ADVERTISEMENT

ನೇಗಿಲಯೋಗಿಗೆ ‘ಬರ’ ಸಿಡಿಲು

ವೈ.ಗ.ಜಗದೀಶ್‌
Published 23 ಜೂನ್ 2017, 19:30 IST
Last Updated 23 ಜೂನ್ 2017, 19:30 IST
ನೇಗಿಲಯೋಗಿಗೆ ‘ಬರ’ ಸಿಡಿಲು
ನೇಗಿಲಯೋಗಿಗೆ ‘ಬರ’ ಸಿಡಿಲು   

‘ಬೇಸಾಯ, ನೀ ಸಾಯ, ಮನೆ ಮಂದಿಯೆಲ್ಲ ಸಾಯ’ ಎಂಬುದು ಕನ್ನಡ ನಾಡಿನ ಮಣ್ಣಿನ ಮಕ್ಕಳ ಪಾಲಿನ ಬವಣೆಗೆ ಬರೆದ ಭಾಷ್ಯದಂತಿದೆ.

ಮುನಿಸಿಕೊಂಡ ವರುಣ, ನೀರು ಗೊಬ್ಬರವಿಟ್ಟರೂ ಚಿಗುರೊಡೆಯದ ಕಳಪೆ ಬಿತ್ತನೆ ಬೀಜ,  ಇಚ್ಛಾಶಕ್ತಿ ಮರೆತ ಆಳುವವರು, ದಲ್ಲಾಳಿಗಳ ಕೈಗೊಂಬೆಯಾಗಿರುವ ಮಾರುಕಟ್ಟೆ ಹೀಗೆ ನಾಲ್ಕೂ ದಿಕ್ಕಿನ ಹೊಡೆತಕ್ಕೆ ಸಿಕ್ಕಿ ರೈತ ಸಂಕುಲ ನಲುಗಿದೆ. ರೈತರ ಪಾಲಿಗೆ ವ್ಯವಸಾಯವೆಂಬುದು ಹೋಗುತ್ತಾ ಕೊಯ್ಯುವ, ಬರುತ್ತಾ ಕೊಯ್ಯುವ ಗರಗಸವಾಗಿದೆ. ಲಾಭದಾಯಕ ಹೋಗಲಿ, ಜೀವನೋಪಾಯ ಸಾಧನವಾಗಿಯೂ ಉಳಿಯದ ಕೃಷಿಯನ್ನು ನೆಚ್ಚಿಕೊಂಡಿದ್ದ ರೈತರು ನಗರದತ್ತ ಗುಳೆ ಹೊರಟಿದ್ದಾರೆ. ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗುತ್ತಲೇ ಇವೆ.

ಲೋಕಕೆ ಅನ್ನವ ನೀಡುವ ರೈತರ ಬಗ್ಗೆ ರಾಜಕಾರಣಿಗಳು ದೊಡ್ಡ ಗಂಟಲಿನಲ್ಲಿ ಭಾಷಣ ಮಾಡುತ್ತಾರೆ. ಹಸಿರು ಶಾಲು ಹೊದ್ದು ‘ನಾನೂ ರೈತನ ಮಗ’ ಎಂದು ಬಡಾಯಿಯನ್ನೂ ಕೊಚ್ಚುತ್ತಾರೆ. ರೈತರ ಸಂಕಷ್ಟಕ್ಕೆ ಬಾಯಾಗಿ, ಅದನ್ನು ಪರಿಹರಿಸುವ ಉದ್ಧಾರಕನಾಗುವ ಕಾಯಕವನ್ನು ಮಾತ್ರ ಯಾವ ರಾಜಕಾರಣಿಯೂ ಮಾಡುತ್ತಿಲ್ಲ.

ADVERTISEMENT

ಮಣ್ಣಿನಮಕ್ಕಳ ವೇದನೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ  ಅನುಷ್ಠಾನ ಯೋಗ್ಯ ಕೃಷಿ ನೀತಿ, ನಂಬಿಕೆ ಕಳೆದುಕೊಂಡ ರೈತರಲ್ಲಿ ವಿಶ್ವಾಸ ಮೂಡಿಸುವ ಕಾರ್ಯಕ್ರಮ, ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವತ್ತ ಈವರೆಗಿನ ರಾಜ್ಯ ಸರ್ಕಾರಗಳು  ನಿರೀಕ್ಷಿತ ಮಟ್ಟದಲ್ಲಿ ಕಾಳಜಿ ವಹಿಸಿಲ್ಲ.

1995ರಲ್ಲಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಅಂದು ಕೃಷಿ ಸಚಿವರಾಗಿದ್ದ ಬೈರೇಗೌಡರ ಕಾಲದಲ್ಲಿ ಕೃಷಿ ನೀತಿ ಜಾರಿಗೆ ತರಲಾಗಿತ್ತು. ಅದಾದ ಬಳಿಕ 2006ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪುರ ಅವಧಿಯಲ್ಲಿ ಕೃಷಿ ನೀತಿ ರೂಪಿಸಲಾಗಿತ್ತು. ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ 2011ರಲ್ಲಿ ಸಮಗ್ರ ಕೃಷಿ ವಾಣಿಜ್ಯ ನೀತಿ ರೂಪಿಸಲಾಗಿತ್ತು.

10 ವರ್ಷದ ಹಿಂದೆ ಜಾರಿಗೆ ತಂದಿದ್ದ ಕೃಷಿ ನೀತಿಯಲ್ಲಿ ಕರ್ನಾಟಕವನ್ನು ಹವಾಮಾನ ಆಧರಿಸಿ 10 ವಲಯಗಳಾಗಿ ವಿಂಗಡಣೆ ಮಾಡಲಾಗಿತ್ತು. ಸುರಿಯುವ ಮಳೆ, ಮಣ್ಣಿನ ಗುಣ, ಹವಾಮಾನದ ಲೆಕ್ಕಾಚಾರದ ಮೇಲೆ ಇಂತಹದೇ ಬೆಳೆ ಬೆಳೆಯಬೇಕು ಎಂದು ನಿಗದಿ ಮಾಡಲಾಗಿತ್ತು. ಬರ ನಿರ್ವಹಣೆ, ಜಲಾನಯನ ಅಭಿವೃದ್ಧಿ, ಸುಸ್ಥಿರ ಕೃಷಿಗೆ ಅಗತ್ಯವಾದ ಮಾರ್ಗೋಪಾಯಗಳನ್ನು ನೀತಿ ಸೂಚಿಸಿತ್ತು. ಆದರೆ, ಅಲ್ಪಕಾಲದಲ್ಲಿಯೇ ಸರ್ಕಾರ ಬಿದ್ದುಹೋಯಿತು. ಮುಂದೆ ಬಂದ ಸರ್ಕಾರಗಳು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಅದಾದ ನಂತರ ಕೃಷಿ ನೀತಿ ಬಂದಿಲ್ಲ. ಕಾಲದ ಅಗತ್ಯ ಆಧರಿಸಿ, ಸುತ್ತೋಲೆಗಳನ್ನು ಹೊರಡಿಸಿ ಕ್ರಮವಹಿಸಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮವಿಲ್ಲ: ರಾಜಸ್ತಾನ ಬಿಟ್ಟರೆ ಅತಿ ಹೆಚ್ಚು ಒಣಭೂಮಿಯನ್ನು ಒಳಗೊಂಡ ಕರ್ನಾಟಕದಲ್ಲಿ ಬರಗಾಲ ಅಥವಾ ನೆರೆಗಾಲವನ್ನು ಎದುರಿಸುವ ದೀರ್ಘಕಾಲೀನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಅಪರೂಪ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಅನುಸಾರ ಶೇ 80ರಷ್ಟು ಭೌಗೋಳಿಕ ಪ್ರದೇಶ ಬರಕ್ಕೆ ತುತ್ತಾಗುವ ಅಪಾಯವನ್ನು ತಲೆ ಮೇಲೆ ಹೊತ್ತುಕೊಂಡಿದೆ. ಶೇ 24 ರಷ್ಟು ಪ್ರದೇಶ ಚಂಡಮಾರುತ ಹಾಗೂ ಪ್ರವಾಹಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಶೇ 22ರಷ್ಟು ಪ್ರದೇಶ ಆಲಿಕಲ್ಲು ಮಳೆಯಿಂದ ಹಾನಿಯಾಗುವ ಅಪಾಯವನ್ನು ಎದುರಿಸುತ್ತದೆ.

ಚಂಡಮಾರುತ, ಆಲಿಕಲ್ಲು ಮಳೆಯಿಂದ ಹಾನಿಯಾಗುವುದನ್ನು ತಡೆಯುವುದು ಕಷ್ಟ. ಅಗತ್ಯ ಕ್ರಮಗಳನ್ನು ಕೈಗೊಂಡರೆ ಪ್ರವಾಹ ಮತ್ತು ಬರದಿಂದಾಗಿ ನಷ್ಟವನ್ನಂತೂ ಕಡಿಮೆ ಮಾಡಬಹುದು.

