ADVERTISEMENT

ನಾಳಿನ ಪ್ರಜೆಗಳಿಗೆ ಅರಿವಿನ ಪಾಠ

ಸ್ವಚ್ಛತೆ ಆದ್ಯತೆ

ಡಾ.ಸಂಜೀವ ಕುಲಕರ್ಣಿ
Published 10 ಅಕ್ಟೋಬರ್ 2014, 19:30 IST
Last Updated 10 ಅಕ್ಟೋಬರ್ 2014, 19:30 IST

ನಮ್ಮದು ಒಂದು ವಿಚಿತ್ರವಾದ ಸಮಾಜ. ಒಂದು ಕಡೆ ನಮ್ಮದು ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ, ಬಹಳ ಶ್ರೇಷ್ಠವಾದ ಸಂಸ್ಕೃತಿ;

ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನೆಲ್ಲ ವಿಶ್ಲೇಷಿಸಿ ಅಧ್ಯಾತ್ಮದ ಉತ್ತುಂಗಕ್ಕೇರಿದ ಸಂಸ್ಕೃತಿ ಎಂದು ಹೆಮ್ಮೆ ಪಡುತ್ತೇವೆ. ಆದರೆ ಇನ್ನೊಂದು ಕಡೆ ಸ್ವಾತಂತ್ರ್ಯ ದೊರೆತು ಆರು ದಶಕಗಳಾದರೂ ಓಣಿ ಓಣಿಯ ಕಸದ ನಿರ್ವಹಣೆಯಂತಹ ಒಂದು ಮೂಲಭೂತ ಕೆಲಸ­ವನ್ನೂ ಸರಿಯಾಗಿ ಮಾಡಲಾಗದೇ ಒದ್ದಾಡುತ್ತಿದ್ದೇವೆ. ಪರಿಣಾಮವಾಗಿ ನಮ್ಮ ಹಳ್ಳಿಗ­ಳಿಂದ ಹಿಡಿದು ಮಹಾನಗರಗಳವರೆಗೂ ಎಲ್ಲ ಜನವಸತಿ ಪ್ರದೇಶಗಳೂ ಕಸದ ತಿಪ್ಪೆಗಳಾಗಿ ರಾರಾಜಿಸುತ್ತಿವೆ.

ಈ ಸಮಸ್ಯೆಯಲ್ಲಿ ಶಿಕ್ಷಣದ ಪಾತ್ರವೇನು ಎಂದು ನಮಗೆ ನಾವೇ ಕೇಳಿಕೊಂಡಾಗ ಸಿಗುವ ಉತ್ತರ ಮಾತ್ರ ಬಹಳ ನಿರಾಶಾದಾಯಕ. ಇಲ್ಲಿ ಎರಡು ಅಂಶಗಳು ನಿಚ್ಚಳವಾಗಿ  ಕಾಣುತ್ತವೆ. ಒಂದು, ಶಾಲಾ ಶಿಕ್ಷಣ ಪಡೆದ ಹಾಗೂ ಆ ಮೂಲಕ ಆರ್ಥಿಕವಾಗಿ ಸುಸ್ಥಿತಿ­ಯಲ್ಲಿರುವ ಜನಸಮುದಾಯವೇ ಪ್ಲಾಸ್ಟಿಕ್ ಅನ್ನೂ ಒಳ­ಗೊಂಡಂತೆ ಹೆಚ್ಚು ಕಸವನ್ನು ಉತ್ಪಾದಿಸುತ್ತದೆ ಎಂಬುದು.

ಎರಡು, ಈ ‘ಸುಶಿಕ್ಷಿತ’ ಸಮುದಾಯದಲ್ಲಿ ಆಳವಾಗಿ ಮನೆ ಮಾಡಿಕೊಂಡಿರುವ- ‘ನನ್ನ ಮನೆ ಕಾಂಪೌಂಡಿನ ಆಚೆಯಿರುವ ಕಸಕ್ಕೂ ನಮಗೂ ಏನೂ ಸಂಬಂಧವಿಲ್ಲ,- ಅದರ ನಿರ್ವ­ಹಣೆಯಲ್ಲಿ ನಮ್ಮ ಹೊಣೆಗಾರಿಕೆಯೇನೂ ಇಲ್ಲ’- ಎಂಬ ನಿರ್ಲಿಪ್ತ, ಪ್ರಜಾಸತ್ತೆ ವಿರೋಧಿ ನಿಲುವು. ಈಗ ಮತ್ತೊಮ್ಮೆ ರಾಷ್ಟ್ರವ್ಯಾಪಿ ಸ್ವಚ್ಛತಾ ಆಂದೋಲನ ಪ್ರಾರಂಭವಾಗಿರುವಾಗ ಶಾಲೆಗಳು ಈ ವಿಷಯದಲ್ಲಿ ಏನು  ಮಾಡಬಹುದು/ ಮಾಡಬೇಕು  ಎಂಬ ಪ್ರಶ್ನೆ ನಮ್ಮ ಮುಂದೆ ಬರುವುದು ಸಹಜ. ಕಳೆದ 17 ವರ್ಷಗಳಿಂದ ವಿಭಿನ್ನ, ಮುಕ್ತ ಮಾದರಿಯ ಶಾಲೆ­ಯೊಂದನ್ನು ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.

