ADVERTISEMENT

ಅಂತಃಕರಣಕ್ಕೆ ಜಾತಿಯಿಲ್ಲ

ಸುಬ್ಬು ಹೊಲೆಯಾರ್
Published 24 ಮಾರ್ಚ್ 2013, 19:59 IST
Last Updated 24 ಮಾರ್ಚ್ 2013, 19:59 IST

ಜಾತಿ ಸಂವಾದ ಪ್ರಾರಂಭವಾದಾಗಿನಿಂದಲೂ ಸೂಕ್ಷ್ಮವಾಗಿ  ಮತ್ತು ಗಂಭೀರವಾಗಿ ಗಮನಿಸುತ್ತಿದ್ದೇನೆ. ಇಂತಹ ಮುಕ್ತ ಚರ್ಚೆ ಆರೋಗ್ಯಕರ ಎಂಬುದು ನನ್ನ ನಿಲುವು. ಮಾರ್ಚ್ 18ರಂದು ಪ್ರಕಟವಾದ ಸಂಪತ್ ಬೆಟ್ಟಗೆರೆ ಅವರ `ಜಾತಿ ಬೇಡ ಪ್ರೀತಿ ಬೇಕು' ಎಂಬ ಲೇಖನದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದೆ. ಸಂಪತ್ ಅವರು ನನ್ನದೂ ಸೇರಿದಂತೆ ಮೂವರ ಸಂಗಾತಿಗಳ ಹೆಸರನ್ನು ತಮ್ಮ ಎದೆಯ ಸಂಪತ್ತಿನಲ್ಲಿ ಅಚ್ಚು ಹಾಕಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ನನ್ನ ಹೆಸರಿನಲ್ಲಿ ಇರುವ `ಹೊಲೆಯಾರ್' ಒಂದು ಪ್ರಜ್ಞಾಪೂರ್ವಕ ನಿರ್ಧಾರ. ಇದೇಕೆ ಎಂಬುದನ್ನು ಎರಡು ಘಟನೆಗಳ ರೂಪಕದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.

ಒಮ್ಮೆ ಡಾ.ಅಂಬೇಡ್ಕರ್ ಅವರು ತಮ್ಮ ಪತ್ನಿ ರಮಾಭಾಯಿ ಅವರನ್ನು ಮುಂಬಯಿಯಲ್ಲಿ ನಾಟಕವೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಆ ನಾಟಕ ಅಸ್ಪೃಶ್ಯತೆಯ ಕುರಿತಾದದ್ದು. ನಾಟಕದ ಪ್ರಮುಖ ಪಾತ್ರ ಕೊರಳಿಗೆ  ಮಡಕೆಯನ್ನು ಕಟ್ಟಿಕೊಂಡು ಸೊಂಟಕ್ಕೆ ಕಸದ ಪೊರಕೆಯ ಪರಿಕರಗಳನ್ನು ಹಿಡಿದುಕೊಂಡಿರುವುದು ನೋಡುಗರಿಗೆ ಮನವರಿಕೆಯಾಗುವಂತೆ ತೋರಿಸಬೇಕಾಗಿತ್ತು. ಪಾತ್ರಧಾರಿ ಇಷ್ಟನ್ನೂ ಆಂಗಿಕ ಅಭಿನಯದಲ್ಲಿ ಸಾಂಕೇತಿಕವಾಗಿ ತೋರಿಸುತ್ತಾನೆಯೇ ಹೊರತು ಯಾವ ಪರಿಕರವನ್ನೂ ಬಳಸವುದಿಲ್ಲ. ನಾಟಕವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಾಬಾ ಸಾಹೇಬರಿಗೆ ಆಶ್ಚರ್ಯವಾಗುತ್ತದೆ.

