ADVERTISEMENT

ಕಾರಾಗೃಹವೆಂಬ ಕಾಳ ಸಂತೆಯಲ್ಲಿ...

ಎಂ.ಸಿ.ಮಂಜುನಾಥ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಕಾರಾಗೃಹವೆಂಬ ಕಾಳ ಸಂತೆಯಲ್ಲಿ...
ಕಾರಾಗೃಹವೆಂಬ ಕಾಳ ಸಂತೆಯಲ್ಲಿ...   

ಸ್ವಾತಂತ್ರ್ಯಪೂರ್ವದಲ್ಲಿ ಕೆಲವರಿಗೆ ಹೋರಾಟದ ವೇದಿಕೆಯಾಗಿದ್ದ ಬಂದಿಖಾನೆಯು ಈಗ ಸಾಮಾಜಿಕ ಅನಿಷ್ಟವಾಗಿ ಬದಲಾಗಿದೆ. ಅಲ್ಲಿಗೆ ಹೋಗಿ ಬರುವವರನ್ನು ಜನ ಅಸಹ್ಯದಿಂದ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕೈದಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವ ಜೈಲರ್‌ಗಳು, ಮತ್ತೆ ಕೆಲವು ‘ಡಾನ್‌’ ಕೈದಿಗಳಿಗೆ ತಾವೇ ಗುಲಾಮರಾಗಿದ್ದಾರೆ. ಆಗದ ಅಧಿಕಾರಿಗಳ ವಿರುದ್ಧ ಕೈದಿಗಳನ್ನು ಎತ್ತಿಕಟ್ಟಿ ಜೈಲಿನಲ್ಲೇ ದೊಂಬಿ ಮಾಡಿಸುತ್ತಿದ್ದಾರೆ. ಇಂಥ ವಿದ್ಯಮಾನಗಳಿಗೆ ಸಾಕ್ಷಿಯಾದ ಕಾರಣಕ್ಕೆ ಬೆಂಗಳೂರಿನ ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ’ ಈಗ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆಯಬೇಕಾಗಿದೆ...

ಹೌದು, ಅಭದ್ರತೆ ಹಾಗೂ ಅಕ್ರಮಗಳ ಕಾರಣದಿಂದಾಗಿ ಈ ಜೈಲು ಚರ್ಚೆಗೆ ಬರುತ್ತಲೇ ಇದೆ.  ರಾಜ್ಯ ಕಾರಾಗೃಹ ಇಲಾಖೆಯ ಡಿಐಜಿಯಾಗಿದ್ದ ಡಿ.ರೂಪಾ ಅವರು ತಮ್ಮದೇ ಇಲಾಖೆಯ ಡಿಜಿಪಿಯಾಗಿದ್ದ ಎಚ್‌.ಎನ್.ಸತ್ಯನಾರಾಯಣರಾವ್ ವಿರುದ್ಧ ಮಾಡಿರುವ ಲಂಚದ ಆರೋಪ, ಈಗ ಒಂದು ಪ್ರಕರಣವಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಅಧಿಕಾರಿಗಳ ಕಚ್ಚಾಟ, ಕೈದಿ ಬಣಗಳ ಗುದ್ದಾಟ, ಜೈಲಿನಲ್ಲಿರುವ ಅವ್ಯವಸ್ಥೆ, ಸಾಮಾನ್ಯ ಕೈದಿಗಳ ಪಡಿಪಾಟಲು, ಗಣ್ಯರಿಗೆ ಸಿಗುತ್ತಿರುವ ರಾಜಾತಿಥ್ಯ... ಹೀಗೆ, ಜೈಲಿನ ಸಂಪೂರ್ಣ ಚಿತ್ರಣವನ್ನೇ ಬಿಚ್ಚಿಟ್ಟಿದೆ.