50 ಅಡಿ–70 ಅಡಿ ಆಳಕ್ಕೆ ಕೊರೆದರೆ ನೀರು ಸಿಗುತ್ತಿತ್ತು. ಅಂತರ್ಜಲದ ಅತಿ ಶೋಷಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ 1200 ಅಡಿ–1800 ಅಡಿ ಆಳಕ್ಕೆ ಕೊರೆಯುವುದು ಅನಿವಾರ್ಯವಾಗಿದೆ. ಮಲೆನಾಡಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಮೇಲ್ಪದರ ನೀರಿನ ಸಮರ್ಪಕ ಸಂಗ್ರಹ, ಬಳಕೆಗೆ ನಿರ್ದಿಷ್ಟ ಯೋಜನೆಗಳು ಜಾರಿಯಾಗಿಲ್ಲ. ಜಲಾನಯನ ಇಲಾಖೆ ಇತ್ತಾದರೂ ಅದು ರೈತರ ಉದ್ಧಾರಕ್ಕೆ ವೆಚ್ಚ ಮಾಡಿದ್ದಕ್ಕಿಂತ ಕೊಳ್ಳೆ ಹೊಡೆದಿದ್ದೇ ಹೆಚ್ಚು. ನೀರು ಇಂಗಿಸುವ ಯೋಜನೆ, ಮಳೆನೀರು ಸಂಗ್ರಹ, ಜಲಾಶಯ, ಕೆರೆ ಕಟ್ಟೆಗಳ ಹೂಳು ತೆಗೆದು ನೀರು ಸಂಗ್ರಹಿಸುವ ಕಾರ್ಯಕ್ರಮ, ಚೆಕ್‌ ಡ್ಯಾಂ, ಬಾಂದಾರಗಳ ನಿರ್ಮಾಣಕ್ಕೆ ಸರ್ಕಾರ ಲಕ್ಷ್ಯವನ್ನೇ ಕೊಡಲಿಲ್ಲ. ಒಂದು ಸಣ್ಣ ಉದಾಹರಣೆ ಎಂದರೆ ತುಂಗಭದ್ರಾ ಜಲಾಶಯದಲ್ಲಿ 36 ಟಿ.ಎಂ.ಸಿ. ಅಡಿ ಹೂಳು ತುಂಬಿದೆ. ಇದನ್ನು ತೆಗೆಯಬೇಕಾದರೆ ₹36ಸಾವಿರ ಕೋಟಿ ಬೇಕಾಗುತ್ತದೆ. ಕಾಲಕಾಲಕ್ಕೆ ಈ ಹೂಳು ತೆಗೆಯುತ್ತಾ ಬಂದಿದ್ದರೆ ಇಷ್ಟು ಬೃಹತ್ ಪ್ರಮಾಣದ ನೀರಿನ ಸಂಗ್ರಹ ಮಾಡಬಹುದಿತ್ತು. ಈ ನದಿಪಾತ್ರದ ಕೆರೆಕೊಳ್ಳಗಳನ್ನು ತುಂಬಿಸಬಹುದಿತ್ತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಂದ ಮೇಲೆ ಕೃಷಿ ಸಚಿವ ಕೃಷ್ಣ ಬೈರೇಗೌಡರ ಆಲೋಚನೆ ಮೇರೆಗೆ ಕೃಷಿಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಖುಷ್ಕಿ ಪ್ರದೇಶದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು 1.5 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೃಷಿಹೊಂಡ ಸೌಲಭ್ಯ ಪಡೆದ ರೈತರು ಶೇ 20ರಿಂದ ಶೇ 120ರಷ್ಟು ಹೆಚ್ಚುವರಿ ಇಳುವರಿ ಪಡೆದಿದ್ದಾರೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ರೈತರು ಇದನ್ನು ಸಮರ್ಥಿಸುತ್ತಿಲ್ಲ.

