ADVERTISEMENT

ಕಾಡುವ ‘ಸ್ತ್ರೀ’ ಚಿತ್ರಗಳೂ, ವಿಷಾದದ ಭಾವವೂ..

ಎಸ್.ರಶ್ಮಿ
Published 24 ಜನವರಿ 2026, 14:59 IST
Last Updated 24 ಜನವರಿ 2026, 14:59 IST
<div class="paragraphs"><p>ಈ ಬಾರಿಯ ಚಿತ್ರೋತ್ಸವದ ಥೀಮ್‌&nbsp;</p></div>

ಈ ಬಾರಿಯ ಚಿತ್ರೋತ್ಸವದ ಥೀಮ್‌ 

   
ಜನವರಿ 29 ರಿಂದ ಆರಂಭವಾಗುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಈ ಬಾರಿಯ ಧ್ಯೇಯವಾಕ್ಯ ‘ಸ್ತ್ರೀ ಅಂದರೆ ಅಷ್ಟೇ ಸಾಕೆ’. ಮಹಿಳಾ ಸಂವೇದನೆ ಮತ್ತು ಸಮಾನತೆಯ ದನಿಯನ್ನು ಗಟ್ಟಿಯಾಗಿ ಸಾರುವ ಚಿತ್ರಗಳು ಚಿತ್ರೋತ್ಸವದಲ್ಲಿ ಗಮನ ಸೆಳೆಯಲಿವೆ.

‘ಸಿನಿಮಾಗಳಲ್ಲಿ ಎರಡೇ ಬಗೆ. ಒಂದು ಒಳ್ಳೆಯದು ಮತ್ತು ಕೆಟ್ಟದ್ದು’– ಯಶ್‌ ಚೋಪ್ರಾ, ನಿರ್ದೇಶಕ.

‘ಎಲ್ಲ ಸಿನಿಮಾಗಳೂ ಎಲ್ಲರಿಗಾಗಿಯೂ ಅಲ್ಲ, ಪ್ರೇಕ್ಷಕರು ಎಲ್ಲವನ್ನೂ ನಾವೆಣಿಸಿದಂತೆಯೇ ನೋಡುವುದಿಲ್ಲ’– ಸತ್ಯಜಿತ್‌ ರೇ, ನಿರ್ದೇಶಕ.

ADVERTISEMENT

ಇವೆರಡೂ ಹೇಳಿಕೆಗಳನ್ನಿರಿಸಿಕೊಂಡು ಭಾರತೀಯ ಸಿನಿಮಾವನ್ನು ನೋಡಿದಾಗ ಅದರಲ್ಲಿಯ ವೈವಿಧ್ಯ, ವೈರುಧ್ಯ ಎರಡೂ ಎದ್ದು ಕಾಣುತ್ತವೆ.

‘Frankly, my dear, I don’t give a damn’ (ಗಾನ್‌ ವಿತ್‌ ದ ವಿಂಡ್‌), ನಿಂದ ಆರಂಭಿಸಿ, ದೀವಾರ್‌ನ ‘ಮೇರೆ ಪಾಸ್‌ ಮಾ ಹೈ’ ಹಾಗೂ ಬಾಜಿಗರ್‌ನ ‘ಹಾರ್‌ ಕೆ ಜೀತನೆವಾಲೋಂಕೊ ಬಾಜಿಗರ್‌ ಕೆಹತೆ ಹೈ’ ಸಂಭಾಷಣೆಗಳೊಂದಿಗೆ ಜೀವನ ವಿಧಾನವನ್ನೇ ನಿರ್ದೇಶಿಸಿವೆ ಸಿನಿಮಾಗಳು. ನಮ್ಮ ಸುತ್ತಲಿನ ಆಗುಹೋಗುಗಳಿಗೆ ಪ್ರಶ್ನಿಸುವ, ಪರಿಹಾರ ನೀಡುವ, ಆಲೋಚನೆಗಳಿಗೆ ಹೊಸ ಹೊಳಹನ್ನು ನೀಡುವ, ಒಪ್ಪುವ, ಒಪ್ಪಿಸಿಕೊಳ್ಳುವ, ಎಲ್ಲ ಧ್ವನಿಗಳನ್ನೂ ಈ ಮಾಧ್ಯಮ ಕಾಲಕ್ಕೆ ತಕ್ಕಂತೆ ಪ್ರಬಲಗೊಳಿಸುತ್ತಲೇ ಹೋಗಿದೆ. ‘ತ್ರೀ ಈಡಿಯಟ್‌’ನ ಆಲ್‌ ಈಜ್‌ ವೆಲ್‌ನಿಂದ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾದ ‘ಬಡೆ ಬಡೆ ದೇಶೋಂಮೆ ಛೋಟೊ ಛೋಟೆ ಬಾತೆಂ ಹೋತೆ ರೆಹತೆ ಹೈ’ ಎನ್ನುವ ಸಮಾಧಾನದ ಸಾಲಿನವರೆಗೂ.

