ADVERTISEMENT

ಕ್ರೀಡಾಪಟುಗಳ ಚಿತ್ತ ಯಾಕಿಲ್ಲ ಇತ್ತ...?

ಡಿ.ಗರುಡ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

`ಗೊತ್ತಿಲ್ಲ~, `ಕೇಳಿಲ್ಲ~, `ಓದಿಲ್ಲ~, `ಅದು ಕ್ರೀಡಾ ಅಧಿಕಾರಿಗಳ ಬಗ್ಗೆ ಅಲ್ಲವೆ~, `ಅದರ ಕುರಿತು ಮಾತಾಡಿದರೆ ತೊಂದರೆ ಆಗುತ್ತೆ~, `ಹೊಸ ಪಾಲಿಸಿ ಬಂದರೇನು? ನಮ್ಮ ಸ್ಥಿತಿ ಹೀಗೆ ಇರುತ್ತೆ...!~

- `ಸಮಗ್ರ ಕ್ರೀಡಾ ನೀತಿ-2007~ರ ಪರಿಷ್ಕೃತ ಕರಡು ನೀತಿಯ ಬಗ್ಗೆ ರಾಜ್ಯದ ಹಾಲಿ ಕ್ರೀಡಾಪಟುಗಳನ್ನು ಪ್ರಶ್ನಿಸಿದಾಗ ಸಿಕ್ಕ ಉತ್ತರಗಳಿವು. ಎಲ್ಲರದ್ದೂ ನಿರ್ಲಿಪ್ತ ಮನೋಭಾವ.
 
ಕೇಂದ್ರ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಪಾಲಿಸಿಯನ್ನು ಲಾಲಿಸಿ ಪಾಲಿಸಿ ಬೆಳೆಸುವ ಹೊಣೆ ಇರುವುದೇ ಕ್ರೀಡಾಪಟುಗಳ ಮೇಲೆ. ಆದರೆ, ಅದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಕೂಡ ಹೋಗುತ್ತಿಲ್ಲ. ಅಂದಾಗ ಇದರ ಗತಿ ಭವಿಷ್ಯದಲ್ಲಿ ಏನಾದೀತು?  ಇದು ಸದ್ಯದ ಪರಿಸ್ಥಿತಿ!
 
ಮೂರು ಮಂಗಗಳ ಪ್ರತಿಮೆಯ ರೀತಿಯಲ್ಲಿ `ಕೇಳುವುದಿಲ್ಲ, ನೋಡುವುದಿಲ್ಲ, ಮಾತಾಡುವುದಿಲ್ಲ~ ಎನ್ನುವ ನೀತಿ ಇವರದ್ದು. ಕೇವಲ ಕ್ರೀಡಾ ಫೆಡರೇಷನ್ ಪದಾಧಿಕಾರಿಗಳಿಗಾಗಿ ರೂಪಿಸಿರುವ ನಿಯಮ ಮಾತ್ರ ಎಂದು ತಪ್ಪು ತಿಳುವಳಿಕೆ ಹೆಚ್ಚಿನವರದ್ದು.

ಕ್ರೀಡಾ ಫೆಡರೇಷನ್ ಪದಾಧಿಕಾರಿಗಳ ಅಧಿಕಾರಾವಧಿ ಹಾಗೂ ಫೆಡರೇಷನ್‌ಗಳ ಮೇಲಿನ ಸರ್ಕಾರದ ನಿಯಂತ್ರಣ ಎಲ್ಲವೂ ಸಮಗ್ರ ಕ್ರೀಡಾ ನೀತಿಯ ಒಂದು ಭಾಗ.

ಅದಕ್ಕಿಂತ ಮುಖ್ಯವಾದ ಹಲವಾರು ಅಂಶಗಳು ಇದರಲ್ಲಿ ಅಡಕವಾಗಿವೆ. ಅವು ಕ್ರೀಡಾಪಟುಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ರೂಪಿತವಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುವಂಥ ಒಳಿತಿನ ಪ್ರತಿರೂಪವಿದು.

 ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಅಲ್ಲಿ ನೀಡುವ ಎಲ್ಲ ಸೌಲಭ್ಯ ಹಾಗೂ ಹಣಕಾಸು ವ್ಯವಹಾರ ಎಲ್ಲವೂ ಪಾರದರ್ಶಕವಾಗುವಂತೆ ಮಾಡುವ ಶಕ್ತಿ ಈ ನೀತಿಗಿದೆ. ಮುಖ್ಯವಾಗಿ ಆಯ್ಕೆ ವಿಷಯದಲ್ಲಿ ನಡೆಯುತ್ತಿರುವ ಪಕ್ಷಪಾತ, ರಾಜಕೀಯ ಹಸ್ತಕ್ಷೇಪ ಹಾಗೂ ಹಣಬಲದ ಪ್ರಭಾವವನ್ನು ತಡೆಯುವುದಕ್ಕೆ ಇದು ಅಸ್ತ್ರವಾಗಬಲ್ಲದು.

ಈ ನೀತಿ ಕ್ರೀಡಾ ಅಧಿಕಾರಿಗಳ ದಬ್ಬಾಳಿಕೆ ಕಡಿಮೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ, ಕ್ರೀಡಾಪಟುಗಳ ನಿವೃತ್ತಿಯ ನಂತರದ ಕಷ್ಟದ ದಿನಗಳಿಗೂ ಇದರಲ್ಲಿ ಪರಿಹಾರ ಇದೆ. ಅವರ ಸೇವೆಯನ್ನು ಕೋಚ್‌ಗಳಾಗಿ, ಪರಿಣತ ಸಲಹೆಗಾರರಾಗಿ, ಕ್ರೀಡಾ ಆಡಳಿತಗಾರರಾಗಿ ಬಳಸಿಕೊಳ್ಳಬೇಕೆಂದು ನೀತಿ ಹೇಳಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಉನ್ನತ ಸರ್ಕಾರಿ ಹುದ್ದೆಯನ್ನು ಪಡೆಯುವ ಸಾಧ್ಯತೆಯ ಬಾಗಿಲನ್ನು ಕೂಡ ತೆರೆಯುವಂಥ ಕಾಲವೂ ಬರಬಹುದು. ಆದರೆ, ಅದಕ್ಕೂ ಮುನ್ನ ಹೊಸ ಕರಡು ನೀತಿಯನ್ನು ಮುಕ್ತವಾಗಿ ಸ್ವಾಗತಿಸಬೇಕು. ತಮ್ಮ ಹಿತಕ್ಕೆ ಧಕ್ಕೆಯೆಂದು ವಿರೋಧಿಸುತ್ತಿರುವ ಆಡಳಿತಗಾರರ ವಿರುದ್ಧ ಕ್ರೀಡಾಪಟುಗಳು ಧ್ವನಿ ಎತ್ತಬೇಕು. ಅದೇ ಸಾಧ್ಯವಾಗುವಂತೆ ಕಾಣುತ್ತಿಲ್ಲ. 

ಕ್ರೀಡಾ ನೀತಿಯೊಳಗಿನ ಹೂರಣವು ತಮ್ಮ ಬದುಕನ್ನು ಸಿಹಿ ಮಾಡಬಲ್ಲದೆಂದು ಕ್ರೀಡಾಪಟುಗಳು ಮೊದಲು ಅರಿಯಬೇಕು. ಅಷ್ಟೇ ಅಲ್ಲ, ಇದು ಯಥಾವತ್ತಾಗಿ ಜಾರಿಯಾಗುವಂತೆ ಒತ್ತಾಯ ಹೆಚ್ಚಿಸಬೇಕು. ಚೀನಾ ದೇಶದ ಕ್ರೀಡಾ ಯಶಸ್ಸಿನ ಕುರಿತು ಮಾತನಾಡುವ ನಾವು ನಮ್ಮದೇ ದೇಶದಲ್ಲಿ ಅಂಥದೊಂದು ಸಾಧ್ಯತೆಯು ಎದುರಿಗಿದ್ದಾಗ ಕಣ್ಣು ಮುಚ್ಚಿಕೊಂಡು ತಣ್ಣಗಾಗಿದ್ದೇವೆ.