ಎಲ್ಲರಿಗೂ ಸಿಗದ ಬೆಳೆವಿಮೆ: ನೈಸರ್ಗಿಕ ವಿಕೋಪದಿಂದ ಬೆಳೆನಷ್ಟ ಅನುಭವಿಸುವ ರೈತರಿಗೆ ನೆರವು ನೀಡಲು ‘ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ’ ಜಾರಿಯಲ್ಲಿದೆ. 40 ಬೆಳೆಗಳಿಗೆ ಇದರ ಅಡಿ ಬೆಳೆ ವಿಮೆ ಸಿಗುತ್ತಿದೆ. ಬೆಳೆಸಾಲ ಪಡೆಯುವಾಗಲೇ ವಿಮಾ ಕಂತನ್ನು ಮುರಿದುಕೊಳ್ಳುವ ಪದ್ಧತಿ ಜಾರಿಗೆ ತರಲಾಗಿದೆ. 2016ರ ಮುಂಗಾರು ಹಂಗಾಮಿನಲ್ಲಿ 10.50 ಲಕ್ಷ ರೈತರು ₹193.95 ಕೋಟಿ ವಿಮಾ ಕಂತು ಪಾವತಿಸಿದ್ದರು. ಈ ಪೈಕಿ ಸುಮಾರು 7.15ಲಕ್ಷ  ರೈತರಿಗೆ ₹1,100 ಕೋಟಿಪರಿಹಾರ ಬಂದಿದೆ. ಹಿಂಗಾರಿನಲ್ಲಿ  11.76ಲಕ್ಷ  ರೈತರು ಬೆಳೆವಿಮೆ ಮಾಡಿಸಿದ್ದಾರೆ. ಬೆಳೆನಷ್ಟ ಅಂದಾಜಿಸುವ ಕೆಲಸ ನಡೆಯುತ್ತಿದೆ. ಹಿಂದಿನ ವರ್ಷಗಳಲ್ಲಿ ಇಡೀ ರಾಜ್ಯ ರೈತರಿಗೆ ಒಟ್ಟು ₹250 ಕೋಟಿಯಷ್ಟು ಮೊತ್ತ ಸಿಗುತ್ತಿತ್ತು.

ಬೆಳೆಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆಯ ಫಲ ಸಿಗುತ್ತಿಲ್ಲ. ರೈತರಲ್ಲಿ ಅರಿವು ಮೂಡಿಸಬೇಕಾದ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಈ ವಿಷಯದಲ್ಲಿ ಉದಾಸೀನ ವಹಿಸಿವೆ ಎಂದು ಜನಪ್ರತಿನಿಧಿಗಳು ದೂರುತ್ತಾರೆ.

ಆದರೆ, ಬೆಳೆವಿಮೆ ಸಾಲ ಮಂಜೂರು ಮಾಡುವಾಗ ವಿಮೆ ಕಂತು ಮುರಿದುಕೊಳ್ಳಲು ಸಹಕಾರಿ ಬ್ಯಾಂಕ್‌ಗಳು, ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾದರೆ, ಸರ್ಕಾರ ಏನು ಮಾಡಲು ಸಾಧ್ಯ ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ.  ರೈತರಲ್ಲಿ ಈ ಬಗ್ಗೆ ಅರಿವು ಮೂಡಿದರೆ ಬೆಳೆವಿಮೆಯಿಂದ ದೊಡ್ಡ ಮೊತ್ತದ ಫಲ ರೈತರಿಗೆ ಸಿಗಲಿದೆ ಎನ್ನುವುದನ್ನು ಅಂಕಿ ಅಂಶ ಹೇಳುತ್ತದೆ.

**

‌ಬರ ನಿರೋಧಕ ತಳಿ ...

ಬಿತ್ತಿದ ಬೀಜ, ಕೈಗೆಟುಕಬೇಕಿದ್ದ ಬೆಳೆ ಬರದ ಬೇಗೆಯಿಂದ ಸುಟ್ಟುಹೋಗಿ ರೈತರು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸಲು  ಕರ್ನಾಟಕ ಸರ್ಕಾರ ಬರ ಮತ್ತು ರೋಗ ನಿರೋಧಕ ತಳಿ ಸಂಶೋಧನೆಗೆ ಆದ್ಯತೆ ನೀಡಿದೆ.

ಒಣಭೂಮಿ ಪ್ರದೇಶದ ರೈತರು ಹೆಚ್ಚಾಗಿ ಬೆಳೆಯುವ ರಾಗಿ, ಸಜ್ಜೆ, ಬಿಳಿಜೋಳ, ತೊಗರಿ, ಶೇಂಗಾ ಹೀಗೆ ಐದು ತಳಿಗಳ ಸಂಶೋಧನೆ ನಡೆಯುತ್ತಿದೆ. ಈ ವರ್ಷ ಧಾರವಾಡ ಮತ್ತು ಬೆಂಗಳೂರು ಕೃಷಿ ವಿ.ವಿ. ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರಯೋಗ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.