ADVERTISEMENT

ವಿವಾದದ ಚೆಂಡು ಸುಪ್ರೀಂ ಕೋರ್ಟ್ ಅಂಗಳದಲ್ಲಿ...

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST

  ಸಂವಿಧಾನದ ನಿರ್ದೇಶನ ಮತ್ತು ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವಿರಬೇಕೆಂಬ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 22.06.1989 ರಂದು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು ಎಂದು ಆದೇಶ ಹೊರಡಿಸಿತು.ಇದನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿಯಿತು.

ನಂತರ ಕರ್ನಾಟಕ ಸರ್ಕಾರ ದಿನಾಂಕ 8.12.1993 ರ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1994-95ನೇ ಶೈಕ್ಷಣಿಕ ವರ್ಷದಿಂದ ಅನುಸರಿಸಬೇಕಾದ ಭಾಷಾ ನೀತಿಯನ್ನು ಘೋಷಿಸಿತು.

ಅದರಲ್ಲಿ ಪ್ರಮುಖವಾಗಿ 1 ರಿಂದ 4ನೇ ತರಗತಿಯವರೆಗೆ ಅನುಬಂಧದಲ್ಲಿರುವ (ಇದರಲ್ಲಿ ತಮಿಳು, ಮಲೆಯಾಳಿ, ತೆಲುಗು ಸೇರಿದಂತೆ ಹತ್ತು ಭಾಷೆಗಳಿವೆ) ಒಂದು ಮಾತೃಭಾಷೆ ಆಥವಾ ಕನ್ನಡದಲ್ಲಿ ಬೋಧಿಸುವುದು  ಕಡ್ಡಾಯ ಎಂದು ಸರ್ಕಾರ ಸ್ಪಷ್ಟಪಡಿಸಿತು.

ಸರ್ಕಾರದ ಈ ಆದೇಶವನ್ನು ಹಲವು ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾಲೀಕರು ಮತ್ತು ಪಾಲಕರು ಹೈಕೋರ್ಟ್‌ನಲ್ಲಿ  ಪ್ರಶ್ನಿಸಿದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರದ ಆದೇಶದಲ್ಲಿ ಹೇಳಲಾಗಿದ್ದ ಭಾಷಾ ನೀತಿಯ ಬಹುತೇಕ ಭಾಗಗಳನ್ನು ರದ್ದುಗೊಳಿಸಿತು.
 
ಕರ್ನಾಟಕ ಸರ್ಕಾರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಿಶೇಷ ಅನುಮತಿ ಅರ್ಜಿಯನ್ನು  (ಎಸ್. ಎಲ್.ಪಿ) ಸುಪ್ರೀಂ ಕೋರ್ಟ್ ಮುಂದೆ ದಾಖಲಿಸಿದೆ. ಪ್ರಶ್ನಿತ ತೀರ್ಪಿನ ಪ್ರಕರಣದಲ್ಲಿ ಗೋ.ರು.ಚ, ಜಿ.ಎಸ್. ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಡಾ. ಚಿದಾನಂದ ಮೂರ್ತಿ, ಎಚ್. ಎಸ್. ದೊರೆಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ಸಾಹಿತಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿವಾದಿಗಳಾಗಿದ್ದಾರೆ. ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಕೂಡಾ ಎಸ್. ಎಲ್. ಪಿ. ಹಂತದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಅವರನ್ನು ಸೇರಲಿದ್ದಾರೆ.

ಮುಂದಿನ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ಪ್ರಾರಂಭಿಸಲಿದ್ದು, ಪ್ರಮುಖವಾಗಿ ಸಂವಿಧಾನದ ಪರಿಚ್ಛೇದಗಳಾದ 14, 19(1)(ಎ), 19(1)(ಜಿ), 21(ಎ), 29, 30 ಮತ್ತು 350 (ಅ) ಇವುಗಳು ಹೇಗೆ ಅನ್ವಯಿಸುತ್ತದೆ ಎಂಬ ವಿಷಯವೂ ಸೇರಿದಂತೆ ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃ ಭಾಷಾ ಮಾಧ್ಯಮ ನಿಗದಿ ಪಡಿಸುವ ಕುರಿತು ಸರ್ಕಾರದ ಪಾತ್ರ ಏನೆಂಬುದು ನಿರ್ಧಾರವಾಗಲಿದೆ.

ಭಾಷೆಯ ಉಳಿವಿಗೆ ದೂರಗಾಮಿ ಪರಿಣಾಮ ಬೀರಬಲ್ಲ ಈ ಮಹತ್ವದ ವಿಚಾರಣೆಯಲ್ಲಿ ಕನ್ನಡದ ಕಾಳಜಿಯುಳ್ಳ ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ನಲ್ಲಿ ಮಾತೃಭಾಷೆಯ ನಿಲುವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ ಕನ್ನಡ ಉಳಿದೀತು. ಇಲ್ಲವಾದರೆ ಕನ್ನಡಿಗನೂ ಉಳಿಯಲಾರ, ಕರ್ನಾಟಕವೂ ಉಳಿಯದು.

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಯಲ್ಲಿ ಅಡಕವಾಗಿರುವ  ಮುಖ್ಯ ಕಾನೂನು ಪ್ರಶ್ನೆಗಳು ಇಂತಿವೆ :
-ಪ್ರಾಥಮಿಕ ಶಿಕ್ಷಣದ ಮಾಧ್ಯಮ ಮಾತೃಭಾಷೆಯಲ್ಲಿರತಕ್ಕದ್ದು ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿ-ಪಾಲಕರ ಸಂಘದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸರ್ಕಾರದ ಮಾತೃಭಾಷಾ ನೀತಿಯನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ವಿದ್ಯಾರ್ಥಿ/ಪಾಲಕರ ಶಿಕ್ಷಣ ಮಾಧ್ಯಮದ ಆಯ್ಕೆಯ ಹಕ್ಕಿನ ವಿಷಯವನ್ನು ಪರಿಗಣಿಸಲಾಗಿಲ್ಲ ಎನ್ನುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಒಪ್ಪಲಾಗದು. 

ಕಾರಣವೇನೆಂದರೆ ಸುಪ್ರೀಂ ಕೋರ್ಟ್ ಮುಂದೆ ಉಲ್ಲೇಖಿತ ಪ್ರಕರಣದ ಅರ್ಜಿದಾರರು ಮಾಧ್ಯಮ ಆಯ್ಕೆಯ ಹಕ್ಕನ್ನೇ ಪ್ರಮುಖವಾಗಿ ಪ್ರತಿಪಾದಿಸಿದ್ದರು ಮತ್ತು ಸುಪ್ರೀಂ ಕೋರ್ಟ್ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ವಾಸ್ತವ ಹೀಗಿರುವಾಗ ಹೈಕೋರ್ಟ್ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ಉಲ್ಲೆೀಖಿತ ಆದೇಶವನ್ನು ಪಾಲಿಸದೇ ಸಾರಾಸಗಟಾಗಿ ಪ್ರಮಾದವೆಸಗಿದೆಯೆ?

- ರಾಜ್ಯವು ತನ್ನ ಶಿಕ್ಷಣ ನೀತಿಯ ಅಂಗವಾಗಿ ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಮಗುವಿನ ಮಾತೃಭಾಷೆಯಲ್ಲಿರಬೇಕೆಂದು ನಿರ್ಧರಿಸುವ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ ಘೋಷಿಸದೇ ತಪ್ಪೆಸಗಿದೆಯೆ?
-ಮಕ್ಕಳ ಸಮಗ್ರ ರಾಷ್ಟ್ರೀಯ ಮತ್ತು ಶೈಕ್ಷಣಿಕ ಹಿತಾಸಕ್ತಿಯಡಿ ತೆಗೆದುಕೊಂಡ ಪ್ರಾಥಮಿಕ ಹಂತದ ಶಿಕ್ಷಣ ಮಾಧ್ಯಮದ ನಿರ್ಧಾರದ ವಿರುದ್ದ ಮಗು ಮತ್ತು ಪಾಲಕರು ತಮ್ಮ ಇಚ್ಛೆಯ ಮಾಧ್ಯಮ ಆಯ್ಕೆಯ ಮೂಲಭೂತ ಹಕ್ಕು ಹೊಂದಿದ್ದಾರೆ ಎಂಬ ಹೈಕೋರ್ಟ್ ನಿಲುವು ದೋಷಪೂರಿತವೆ?

-ಸಂವಿಧಾನದ ಪರಿಚ್ಛೇದ 350 (ಅ) ಪ್ರಕಾರ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಶ್ರಮಿಸತಕ್ಕದ್ದೆಂಬ ನಿರ್ದೇಶನವು, ಅವಶ್ಯಕವಾಗಿ ರಾಜ್ಯಕ್ಕೆ ತನ್ನ ಶಿಕ್ಷಣ ನೀತಿಯಡಿ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿರಬೇಕೆಂದು ನಿರ್ಧರಿಸುವ ಅಧಿಕಾರ ಕೊಟ್ಟಿದೆ ಎಂದು ತೀರ್ಮಾನಿಸದೇ ಹೈಕೋರ್ಟ್ ಎಡವಿದೆಯೆ?

-ಸಂವಿಧಾನದ ಪರಿಚ್ಛೇದ 350 (ಅ) ಕೇವಲ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವುದಕ್ಕಾಗಿದೆ ಮತ್ತು ಅದು ರಾಜ್ಯಕ್ಕೆ ಪ್ರಾಥಮಿಕ ಶಿಕ್ಷಣದ ಮಾಧ್ಯಮ ಕುರಿತಾಗಿ ಭಾಷಾ ನೀತಿ ರೂಪಿಸಲು ಸ್ವಾತಂತ್ರ್ಯ ಅಥವಾ ಹಕ್ಕು ನೀಡಿಲ್ಲ ಎಂಬ ಹೈಕೋರ್ಟ್ ತೀರ್ಪು ಸರಿಯೆ?

-ಪ್ರಶ್ನಿತ ತೀರ್ಪಿನಲ್ಲಿ ಇಂಗ್ಲಿಷ್ ಮಾತ್ರ ಆಧುನಿಕ ಜ್ಞಾನದ ನಿಧಿ ಎಂಬ ಹೈಕೋರ್ಟ್‌ನ ಹೇಳಿಕೆ ಸುಪ್ರೀಂ ಕೊರ್ಟ್ (1994(1) ಎಸ್.ಸಿ.ಸಿ 550ರಲ್ಲಿ) ರೂಪಿಸಿದ ಕಾಯ್ದೆಗೆ ವಿರುದ್ಧವಾಗಿದೆಯೇ?

-ಮೂಲಭೂತ ಹಕ್ಕು ಆಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರತಿಯೋರ್ವನು ಪ್ರಾಥಮಿಕ ಶಿಕ್ಷಣವನ್ನು ತನ್ನ ಇಚ್ಛೆಯ ಭಾಷೆಯಲ್ಲಿ ಕಲಿಯುವುದನ್ನು ಖಾತ್ರಿಪಡಿಸುತ್ತದೆಂಬ ಹೈಕೋರ್ಟ್ ನಿಲುವು ರಾಷ್ಟ್ರದ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳುಮಾಡಿ, ಶಿಕ್ಷಣದಲ್ಲಿ ಅರಾಜಕತೆಯನ್ನುಂಟು ಮಾಡುವುದಿಲ್ಲವೆ?

-ಸಂವಿಧಾನ ನೀಡಿರುವ ವೃತ್ತಿ, ಉದ್ಯೋಗ, ವ್ಯಾಪಾರ ಮಾಡುವ ಸ್ವಾತಂತ್ರ್ಯದಡಿಯಲಿ; ಭಾಷೆ, ಸಂಸ್ಕೃತಿಯನ್ನು ಕಾಪಾಡುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಪ್ರತಿಯಾಗಿ ತನ್ನ ಇಚ್ಛೆಯ ಮಾಧ್ಯಮ ಆಯ್ಕೆಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಹಕ್ಕು ಪ್ರಜೆಗಳಿಗಿದೆ ಎನ್ನುವ  ಹೈಕೋರ್ಟ್ ತೀರ್ಮಾನ ದೋಷಪೂರ್ಣವಲ್ಲವೆ?

-ಮಾನ್ಯತೆ ಪಡೆದ ಶಾಲೆಗಳಷ್ಟೇ ಶಿಕ್ಷಣ ನೀಡಬಹುದೆಂಬ ನಿಯಮವಿದ್ದರೂ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರತಕ್ಕದೆಂಬ ಆದೇಶ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆಂಬ ಹೈಕೋರ್ಟ್ ನಿರ್ಧಾರ ದೋಷಯುಕ್ತಲ್ಲವೆ?

-ಪ್ರಾಥಮಿಕ ಶಿಕ್ಷಣಕ್ಕೆ ಅನ್ವಯವಾಗುವ ಸರ್ಕಾರದ ಏಕರೂಪದ ಶಿಕ್ಷಣ ನೀತಿ ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಮತ್ತು ಅದು ಅನುದಾನರಹಿತ ಶಾಲೆಗಳಿಗೆ ಅನ್ವಯವಾಗುವುದಿಲ್ಲವೆಂಬ ಮಾನ್ಯ ಹೈಕೋರ್ಟ್ ನಿಲುವು, ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿಕೊಂಡಿರುವ ಏಕರೂಪದ ಶಿಕ್ಷಣ ನೀತಿಗೆ ವಿರುದ್ಧವಲ್ಲವೇ?

(ಲೇಖಕರು: ಧಾರವಾಡದಲ್ಲಿ ವಕೀಲರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.