ADVERTISEMENT

ಹಾಡನ್ನು ಚಿರಂತನಗೊಳಿಸಿದ ಲತಾ ಮಂಗೇಶ್ಕರ್‌

ಗವಿ ಬ್ಯಾಳಿ
Published 1 ಫೆಬ್ರುವರಿ 2014, 19:30 IST
Last Updated 1 ಫೆಬ್ರುವರಿ 2014, 19:30 IST

ಇದು ಅರ್ಧ ಶತಮಾನದಷ್ಟು ಹಿಂದಿನ ಮಾತು. ಆಗಷ್ಟೇ ಚೀನಾದ ಜೊತೆ ಯುದ್ಧ ಮುಗಿದು ಎರಡು ತಿಂಗಳಷ್ಟೇ ಆಗಿತ್ತು. 1963ರ ಜನವರಿ 27ರಂದು ಗಣರಾಜ್ಯೋತ್ಸವ ಸಮಾರಂಭಕ್ಕಾಗಿ ದೆಹಲಿಯ ನ್ಯಾಶನಲ್‌ ಕ್ರೀಡಾಂಗಣ (ಇಂದಿನ ರಾಮಲೀಲಾ ಮೈದಾನ) ಸಜ್ಜಾಗಿತ್ತು. ರಾಷ್ಟ್ರಪತಿ ಎಸ್‌.ರಾಧಾಕೃಷ್ಣನ್‌, ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಸೇರಿದಂತೆ ಸಾವಿರಾರು ಜನರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಬಿಳಿ ಸೀರೆ, ಹಣೆ ತುಂಬಾ ಕುಂಕುಮವಿಟ್ಟ ಪುಟ್ಟ ಆಕಾರದ ಲತಾ ಮಂಗೇಶ್ಕರ್‌ ಮೈಕ್‌ ಮುಂದೆ ಬಂದು ನಿಂತರು. ಅವರು ಯಾವ ಹಾಡು ಹಾಡುತ್ತಾರೆ ಎಂಬ ವಿಷಯ ಯಾರಿಗೂ ತಿಳಿದಿರಲಿಲ್ಲ.

ಆಗ ಲತಾ ಮಧುರ ಕಂಠದಿಂದ ಅಂದು ಹೊರಹೊಮ್ಮಿದ ಕವಿ ಪ್ರದೀಪ್‌ ರಚಿಸಿದ ‘ಏ ಮೇರೆ ವತನ್‌ ಕೆ ಲೋಗೋ, ಝರಾ ಆಂಖ್‌ ಮೇ ಬರ್‌ ಲೋ ಪಾನಿ, ಜೋ ಶಹೀದ್‌ ಹುಯೇ ಹೈ ಉನ್‌ ಕಿ ಝರಾ ಯಾದ್‌ ಕರೋ ಕುರ್ಬಾನಿ...’ ಅಲೆ, ಅಲೆಯಾಗಿ ಇಡೀ ಕ್ರೀಡಾಂಗಣವನ್ನು ಆವರಿಸಿತು.

ಸಾವಿರಾರು ಜನರಿಂದಾಗಿ ಉಕ್ಕಿ ಹರಿಯುವ ಸಾಗರದಂತೆ ಭೋರ್ಗರೆಯುತ್ತಿದ್ದ  ಕ್ರೀಡಾಂಗಣ­ದಲ್ಲಿ ವಿದ್ಯುತ್‌ ಸಂಚರಿಸಿದ ಅನುಭವ.  ಹಾಡು ಕೇಳಿದ ಸಾವಿರಾರು ಜನರು ಮೋಡಿಗೆ ಒಳಗಾದವ­ರಂತೆ ನಿಂತುಬಿಟ್ಟರು. ನೆರೆದ ಎಲ್ಲರ ಕಣ್ಣಂಚುಗಳು ತೇವವಾಗಿದ್ದವು. ಕಂಠಗಳು ಬಿಗಿದು ಬಂದಿದ್ದವು. 

