಟೆಕ್ನಾಲಜಿ ಫಾರ್ ಮ್ಯಾನ್, ಆ್ಯನಿಮಲ್ ಆ್ಯಂಡ್ ನೇಚರ್) ಎಂಬ ಸರ್ಕಾರೇತರ ಸಂಸ್ಥೆ ಮೂಲಕ ನನಸಾಗಿಸಿಕೊಳ್ಳುವತ್ತ ಪ್ರಯತ್ನಿಸಿದರು. ಅವರ ಸಮಾಜಸೇವೆಯನ್ನು ಪರಿಗಣಿಸಿ 2006ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.

`ಕಾರ್ಟ್‌ಮನ್~ ಮೂಲಕ ಎತ್ತಿನಗಾಡಿಗೆ ಹೊಸ ಪರಿಕಲ್ಪನೆ ನೀಡಿದ್ದು ಅವರ ಸಾಧನೆಗಳಲ್ಲಿ ಒಂದು. ಎತ್ತುಗಳಿಗೆ ಭಾರ ಕಡಿಮೆ ಮಾಡುವ ಉದ್ದೇಶದಿಂದ ಎತ್ತಿನಗಾಡಿಗೆ ಟಯರ್‌ಗಳನ್ನು ಜೋಡಿಸಿ ತನ್ನ ಎಂಜಿನಿಯರಿಂಗ್ ನೈಪುಣ್ಯದೊಂದಿಗೆ ಮ್ಯಾನೇಜ್‌ಮೆಂಟ್ ಕೌಶಲ್ಯವನ್ನೂ ಸಮ್ಮಿಲನಗೊಳಿಸಿ ಜನರ ಗಮನ ಸೆಳೆದರು.

  ಅಂದಿನಿಂದ ಅವರಿಗೆ `ಕಾರ್ಟ್‌ಮನ್~ ರಾಮಸ್ವಾಮಿ ಎಂಬ ಹೆಸರೂ ದೊರೆಯಿತು. ಚೆನ್ನೈಯಲ್ಲಿನ ಎಂಜಿನಿಯರಿಂಗ್ ಕಲಿಕೆಯ ವೇಳೆ ಸಂಗೀತದೊಂದಿಗೆ ತೂಗುವ ತೊಟ್ಟಿಲು ಹಾಗೂ ಅಂಗಳ ಗುಡಿಸುವ ಯಂತ್ರವನ್ನು ಆವಿಷ್ಕರಿಸಿದ್ದರಂತೆ.

ಎತ್ತಿನಗಾಡಿಯ ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ಕೋಟಿಗಟ್ಟಲೆ ರೂಪಾಯಿ ಇಂಧನ ಲಾಭ ಗಳಿಸಬಹುದು ಎಂದು ಅವರು ಒತ್ತಿ ಹೇಳಿದರಲ್ಲದೆ ಅಗತ್ಯವಿರುವವರಿಗೆ ಅಂತಹ ಎತ್ತಿನ ಗಾಡಿಗಳನ್ನು ನಿರ್ಮಿಸಿಕೊಟ್ಟರು. ಅದಕ್ಕೆಂದೇ ಕಾರ್ಟ್‌ಮನ್ ಎಂಬ ಸರ್ಕಾರೇತರ ಸಂಸ್ಥೆಯನ್ನು 1983ರಲ್ಲಿ ಹುಟ್ಟುಹಾಕಿದ್ದರು.

ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ತಲೆಗೆ ಹೊಡೆದು ಕ್ರೂರವಾಗಿ ಕೊಲ್ಲುವ ವಿರುದ್ಧ ದನಿ ಎತ್ತಿದ ರಾಮಸ್ವಾಮಿ, ಕಸಾಯಿಖಾನೆಗಳು ಆಧುನೀಕರಣಗೊಳ್ಳಬೇಕೆಂದೂ ವಾದಿಸಿದರು. ಕುರಿ, ಆಡು, ದನಗಳನ್ನು ಟ್ರಕ್‌ಗಳಲ್ಲಿ ಉಸಿರುಗಟ್ಟಿಸುವಂತೆ ತುಂಬಿ ಪಟ್ಟಣಕ್ಕೆ ತಂದು ನೋವುಂಟು ಮಾಡಿ ಕೊಲ್ಲುವ ಬದಲು ಹಳ್ಳಿಗಳಲ್ಲೇ ಅವುಗಳ ಮಾಂಸವನ್ನು ತೆಗೆದು ಪಟ್ಟಣಕ್ಕೆ ಸಾಗಿಸಿದಲ್ಲಿ ಉತ್ತಮ ಗುಣಮಟ್ಟದ ಮಾಂಸ ದೊರೆಯುತ್ತದೆ. ಜೊತೆಗೆ ಗ್ರಾಮೀಣ ಜನರಿಗೆ ಉತ್ತಮ ಬೆಲೆಯೂ ದೊರೆಯುವುದರೊಂದಿಗೆ ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂದು ಹೇಳಿದ್ದರು. ಸಸ್ಯಾಹಾರಿಯಾಗಿದ್ದರೂ ಮಾಂಸ ಕ್ಷೇತ್ರದ ಆಧುನೀಕರಣ ಕುರಿತಂತೆ ಚಿಂತಿಸಿದರು.

ತಿರುವನಂತಪುರದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇನ್ ಗವರ್ನಮೆಂಟ್ (ಐಎಂಜಿ) ಸಲಹೆಗಾರ, ಚೆನ್ನೈಯ ಅಣ್ಣಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಲಹೆಗಾರ, ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ, ಇಂಟರ್ ರಿಲೀಜಿಯಸ್ ಹಾರ್ಮನಿ ಅಧ್ಯಕ್ಷ, ವರ್ಲ್ಡ್ ಪ್ರಾಡಕ್ಟಿವಿಟಿ ಕಾಂಗ್ರೆಸ್‌ಸಮಿತಿ ಅಧ್ಯಕ್ಷ  ಹೀಗೆ ಹಲವು ಕಡೆ ಸೇವೆ ಸಲ್ಲಿಸಿದ್ದರು.

ಕೇಂದ್ರ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಕಮಿಟಿ ಆನ್ ಮೀಟ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿದ್ದರು.  ಕೇಂದ್ರ ಅಸಾಂಪ್ರದಾಯಿಕ ಇಂಧನ ಇಲಾಖೆ , ವಿಮಾನನಿಲ್ದಾಣ ಪ್ರಾಧಿಕಾರ  ಮುಂತಾದವುಗಳ ಕನ್ಸಲ್ಟಂಟ್ ಆಗಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಡರ್ ರಿವ್ಯೆ ಸಮಿತಿ , ಕೋಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ , ಕೇಂದ್ರ ಸರ್ಕಾರದ ಪೊಲೀಸ್ ತರಬೇತಿ ಸಮಿತಿ  ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.