ಚೀನಾದವರಿಗೆ ಇರುವ ಸೌಲಭ್ಯಗಳು ನಮಗಿಲ್ಲವೆಂದು ಕೊರಗುವ ಮುನ್ನ ನಾವು ಎಷ್ಟರಮಟ್ಟಿಗೆ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ ಎಂದು ಯೋಚನೆ ಮಾಡಲೇಬೇಕು. ಇದು ಕ್ರೀಡಾಪಟುಗಳಿಗೂ ಅನ್ವಯವಾಗುತ್ತದೆ. ಮಾತನಾಡಿದರೆ ತಮ್ಮ ಮೇಲಿನ ಕ್ರೀಡಾ ಅಧಿಕಾರಿಗಳು ಕೋಪಗೊಳ್ಳುತ್ತಾರೆ, ಅವಕಾಶಗಳು ಸಿಗದಂತೆ ಮಾಡುತ್ತಾರೆ.. ಎನ್ನುವ ಭಯದಲ್ಲಿಯೇ ಇನ್ನೆಷ್ಟು ದಿನಗಳನ್ನು ಕಳೆಯಲು ಸಾಧ್ಯ?

ಹೊಸದೊಂದು ಸಾಧ್ಯತೆ ಹಾಗೂ ಭವಿಷ್ಯದ ಕನಸು ನನಸಾಗಲು ಕಾಯುತ್ತಿದೆ. ಅದಕ್ಕೆ ವಿರೋಧ ಮಾಡುತ್ತಿರುವವರು ದೀರ್ಘ ಕಾಲದಿಂದ ಕ್ರೀಡಾ ಕ್ಷೇತ್ರದ ಗದ್ದುಗೆ ಹಿಡಿದುಕೊಂಡವರು. ಕ್ರೀಡಾಪಟುಗಳು ಮಾತ್ರ ತಮಗೆ ಸಂಬಂಧಿಸಿದ್ದಲ್ಲವೆಂದು ಬಾಯಿಗೆ ಬೀಗಮುದ್ರೆ ಹಾಕಿಕೊಂಡಿದ್ದಾರೆ. ಮಾತಾಡುವುದು ದೂರವಿರಲಿ; ಕ್ರೀಡಾ ನೀತಿಯನ್ನು ಅರಿತುಕೊಳ್ಳುವ ಆಸಕ್ತಿಯೂ ಅವರಿಗಿಲ್ಲ.

ಹೊಸ ಪಾಲಿಸಿ ಬಂದರೇನು ನಮ್ಮ ಸ್ಥಿತಿ ಹೀಗೆ ಇರುತ್ತೆ...! ಎಂದು ಗೊಣಗುತ್ತಲೇ ಬದುಕು ಸವೆಸುವಂಥ ನಿರ್ಲಿಪ್ತ ಸ್ಥಿತಿಯನ್ನು ಕ್ರೀಡಾಪಟುಗಳು ತಲುಪಿಬಿಟ್ಟಿದ್ದಾರೆ.ನಮಗೆ ಇದು ಬೇಕು ಎಂದು ಹಕ್ಕಿನಿಂದ ಕೇಳುವ ತಾಕತ್ತನ್ನೇ ಕಳೆದುಕೊಂಡಿದ್ದಾರೆ.ಹೀಗೆಯೇ ಮುಂದುವರಿದರೆ ದೇಶದ ಕ್ರೀಡಾ ಹಿತಕ್ಕೆ ಖಂಡಿತ ಆಪತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.