ಒಂದು ಕ್ಷಣ ನಿಶ್ಶಬ್ದ ಆವರಿಸಿತ್ತು. ಆ ನಿಶ್ಶಬ್ದದಲ್ಲಿ ಎಲ್ಲ ಶಬ್ದಗಳಿಗೂ ಮೀರಿದ  ಶಕ್ತಿ ಮತ್ತು ಭಾವುಕತೆ ಮನೆಮಾಡಿತ್ತು. ಭಾವುಕರಾಗಿದ್ದ ಜನರು ಹಾಡು ಮುಗಿಯುತ್ತಿದ್ದಂತೆಯೇ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಎಷ್ಟು ಹೊತ್ತಾದರೂ ಚಪ್ಪಾಳೆ ಸದ್ದು ನಿಲ್ಲಲಿಲ್ಲ.

ನೆಹರೂ ಕಣ್ಣೀರು 
ಹಾಡು ಕೇಳಿ ಭಾವಪರವಶರಾಗಿದ್ದ ನೆಹರೂ ಅವರಿಗೂ ಕಣ್ಣೀರು ತಡೆಯಲಾಗಲಿಲ್ಲ. ಹಾಡು ಮುಗಿಸಿ ನೀರು ಕುಡಿಯಲು ಹೋಗಿದ್ದ ಲತಾ ಮಂಗೇಶ್ಕರ್‌ ಅವರಿಗೆ ಯಾರೋ ಬಂದು ‘ಪಂಡಿತ್‌ಜೀ ನಿಮ್ಮನ್ನು ಕರೆಯುತ್ತಿದ್ದಾರೆ. ಬೇಗ ಬನ್ನಿ’ ಎಂದು ಅವಸರ ಮಾಡಿದರು. 
ವೇದಿಕೆಗೆ ಬಂದ ಲತಾ ಅವರನ್ನು ತಬ್ಬಿ ಮನದುಂಬಿ ಹರಸಿದ ನೆಹರೂ, ‘ನೀವು ಭಾರತದ ಗಾನಕೋಗಿಲೆ’ ಎಂದು ಬಣ್ಣಿಸಿದರು. ಖುದ್ದು ಪ್ರಧಾನಿಯೇ ಬಳಿ ಬಂದು ಅಭಿನಂದಿಸಿದ್ದನ್ನು ಲತಾ   ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ.

ತಮಗಾಗಿ ಮತ್ತೊಮ್ಮೆ ಈ ಹಾಡನ್ನು ಹಾಡುವಂತೆ ನೆಹರೂ ಅವರು ಲತಾ ಮಂಗೇಶ್ಕರ್‌ ಅವರಲ್ಲಿ ಮನವಿ ಮಾಡಿದರಂತೆ. ಅವರು ನಯವಾಗಿ ಪ್ರಧಾನಿಯ ಮನವಿಯನ್ನು ತಿರಸ್ಕರಿಸಿದರು ಎಂಬ ಮಾತುಗಳು ಈ ಘಟನೆಯೊಂದಿಗೆ ಅಂಟಿಕೊಂಡಿವೆ.

ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಈ ಗೀತೆಯನ್ನು ಮೊದಲ ಬಾರಿಗೆ ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾಡಿ ಐವತ್ತು ವರ್ಷಗಳೇ ಉರುಳಿವೆ. ಆದರೂ, ಈ ಹಾಡನ್ನು ನಿನ್ನೆ, ಮೊನ್ನೆ ಕೇಳಿದಂತೆ ಭಾಸವಾಗುತ್ತದೆ. ಆ ನೆನಪು ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.

‘ಈ ಹಾಡನ್ನು ಕೇಳಿದ ನಂತರವೂ ಯಾರಲ್ಲೇ ಆಗಲಿ ದೇಶಭಕ್ತಿ ಉಕ್ಕದಿದ್ದರೆ ಆತ ನಿಜವಾದ ಭಾರತೀಯನೇ ಅಲ್ಲ’ ಎಂದು ಅಂದು ನೆಹರೂ ಹೇಳಿದ್ದರು. ಅದಾದ ನಂತರ ‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ನಂತರದ ಸ್ಥಾನವನ್ನು ಈ ಗೀತೆ ಪಡೆದುಕೊಂಡಿತು.

  ಆ ಹಾಡು ಮುಗಿಯುವ ವೇಳೆಗೆ ಅಲ್ಲೊಂದು ಹೊಸ ಇತಿಹಾಸ ನಿರ್ಮಾಣವಾಗಿ ಹೋಗಿತ್ತು. ಒಂದೇ ಕ್ಷಣದಲ್ಲಿ ಈ  ಹಾಡಿಗೊಂದು ರಾಷ್ಟ್ರೀಯ ಸ್ಥಾನಮಾನ ದೊರಕಿತು. ಅಂದು ಈ ಹಾಡು ಮಾಡಿದ ಮೋಡಿಯನ್ನು ಮನಗಂಡ ಆಕಾಶವಾಣಿ  ವಿವಿಧ ಭಾರತಿ ಮೂಲಕ ಈ ಹಾಡು ದೇಶದ ಮನೆ, ಮನಗಳನ್ನು ತಲುಪಿಸಿತು. ಧ್ವನಿಮುದ್ರಣ ಹಕ್ಕು ಪಡೆದು ಎಚ್ಎಂವಿ ಸಂಸ್ಥೆಯ ಹಾಡಿನ ಧ್ವನಿಸುರುಳಿ, ಗ್ರಾಮಾಫೋನ್‌ ತಟ್ಟೆಗಳು ದೇಶದ ತುಂಬ ಬಿಕರಿಯಾದವು.

ಈ ಧ್ವನಿಸುರುಳಿ ಮಾರಿಬಂದ ಹಣವನ್ನು ಚೀನಾ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರ ನಿಧಿಗೆ ನೀಡುವ ಕರಾರಿನೊಂದಿಗೆ ಪ್ರದೀಪ್‌ ಅವರು ಎಚ್‌ಎಂವಿ ಸಂಸ್ಥೆಗೆ ಧ್ವನಿಸುರುಳಿ ಮಾರಾಟ ಹಕ್ಕು ನೀಡಿದ್ದರು. ಅದರಲ್ಲಿ ತಾವೊಂದು ಬಿಡಿಗಾಸೂ ಪಡೆದಿರಲಿಲ್ಲ.

ಅನಿರೀಕ್ಷಿತ ಯಶಸ್ಸು
ಈ ಗೀತೆ ಇಷ್ಟೊಂದು ಜನಪ್ರಿಯವಾಗುತ್ತದೆ ಎಂಬ ಕಲ್ಪನೆ ಇದನ್ನು ಬರೆದ ಕವಿ ಪ್ರದೀಪ್‌ ಅವರಿಗಾಗಲಿ, ಸಂಗೀತ ಸಂಯೋಜನೆ ಮಾಡಿದ ನಿರ್ದೇಶಕ ಸಿ. ರಾಮಚಂದ್ರ ಅಥವಾ ಹಾಡಿದ ಲತಾ ಮಂಗೇಶ್ಕರ್‌ ಅವರಿಗಾಗಲಿ ಖಂಡಿತ ಇರಲಿಲ್ಲ.  

1962ರ  ಭಾರತ-–ಚೀನಾ ಯುದ್ಧದ ಸಂದರ್ಭದಲ್ಲಿ ಹುತಾತ್ಮ ಯೋಧರ ಗೌರವಾರ್ಥ ಕವಿ ಪ್ರದೀಪ್‌ ಈ ಭಾವನಾತ್ಮಕ ಗೀತೆಯನ್ನು ರಚಿಸಿದ್ದರು. ಪ್ರದೀಪ್‌ ಅವರು ಅಕ್ಷರಗಳಿಗೆ ದೇಶಭಕ್ತಿಯ ಭಾವನೆಗಳನ್ನು ಎರಕ ಹೊಯ್ದರೆ, ಸಂಗೀತ ಸಂಯೋಜಕ ರಾಮಚಂದ್ರ, ಕವಿಯ ಭಾವನೆಗಳಿಗೆ ಸಂಗೀತದ ಮಾಂತ್ರಿಕ ಸ್ಪರ್ಶ ನೀಡಿದ್ದರು. ಲತಾ ಮಂಗೇಶ್ಕರ್‌ ಈ ಹಾಡಿಗೆ ಕೇವಲ ಧ್ವನಿಯಾಗಲಿಲ್ಲ, ಜೀವ ನೀಡಿದರು.

ಹೀಗಾಗಿಯೇ ಲತಾ ಅಮರಕಂಠದಿಂದ ಹೊರಹೊಮ್ಮಿದ ‘ಏ ಮೇರೆ ವತನ್‌ ಕೆ ಲೋಗೋ’ ಹುತಾತ್ಮ ಯೋಧರಿಗೆ ಸಲ್ಲಿಸಿದ ಅಶ್ರುತರ್ಪಣೆಯಾಗಿತ್ತು.

ಯೋಧರನ್ನು ಸ್ಮರಿಸುವ ರಾಷ್ಟ್ರಗೀತೆ, ದೇಶಪ್ರೇಮ ಬಡಿದೆಬ್ಬಿಸುವ ಅಮರ ಗೀತೆಯಾದ ಇದರಲ್ಲಿ ಮಾಧುರ್ಯವಿತ್ತು. ಸಮ್ಮೋಹನ ಶಕ್ತಿಯಿತ್ತು. ಎಲ್ಲ ಜನರ ಮನಸ್ಸನ್ನು ಉಲ್ಲಾಸಗೊಳಿಸುವ ಲಾಲಿತ್ಯ ಆ ರಾಗದಲ್ಲಿತ್ತು.

ಅಂದು ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಮ್ಮ ಗೀತೆಯನ್ನು ಕೇಳುವ ಅದೃಷ್ಟ ಕವಿ ಪ್ರದೀಪ್‌ ಅವರಿಗೆ ಇರಲಿಲ್ಲ. ವಿಪರ್ಯಾಸದ ಸಂಗತಿ ಎಂದರೆ ಅವರಿಗೆ ಆ ಸಮಾರಂಭಕ್ಕೆ ಆಹ್ವಾನವೇ ಇರಲಿಲ್ಲ. ನಂತರ ಈ ವಿಷಯ ತಿಳಿದು ನೊಂದುಕೊಂಡ ನೆಹರೂ ಮುಂದೆ ಮೂರ್ನಾಲ್ಕು ತಿಂಗಳಲ್ಲಿ ಮುಂಬೈಗೆ ತೆರಳಿದಾಗ  ಮರೆಯದೆ ಪ್ರದೀಪ್‌ ಅವರನ್ನು ರಾಜಭವನಕ್ಕೆ  ಆಹ್ವಾನಿಸಿ ಗೌರವಿಸಿದ್ದರು. ಅದಕ್ಕೆ ಪ್ರತಿಯಾಗಿ  ಪ್ರದೀಪ್‌ ತಮ್ಮ ಕೈ ಬರಹದ ಗೀತೆಯ ಪ್ರತಿಯನ್ನು ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಯಾರು ಈ ಕವಿ ಪ್ರದೀಪ್‌?
‘ಏ ಮೇರೆ ವತನ್‌ ಕೆ ಲೋಗೋ’ ಲತಾಗೆ ಭಾರತದ ಕೋಗಿಲೆ ಎಂಬ ಖ್ಯಾತಿ ತಂದುಕೊಟ್ಟರೆ, ಪ್ರದೀಪ್‌ ಅವರಿಗೆ ರಾಷ್ಟ್ರಕವಿ ಎಂಬ ಗೌರವ ತಂದುಕೊಟ್ಟಿತು. 

ಕವಿ ಪ್ರದೀಪ್‌ ಮೂಲ ಹೆಸರು ರಾಮಚಂದ್ರ ನಾರಾಯಣ್‌ ದ್ವಿವೇದಿ. ಮೂಲತಃ ಉಜ್ಜಯಿನಿಯವರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ‘ಚಲ್ ಚಲ್ ರೇ ನೌಜವಾನ್’ ಹಾಗೂ ೧೯೪೩ರಲ್ಲಿ ಚಲೇಜಾವ್‌ ಚಳವಳಿ (ಕ್ವಿಟ್‌ ಇಂಡಿಯಾ) ಸಂದರ್ಭದಲ್ಲಿ ತೆರೆಕಂಡ ‘ಕಿಸ್ಮತ್’  ಚಿತ್ರದ ‘ದೂರ್ ಹಟಾವೋ ದುನಿಯಾವಾಲೋಂ ಹಿಂದೂಸ್ತಾನ್ ಹಮಾರಾ ಹೈ’ ಗೀತೆಗಳು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದವು. 
‘ಕಿಸ್ಮತ್’ ಚಿತ್ರದ ‘ದೂರ್ ಹಟಾವೋ ದುನಿಯಾವಾಲೋಂ’ ಹಾಡನ್ನು ಕರ್ನಾಟಕದ ಕಲಾವಿದೆ ಅಮೀರ್‌ಬಾಯಿ ಕರ್ನಾಟಕಿ  ಹಾಡಿದ್ದಾರೆ. ಈ ಹಾಡು 40ರ ದಶಕದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.

ಸ್ವಾತಂತ್ರ್ಯ ನಂತರ ಕವಿ ಪ್ರದೀಪರು ಸುಮಾರು ೮೫ ಸಿನೆಮಾಗಳಿಗೆ ಗೀತೆಗಳನ್ನು ರಚಿಸಿದ್ದಾರೆ.   ಒಮ್ಮೆ ಚೀನಾ ಯುದ್ಧದ ಗುಂಗಿನಲ್ಲಿ ಮುಂಬೈನ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದ ಕವಿಗೆ ಹೊಳೆದದ್ದೇ ‘ಜೋ ಶಹೀದ್‌ ಹುಯೇ ಹೈ ಉನಿಕಿ, ಝರಾ ಯಾದ್‌ ಕರೋ ಕುರ್ಬಾನಿ’ ಎಂಬ ಸಾಲುಗಳು. ಕೂಡಲೇ ತಮ್ಮ ಬಳಿ ಇದ್ದ ಸಿಗರೇಟ್‌ ಪ್ಯಾಕ್‌ ಮೇಲೆ ಈ ಸಾಲುಗಳನ್ನು ಬರೆದುಕೊಂಡ ಅವರು ನೇರವಾಗಿ ಮನೆಗೆ ತೆರಳಿ ಈ ಗೀತೆ  ಪೂರ್ಣಗೊಳಿಸಿದರು.

ಈ ಗೀತೆಯನ್ನು ಬರೆಯಲು ಪ್ರದೀಪ್‌ ಅವರಿಗೆ ಪ್ರೇರಣೆಯಾಗಿದ್ದು ಚೀನಾದ ಜತೆ ಯುದ್ಧ ಮಾತ್ರವಲ್ಲ ದಂತಕಥೆಯಾದ ಹುತಾತ್ಮ ಮೇಜರ್‌ ಭಾಟಿ, ಮೇಜರ್‌ ಜಸ್ವಂತ್‌ ಸಿಂಗ್‌, ಜೋಗಿಂದರ್‌ ಸಿಂಗ್‌ ಮತ್ತು ಅವರ ಹೋರಾಟ.

ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾಡಲು ರಾಮಚಂದ್ರ ಅವರು ಆಶಾ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಪ್ರದೀಪ್‌ ಲತಾ ಅವರಿಂದಲೇ ಈ ಗೀತೆಯನ್ನು ಹಾಡಿಸಬೇಕು ಎಂದು ಅಂದುಕೊಂಡಿದ್ದರು. ಲತಾ ಅವರಿಂದ ಮಾತ್ರ ಈ ಗೀತೆಗೆ ನ್ಯಾಯ ಒದಗಿಸಲು ಸಾಧ್ಯ ಎನ್ನುವುದು ಅವರ ಅನಿಸಿಕೆಯಾಗಿತ್ತು. ಇದಕ್ಕಾಗಿಯೇ ಅವರು ರಾಮಚಂದ್ರ ಬಳಿ ಪಟ್ಟು ಹಿಡಿದಿದ್ದರು.

ತಾವು ಸಂಗೀತ ಸಂಯೋಜನೆ ಮಾಡುತ್ತೇನೆ ಎಂದರೆ ಲತಾ ಹಾಡಲು ಒಪ್ಪಲಾರರು ಎಂದು ರಾಮಚಂದ್ರ ಅಳುಕಿನಿಂದಲೇ ಹೇಳಿದರು. ಆಗ ‘ಅವರನ್ನು ಒಪ್ಪಿಸುವ ಹೊಣೆಯನ್ನು ನನ್ನ ಮೇಲೆ ಬಿಡು’ ಎಂದು ಪ್ರದೀಪ್‌ ನೇರವಾಗಿ ಲತಾ ಅವರ ಮನೆಗೆ ತೆರಳಿದರು.

ಮೊದ ಮೊದಲು ಆಹ್ವಾನ ನಿರಾಕರಿಸಿದ ಲತಾ ಹಾಡಲು ಆಗದು ಎಂದು ಹಟ ಹಿಡಿದು ಕೂತುಬಿಟ್ಟರು. ಒಂದು ಬಾರಿ ಹಾಡನ್ನು ಕೇಳಿಸಿಕೊಳ್ಳುವಂತೆ ಪ್ರದೀಪ್‌ ದುಂಬಾಲು ಬಿದ್ದರು. ಹಾಡು ಕೇಳಿದ ನಂತರ ಲತಾ ಮನಸ್ಸು ಬದಲಿಸಿ ಈ ಗೀತೆ ಹಾಡಲು ಒಪ್ಪಿದರು.
ಹಾಡಿನ ಮೊದಲ ನಿಧಾನಗತಿಯ ಸಾಲುಗಳು ಕವಿ ಪ್ರದೀಪರ ರಾಗಸಂಯೋಜನೆಯ ಸಾಲು­ಗಳಾ­ದರೆ, ನಂತರದ ವೇಗದ ರಾಗ ಸಂಯೋಜನೆಯ ಸಾಲುಗಳು ರಾಮಚಂದ್ರ ಅವರದ್ದು.

ಗೆಳತಿಯ ಜೊತೆ ಲತಾ ದೆಹಲಿಗೆ ತೆರಳುತ್ತಾರೆ. ಅಷ್ಟೊಂದು ಗಣ್ಯರ ಮುಂದೆ ಈ ಹಾಡುವಾಗ ಹೆದರಿ ಬೆವತು ಹೋಗಿದ್ದಾಗಿ ಲತಾ ಇತ್ತೀಚಿನ ಟೀವಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮುಂಬೈನಲ್ಲಿ ಈ ವರ್ಷ ಜನವರಿ 27ರಂದು  ಲತಾ ಮತ್ತೇ ಇದೇ ಹಾಡಿಗೆ ದನಿಯಾದರು. ಈ ಹಾಡಿಗೂ ಈಗ ರಾಜಕೀಯ ರಾಡಿ ಅಂಟಿದ್ದು ಮಾತ್ರ ವಿಪರ್ಯಾಸ.

ಆರೂವರೆ ನಿಮಿಷಗಳ ಈ ಹಾಡು ಇಷ್ಟು ವರ್ಷವಾದರೂ ಇನ್ನೂ ಅನುರುಣಿಸುತ್ತಲೇ  ಮನದಲ್ಲಿ ಅಚ್ಚೊತ್ತಿದೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಪ್ರತಿ ಬಾರಿಯೂ ಕಣ್ಣುಗಳು ಮಂಜಾಗುತ್ತವೆ. ಹೃದಯ ಭಾರವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.