ADVERTISEMENT

ಜಾತಿ ಬೇಡ, ಪ್ರೀತಿ ಬೇಕು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST

ಸುಬ್ಬು ಹೊಲೆಯಾರ್, ವಿ.ಆರ್. ಕಾರ್ಪೆಂಟರ್, ವೀರಣ್ಣ ಮಡಿವಾಳರ್-ನನ್ನ ಸಮಕಾಲೀನ ಈ ಕವಿ, ಲೇಖಕರು ತಮ್ಮ ಹೆಸರಿನೊಂದಿಗೆ ಜಾತಿಯನ್ನು ಏಕೆ ಪರಿಚಯಿಸಿಕೊಳ್ಳುತ್ತಿದ್ದಾರೆ? ಕೆಳ ಜಾತಿಗೂ ಶ್ರೇಷ್ಠತೆಯ ಪಟ್ಟ ಕಲ್ಪಿಸಲೋ? ಅಥವಾ ವಚನ ಚಳವಳಿಯಂತೆ ಜಾತಿಯಿಂದಲೇ ಜಾತಿ ಖ್ಯಾತಿಯನ್ನು ಮರೆಸಲೊ? ಎಂಬ ಪ್ರಶ್ನೆ ಕಾಡಿದ್ದುಂಟು. ಇತ್ತೀಚೆಗೆ ನನ್ನ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು  `ನಮಸ್ತೆ ಸಾರ್' ಎಂದಳು. 

`ನಮಸ್ತೇ, ನೀನು ಅವಳ ತಂಗಿಯೇ?'  ಎಂದೆ. 

`ಯಾಕೆ ಸಾರ್?' ಎಂಬ ಆಕೆಯ ಪ್ರಶ್ನೆಗೆ  `ವರಸೆ (ರೂಪ) ಯಲ್ಲಿ ಅವಳ ತೆರನಾಗಿಯೇ ಇರುವೆಯಲ್ಲಾ, ಅದಕ್ಕೆ ಕೇಳಿದೆ ಬೇರೆನಿಲ್ಲ' ಎಂದು  ಉತ್ತರಿಸಿದೆ. ಮುಜುಗರಗೊಂಡ ಆ ಹುಡುಗಿ `ಇಲ್ಲ ಸಾರ್, ಅವಳು ಹಳ್ಳಿ ಕಾರ್ ಒಕ್ಕಲಿಗರು, ನಾವು ಸಲುಪ ಒಕ್ಕಲಿಗರು'  ಎಂದಳು. ಮೂಲತಃ ಒಕ್ಕಲಿಗರ ಕುಲದವನಾದ ನನಗೆ ದಿಗಿಲಾಯಿತು. ಉಪನ್ಯಾಸಕನಾದ ನನಗೆ ನನ್ನ ಜಾತಿಯ ಒಳ-ಹೊರಗು, ಆಳ-ಅಂತರ ಗೊತ್ತಿಲ್ಲ. ನನ್ನ ವಿದ್ಯಾರ್ಥಿನಿ ಮೇಷ್ಟ್ರಿಗೆ ಜಾತಿ ಪಾಠ ಮಾಡುತ್ತಿದ್ದಾಳಲ್ಲ ಎಂದು ನಿಟ್ಟುಸಿರಿಟ್ಟೆ.

ಒಕ್ಕಲಿಗರಾದ ಕುವೆಂಪು, ಕುರುಬರಾದ ಕನಕ ಜಾತಿ ವ್ಯವಸ್ಥೆಯನ್ನು ಮೀರಿ  ವಿಶ್ವ ಮಾನವ ಸಂದೇಶ  ಸಾರಿದ ಮಹಿಮಾವಂತರು. ಇವರನ್ನೇ ನಮ್ಮ ಜಾತಿ ಮನ ಸ್ಥಿತಿಗಳು ಸಂಘಟನೆಯ ಹೆಸರಿನಲ್ಲಿ, ಜಯಂತಿ, ಉತ್ಸವಗಳ ನೆಪದಲ್ಲಿ ಮತ್ತೆ ಮತ್ತೆ ಜಾತಿ ಕಡೆಗೆ ಎಳೆದು ತರುತ್ತಿರುವುದು ವಿಷಾದ ಹುಟ್ಟಿಸುತ್ತದೆ. ಅಲ್ಲದೆ ಇಂದು ಶಾಲಾ ಕಾಲೇಜುಗಳಲ್ಲಿ ಪಾಠ ಹೇಳುವ ಶಿಕ್ಷಕರು, ಕೇಳುವ ವಿದ್ಯಾರ್ಥಿಗಳು `ಇವ ನಮ್ಮ ಜಾತಿಯ ಸಾಹಿತಿ' ಎಂದು ಒಂದು ರೀತಿಯ ತನ್ಮಯತೆಯನ್ನು ಬೆಳೆಸಿಕೊಂಡರೆ ಜಾತಿಯ ಬೇರುಗಳು ಇನ್ನಷ್ಟು ಸಂಕೀರ್ಣಗೊಳ್ಳುತ್ತದೆ.

ಓದಿದ ಹುಡುಗ-ಹುಡುಗಿಯರು ತಮಗಿಂತಲೂ ಶ್ರೇಷ್ಠ ಜಾತಿಯವರು ತಮ್ಮ ತಂದೆ-ತಾಯಿಯರನ್ನು ಅವಾಚ್ಯ ಪದಗಳಲ್ಲಿ ಸಂಬೋಧಿಸುವುದನ್ನು ಕೇಳಿ ರಕ್ತ ಕುದಿಸಿಕೊಳ್ಳುತ್ತಾರೆ.

ಮೀಸಲಾತಿ ಮತ್ತು ಜಾತಿ ಪ್ರಜ್ಞೆ  ಇವೆರಡು ಒಂದೇ ನಾಣ್ಯದ ಎರಡು ಮುಖಗಳು ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಹಲವರಿಗಿದೆ. ಮೀಸಲಾತಿ ಎಂಬುದು ಇಂದಿನ ಚಲನಶೀಲ ಸಮಾಜದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ಹಿಂದುಳಿದವರ ಅಭ್ಯುದಯಕ್ಕಾಗಿ ಇರುವ ಸಂವಿಧಾನಬದ್ಧವಾದ ಒಂದು ಕೊಡುಗೆ ಮತ್ತು ಆಶಯ. ಆದರೆ  ಜಾತಿಪ್ರಜ್ಞೆ  ಶೋಷಣೆಯ,ತಿರಸ್ಕಾರದ ವ್ಯಂಗ್ಯ ನೋಟದ ಉಡಾಫೆಭರಿತ ಉರಿ ಕಣ್ಣೀರು. ಹೀಗಾಗಿ ಜಾತಿ ಏಕೆ? ಎಂದು ಕೇಳಿಕೊಳ್ಳುವ ಪ್ರಶ್ನೆಯೊಂದಿಗೆ ಪ್ರೀತಿ ಬೇಕು ಎಂಬ ಮನಸ್ಥಿತಿ ನಮ್ಮದಾಗಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.