ಮೂಲದಲ್ಲೇ ಕಸದ ವಿಂಗಡಣೆ:  ಕೊಳೆಯುವ ಮತ್ತು ಕೊಳೆಯದ ಕಸವನ್ನು ಬೇರೆಬೇರೆಯಾಗಿ ಸಂಗ್ರಹಿ­ಸಿ­ದರೆ ಮಾತ್ರ ನಮಗೆ ಕಸದ ನಿರ್ವಹಣೆಯನ್ನು ಸಮರ್ಪಕ­ವಾಗಿ ಮಾಡಲು ಶಕ್ಯವಾಗುತ್ತದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿ­ಕೊಡ­ಬೇಕು. ಎಲೆ, ಹೂವು, ಕಾಗದ, ಕಟ್ಟಿಗೆ ಮುಂತಾದವೆಲ್ಲ ಕೊಳೆಯುವ ಕಸವಾದರೆ, ಪ್ಲಾಸ್ಟಿಕ್, ಥರ್ಮೊಕೋಲ್, ಗಾಜು, ಫೈಬರ್‌ ಇತ್ಯಾದಿಯೆಲ್ಲ ಕೊಳೆಯದ  ಕಸ. ಈ ಬಗೆಯ ಕಸದಿಂದಲೇ ನಮಗೆ ಬಹಳ ದೊಡ್ಡ ಸಮಸ್ಯೆಗಳು ಉಂಟಾಗುತ್ತಿರುವುದು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.
ಇದಕ್ಕಾಗಿ ಮೊದಲು ಮೂಲದಲ್ಲೇ ಕಸದ ವಿಂಗಡಣೆಗಾಗಿ ಶಾಲಾ ಆವರಣದಲ್ಲಿ ಸರಿಯಾದ ವ್ಯವಸ್ಥೆ ಮಾಡುವುದು ಬಹಳ ಮುಖ್ಯ.

ಪ್ಲಾಸ್ಟಿಕ್ ಬಳಕೆ: ನಮ್ಮ ಇಂದಿನ ಕಸದ ಬಹುಮುಖ್ಯ ಭಾಗವಾದ ‘ಪ್ಲಾಸ್ಟಿಕ್’ ಬಗ್ಗೆ ಮಕ್ಕಳಿಗೆ ಮೇಲಿಂದ ಮೇಲೆ ಚಟುವಟಿಕೆ, ಪ್ರಾತ್ಯಕ್ಷಿಕೆ, ಚಲನಚಿತ್ರ, ಚರ್ಚೆ ಹಾಗೂ ಉಪನ್ಯಾಸಗಳ ಮೂಲಕ ತಿಳಿವಳಿಕೆ ನೀಡಬೇಕು.  ಮಕ್ಕಳು ಶಾಲೆಗೆ ಪ್ಲಾಸ್ಟಿಕ್ ಚೀಲ ಮುಂತಾದವನ್ನು ತರಬಾರದು; ಅನಿವಾರ್ಯವಾಗಿ ತಂದಿ­ದ್ದಾ­ದರೆ ಅದನ್ನು ತಾವೇ ವಾಪಸ್‌ ಒಯ್ಯಬೇಕು ಅಥವಾ ಇಂತಹ ಪ್ಲಾಸ್ಟಿಕ್ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಅದರ ಸೂಕ್ತ ವಿಲೇವಾರಿ ಮಾಡಬೇಕು. ಅತ್ಯಂತ ಮುಖ್ಯ ಸಂಗತಿಯೆಂದರೆ ಪ್ಲಾಸ್ಟಿಕ್ ಸುಡುವುದ­ರಿಂದ ಡಯಾಕ್ಸಿನ್ ಎಂಬ ಅತ್ಯಂತ ವಿಷಕಾರಿ ಕ್ಯಾನ್ಸರ್ ಜನಕ ಅನಿಲ ಉತ್ಪಾದನೆಯಾಗಿ ವಾಯುಗೋಳದಲ್ಲಿ ಸೇರಿಕೊಳ್ಳುತ್ತದೆ; ಆದ್ದ­ರಿಂದ ಯಾವ ಕಾರಣಕ್ಕೂ ಪ್ಲಾಸ್ಟಿಕ್‌ನ್ನು ಸುಡಬಾರದು ಎಂಬುದನ್ನು ಮನದಟ್ಟು ಮಾಡಿಕೊಡಬೇಕು.

ಎರೆಹುಳು ಗೊಬ್ಬರ ತಯಾರಿಕೆ : ಇದು ಮೇಲ್ನೋಟಕ್ಕೆ ಕಷ್ಟಕರ ಎನಿಸಿದರೂ ಬಲು ಸುಲಭ ಹಾಗೂ ಕೊಳೆಯುವ ಕಸದ ನಿರ್ವಹಣೆಯ ಸರಿಯಾದ ವಿಧಾನ. ಒಣಗಿದ ಎಲೆ, ಕಾಗದ, ಅಳಿದುಳಿದ ಆಹಾರ ಪದಾರ್ಥ ಎಲ್ಲವನ್ನೂ ಶಾಲಾ ಆವರಣದಲ್ಲೇ ಒಂದು ತೊಟ್ಟಿ ಮಾಡಿ ಎರೆಗೊಬ್ಬರವಾಗಿ ಪರಿವರ್ತಿಸುವ ಕ್ರಮವನ್ನು ಪಾಲಿಸಬೇಕು. ಇದು ಮಕ್ಕಳಿಗೆ ಒಂದು ದೊಡ್ಡ ಕಲಿಕೆಯೂ ಹೌದು. ಮೇಲಾಗಿ ಒಂದೆರಡು ವರ್ಷದಲ್ಲಿ ಅದೇ ಎರೆಗೊಬ್ಬರ ಬಳಸಿ ಹಸಿರು ಬೆಳೆಸಿ ಇಡೀ ಶಾಲಾ ಆವರಣವನ್ನು ವರಕವಿ ಬೇಂದ್ರೆ ಹೇಳಿರುವ ಹಾಗೆ ‘ನಂದನದ ಒಂದು ತುಣುಕಾಗಿ’ ರೂಪಾಂತರಿಸಬಹುದು.

ಕಾಗದದ ಮರುಬಳಕೆ: ಶಾಲೆ­ಯೆಂದ ಮೇಲೆ ಅಲ್ಲಿ ಕಾಗದದ ಬಳಕೆ ಸಹಜ. ಬಳಸಿ ಮುಗಿದ - ಉತ್ತರ ಪತ್ರಿಕೆಗಳು, ಚಿತ್ರ ಬರೆದ ಹಾಳೆಗಳು, ದಿನ­ಪತ್ರಿಕೆ, ಶಿಕ್ಷಣ ಇಲಾ­ಖೆಯ ಪತ್ರಗಳು- ಇವೆಲ್ಲ ಏನಾಗು­ತ್ತವೆ? ಸಾಮಾನ್ಯ­ವಾಗಿ ಈ  ಕಾಗದದ ಕಸ­ವನ್ನು ಸುಟ್ಟು­ಬಿಡು­ವುದು ರೂಢಿ. ಇದು ಬಹಳ ಸುಲಭ. ಆದರೆ ಬಹಳ ಅವೈಜ್ಞಾನಿಕ ಕೂಡ. ಬದಲಾಗಿ ಬುಟ್ಟಿ, ಚಾಪೆ, ಚೀಲ ಮುಂತಾ­ದ ನಿತ್ಯ­ೋಪಯೋಗಿ ಸಾಮಾನು­ಗಳನ್ನು ಅವು­ಗಳಿಂದ ತಯಾ­ರಿಸ­ಬಹುದು. ಒರಿಗಾಮಿ ಆಧಾರಿತ ಕಲಾಕೃತಿಗಳನ್ನು ಮಾಡು­ವುದು, ಶಾಲಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ತಯಾರಿಸು­ವುದು... ಹೀಗೆ ಹತ್ತು ಹಲವು ರೀತಿಯಲ್ಲಿ ಕಾಗದದ ಮರು ಬಳಕೆಯನ್ನು ಮಕ್ಕಳಿಗೆ ಕಲಿಸಿ, ಶಾಲೆ­ಯಲ್ಲಿ ಅದು ನಿರಂತರ ಚಟುವಟಿಕೆಯಾಗಿ ನಡೆಯುವಂತೆ ನೋಡಿ­ಕೊಳ್ಳಬೇಕು.

