ADVERTISEMENT

ಚಿಕಿತ್ಸೆಗೆ ಆದ್ಯತೆ

ಡೆಂಗಿ ತಂದ ಆತಂಕ

ಡಾ.ಬಿ.ಜಿ.ಪ್ರಕಾಶ್ ಕುಮಾರ್‌ ಜಂಟಿ ನಿರ್ದೇಶಕ, ಆರೋಗ್ಯ ಇಲಾಖೆ
Published 1 ಆಗಸ್ಟ್ 2015, 5:36 IST
Last Updated 1 ಆಗಸ್ಟ್ 2015, 5:36 IST

* ಡೆಂಗಿ ಜ್ವರದ ಹಾವಳಿ ರಾಜ್ಯದಲ್ಲಿ ಈಗ ಹೇಗಿದೆ?
ನಿಯಂತ್ರಣದಲ್ಲಿದೆ. ರಾಜ್ಯದಾದ್ಯಂತ ಇದುವರೆಗೆ 15 ಶಂಕಿತ ಡೆಂಗಿ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಅವುಗಳಲ್ಲಿ ನಾಲ್ಕು ಪ್ರಕರಣಗಳು ಡೆಂಗಿ ಜ್ವರದಿಂದ ಸಂಭವಿಸಿವೆ ಎಂಬುದು ದೃಢಪಟ್ಟಿದೆ. ಡೆಂಗಿಯು ಒಂದು ವೈರಸ್‌ ಕಾಯಿಲೆ ಆಗಿರುವುದರಿಂದ ಅದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗದ ಗುಣಲಕ್ಷಣಗಳನ್ನು ಆಧರಿಸಿ ಔಷಧ ನೀಡಬೇಕಾಗುತ್ತದೆ.

* ತಡೆಗೆ ಕೈಗೊಂಡ ಕ್ರಮಗಳಾವುವು?
ಕಾಯಿಲೆಯನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ನೀಡುವುದಕ್ಕೆ ನಮ್ಮ ಮೊದಲ ಆದ್ಯತೆ. ಮಲೇರಿಯಾ, ಚಿಕುನ್‌ಗುನ್ಯಾ, ಡೆಂಗಿ ಜ್ವರವೇ ಎಂಬುದನ್ನು ಮೊದಲು ದೃಢಪಡಿಸಬೇಕಾಗುತ್ತದೆ. ನಂತರ ಚಿಕಿತ್ಸೆ ನೀಡಲಾಗುತ್ತದೆ. ಜ್ವರದ ಪ್ರಕರಣಗಳು ಹೆಚ್ಚು ಕಂಡು ಬರುವಲ್ಲಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ. ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ ಸೊಳ್ಳೆಗಳನ್ನು ನಾಶಪಡಿಸುತ್ತೇವೆ.

* ನಿಯಂತ್ರಣ ಕ್ರಮಗಳ ಅನುಷ್ಠಾನ ಹೇಗೆ?
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದಸ್ಯರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಡೆಂಗಿ ಜ್ವರದ ಮಾಹಿತಿ ಹಾಗೂ ಅದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿ ಹೇಳುತ್ತೇವೆ. ನೀರು ನಿಂತಿರುವ ಜಾಗ, ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಔಷಧ ಸಿಂಪಡಿಸುತ್ತೇವೆ.

ತ್ಯಾಜ್ಯ ರಾಶಿ ಹಾಕಿರುವ ಜಾಗಗಳಲ್ಲಿ ಸೊಳ್ಳೆಗಳು ಬೇಗ ಉತ್ಪತ್ತಿಯಾಗುತ್ತವೆ. ಹಾಗಾಗಿ, ಸ್ಥಳೀಯ ಆಡಳಿತ ಅವುಗಳನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಸ್ಥಳ, ಕೈಗಾರಿಕಾ ಪ್ರದೇಶಗಳಲ್ಲಿ ಡೆಂಗಿ ಹಾವಳಿ ಹೆಚ್ಚಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸೊಳ್ಳೆ ಪರದೆ ಪೂರೈಸಬೇಕು ಮತ್ತು ಕಾಮಗಾರಿ ನಡೆಯುವ ಸ್ಥಳದ ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು ಎಂಬ ಸೂಚನೆ ನೀಡಲಾಗಿದೆ.