ನಾಟಕ ಮುಗಿದ ಮೇಲೆ ಪಾತ್ರಧಾರಿಯನ್ನು ಕಂಡು ಮಾತನಾಡಿಸಿ `ನೀನು ಮಡಿಕೆ ಮತ್ತು ಪೊರಕೆಯನ್ನು ಬಳಕೆ ಮಾಡಿದ್ದರೆ ಪಾತ್ರ ಇನ್ನು ತುಂಬಾ ಪರಿಣಾಮಕಾರಿಯಾಗಿರುತ್ತಿತ್ತು' ಎನ್ನುತ್ತಾರೆ. ಅದಕ್ಕೆ ಆ ಪಾತ್ರಧಾರಿ  ನಾನು ಆ ಜಾತಿಯವನಲ್ಲ ಅದಕ್ಕೆ ನಾನು ಅದನ್ನು ಬಳಸಲಿಲ್ಲ ಅಂತ ತುಂಬಾ ತೀಕ್ಷ್ಣವಾಗಿ ಉತ್ತರಿಸುತ್ತಾನೆ. ಬಾಬಾಸಾಹೇಬರು ಅವನನ್ನು ಹತ್ತಿರಕ್ಕೆ ಕರೆದು ನಿನಗೆ ಕೆಲವು ನಿಮಿಷಗಳ ಕಾಲ ಅದನ್ನು ಕಟ್ಟಿಕೊಂಡು ಪಾತ್ರ ಮಾಡಲು ಸಾಧ್ಯವಿಲ್ಲ ಎಂದಾದರೆ ಇನ್ನು ತಮ್ಮ ಜೀವಮಾನವಿಡೀ ಹೀಗೆ ಬದುಕುವವರ ಪಾಡು ಹೇಗಿರಬೇಡ? ಎಂದು ಅವನಿಗೆ ತಿಳಿ ಹೇಳುತ್ತಾರೆ. ಪಾತ್ರಧಾರಿಗೆ ತನ್ನ ಅಭಿನಯದಿಂದ ಬರುವ ಹಣ ಮತ್ತು ಕೀರ್ತಿ ಬೇಕಾಗಿರುತ್ತದೇ ಹೊರತು ಸಾಮಾಜಿಕ ಬದಲಾವಣೆಯಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬಹುದು.ಮೇಲರಿಮೆಯನ್ನು ಧ್ವನಿಸುವ ಜಾತಿಯೊಂದರ ಉಪನಾಮಕ್ಕೆ ಇರುವ ಮಹತ್ವವೇ ನನ್ನ ಹೆಸರಿನ ಜೊತೆಗಿರುವ ಉಪನಾಮಕ್ಕೂ ಇದೆ ಎಂಬುದನ್ನು ತೋರಿಸಿಕೊಡುವ ಮೂಲಕ ಸಮಾನತೆಯ ಮಧ್ಯಮ ಮಾರ್ಗ ಹುಡುಕುವ ಪ್ರಯತ್ನ ನನ್ನದು.

ಮತ್ತೊಂದು ಘಟನೆ ನನ್ನದೇ ಬದುಕಿನಲ್ಲಿ ಸಂಭವಿಸಿದ್ದು. ನಾನು ಕೆಲಸ ಮಾಡುವ ದೂರದರ್ಶನ ಚಂದನದಲ್ಲಿ ವಾರ್ತಾ ಇಲಾಖೆಯ ಕಪ್ಪಣ್ಣ  ಎಂಎಸ್‌ಐಎಲ್, ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ನಿತ್ಯೋತ್ಸವ ಸುಗಮಸಂಗೀತ ಸ್ಪರ್ಧೆಯ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದು. ನಾನು ಕೆಲಸಮಾಡುವ ವಿಭಾಗದ ಹತ್ತಿರದಲ್ಲೆೀ ಮೇಕಪ್ ಮತ್ತು ರಿಹರ್ಸಲ್ ಹಾಲ್ ಇತ್ತು. ಅದರಿಂದಾಗಿ ಸದಾ ಮಕ್ಕಳ ಕಲರವ.

ಒಂದು ದಿನ ಬೆಳಿಗ್ಗೆ ಈ ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ತಲೆ ಹಿಡಿದುಕೊಂಡು ಅಳುತ್ತಿದ್ದುದ್ದು ಕಾಣಿಸಿತು ನಾನು `ಯಾಕಮ್ಮ ಅಳುತ್ತಿದ್ದೀಯಾ?' ಎಂದು ವಿಚಾರಿಸಿದೆ. ಆಕೆ `ಅಂಕಲ್ ತಲೆ ತುಂಬಾ ನೋಯ್ತೊ ಇದೆ. ಫೈನಲ್ ಇದೆ ಏನ್ ಮಾಡ್ಬೇಕೋ ಗೊತ್ತಗ್ತಾ ಇಲ್ಲ' ಎಂದಳು. ಜೊತೆಗೆ ಯಾರೂ ಇಲ್ಲವೇ ಎಂಬ ನನ್ನ ಪ್ರಶ್ನೆಗೆ ತಂದೆ ಕಾಫಿ ತರಲು ಕ್ಯಾಂಟೀನಿಗೆ ಹೋಗಿದ್ದಾರೆ ಎಂದು ಉತ್ತರಿಸಿದಳು. ನಾನು ಹೊರಗೆ ಹೋಗಿ ತಲೆ ನೋವಿನ ಮಾತ್ರೆ ತಂದು ಇನ್ನೊಂದು ಕಾಫಿ ತರಿಸಿ ಕುಡಿಸಿದೆ. ಸ್ವಲ್ಪಹೊತ್ತು ಸುಧಾರಿಸಿಕೊಂಡ ಆ ಮಗು ಸ್ಟುಡಿಯೋಗೆ ಹಾಡಲು ಹೋದಳು, ನಾನು ನನ್ನ ಕೆಲಸದಲ್ಲಿ ಮಗ್ನನಾದೆ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ತಂದೆ ಮಗಳಿಬ್ಬರೂ ತುಂಬಾ ಖುಷಿಯಿಂದ ನಾನು ಕುಳಿತ ಜಾಗಕ್ಕೆ ಬಂದರು. ಆ ಹುಡುಗಿ ನನ್ನ ಕಾಲಿಗೆ ನಮಸ್ಕಾರ ಮಾಡಲು ಪ್ರಯತ್ನಿಸಿತು ನಾನು ಹಿಂದೆ ಸರಿದೆ ಹುಡುಗಿಯ ತಂದೆ ನಿಮ್ಮ ಸಹಾಯದಿಂದಲೇ ನನ್ನ ಮಗಳು ಫೈನಲ್‌ಗೆ ಬಂದಳು ಎನ್ನುತ್ತಾ ಎಷ್ಟು ಬೇಡಾ ಎಂದರೂ ನನ್ನ ಕಾಲಿಗೆ ನಮಸ್ಕಾರ ಮಾಡಿಸಿದರು.

ನಾನು ಮುಜುಗರದಿಂದ ಮುದುಡಿ ಹೋದೆ. ನಿಮ್ಮ ಮಗಳಿಗೆ ಗುಣ ಆಗಿದ್ದು ಮಾತ್ರೆಯಿಂದ, ಮತ್ತು ಆಕೆ ತುಂಬಾ ಚೆನ್ನಾಗಿ ಹಾಡಿದ್ದರಿಂದ, ಆಕೆ ಫೈನಲ್‌ಗೆ ಪ್ರವೇಶಿಸಿದ್ದಾಳೆ ಎಂದು ವಿವರಿಸಿದೆ. ಅವರಿಗೆ ನನ್ನ ವಿವರಣೆ ಬೇಕಿರಲಿಲ್ಲ ಅನ್ನಿಸುತ್ತದೆ. ಆದರೆ ಆ ಕ್ಷಣ ನಾವು ಮೂವರೂ ಮನುಷ್ಯರಾಗಿದ್ದೆವು ಅನ್ನಿಸುತ್ತದೆ. ಅವರನ್ನು ಎಲ್ಲಿಂದ ಬಂದಿದ್ದಾರೆಂದು ವಿಚಾರಿಸಿದೆ. ಅವರು ನಾವು ಹಾಸನದವರು ಎಂದರು. ನಾನು ಅದೇ ಜಿಲ್ಲೆಯ ಹೆತ್ತೂರಿನವರು ಎಂದೆ. ನಾವು ಪರಸ್ಪರ ಹೆಸರು ಹೇಳಿಕೊಂಡು ಪರಿಚಯಿಸಿಕೊಂಡೆವು. ಅವರ ಹೆಸರಿನಲ್ಲಿ `ಶ್ರೇಷ್ಠ' ಜಾತಿಯ ಉಪನಾಮವಿತ್ತು. ಅರ್ಥಾತ್ ನಮಗೆ ನಮ್ಮ ನಮ್ಮ ಜಾತಿಗಳ್ಯಾವುದೆಂದು ತಿಳಿದಿತ್ತು. ಆದರೆ ನಾವು ಈ ಭಿನ್ನತೆಗಳನ್ನು ಮೀರಿ ಒಬ್ಬೊರಿಗೊಬ್ಬರು ಮಿಡಿದಿದ್ದೆವು.

ಈ ಎರಡೂ ಘಟನೆಗಳನ್ನು ಒಂದು ಮಾಡಿ ಹೇಳುವುದಾದರೆ ಕೆಲವು ವರ್ಷಗಳ ಹಿಂದೆ  ನಮ್ಮ ರಾಜ್ಯವೂ ಸೇರಿದಂತೆ ದೇಶದ ನಾನಾ ಕಡೆ ನೀರಿಗಾಗಿ ಕೊರೆದ ಕೊಳವೆ ಬಾವಿಗಳಿಗೆ ಪುಟ್ಟ ಮಕ್ಕಳು ಆಕಸ್ಮಿಕವಾಗಿ ಬೀಳುತ್ತಿದ್ದವು. ಆಗ ಆ ಮಕ್ಕಳನ್ನು ರಕ್ಷಿಸಲು ಸರ್ಕಾರ, ಸೈನಿಕರು, ಸಾರ್ವಜನಿಕರು, ಹಗಲೂ ರಾತ್ರಿ ಶ್ರಮಿಸುತ್ತಿದ್ದರು ಇದನ್ನು ಪತ್ರಿಕೆಗಳಲ್ಲಿ ಮತ್ತು ಟೀವಿಗಳಲ್ಲಿ ನೋಡುತ್ತಿದ್ದ ನಾವು ನೀವೆಲ್ಲಾ, ಆ ಮಗು ಬದುಕಿ ಉಳಿಯಲಿ ಎಂದು ಧರ್ಮ,ಜಾತಿ, ಭಾಷೆಗಳ ಗಡಿ ಮೀರಿ ಪ್ರಾರ್ಥಿಸುತ್ತಿದ್ದಿದ್ದು ನಿಜ ತಾನೆ? ಈ ಪ್ರೀತಿ ಎಲ್ಲಾ ಹೊತ್ತಿನಲ್ಲೂ ನಮ್ಮಲ್ಲಿ ಇರಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.