ADVERTISEMENT

ಹೊಸ ವಿದ್ಯುತ್ ಯೋಜನೆಯೇ ಚೈತನ್ಯದ ಹಾದಿ

ರಾಮರಡ್ಡಿ ಅಳವಂಡಿ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST
ಆರ್‌ಟಿಪಿಎಸ್‌ನ ಸಂಗ್ರಹಾಗಾರದಲ್ಲಿ ಮಣ್ಣು ಮಿಶ್ರಿತ ಕಲ್ಲಿದ್ದಲಿನ ಸಂಸ್ಕರಣೆ 	(ಸಂಗ್ರಹ ಚಿತ್ರ)
ಆರ್‌ಟಿಪಿಎಸ್‌ನ ಸಂಗ್ರಹಾಗಾರದಲ್ಲಿ ಮಣ್ಣು ಮಿಶ್ರಿತ ಕಲ್ಲಿದ್ದಲಿನ ಸಂಸ್ಕರಣೆ (ಸಂಗ್ರಹ ಚಿತ್ರ)   

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ನಾಡಿಗೆ ಬೆಳಕು ನೀಡುವ `ಶಕ್ತಿ' ಕೇಂದ್ರ. ಎರಡೂವರೆ ದಶಕಗಳಿಂದ ತಲಾ 210 ಮೆಗಾವಾಟ್ ಸಾಮರ್ಥ್ಯದ 7 ಘಟಕಗಳು ವಿದ್ಯುತ್ ಉತ್ಪಾದಿಸಿ ನಾಡಿಗೆ ಪೂರೈಸಿದ ಹೆಗ್ಗಳಿಕೆ ಹೊಂದಿವೆ. ಈಚೆಗೆ 250 ಮೆಗಾವಾಟ್ ಸಾಮರ್ಥ್ಯದ 8ನೇ ಘಟಕ ಉತ್ಪಾದನೆ ಆರಂಭಿಸಿದೆ.

ಆರ್‌ಟಿಪಿಎಸ್‌ನ ಒಟ್ಟು 8 ಘಟಕಗಳಿಂದ 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಬೇಕು. ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಕೊರತೆ, ತಾಂತ್ರಿಕ ಸಮಸ್ಯೆ ಕಾರಣದಿಂದ ಈಗ 1,000 ದಿಂದ 1,100 ಮೆಗಾವಾಟ್  ಉತ್ಪಾದನೆ ಮಾತ್ರ ಸಾಧ್ಯವಾಗುತ್ತಿದೆ. 28 ವರ್ಷಗಳಷ್ಟು ಹಳೆಯದಾದ ಘಟಕಗಳಲ್ಲಿ ನಿತ್ಯ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಉತ್ಪಾದನೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ.

ಸಕಾಲಕ್ಕೆ ಉತ್ತಮ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಸಾಧ್ಯವಾದರೆ ಮತ್ತು ಅನಿಲ ಹಾಗೂ ಕಲ್ಲಿದ್ದಲು ಆಧಾರಿತ ಹೊಸ ವಿದ್ಯುತ್ ಉತ್ಪಾದನೆ ಯೋಜನೆಗಳು ತ್ವರಿತವಾಗಿ ಕಾರ್ಯ ಆರಂಭಿಸಿದರೆ, ಆರ್‌ಟಿಪಿಎಸ್ ಮೇಲೆ ವಿದ್ಯುತ್ ಉತ್ಪಾದನೆ ಒತ್ತಡ ಕಡಿಮೆ ಆಗುತ್ತದೆ. ಹಳೆಯದಾದ 1, 2 ಮತ್ತು 3ನೇ ಘಟಕ ಪೂರ್ಣ ದುರಸ್ತಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗುತ್ತದೆ.

ಕಳಪೆ ಕಲ್ಲಿದ್ದಲು ಪೂರೈಕೆ
ಆರ್‌ಟಿಪಿಎಸ್‌ನ 1, 2 ಮತ್ತು 3ನೇ ಘಟಕದಲ್ಲಿನ ಸ್ವಯಂಚಾಲಿತ ನಿರ್ವಹಣಾ ವ್ಯವಸ್ಥೆಯು 1984ರ ವಿದೇಶಿ ತಂತ್ರಜ್ಞಾನ ಹೊಂದಿದೆ. ವಿದೇಶಿ ತಂತ್ರಜ್ಞಾನ ಭಾರತದಲ್ಲಿ ಬಳಕೆಗೆ ಬರುವಷ್ಟರಲ್ಲಿ 15 ವರ್ಷ ಹಳೆಯದಾಗಿರುತ್ತದೆ. ಅಂದರೆ 1970ಕ್ಕೂ ಹಿಂದಿನ ತಂತ್ರಜ್ಞಾನವನ್ನೇ ಇನ್ನೂ ಆರ್‌ಟಿಪಿಎಸ್‌ನ ಮೂರು ಘಟಕಗಳಲ್ಲಿ ಅನಿವಾರ್ಯವಾಗಿ ಅನುಸರಿಸಬೇಕಾಗಿದೆ. ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಾಗಲು ಕಾರಣವಾಗಿದೆ.

`ಡಿ' ಮತ್ತು `ಈ' ಗ್ರೇಡ್ ಕಲ್ಲಿದ್ದಲು ಪೂರೈಕೆ ಆಗುತ್ತಿತ್ತು. ಈಚೆಗೆ `ಎಫ್' ಗ್ರೇಡ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಎಫ್ ಗ್ರೇಡ್ ಅಂದರೆ ಬಳಕೆಗೆ ಯೋಗ್ಯವಲ್ಲದ್ದು (ಮಣ್ಣು ಮಿಶ್ರಿತ). ಇದು ತಾಂತ್ರಿಕ ಸಮಸ್ಯೆಗೆ ಕಾರಣವಾಗಿ ಘಟಕಗಳು ಉತ್ಪಾದನೆ ಬಂದ್ ಮಾಡುವಂತಾಗುತ್ತಿದೆ.

ಗುಣಮಟ್ಟದ ಕಲ್ಲಿದ್ದಲು ಪೂರೈಕೆಯಾದರೆ, ಈಗ ಪ್ರತಿ ಘಟಕ ಉತ್ಪಾದನೆ ಮಾಡುವ 180 ಮೆಗಾವಾಟ್‌ನಿಂದ 210 ಮೆಗಾವಾಟ್ ಉತ್ಪಾದನೆ ಆಗುತ್ತದೆ. ಹೀಗಾಗಿ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಮಾಡಬೇಕು. ಇಂಡೋನೇಷ್ಯಾದಿಂದ `ಎ' ದರ್ಜೆಯ ಗುಣಮಟ್ಟದ ಕಲ್ಲಿದ್ದಲು ಆಮದು ಮಾಡಿಕೊಂಡು ಅದರ ಜತೆಗೆ ಸ್ಥಳೀಯ ಕಲ್ಲಿದ್ದಲು ಮಿಶ್ರಣ ಮಾಡಿ ಬಳಕೆ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬಹುದು. ತಾಂತ್ರಿಕ ಸಮಸ್ಯೆಯನ್ನೂ ಹೋಗಲಾಡಿಸಲು ಸಾಧ್ಯ.

ಆರ್‌ಟಿಪಿಎಸ್ ಹಳೆಯ ಘಟಕಗಳ ತಂಪು ಗೋಪುರ (ಕೂಲಿಂಗ್ ಟವರ್) ಪಂಪ್ ಹಳೆಯದಾಗಿದ್ದು ದುರಸ್ತಿ ಆಗಬೇಕು. ಕೇಂದ್ರ ವಿದ್ಯುತ್ ಪ್ರಾಧಿಕಾರವೇ ಇದನ್ನು ಸೂಚಿಸಿದೆ. ದುರಸ್ತಿ ಆಗಬೇಕಾದರೆ ಘಟಕವನ್ನು ಸ್ಥಗಿತಗೊಳ್ಳಬೇಕು. ಆದರೆ, ವಿದ್ಯುತ್ ಉತ್ಪಾದನೆ ಒತ್ತಡದಿಂದ ಇದು ಆಗಿಲ್ಲ.  ಒಂದು ಘಟಕ ದುರಸ್ತಿಗೆ 60 ರಿಂದ 90 ದಿನ ಬೇಕು. ಒಂದು ಘಟಕ ದುರಸ್ತಿ ಆಗುವಷ್ಟರಲ್ಲಿ ಮತ್ತೊಂದರಲ್ಲಿ ಸಮಸ್ಯೆ ಕಾಣಿಸಿಕೊಂಡಿರುತ್ತದೆ. ಘಟಕ ಹಳೆಯದಾಗಿರುವುದರಿಂದ ಈ ಸಮಸ್ಯೆ ನಿರಂತರ. ಈ ಎಲ್ಲ ಘಟಕಗಳಿಗೆ ಮರುಚೈತನ್ಯ ಬರಬೇಕಾದರೆ ಸರ್ಕಾರ ರೂಪಿಸಿರುವ ಹೊಸ ವಿದ್ಯುತ್ ಯೋಜನೆಗಳು ಬೇಗ ಉತ್ಪಾದನೆ ಆರಂಭಿಸಬೇಕು.

ಹೊಸ ಯೋಜನೆಗಳು
ಯರಮರಸ್ ಮತ್ತು ಯದ್ಲಾಪುರದಲ್ಲಿ ಒಟ್ಟು 2,400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಈ ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದೆ. ಈ ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ.

ಯರಮರಸ್ ಬಳಿ ಬರಿ 800 ಮೆಗಾವಾಟ್ ಸ್ಥಾವರದ ಸಿವಿಲ್ ಕಾಮಗಾರಿ ಈಗಷ್ಟೇ ಶುರು ಆಗಿದೆ. ಅದೇ ರೀತಿ ತದಡಿ ಮತ್ತು ಬಿಡದಿ ಅನಿಲ ಆಧಾರಿತ ಯೋಜನೆಗಳು ಬೇಗ ಅನುಷ್ಠಾನಗೊಳ್ಳಬೇಕು. ಇದರಿಂದ ಆರ್‌ಟಿಪಿಎಸ್ ಮೇಲಿನ ಬೇಡಿಕೆಯ ಒತ್ತಡ ಕಡಿಮೆಯಾಗಿ ಪೂರ್ಣ ದುರಸ್ತಿಗೆ ಮುಂದಾಗಲು ಸಾಧ್ಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.