ಉಳಿದಂತೆ, ಜಿಲ್ಲಾ ಮಟ್ಟದಲ್ಲಿ ಹಲವಾರು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ತಾಂತ್ರಿಕ ಸಲಹೆಗಳನ್ನು ನೀಡಿದ್ದೇವೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಯುವುದಕ್ಕೆ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ ₨ 2.75 ಕೋಟಿ ಅನುದಾನ ಬಿಡುಗಡೆ ಮಾಡಿ ಜಿಲ್ಲೆಗಳಿಗೆ ಹಂಚಲಾಗಿದೆ.

* ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಔಷಧವನ್ನು ಸರಿಯಾಗಿ ಸಿಂಪಡಿಸಲಾಗುತ್ತಿಲ್ಲ ಎಂಬ ಆರೋಪ ಇದೆಯಲ್ಲ?
ಇದು ಇಲಾಖೆಯ ಗಮನಕ್ಕೂ ಬಂದಿದೆ. ಔಷಧವನ್ನು ನಿಗದಿತ ಪ್ರಮಾಣದಲ್ಲಿ ನೀರಿನೊಂದಿಗೆ ಮಿಶ್ರ ಮಾಡಿ ನೀರು ನಿಂತಿರುವ ಸ್ಥಳಗಳಲ್ಲಿ ಸಿಂಪಡಿಸಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಸಿಂಪಡಿಸಿದರೆ ಯಾವುದೇ ಪ್ರಯೋಜನ ಇಲ್ಲ. ಈ ಸಂಬಂಧ ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

* ಡೆಂಗಿಗೆ ಚಿಕಿತ್ಸೆ ನೀಡುವ ಎಲ್ಲ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೆಯೇ?
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಗಳಿವೆ. ಇದುವರೆಗೆ ಔಷಧ ಕೊರತೆಯಾಗಿಲ್ಲ. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ಜ್ವರ ಪರೀಕ್ಷೆಗಾಗಿ ಪ್ರಯೋಗಾಲಯ ಇದೆ. ಇಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ರೋಗಿಗಳಿಗೂ ಉಚಿತ ಪರೀಕ್ಷೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲೂ ಈ ವ್ಯವಸ್ಥೆ ಇದೆ.

* ರಕ್ತದಿಂದ ಪ್ಲೇಟ್‌ಲೆಟ್‌ಗಳನ್ನು ಪ್ರತ್ಯೇಕಿಸುವ ಕೇಂದ್ರಗಳ ಕೊರತೆ ಇದೆಯೇ?
ಸರ್ಕಾರಿ ಮತ್ತು ಖಾಸಗಿ ಸೇರಿ ರಾಜ್ಯದ 85 ಕಡೆಗಳಲ್ಲಿ ಈ ಕೇಂದ್ರಗಳಿವೆ. ರಕ್ತ ಬ್ಯಾಂಕ್‌, ಪ್ಲೇಟ್‌ಲೆಟ್‌ಗಳು ಎಲ್ಲೆಲ್ಲಿ ಲಭ್ಯವಿವೆ ಎಂಬ ವಿವರವನ್ನು ‘ಜೀವ ಸಂಜೀವಿನಿ’ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

* ಪ್ಲೇಟ್‌ಲೆಟ್‌ ಪೂರೈಕೆಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಇದೆಯಲ್ಲ?
ಇದನ್ನು ತಪ್ಪಿಸುವುದಕ್ಕಾಗಿ ನಾವು ಖಾಸಗಿ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಡೆಂಗಿ ಪರೀಕ್ಷೆ ಮತ್ತು ಪ್ಲೇಟ್‌ಲೆಟ್‌ಗೆ ದರ ನಿಗದಿಪಡಿಸಿದ್ದೇವೆ. ಅದಕ್ಕಿಂತ ಹೆಚ್ಚು ಶುಲ್ಕವನ್ನು ಅವರು ವಿಧಿಸುವಂತಿಲ್ಲ. ಡೆಂಗಿ ಪರೀಕ್ಷೆಗೆ ಗರಿಷ್ಠ ₨ 500 ದರ ತೆಗೆದುಕೊಳ್ಳಬಹುದು (ಒಂದು ಪರೀಕ್ಷೆ, ಅಂದರೆ ಎನ್ಎಸ್‌1 ಅಥವಾ ಐಜಿಎಂಗೆ ₨ 250, ಎರಡು ಅಥವಾ ಮೂರು ಪರೀಕ್ಷೆಗೆ– ಎನ್‌ಎಸ್‌1 ಅಥವಾ ಐಜಿಎಂ ಅಥವಾ ಐಜಿಜಿಗೆ ₨ 500) ಪ್ಲೇಟ್‌ಲೆಟ್‌ ಒಂದು ಯುನಿಟ್‌ಗೆ ₨ 850 ಮತ್ತು ಒಬ್ಬನೇ ರಕ್ತದಾನಿಯಿಂದ ಸಂಗ್ರಹಿಸಿದ ಪ್ಲೇಟ್‌ಲೆಟ್‌ಗೆ ₨ 11 ಸಾವಿರ ಶುಲ್ಕ ವಿಧಿಸಬಹುದಷ್ಟೇ.
ಎಲ್ಲ ಡೆಂಗಿ ರೋಗಿಗಳಿಗೆ ಪ್ಲೇಟ್‌ಲೆಟ್‌ಗಳ ಅಗತ್ಯವಿಲ್ಲ. ಪ್ಲೇಟ್‌ಲೆಟ್‌ಗಳ ಸಂಖ್ಯೆ 5 ಸಾವಿರದಿಂದ 10 ಸಾವಿರದ ಒಳಗಡೆ ಇದ್ದರೆ ಮಾತ್ರ ನೀಡಬೇಕಾಗುತ್ತದೆ.

* ಪ್ರತಿ ಸಲ ಮಳೆಗಾಲ ಆರಂಭವಾಗುವಾಗಲೇ ಡೆಂಗಿ ಹೆಚ್ಚು ಕಾಡುತ್ತದೆ. ಇಲಾಖೆ ಮುನ್ನೆಚ್ಚರಿಕೆ ವಹಿಸುವುದಿಲ್ಲವೇಕೆ? ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ?
ಇದು ಮಾನವನಿಂದ ಉಂಟಾಗುವ ಸಮಸ್ಯೆ. ಸ್ವಚ್ಛತೆಯೇ ಇದಕ್ಕೆ ಮದ್ದು. ನಮ್ಮ ಮನೆ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಗರಪಾಲಿಕೆಗಳು ಮತ್ತು ಇತರ ಸ್ಥಳೀಯ ಆಡಳಿತಗಳು ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡುತ್ತಿದ್ದರೆ ಸಾಂಕ್ರಾಮಿಕ ರೋಗಗಳು ಕಾಡುವುದಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿದರೆ ಯಾವ ಸಮಸ್ಯೆಯೂ ಇರದು.

ರೋಗನಿರೋಧಕ ಶಕ್ತಿ ಹೆಚ್ಚಿಸಿ
ಡೆಂಗಿ ಜ್ವರ ಉಲ್ಬಣಿಸಿದಾಗ ರೋಗಿಯ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಪಾತಾಳಕ್ಕೆ ಕುಸಿಯುತ್ತದೆ. ಆಗ ಪ್ಲೇಟ್‌ಲೆಟ್‌ಗಳ ಪ್ರಮಾಣದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯಾಗಿರುತ್ತದೆ.  ಪ್ಲೇಟ್‌ಲೆಟ್‌ಗಳ ಸಂಖ್ಯೆ ಮಾನವನ ರೋಗನಿರೋಧಕ ಶಕ್ತಿ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಡೆಂಗಿ ವೈರಾಣು ರೋಗಿಯ ರಕ್ತದಲ್ಲಿಯ ಪ್ಲೇಟ್‌ಲೆಟ್‌ಗಳ ಮೇಲೆ ನೇರ ದಾಳಿ ಮಾಡುವುದರಿಂದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ.  ಹೀಗಾಗಿ ಪ್ರೊಟೀನ್‌, ವಿಟಮಿನ್‌, ಖನಿಜಾಂಶ, ಪೋಷಕಾಂಶ ಇರುವ ಪೌಷ್ಟಿಕ ಆಹಾರ, ಹಣ್ಣು, ಹಸಿರು ತರಕಾರಿ, ಸೊಪ್ಪು ಸೇವಿಸಬೇಕು.

ಪಪ್ಪಾಯ ಎಲೆ, ಪಪ್ಪಾಯ ಹಣ್ಣಿನ ರಸ, ವಿಟಮಿನ್ ಸಿ ಹೆಚ್ಚಾಗಿರುವ ನೆಲ್ಲಿಕಾಯಿ, ಕಿತ್ತಳೆ ರಸ, ಕಬ್ಬಿಣದ ಅಂಶ ಹೆಚ್ಚಿರುವ ದಾಳಿಂಬೆ, ಕಿವಿ ಹಣ್ಣಿನ ಜ್ಯೂಸ್‌  ಸೇವಿಸಬೇಕು.

ಇದರಲ್ಲಿರುವ ಪೋಷಕಾಂಶ,  ವಿಟಮಿನ್‌, ಕಬ್ಬಿಣ ಹಾಗೂ ನೀರಿನ ಅಂಶದಿಂದಾಗಿ ರಕ್ತದಲ್ಲಿಯ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸ್ವಾಭಾವಿಕವಾಗಿ  ಹೆಚ್ಚಾಗುತ್ತದೆ.  ಹಸಿರು ತರಕಾರಿ, ಮೆಂತೆ, ಪಾಲಕ್‌ನಂಥ ಸೊಪ್ಪುಗಳಲ್ಲಿ ವಿಟಮಿನ್–ಕೆ  ಅಧಿಕ ಪ್ರಮಾಣದಲ್ಲಿರುತ್ತದೆ. 

ಕಹಿ ಬೇವಿನ ಎಲೆಯ ರಸ,  ತುಳಸಿ ಎಲೆ ಹಾಕಿ ಕುದಿಸಿ, ಆರಿಸಿದ ನೀರು, ಏಲಕ್ಕಿ ಹಾಕಿದ ಹರ್ಬಲ್ ಚಹಾ, ಎಳನೀರು, ಮೀನು ಮತ್ತು ಚಿಕನ್  ಸೂಪ್, ಕೆಂಪಕ್ಕಿ ಗಂಜಿ    ದೇಹದಲ್ಲಿಯ ನೀರಿನಂಶ ಹೊರ ಹೋಗದಂತೆ ತಡೆಯುತ್ತವೆ.  

ಅಧಿಕ ಪ್ರಮಾಣದ ಕಬ್ಬಿಣಾಂಶವಿರುವ ಸಕ್ಕರೆ ಬಾದಾಮಿ (ಏಪ್ರಿಕಾಟ್),  ಖರ್ಜೂರ, ಬೆಳ್ಳುಳ್ಳಿ, ಬೀಟ್‌ರೂಟ್, ಒಣ ಹಣ್ಣು, ಮೀನು ಪ್ರಾಕೃತಿಕವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.

ವಿನೆಗರ್‌ ಜತೆ ಈರುಳ್ಳಿ ರುಬ್ಬಿ  ಮಿಶ್ರಣವನ್ನು ಆಹಾರದ ಜೊತೆ  ಸೇವಿಸಬೇಕು.

* ಸಂದರ್ಶನ: ಸೂರ್ಯನಾರಾಯಣ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT