ADVERTISEMENT

ಮಗಳಾದರೂ ಅಧಿಕಾರವಿಲ್ಲ...

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಅಮೃತಾ ನನ್ನ ಮುದ್ದಿನ ಮಗಳು. ಅವಳನ್ನು ಬಿಟ್ಟರೆ ನಮಗೆ ಬೇರೆ ಸಂತಾನ­ವಿಲ್ಲ. ಬೇರೆ ತಂದೆ- ತಾಯಂದಿರ ಹಾಗೆ ನಮ್ಮ ಮಗಳ ಬಗ್ಗೆ ನಾವೂ ಕನಸು ಕಂಡವರೇ. ಆದರೆ ಅಮೃತಾ, ಅವಳ ಜೀವನದ ಹಾದಿಯನ್ನು ಅವಳೇ ಕಂಡುಕೊಂಡಿದ್ದಾಳೆ. ಅದನ್ನು ನಾವೂ ಸ್ವೀಕರಿಸಿದ್ದೇವೆ.

ನಾವು ಮೂಲತಃ ಪಶ್ಚಿಮ ಬಂಗಾಳದವರು. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದೇವೆ. ಅದು 2002ರ ಸಮಯ. ಅಮೃತಾ ಅಮೆರಿಕದಲ್ಲಿ ಸ್ನಾತ­ಕೋತ್ತರ ಪದವಿಯಲ್ಲಿ ಓದುತ್ತಿದ್ದಳು. ಇಂಟರ್‌­ನೆಟ್‌ ಮೂಲಕ ಆಕೆ ನಮ್ಮ ಜೊತೆ ‘ಚಾಟ್‌’ ಮಾಡುತ್ತಿ­ದ್ದಳು. ಹೀಗೆ ಚಾಟ್‌ ಮಾಡುತ್ತ ಒಮ್ಮೆ ಅವಳು ‘ನನಗೆ ಹೆಣ್ಣು­ಮಕ್ಕಳನ್ನು ಕಂಡರಷ್ಟೇ ಆಕರ್ಷಣೆ­ಯಾಗುತ್ತಿದೆ. ನಾನು ಸಲಿಂಗಕಾಮಿ ಎನ್ನುವುದು ತಿಳಿದಿದೆ’ ಎಂದಳು.

ಅವಳು ಮೊದಲಿನಿಂದಲೂ ಹಾಸ್ಯ ಸ್ವಭಾವದವಳು. ತುಂಬಾ ತಮಾಷೆ ಮಾಡು­ತ್ತಿದ್ದವಳು. ಇದನ್ನು ಕೂಡ ತಮಾಷೆ ಎಂದುಕೊಂಡೆವು. ಅವಳ ಮಾತನ್ನು ನಾವು ನಂಬಲೇ ಇಲ್ಲ. ಕೆಲ ದಿನಗಳವರೆಗೆ ಅವಳು ತನ್ನ ಹೇಳಿಕೆ ಬಗ್ಗೆ ಸಮರ್ಥನೆ ಕೊಡುತ್ತಳೇ ಬಂದಳು. ಪ್ರೌಢ ಶಾಲೆಯಲ್ಲಿ ಇರುವಾಗಲೇ ಆಕೆಗೆ ಇದು ಅರಿವಿಗೆ ಬಂದಿತ್ತಾದರೂ ಅದರ ಬಗ್ಗೆ ಆಕೆ ತಲೆ ಕೆಡಿಸಿ­ಕೊಂಡಿರಲಿಲ್ಲ. ಕಾಲೇಜು ಮೆಟ್ಟಿಲೇರಿದಾಗ ಬೇರೆ ಹೆಣ್ಣು­ಮಕ್ಕಳಂತೆ ತಾನಲ್ಲ, ಗಂಡು ಮಕ್ಕಳನ್ನು ಕಂಡರೆ, ತನಗೆ ಯಾವುದೇ ಮೋಹ ಉಂಟಾಗುತ್ತಿಲ್ಲ ಎಂದು ಅರಿತಿದ್ದಳಾಕೆ. ಆದರೂ ಅದನ್ನು ಒಪ್ಪಿ­ಕೊಂಡದ್ದು ಅವಳು ಅಮೆರಿಕಕ್ಕೆ ಹೋದಾಗ. ತಾನು ಸಲಿಂಗಕಾಮಿ ಎಂಬುದು ಸಂಪೂರ್ಣ­ವಾಗಿ ಒಪ್ಪಿಕೊಂಡ ನಂತರವಷ್ಟೇ ಈ ಬಗ್ಗೆ ಅವಳು ನಮಗೆ ತಿಳಿಸಿದಳು. ಮೊದಲು ಇದನ್ನು ಒಪ್ಪಿಕೊಳ್ಳಲು ಕಷ್ಟವಾದರೂ ನಂತರ ನಾವಿಬ್ಬರೂ ಒಪ್ಪಿಕೊಂಡೆವು. ನಮ್ಮ ಮಗಳು ಎಂಬ ಕಾರಣಕ್ಕೆ ಅವಳ ಜೀವನದ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ನಮಗೆ ಇಲ್ಲ. ಅದು ಅವಳ ಜೀವನ. ಗಂಡಸಿನ ಮೇಲೆ ಆಕೆಗೆ ಆಸೆಯೇ ಹುಟ್ಟದಿದ್ದರೆ ಅವನನ್ನೇ ಮದುವೆ­ಯಾಗು ಎಂದು ನಾವು ಒತ್ತಾಯ ಮಾಡಲು ಆದೀತೇ?
ಕೋಲ್ಕತ್ತದಲ್ಲಿ ಇದ್ದಾಗ ಅನೇಕ ಸಲಿಂಗಕಾಮಿ­ಗಳನ್ನು ನಾವು ನೋಡಿದ್ದೇವೆ. ಅವರೆಲ್ಲ ಅಲ್ಲಿ ಯಾವುದೇ ತೊಂದರೆ ಇಲ್ಲದೇ, ಯಾವುದೇ ರೀತಿಯ ಸಮಸ್ಯೆಗಳಿಗೆ ಒಳಗಾಗದೇ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಹಾಗೆಯೇ ನನ್ನ ಮಗಳು ಕೂಡ.