ಶೌಚಾಲಯದ ಸ್ವಚ್ಛತೆ: ಶಾಲಾ ಶೌಚಾಲಯದ ಸ್ವಚ್ಛತೆಯ ಮಹತ್ವವನ್ನು ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಾದರೆ, ಅದರಲ್ಲೂ ಶಿಕ್ಷಕರೇ ಮುಂದೆ ನಿಂತು ಈ ಕುರಿತು ಮಾರ್ಗದರ್ಶನ ಮಾಡಿದ್ದಾದರೆ ಪ್ರೌಢಶಾಲೆ ಮಕ್ಕಳು  ಸಂತೋಷದಿಂದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಶಾಲಾ ಶೌಚಾಲಯಗಳೆಂದರೆ ಮೂತ್ರದ ದುರ್ವಾಸನೆಯ ಕೂಪಗಳು. ಈ ದುರ್ವಾಸನೆ ಹೋಗಲಾಡಿಸಲು ಒಂದು ಸುಲಭ ಉಪಾಯ ಹೀಗಿದೆ: ಒಂದು ನೈಲಾನ್ ಜಾಳಿಗೆಯಲ್ಲಿ ಇದ್ದಿಲನ್ನು ಕಟ್ಟಿ ಅದನ್ನು ಮೂತ್ರ ಹೋಗುವಲ್ಲಿ ಇಡಬೇಕು. ಮೂತ್ರ ಇದ್ದಿಲಿನ ಮೂಲಕ ಹಾದು ಹೋದರೆ ಅದರೊಳಗಿನ ಅಮೋನಿಯಾವನ್ನು ಇದ್ದಿಲು ಹೀರಿಕೊಳ್ಳುತ್ತದೆ. ಆಗ ಮೂತ್ರದ ದುರ್ಗಂಧ ಇಲ್ಲವಾಗುತ್ತದೆ.

ಶಿಕ್ಷಕರೇ ಮಾದರಿ: ಶಾಲೆಯಲ್ಲಿನ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಕೆಲಸ, ಚಟುವಟಿಕೆಯನ್ನೂ ಶಿಕ್ಷಕರು ತಾವೇ ಮೊದಲು ಮಾಡಿ ಮಕ್ಕಳಿಗೆ ಮಾರ್ಗದರ್ಶಕ­ರಾಗಬೇಕು; ಮಾದರಿಯಾಗಬೇಕು. ಇದೆಲ್ಲಕ್ಕಿಂತಲೂ ಹೆಚ್ಚು ಮಹತ್ವದ ಮಾತೊಂದಿದೆ. ಅದೆಂದರೆ ಒಳಗಿನ ಅಂದರೆ ಮನಸ್ಸಿನ ಅಂಗಳದ ಸ್ವಚ್ಛತೆ. ಮೇಲುಕೀಳಿನ ಭಾವನೆಯಿಲ್ಲದ, ಶ್ರಮ ಗೌರವ, ವ್ಯಕ್ತಿ ಗೌರವ, ವಸ್ತು ಗೌರವ, ಜ್ಞಾನ ಗೌರವ ಮತ್ತು ಪ್ರಕೃತಿ ಗೌರವ ಎಂಬ  ಐದು ಗೌರವಗಳನ್ನು ಕಲಿಸುತ್ತ ‘ಮನಸ್ಸಿನ ಅಂಗಳದ ಸ್ವಚ್ಛತೆ’ ಪಾಠವನ್ನು ದಿನನಿತ್ಯ ಮಾಡುತ್ತಿರಬೇಕು. ಆದರೆ ಇದು ಸಾಧ್ಯವಾಗುವುದು ಯಾವಾಗ ಮತ್ತು ಹೇಗೆ?
(ಲೇಖಕರು ಧಾರವಾಡದ ಬಾಲಬಳಗ ಶಾಲೆಯ ಮುಖ್ಯ ಸಂಚಾಲಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT