ADVERTISEMENT

ಉತ್ತಮ ಆಡಳಿತಕ್ಕಾಗಿ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಜೆ.ಎಸ್.ಡಿ ಪಾಣಿ
(ಮಾಹಿತಿ ಹಕ್ಕು ಜಾಗೃತಿ ವೇದಿಕೆ  ಮತ್ತು ಕರ್ನಾಟಕ ಆರ್‌ಟಿಐ ಒಕ್ಕೂಟದ ಅಧ್ಯಕ್ಷ)

* ಭ್ರಷ್ಟತೆಯನ್ನು ಬಯಲಿಗೆ ಎಳೆಯುವಲ್ಲಿ ಆರ್‌ಟಿಐ ಪಾತ್ರ ಎಷ್ಟರಮಟ್ಟಿಗೆ ಇದೆ..?
ಈಗ ರಾಜಕೀಯ ಕೋಲಾಹಲಕ್ಕೆ ಮೂಲವೇ ಆರ್‌ಟಿಐ. 2 ಜಿ ಸ್ಪೆಕ್ಟ್ರಂನಿಂದ ಹಿಡಿದು, ರಾಜ್ಯದಲ್ಲಿನ ರಾಜಕಾರಣಿಗಳ ನಿದ್ದೆಗೆಡಿಸಿರುವ ಹಗರಣಗಳೆಲ್ಲ ಬಯಲಾಗಲು ಕಾರಣ ಈ ಕಾಯ್ದೆ. ಇದರ ಉದ್ದೇಶ ಕೇವಲ ಹಗರಣಗಳನ್ನು ಬಯಲು ಮಾಡುವುದು ಇಲ್ಲವೇ ರಾಜಕಾರಣಿಗಳನ್ನು ಜೈಲಿಗೆ ಸೇರಿಸುವುದು ಅಲ್ಲ. ಭ್ರಷ್ಟಾಚಾರ ರಹಿತ,ಉತ್ತಮ ಆಡಳಿತವೇ ಇದರ ಮೂಲ ಉದ್ದೇಶ.

* ಆರ್‌ಟಿಐ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು ತಿದ್ದುಪಡಿ ಅಗತ್ಯವಿದೆಯೇ?
ಖಂಡಿತ. ಮೊದಲನೆಯದಾಗಿ, ಮಾಹಿತಿ ಆಯುಕ್ತರ ಮುಂದೆ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದಾಗ, ಅವರು 30 ದಿನಗಳ ಒಳಗೆ ಉತ್ತರ ಕೊಡುವುದಿಲ್ಲ ಎಂದಿಟ್ಟುಕೊಳ್ಳಿ. ಆಗ ಅದನ್ನು ಮೇಲ್ಮನವಿ ಪ್ರಾಧಿಕಾರದ ಮುಂದೆ ಪ್ರಶ್ನಿಸಲಾಗುವುದು. ಆದರೆ ಅಲ್ಲಿಯೂ ಸೂಕ್ತ ಉತ್ತರ ಬಾರದೇ ಹೋದರೆ, ಅಂಥ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಕಾಯ್ದೆ ಮೌನವಾಗಿದೆ. ಇದರಿಂದ ಮಾಹಿತಿ ಬಯಸುವವನು ಮುಂದೆ ಏನು ಮಾಡಬೇಕು ಎಂಬ ಬಗ್ಗೆ ತಿಳಿಯದ ಪರಿಸ್ಥಿತಿ ತಲೆದೋರಿದೆ. ಈ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಅಗತ್ಯ.

ADVERTISEMENT

* ಕಾಯ್ದೆಯಲ್ಲಿ ಇರುವ ಅಂಶಗಳೆಲ್ಲ ಜಾರಿಗೆ ಬಂದಿವೆಯೇ?
ಎಲ್ಲವೂ ಜಾರಿಗೊಂಡಿಲ್ಲ. ಉದಾಹರಣೆಗೆ ಕಾಯ್ದೆಯ 4 (1)(ಎ) ಹಾಗೂ 4 (1)(ಬಿ) ಅನ್ವಯ ಕಾಯ್ದೆ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಎಲ್ಲ ಕಚೇರಿಗಳು ತಮ್ಮ ಕಚೇರಿಗೆ ಸಂಬಂಧಿಸಿದ ಎಲ್ಲ ಸಾಮಾನ್ಯ ವಿಷಯಗಳನ್ನು ಸಾರ್ವಜನಿಕರ ಮುಂದೆ ಇಡಬೇಕು. ಕಾಯ್ದೆ ಅನುಷ್ಠಾನಗೊಂಡ 120 ದಿನಗಳ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ.
 
ಈ ಅಕ್ಟೋಬರ್ 12ಕ್ಕೆ ಕಾಯ್ದೆ ಜಾರಿಗೆ ಬಂದು ಆರು ವರ್ಷಗಳಾಗಿವೆ.  ದಿನಗಳ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 2191 ದಿನಗಳು. ಶೇ 30ರಷ್ಟು ಕಚೇರಿಗಳು ಕೂಡ ಮಾಹಿತಿ ಬಹಿರಂಗಪಡಿಸಿಲ್ಲ. ಈ ಬಗ್ಗೆ ಸರ್ಕಾರ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಕಾಯ್ದೆಯ ಉದ್ದೇಶವೇ ಬುಡಮೇಲಾಗುತ್ತಿದೆ. ಆದುದರಿಂದ ತಪ್ಪಿತಸ್ಥರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕಾಯ್ದೆಯಲ್ಲಿಯೇ ಉಲ್ಲೇಖವಿರಬೇಕು.

* ಕಾಯ್ದೆಗೆ ಸಂಬಂಧಿಸಿದಂತೆ ಯಾವುದಾದರೂ ಕೋರ್ಟ್‌ನಿಂದ ಮಹತ್ವದ ತೀರ್ಪು ಹೊರಬಂದಿದೆಯೇ?
ಯಾವುದೇ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಮಾಹಿತಿ ದೊರಕದೆ ಆತ ನಷ್ಟ ಅನುಭವಿಸುವಂತಾದರೆ, ಆ ವ್ಯಕ್ತಿಗೆ ಪರಿಹಾರ ನೀಡುವ ಸಂಬಂಧ ನಾಗಪುರ ಗ್ರಾಹಕರ ವೇದಿಕೆಯಿಂದ ಮಹತ್ವದ ಆದೇಶ ಹೊರಕ್ಕೆ ಬಿದ್ದಿದೆ. ಮಾಹಿತಿ ಕೇಳುವಾತ ಕೂಡ ಗ್ರಾಹಕನಾಗಿದ್ದು, ಮಾಹಿತಿ ನೀಡುವುದು ಅಧಿಕಾರಿಯ ಕರ್ತವ್ಯ ಎಂದಿರುವ ವೇದಿಕೆ, ತಪ್ಪಿತಸ್ಥ ಅಧಿಕಾರಿಗೆ ದಂಡ ವಿಧಿಸಿದೆ. ಆದರೆ ಈ ಕುರಿತು ಕಾಯ್ದೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಇದರಿಂದ ಮಾಹಿತಿಯಿಂದ ವಂಚಿತನಾಗಿ ತೊಂದರೆ ಅನುಭವಿಸಿದರೆ ಅವರಿಗೆ ಸೂಕ್ತ `ರಕ್ಷಣೆ~ ಸಿಗುತ್ತಿಲ್ಲ. ಈ ಆದೇಶದ ಆಧಾರದ ಮೇಲೆ ಕಾಯ್ದೆಯಲ್ಲಿ ತಿದ್ದುಪಡಿ ಅಗತ್ಯ.

* ಕಾಯ್ದೆಯಿಂದ ದುರುಪಯೋಗ ಆಗುತ್ತಿದೆಯೇ?
ಕಾಯ್ದೆಯ ದುರುಪಯೋಗ ಆಗುತ್ತಿಲ್ಲ. ಕಾಯ್ದೆಯಲ್ಲಿನ ಅಂಶಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ ಎನ್ನಬಹುದು.

* ಆರ್‌ಟಿಐ ಉದ್ದೇಶ ಈಡೇರಿದೆಯೇ?
ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಈ ಕಾಯ್ದೆಯು ರಾಜಕೀಯಕ್ಕಷ್ಟೇ ಸೀಮಿತವಾದಂತಿದೆ. ಇಷ್ಟು ಸಾಲದು. ಕೆಲಸ ಸರಿಯಾಗಿ ನಿರ್ವಹಿಸದ ವಿಷಯಗಳಿಗೆ ಸಂಬಂಧಿಸಿದಂತೆ, ಅದು ಸಣ್ಣ ಪುಟ್ಟ ವಿಷಯಗಳಾದರೂ ಬಿಡದೆ ಈ ಕಾಯ್ದೆಯ ಮೂಲಕ ಮಾಹಿತಿ ಪಡೆದು ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಸಾಮೂಹಿಕ ಚಳುವಳಿ ರೂಪದಲ್ಲಿ ನಡೆಯಬೇಕು. ಪ್ರತಿಯೊಬ್ಬ ವ್ಯಕ್ತಿ ಈ ಕಾಯ್ದೆಯ ಪ್ರಯೋಜನ ಪಡೆದಾಗಲೇ ನಿಜವಾಗಿಯೂ ಕಾಯ್ದೆ ಜಾರಿಗೊಂಡಿರುವುದು ಸಾರ್ಥಕ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.