ಹೆತ್ತ ಅಪ್ಪ- ಅಮ್ಮಂದಿರಾಗಿ ಮಕ್ಕಳ ವಿರುದ್ಧ ಹೋಗುವ ಅಧಿಕಾರ ನಮಗೇ ಇಲ್ಲದಾಗ ನ್ಯಾಯಾಲ­ಯಕ್ಕೆ ಅದನ್ನು ಕೊಟ್ಟವರಾರು? ಒಂದೇ ಲಿಂಗದವರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಪರಾಧ ಎಂದು ಕೋರ್ಟ್ ಹೇಳಿದ್ದು ಸರಿಯಲ್ಲ ಸುಪ್ರೀಂ ಕೋರ್ಟ್ ತೀರ್ಪು ಮೂರ್ಖತನದ ಪರಮಾವಧಿ. ನಿರ್ದಯಿ ತಂದೆಯೊಬ್ಬ ಹೆಣ್ಣುಮಕ್ಕಳ ವಿರುದ್ಧ ನಡೆದು­ಕೊಳ್ಳುವಂತೆ ನ್ಯಾಯಮೂರ್ತಿಗಳು ಇಲ್ಲಿ ವರ್ತಿಸಿದ್ದಾರೆ.

ಆಕೆಗೀಗ 39 ವರ್ಷ. ಇಷ್ಟು ವರ್ಷಗಳವರೆಗೆ ಅವಳು ತನ್ನ ಹಕ್ಕನ್ನು ಚಲಾಯಿಸಿ­ದ್ದಾಳೆ. ಅವಳಿಗೆ ಕಾನೂನು ನೀಡಿರುವ ಸ್ವಾತಂತ್ರ್ಯವನ್ನು ಅವಳು ಬಳಕೆ ಮಾಡಿ­ಕೊಂಡಿ­­ದ್ದಾಳೆ. ಅವಳ ಜೀವಿಸುವ ಹಕ್ಕನ್ನೂ ಅಪ್ಪ- ಅಮ್ಮಂದಿರಾದ ನಾವು ಕಸಿದುಕೊಂಡಿಲ್ಲ. ಅದನ್ನು ಕಸಿದುಕೊಳ್ಳುವ ಅಧಿಕಾರ ಕೋರ್ಟ್‌ಗಷ್ಟೇ ಅಲ್ಲ ಯಾರಿಗೂ ಇಲ್ಲ. ತೀರ್ಪಿನ ವಿರುದ್ಧ ಗಂಭೀರ ರೂಪದ ಪ್ರತಿಭಟನೆ ಆಗಬೇಕು.
(ಲೇಖಕರು: ಅಮೃತಾ ಅವರ ಪೋಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT