ADVERTISEMENT

ಹಳಿ ತಪ್ಪಿರುವ ರೈಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ರೈಲು ಸಂಪರ್ಕ ಬಹುಮುಖ್ಯ. ರೈಲು ಮಾನವ ಸಂಚಾರ ಜೊತೆಗೆ ಸರಕು ಸಾಗಾಣಿಕೆಗೆ ಬಹುಮುಖ್ಯ ಸಾಧನ.  ರಾಜ್ಯದಲ್ಲಿನ ರೈಲು ಸಂಪರ್ಕವನ್ನು ರಾಷ್ಟ್ರೀಯ ಪ್ರಮಾಣಕ್ಕೆ ಹೋಲಿಸಿದ್ದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆಯೆಂಬ ಕೂಗು ಬಹಳ ಕಾಲದಿಂದಲೂ ಇದೆ.

ಇದು ಸತ್ಯವೂ ಹೌದು. ಕೆಲವು ರಾಜ್ಯಗಳಲ್ಲಿನ ರೈಲು ಸಂಪರ್ಕ ರಾಷ್ಟ್ರೀಯ ಪ್ರಮಾಣಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಒದಗಿಸಿದ್ದು ನಮ್ಮ ರಾಜ್ಯಕ್ಕೆ ಒದಗಿಸಿರುವ ಪ್ರಮಾಣ ಕಡಿಮೆ. ರಾಷ್ಟ್ರದಲ್ಲಿ ಪ್ರತಿ 1000 ಚ.ಕಿ.ಮೀ. ವ್ಯಾಪ್ತಿಗೆ 32 ಕಿ.ಮೀ. ರೈಲ್ವೆ ಮಾರ್ಗವಿದ್ದು ಕರ್ನಾಟಕ ರಾಜ್ಯದಲ್ಲಿ ಪ್ರತಿ 1000 ಚ.ಕಿ.ಮೀ. ವ್ಯಾಪ್ತಿಗೆ 17 ಕಿ.ಮೀ. ರೈಲು ಮಾರ್ಗವಿರುತ್ತದೆ. ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ರೈಲು ಮಾರ್ಗವು ರಾಷ್ಟ್ರೀಯ ಪ್ರಮಾಣಕ್ಕಿಂತ ಹೆಚ್ಚಾಗಿದೆ.

ಈ ಅಂಕಿ ಅಂಶಗಳು ನಮ್ಮ ಜನತೆಯ ಅಸಮಾಧಾನಕ್ಕೆ ಸಮರ್ಥನೆಯಂತಿದೆ. ಇದಕ್ಕೆ ಕಾರಣವೇನೆಂದರೆ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಕನ್ನಡಿಗರು ಹೆಚ್ಚು ಪ್ರಭಾವಶಾಲಿಗಳಾಗದೆ ಇರುವುದು. ಸಂಸದರು ಹಾಗೂ ರಾಜ್ಯದವರೇ ಆದ ಕೇಂದ್ರ ಮಂತ್ರಿಗಳು ಹೆಚ್ಚು ಕ್ರಿಯಾಶೀಲರಾಗಿ, ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದರೆ ಅಥವಾ ಹೆಚ್ಚಿನ ಆಸಕ್ತಿ ವಹಿಸಿದ್ದರೆ ಇಂದು ಕರ್ನಾಟಕ ರಾಜ್ಯವು ರಾಷ್ಟ್ರೀಯ ಮಟ್ಟದಲ್ಲಿ ಸುವ್ಯವಸ್ಥಿತ ಹಾಗೂ ಹೆಚ್ಚಿನ ರೈಲ್ವೆ ಸಂಪರ್ಕವನ್ನು ಹೊಂದಿದ ರಾಜ್ಯವಾಗುತ್ತಿತ್ತು.

ವಿಪರ್ಯಾಸವೆಂದರೆ ಭಾರತ ರೈಲ್ವೆ ಮಂತ್ರಾಲಯಕ್ಕೆ ರಾಜ್ಯದಿಂದ ಹೆಚ್ಚು ರೈಲ್ವೆ ಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಕರ್ನಾಟಕದ್ದು. ಆದರೂ ನಿರೀಕ್ಷಿತ ಮಟ್ಟದಲ್ಲಿ ರೈಲು ಸಂಪರ್ಕವನ್ನು ಹೊಂದಲಾಗಿಲ್ಲ. 

ನೈಋತ್ಯ ರೈಲ್ವೆ ವಲಯವನ್ನು 1997-98ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಯಿತು. ಎನ್‌ಡಿಎ ನೇತೃತ್ವದ ಸರ್ಕಾರವು ಹುಬ್ಬಳ್ಳಿಯಲ್ಲಿ ಇದನ್ನು ಸ್ಥಾಪಿಸಿತು.  ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಈ ಕೆಳಕಂಡ ರೈಲು ಮಾರ್ಗಗಳಿಗೆ ಮಂಜೂರಾತಿ ನೀಡಿದ್ದರೂ ಎಲ್ಲಿಯೂ ಕೆಲಸ ಪ್ರಾರಂಭವಾಗಿಲ್ಲ.

 1. ಬಾಗಲಕೋಟೆ-ಕುಡಚಿ-ಮೀರಜ್ 142 ಕಿ.ಮೀ. ಅಂದಾಜು ವೆಚ್ಚ ರೂ. 900 ಕೋಟಿ  (2010-11). ಇನ್ನೂ ಕೆಲಸ ಪ್ರಾರಂಭಿಸಿಲ್ಲ.

 2. ಬೆಂಗಳೂರು-ಕೋಲಾರ-ಕಡಪಾ 256 ಕಿ.ಮೀ. ಅಂದಾಜು ವೆಚ್ಚ ರೂ. 1200 ಕೋಟಿ, ಆಂಧ್ರ ಪ್ರದೇಶದಲ್ಲಿ ಕೆಲಸ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಕೆಲಸ ಪ್ರಾರಂಭಿಸಿಲ್ಲ.

 3. ದಾವಣಗೆರೆ-ಚಿತ್ರದುರ್ಗ-ತುಮಕೂರು 140 ಕಿ.ಮೀ. ಅಂದಾಜು ವೆಚ್ಚ ರೂ. 800 ಕೋಟಿ. (2011-12) ಕೆಲಸ ಪ್ರಾರಂಭಿಸಿಲ್ಲ.

 4. ತುಮಕೂರು-ಪಾವಗಡ-ರಾಯದುರ್ಗ (ಬಳ್ಳಾರಿ) 213 ಕಿ.ಮೀ. ಅಂದಾಜು ವೆಚ್ಚ ರೂ. 1200 ಕೋಟಿ. ಆಂಧ್ರಪ್ರದೇಶದಲ್ಲಿ ಕೆಲಸ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಕೆಲಸ ಪ್ರಾರಂಭವಾಗಿಲ್ಲ.

5. ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು-ಮೈಸೂರು ಜೋಡಿ ಮಾರ್ಗದ ಕಾಮಗಾರಿಯು ನಿಧಾನಗತಿಯಲ್ಲಿದೆ.

ರೈಲ್ವೆ ಯೋಜನೆಗಳ ವಿಳಂಬಕ್ಕೆ ಮುಖ್ಯ ಕಾರಣ ಭೂಸ್ವಾಧೀನ ಪ್ರಕ್ರಿಯೆಯನ್ನು ಆಸಕ್ತಿ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸದೆ ಇರುವುದು. ಭೂಸ್ವಾಧೀನ ಪ್ರಕ್ರಿಯೆಗೆ ಸರ್ವೆಯರ್ಸ್‌ಗಳು ಲಭ್ಯವಿಲ್ಲದೆ ಇರುವುದು, ಅವರ ನೇಮಕಾತಿ ನಡೆಸಲು ಮತ್ತು ಅವರ ಸೇವೆಯನ್ನು ಪರಿಪೂರ್ಣವಾಗಿ ಪಡೆಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. 

ಜಮೀನು ಕಳೆದುಕೊಂಡ ರೈತರಿಗೆ ಮಾರುಕಟ್ಟೆಯ ದರದಲ್ಲಿ ಪರಿಹಾರವನ್ನು ಒದಗಿಸದೆ ಇರುವುದು ಮತ್ತು ಅವಲಂಬಿತ  ಕುಟುಂಬದ ವ್ಯಕ್ತಿಗೆ ರಾಜ್ಯ ಸರ್ಕಾರದಲ್ಲಾಗಲಿ ಅಥವಾ ರೈಲ್ವೆ ಇಲಾಖೆಯಲ್ಲಾಗಲಿ ನೌಕರಿಯನ್ನು ನೀಡುವ ಭರವಸೆಯನ್ನು ನೀಡದೆ ಇರುವುದು ಕೂಡಾ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬಕ್ಕೆ ಕಾರಣ.

ರಾಜ್ಯದ ಸಂಸತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ರಾಜ್ಯ ಸರ್ಕಾರ ಈ ವಿಳಂಬ ನೀತಿಗೆ ಕಾರಣರಾಗಿರುತ್ತಾರೆ. ನಮ್ಮ ರಾಜ್ಯದಲ್ಲಿನ ರೈಲು ಮಾರ್ಗದ ಪ್ರಗತಿಗೂ ಹೊರರಾಜ್ಯದ ರೈಲು ಮಾರ್ಗದ ಪ್ರಗತಿಗೆ ಒಂದು ತಾಜಾ ಉದಾಹರಣೆ: 1997-98ನೇ ಸಾಲಿನಲ್ಲಿ ಮುನಿರಾಬಾದ್- ಗಂಗಾವತಿ-ಸಿಂಧನೂರು- ಮಾನ್ವಿ-ರಾಯಚೂರು- ಮೆಹಬೂಬ್‌ನಗರ್-ಹೈದರಾಬಾದ್ ರೈಲು ಮಾರ್ಗವು 265 ಕಿ.ಮೀ. ವ್ಯಾಪ್ತಿಯುಳ್ಳದ್ದಾಗಿತ್ತು. ಕರ್ನಾಟಕದಲ್ಲಿ 185 ಕಿ.ಮೀ. ಮತ್ತು ಆಂಧ್ರದಲ್ಲಿ 80 ಕಿ.ಮೀ ವ್ಯಾಪ್ತಿಗೆ ಒಳಪಟ್ಟಿದೆ. ಈಗಾಗಲೇ ಆಂಧ್ರದಲ್ಲಿ 80 ಕಿ.ಮೀ. ರೈಲು ಮಾರ್ಗವು ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಕರ್ನಾಟಕದಲ್ಲಿ ಶೇ 10ರಷ್ಟೂ ಪೂರ್ಣಗೊಂಡಿರುವುದಿಲ್ಲ.

ಈ ರೈಲು ಮಾರ್ಗಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಪಾತ್ರವು ಮಹತ್ವದ್ದು.

ಜೋಡಿ ಮಾರ್ಗ : 1. ಬೆಂಗಳೂರು-ಗುಂತಕಲ್, 2. ಬೆಂಗಳೂರು-ಸೇಲಂ- ಕೊಯಮತ್ತೂರು ಮಾರ್ಗ, 3. ಬೆಂಗಳೂರು-ಹುಬ್ಬಳ್ಳಿ-ಮೀರಜ್ ಮತ್ತು 4. ಬೆಂಗಳೂರು-ಮಂಗಳೂರು ಮಾರ್ಗಗಳು ಹೊರರಾಜ್ಯಗಳಿಗೆ  ಪ್ರಮುಖ ಸಂಪರ್ಕ ಕಲ್ಪಿಸುವ ಮಾರ್ಗಗಳಾಗಿರುವುದರಿಂದ ಹಾಗೂ ಪ್ರಮುಖ ಸ್ಥಳಗಳಾದ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತ ಹಾಗೂ ಇತರ ಪ್ರದೇಶಗಳಿಗೆ ಶೀಘ್ರವಾಗಿ ಸಂಚರಿಸಲು ಅನುವಾಗಲು ಈ ಮಾರ್ಗಗಳನ್ನು ವಿದ್ಯುದೀಕರಣ ಹಾಗೂ ಜೋಡಿ ಮಾರ್ಗಗಳಾಗಿ ನಿರ್ಮಿಸುವುದು ಅವಶ್ಯಕವಾಗಿದೆ.
 
ಇದರಿಂದ ಈಗಿರುವ ಪ್ರಯಾಣದ ವೇಳೆ ಅರ್ಧದಷ್ಟು ಕಡಿಮೆಯಾಗುವುದು. ಈ ಹಿನ್ನೆಲೆಯಲ್ಲಿ ಈ ಮಾರ್ಗಗಳನ್ನು ಆದ್ಯತೆ ಮೇಲೆ ವಿದ್ಯುದೀಕರಣ ಹಾಗೂ ಜೋಡಿ ಮಾರ್ಗದ ನಿರ್ಮಾಣಕ್ಕೆ ಮಂಜೂರಾತಿಯನ್ನು ಪಡೆಯಬೇಕಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.