ಡಿಜಿಪಿ ವಿರುದ್ಧ ವರದಿ ಕೊಟ್ಟ ರೂಪಾ ವಿರುದ್ಧ ಜೈಲಿನಲ್ಲೇ ಪರ–ವಿರೋಧದ ಗ್ಯಾಂಗ್‌ಗಳು ಸೃಷ್ಟಿಯಾಗಿವೆ. ಕಾರಾಗೃಹದಲ್ಲಿ ಒಂದು ವೇಳೆ ಅಕ್ರಮ ನಡೆದಿದ್ದರೂ, ಅದನ್ನು ಬಯಲಿಗೆಳೆಯುವಲ್ಲಿ ಅಶಿಸ್ತು ತೋರಿದರೆಂಬ ಕಾರಣಕ್ಕೆ ಅವರಿಗೆ ವರ್ಗಾವಣೆ ಶಿಕ್ಷೆ ಸಿಕ್ಕಿದೆ. ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಡಿಜಿಪಿ ಅವರಿಗೂ ಅಕ್ರಮದ ಹಣೆಪಟ್ಟಿ ಕಟ್ಟಿ ಎತ್ತಂಗಡಿ ಮಾಡಲಾಗಿದೆ. ಇನ್ನು ತಮ್ಮ ನೆಚ್ಚಿನ ಅಧಿಕಾರಿಗಳ ಪರವಾಗಿ ಜೈಲಿನಲ್ಲಿ ಗುದ್ದಾಡಿಕೊಂಡ 20 ಕೈದಿಗಳನ್ನೂ ಬೇರೆ ಬೇರೆ ಜೈಲುಗಳಿಗೆ ಕಮಾನು (ಅಂಕೆ ಮೀರಿದ ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರಿಸುವುದು) ಎತ್ತಲಾಗಿದೆ.

ADVERTISEMENT

ತಾವು ಕೆಲಸ ಮಾಡಿದ್ದ ಇಲಾಖೆಯಲ್ಲಿ ಇಂಥ ಕೆಟ್ಟ ವಿದ್ಯಮಾನಗಳು ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕಾರಾಗೃಹ ಇಲಾಖೆಯ ನಿವೃತ್ತ ಅಧಿಕಾರಿಗಳು, ‘ಡಿಜಿಪಿ–ಡಿಐಜಿ ಕಿತ್ತಾಟದಿಂದ  ಆಡಳಿತ ವ್ಯವಸ್ಥೆ ದುರ್ಬಲವಾಗುವ ಸಾಧ್ಯತೆ ಇದೆ. ಒಂದು ವೇಳೆ ಆಡಳಿತ ಕುಸಿದರೆ ಕೈದಿಗಳ ನಿಯಂತ್ರಣ ಅಸಾಧ್ಯ. ಆ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರಲು ಹೊಸಬರು ಪರದಾಡಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವ್ಯವಸ್ಥೆ ಬಿಚ್ಚಿಟ್ಟ ಕಲಹ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಹಾಗೂ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರದ ಜತೆ ಜತೆಗೇ, ಸಾಮಾನ್ಯ ಕೈದಿಗಳು ಅನುಭವಿಸುತ್ತಿರುವ ಸಂಕಟಗಳೂ ಈ ವಿವಾದದಿಂದ ಬಯಲಾಗಿವೆ. ಕೆಲ ಬಂದಿಗಳು ಸೆಲ್‌ನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ, ಜೂಜಾಟದಲ್ಲಿ  ತೊಡಗಿರುವ ಹಾಗೂ ಕೈದಿಗಳಿಗೆ ಗಾಂಜಾ ಕೊಡಲು ಸಿಬ್ಬಂದಿ ಲಂಚ ಪಡೆಯುವಂಥ ದೃಶ್ಯಗಳನ್ನೂ ಜನ ಕಣ್ತುಂಬಿಕೊಂಡಿದ್ದಾರೆ.

‘ಜೈಲು ಸಿಬ್ಬಂದಿ ಹೇಳಿದಂತೆ ನಡೆದುಕೊಳ್ಳದಿದ್ದರೆ ವಾರಪೂರ್ತಿ ಶೌಚಾಲಯ ತೊಳೆಯುವ ಶಿಕ್ಷೆ ಸಿಗುತ್ತದೆ. ವಾದ ಮಾಡಿದರೆ ಇತರೆ ಕೈದಿಗಳನ್ನು ಬಿಟ್ಟು ಹೊಡೆಸುತ್ತಾರೆ. ಉಚಿತವಾಗಿ ನೀಡಬೇಕಾದ ಸೋಪು, ಪೇಸ್ಟಿಗೂ ದುಡ್ಡು ಕೀಳುತ್ತಾರೆ. ಕೆಲಸ ಮಾಡಿದ್ದಕ್ಕೆ ನೀಡಬೇಕಾದ ಕೂಲಿಯಲ್ಲೂ ವಂಚಿಸುತ್ತಾರೆ. ಪರೋಲ್ ನೀಡಲು ಸತಾಯಿಸುತ್ತಾರೆ. ಇಷ್ಟೆಲ್ಲ ಮಾಡಿದರೂ ಕೊನೆಗೆ, ನಡತೆ ಸರಿಯಿಲ್ಲವೆಂದು ವರದಿ ಕೊಟ್ಟು ಸನ್ನಡತೆ ಆಧಾರದಡಿ ಬಿಡುಗಡೆಯಾಗುವುದಕ್ಕೂ ಅಡ್ಡಗಾಲು ಹಾಕಿ ನಗುತ್ತಾರೆ’ ಎಂದು ಇತ್ತೀಚೆಗೆ ಬಿಡುಗಡೆಯಾಗಿ ಬಂದ ಕೈದಿಗಳು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.

‘ಕಾರಾಗೃಹ ವ್ಯವಸ್ಥೆಯಲ್ಲಿ ಈಗಲಾದರೂ ಬದಲಾವಣೆ ತರಬೇಕಿದೆ. ಸಣ್ಣಪುಟ್ಟ ಮಾರ್ಪಾಡು ಮಾಡಿ ಸುಧಾರಣೆ ಆಗಿದೆ ಎಂದರೆ ಸರಿಯಲ್ಲ. ಇಡೀ ದೇಶಕ್ಕೆ ಅನ್ವಯವಾಗುವ ರೀತಿ ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಕೈದಿಗಳೂ ರೊಚ್ಚಿಗೇಳುವ ಕಾಲ ದೂರವಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ನನೆಗುದಿಗೆ ಬಿತ್ತು ಮುಲ್ಲಾ ಸಮಿತಿ ವರದಿ:  ‘ನಮ್ಮ ರಾಷ್ಟ್ರದ ಕಾರಾಗೃಹ ವ್ಯವಸ್ಥೆ ವಸಾಹತುಶಾಹಿಯ ಬಳುವಳಿ. ಸ್ವಾತಂತ್ರ್ಯಾ ನಂತರ ಆರೋಪಿಗಳನ್ನು ಬಂಧಿಸುವ ವಿಚಾರದಲ್ಲಿ ತಾತ್ವಿಕವಾಗಿ ಮೂಲಭೂತ ಬದಲಾವಣೆ ಕಂಡಿತಾದರೂ, ಕಾರಾಗೃಹಗಳ ನಿರ್ವಹಣೆ ಶೈಲಿ ಮಾತ್ರ ಬಹಳ ಮಟ್ಟಿಗೆ ಹಾಗೇ ಉಳಿದುಕೊಂಡಿತು. ಇದು ನಿರಾಶೆಯ ಸಂಗತಿ ಎನಿಸಿದರೂ ವಾಸ್ತವ’ ಎಂಬುದು ನಿವೃತ್ತ ಅಧಿಕಾರಿಗಳ ಅಭಿಪ್ರಾಯ.

‘ಹಾಗೆಂದು ಸುಧಾರಣೆ ಆಗಿಯೇ ಇಲ್ಲ ಎನ್ನುವಂತಿಲ್ಲ. ಹಿಂದಿನ ಸರ್ಕಾರಗಳು ಕಾರಾಗೃಹಗಳ ಸುಧಾರಣೆಗಾಗಿ ಶಿಫಾರಸು ಮಾಡಲು ಅನೇಕ ಆಯೋಗ ಹಾಗೂ ಸಮಿತಿಗಳನ್ನು ರಚಿಸಿವೆ. ತರುವಾಯ ಅವುಗಳ ಅನೇಕ ಸಲಹೆಗಳನ್ನು  ಅಳವಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ 1980ರಲ್ಲಿ ನ್ಯಾಯಮೂರ್ತಿ ಮುಲ್ಲಾ ಅಧ್ಯಕ್ಷತೆಯ ರಾಷ್ಟ್ರಮಟ್ಟದ ಸಮಿತಿ ಶಿಫಾರಸು’.

‘ದೇಶದಲ್ಲಿ ಸಮಾನ ಜೈಲು ಸಂಹಿತೆ ರಚನೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸುಧಾರಣೆ, ಕೈದಿಗಳ ಸಂಖ್ಯೆಗೆ ಅನುಗುಣವಾಗಿ ಜೈಲು ಕೊಠಡಿಗಳ  ನಿರ್ಮಾಣ, ವೈದ್ಯಕೀಯ ಚಿಕಿತ್ಸೆಗಾಗಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಡನೆ ಯೋಜನೆ, ಬಿಡುಗಡೆಯಾದ ಕೈದಿಗಳ ಪುನರ್ವಸತಿಗೆ ಕ್ರಮ, ಬಯಲು ಕಾರಾಗೃಹ ನಿರ್ಮಾಣ ಸೇರಿದಂತೆ 658 ಶಿಫಾರಸುಗಳನ್ನು ಆ ಸಮಿತಿ ಮಾಡಿದೆ. ಅವುಗಳಲ್ಲಿ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಸುಧಾರಣೆ ತರಲಾಗಿದೆ. ಮತ್ತೆ ಕೆಲ ಪ್ರಮುಖ ಶಿಫಾರಸುಗಳು ನನೆಗುದಿಗೆ ಬಿದ್ದಿವೆ’ ಎನ್ನುತ್ತಾರೆ ಅವರು.

‘ಸುರಕ್ಷತೆ’ಗೊಂದು ಸಮಿತಿ: ‘ಪರಪ್ಪನ ಅಗ್ರಹಾರ ಜೈಲಿನಿಂದ ಕುಖ್ಯಾತ ಪಾತಕಿ ‘ಸೈಕೊ’ ಶಂಕರ್ ಪರಾರಿಯಾದ ಬಳಿಕ ಜೈಲುಗಳ ಸುಧಾರಣೆ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಬಿಪಿನ್ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಎಡಿಜಿಪಿ ಎನ್‌.ಎಸ್.ಮೇಘರಿಕ್ ಹಾಗೂ ಕಾರಾಗೃಹಗಳ ಇಲಾಖೆ ಡಿಐಜಿ ಆಗಿದ್ದ ಎಸ್‌.ರವಿ ಅವರನ್ನೊಳಗೊಂಡ ಸಮಿತಿ ರಚಿಸಿತ್ತು.

ರಾಜ್ಯದ ಎಲ್ಲ ಜೈಲುಗಳಲ್ಲೂ ತಪಾಸಣೆ ನಡೆಸಿದ್ದ ಸಮಿತಿ, 32 ಮುಂಜಾಗ್ರತಾ ಕ್ರಮಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ವೀಕ್ಷಣಾ ಗೋಪುರ ನಿರ್ಮಾಣ ಹಾಗೂ ತಡೆಗೋಡೆ ಮೇಲೆ ಫೆನ್ಸಿಂಗ್ ಅಳವಡಿಕೆ ಹೊರತುಪಡಿಸಿದರೆ ಉಳಿದ 29 ಶಿಫಾರಸುಗಳು ಹಾಗೆಯೇ ಉಳಿದವು.

ರಾಜಕಾರಣಿಗಳಿಗೆ ಸುಧಾರಣೆ ಬೇಡ: ‘ಅನೇಕ ರಾಜಕಾರಣಿಗಳ ಮೇಲೆ ಕ್ರಿಮಿನಲ್ ಕೇಸ್‌ಗಳಿವೆ. ಹೀಗಾಗಿ, ಅವರಿಗೆ ಕಾರಾಗೃಹದ ಸುಧಾರಣೆ ಬೇಡ. ಜೈಲಿಗೆ ಹೋದ ರೌಡಿ ಬದಲಾಗುವುದು ಅವರಿಗೆ ಇಷ್ಟವಿಲ್ಲ. ಜೈಲು ಅಧೀಕ್ಷಕ ಸಹ ದೀರ್ಘಕಾಲ ಒಂದೇ ಕಾರಾಗೃಹದಲ್ಲಿ ಉಳಿದುಕೊಳ್ಳಲು ಅಂಥ ರಾಜಕಾರಣಿಗಳ ನೆಂಟಸ್ತಿಕೆ ಬೆಳೆಸಿಕೊಳ್ಳುತ್ತಾನೆ. ಇಂಥ ಹೊಲಸು ಸ್ಥಿತಿಯಲ್ಲಿ ಕಾರಾಗೃಹ ವ್ಯವಸ್ಥೆ ಇದೆ’ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಕೋದಂಡರಾಮಯ್ಯ.

‘ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ–ಮೊಬೈಲ್‌ ಪೂರೈಕೆ ಆಗುತ್ತಿವೆ. ಅಂಥ ಸಿಬ್ಬಂದಿಯೇ ಬಹಳ ಅಪಾಯಕಾರಿ. ಜೈಲಿನಲ್ಲಿ ಕುಳಿತೇ ಅಕ್ರಮ ಚಟುವಟಿಕೆ ನಡೆಸುವ ಪಾತಕಿಗಳಿಗೆ ಇವರು ಗುಲಾಮರಾಗುತ್ತಿದ್ದಾರೆ. 50–100 ರೂಪಾಯಿಗೆ ಕೈದಿಗಳ ಬಳಿ ಕೆಲವರು ಕೈ ಚಾಚುತ್ತಾರೆ. ಸಿಕ್ಕಿ ಬಿದ್ದು ಅಮಾನತು ಸಹ ಆಗುತ್ತಿದ್ದಾರೆ. ಅಂತಹವರ ಅಮಾನತನ್ನು ರದ್ದುಗೊಳಿಸುವ ಪ್ರಭಾವಿಗಳೂ ಇದ್ದಾರೆ’ ಎನ್ನುತ್ತಾರೆ ಅಧಿಕಾರಿಗಳು.

ಚಾಣಾಕ್ಷ ಕೈದಿಗಳು: ‘ಕಡ್ಲೆಕಾಯಿ ಸಿಪ್ಪೆಯೊಳಗೆ ಗಾಂಜಾ ಇಟ್ಟು ಕೈದಿಗಳಿಗೆ ತಲುಪಿಸಿದ್ದು ಇತ್ತೀಚೆಗೆ ವರದಿಯಾಯಿತು. ನನ್ನ ಅಧಿಕಾರಾವಧಿಯಲ್ಲಿ ಒಬ್ಬಾತ ‘ಪರಿಚಿತ ಕೈದಿಗೆ ಸಾರು ಕೊಡಬೇಕು ಸರ್’  ಎಂದು ಬಂದಿದ್ದ. ಅದನ್ನು ಪರಿಶೀಲಿಸಿದಾಗ ಸಾರಾಯಿಯಿಂದ ಮಾಡಿದ ಸಾರು ಅದು. ಮತ್ತೆ ಕೆಲವರು ಚೆಂಡಿನಲ್ಲಿ ಗಾಂಜಾ ತುಂಬಿ, ಹೊರಗಿನಿಂದ ಜೈಲಿನೊಳಗೆ ಎಸೆಯುತ್ತಿದ್ದರು. ಆ ನಂತರ ಅಂಥ ಚೆಂಡುಗಳು ಒಳಗೆ ಬರದಂತೆ ಸುತ್ತಲೂ ಬಲೆ ಹಾಕಿಸಿದ್ದೆ.  ಹೀಗೆ, ತಮಗೆ ಅಗತ್ಯವಿರುವ ವಸ್ತುಗಳನ್ನು ಹೇಗಾದರೂ ಪಡೆದುಕೊಳ್ಳುವಲ್ಲಿ ಕೈದಿಗಳು ಚಾಣಾಕ್ಷರು. ನಾವೂ ಬುದ್ಧಿ ಉಪಯೋಗಿಸಬೇಕಾಗುತ್ತದೆ’ ಎನ್ನುತ್ತಾರೆ ನಿವೃತ್ತ ಡಿಜಿಪಿ ಎಸ್‌.ಟಿ ರಮೇಶ್.

ಹುಚ್ಚು ಹಿಡಿಸಿತು ಜೈಲು ...

‘ಗಲಭೆ ಪ್ರಕರಣದಲ್ಲಿ ತಂದೆ ಜೀವಾವಧಿ ಶಿಕ್ಷೆಗೆ ಗುರಿಯಾದರು. 2004ರಲ್ಲಿ ದಾವಣಗೆರೆ ಜಿಲ್ಲಾ ಕಾರಾಗೃಹ ಸೇರಿದ ಅವರು ಬಳ್ಳಾರಿ, ಮೈಸೂರು ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹಗಳಲ್ಲೂ ಕೆಲ ಕಾಲ ಸೆರೆವಾಸ ಅನುಭವಿಸಿದರು. ಇದೇ ಜ.26ರಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿರುವ ಅವರಿಗೆ ಹೊರಗಿನ ಸಮಾಜಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಈಗ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹಳೆ ಘಟನೆಗಳು ಅವರ ನೆನಪಿಗೆ ಬಾರದಂತೆ ನೋಡಿಕೊಳ್ಳಿ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ,‘ಜೈಲು’ ಎಂಬ ಪದ ಅವರ ಕಿವಿಗೆ ಬೀಳದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ದಾವಣಗೆರೆ ಜಿಲ್ಲೆಯ ಎಂ.ಎ. ಪದವೀಧರರೊಬ್ಬರು ಹೇಳಿದರು.

ಕಾಡಿತು ಒಂಟಿತನ

‘ಪಶ್ಚಿಮ ಬಂಗಾಳದ ನಾನು, ಕೂಲಿ ಅರಸಿ ಆಗಷ್ಟೇ ಬೆಂಗಳೂರಿಗೆ ಬಂದಿದ್ದೆ. ಕೆಲ ದಿನಗಳ ಬಳಿಕ ಕಟ್ಟಡ ಕಾಮಗಾರಿ ಸ್ಥಳದಲ್ಲಿ ನನಗೆ ಸ್ಥಳೀಯ ಮೂವರು ಯುವಕರ ಪರಿಚಯವಾಯಿತು. ಒಂದು ರಾತ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನಮ್ಮನ್ನು ‘ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ’ ಎಂಬ ಆರೋಪದಡಿ ಪೊಲೀಸರು ಬಂಧಿಸಿದರು. ಜೈಲಿಗೂ ಕಳುಹಿಸಿದರು’ ಎಂದು 2014ರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಯುವಕನೊಬ್ಬ ತನ್ನ ಕರುಣಾಜನಕ ಕತೆಯನ್ನು ಬಿಚ್ಚಿಟ್ಟ.

‘ನನ್ನ ಜತೆಗಿದ್ದ ಯುವಕರನ್ನು ಒಂದೆರಡು ದಿನಗಳಲ್ಲೇ ಅವರ ಕುಟುಂಬ ಸದಸ್ಯರು ಜಾಮೀನು ಕೊಟ್ಟು ಬಿಡಿಸಿಕೊಂಡು ಹೋದರು.  ಆದರೆ, ನಮ್ಮ ಹಳ್ಳಿಯ ಪಾಲಿಗೆ ಕಾರಾಗೃಹ ಎಂಬುದು ಒಂದು ಸಾಮಾಜಿಕ ಅನಿಷ್ಟ. ಹೀಗಾಗಿ, ಜೈಲಿನಲ್ಲಿರುವುದಾಗಿ ಪತ್ರ ಬರೆದರೂ ನನ್ನ ಕಡೆಯವರು ಯಾರೂ ಬರಲಿಲ್ಲ. ನಂತರ ಏಕಾಂತದ ಜೀವನ ನಿಧಾನವಾಗಿ ನನ್ನನ್ನು ಖಿನ್ನತೆ ಕಡೆಗೆ ಕರೆದೊಯ್ದಿತು’.

‘ಅಲ್ಲಿ ಕೆಲ ಕಾಲ ಮೆಂಟಲ್ ಬ್ಲಾಕ್‌ನಲ್ಲಿಟ್ಟರು. ಆಗ ಮತ್ತಷ್ಟು ಒಂಟಿತನ ಕಾಡತೊಡಗಿತು. ಕ್ರಮೇಣ ಸ್ನಾನ ಮತ್ತು ಊಟ ಮಾಡುವುದನ್ನೂ ನಿಲ್ಲಿಸಿಬಿಟ್ಟೆ. ಇದರಿಂದ ಹೆದರಿದ ಜೈಲು ಸಿಬ್ಬಂದಿ, ನನ್ನ ಕುಟುಂಬ ಸದಸ್ಯರಿಗೆ ಪತ್ರ ಬರೆದು ಕರೆಸಿಕೊಂಡರು. ಆ ನಂತರ ನನಗೆ ಬಿಡುಗಡೆ ಭಾಗ್ಯ ಸಿಕ್ಕಿತು. ಈಗ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲಿನ ಹಾದಿಗೇ ಬರುತ್ತಿದ್ದೇನೆ. ಆಟೊ ಓಡಿಸಿಕೊಂಡು, ಜೀವನ ನಡೆಸುತ್ತಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.