ಇಡೀ ಜಗತ್ತಿನಲ್ಲಿ ಸಿನಿಮಾ ತನ್ನ ದೈನಂದಿನ ಬದುಕಿನ ದೃಶ್ಯಗಳನ್ನೇ, ಕತೆಗಳನ್ನೇ ಹೆಕ್ಕಿ, ನಮ್ಮ ಬದುಕನ್ನೂ, ಬಿಂಬವನ್ನೂ ವ್ಯಕ್ತಪಡಿಸುವ ಕೆಲಸಗಳನ್ನೇ ಮಾಡುತ್ತ ಬಂದಿವೆ. ಕೆಲವೊಂದು ಆಯಾ ಕಾಲಕ್ಕಿಂತಲೂ ಬಲು ಮುಂದಿನ ಹೆಜ್ಜೆಯಾಗಿ ಅಭಿವ್ಯಕ್ತಿಯಾಗಿದ್ದರೆ, ಇನ್ನೂ ಕೆಲವು ಕಾಲನ ಹಿಂಚಲನೆಯನ್ನು ತೋರಿಸುತ್ತವೆ. ಹಾಗೆ ತೋರಿಸುವಾಗಲೂ ಸಣ್ಣದೊಂದು ಎಚ್ಚರವನ್ನಿರಿಸಿಕೊಂಡಿರುತ್ತವೆ. ಸುಧಾರಣೆಯೇ ಬದಲಾವಣೆಯ ಧ್ವನಿಯಾಗಲಿ ಎಂಬಂತೆ.

ಇಂಥ ಹಲವು ಚಿತ್ರಗಳನ್ನೂ, ಧ್ವನಿಯನ್ನೂ, ಸಂಗೀತವನ್ನೂ, ದೃಶ್ಯವನ್ನೂ, ಮಾತುಗಳನ್ನೂ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಚಿತ್ರಪ್ರೇಮಿಗಳಿಗಾಗಿ ತಂದುಣಿಸುತ್ತ ಹದಿನಾರು ವರ್ಷಗಳೇ ಕಳೆದಿವೆ. ಷೋಡಷಿಯಾಗಿದ್ದ ಉತ್ಸವ ಇದೀಗ ಹದಿನೇಳರ ಹರೆಯಕ್ಕೆ ಕಾಲಿಟ್ಟಿದೆ. ಏಷ್ಯನ್‌ ಸಿನಿಮಾ, ಚಿತ್ರ ಭಾರತಿ ಮತ್ತು ಕನ್ನಡ ವಿಭಾಗದ ಸಿನಿಮಾಗಳಲ್ಲಿ ಚಲನಚಿತ್ರಗಳು ಪ್ರದರ್ಶನ ಕಾಣುತ್ತಿವೆ.

‘ಅ ಪ್ರಗ್ನೆಂಟ್‌ ವಿಡೊ’ ಉನ್ನಿ ಕೆ. ಆರ್‌ ನಿರ್ದೇಶನದ ಮಲಯಾಳದ ಚಿತ್ರದಲ್ಲಿ, ದಲಿತ ವರ್ಗಕ್ಕೆ ಸೇರಿದ ಸರ್ಕಾರಿ ನೌಕರ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾನೆ. ದಿನತುಂಬಿದ ಗರ್ಭಿಣಿ ಅನುಕಂಪದ ಆಧಾರದ ಮೇಲೆ ಕೆಲಸ ಕೇಳಲು ಅಲೆಯುವುದೇ ಚಿತ್ರಕತೆ. ಇಲ್ಲಿ ಸಮಾನತೆ, ಸರ್ವೋದಯ ಎಂಬ ಪದಗಳೆಲ್ಲ ಅದ್ಹೇಗೆ ಸವಕಲಾಗುತ್ತಿವೆ, ಮತ್ತು ಕೆಲವೆಡೆ ನಿಜಕ್ಕೂ ನೆರಳಾಗಿವೆ ಎಂಬ ಎರಡನ್ನೂ ಸಶಕ್ತವಾಗಿ ತೋರಿಸುತ್ತ ಹೋಗುತ್ತದೆ. ಶಿಕ್ಷಣವೇ ಎಲ್ಲದಕ್ಕೂ ಆತ್ಮವಿಶ್ವಾಸ ತುಂಬುತ್ತದೆ ಎಂಬ ಸಂದೇಶವನ್ನು ಆ ಹೆಣ್ಣುಮಗುವಿನ ಗರ್ಭಸ್ಥ ಶಿಶುವಿನೊಂದಿಗೆ ನೋಡುಗರೆಲ್ಲರಿಗೂ ದಾಟಿಸಿಬಿಡು
ತ್ತದೆ ಈ ಚಿತ್ರ. ಈ ಸಲದ ಚಲನಚಿತ್ರೋತ್ಸವದ ಹೆಣ್ಣೆಂದರೆ ಅಷ್ಟೇ ಸಾಕೆ ಎಂಬ ಧ್ಯೇಯ ವಾಕ್ಯವನ್ನು ಧ್ವನಿಸುವಂತಿದೆ ಈ ಚಿತ್ರ.

ರೋಹನ್‌ ಪರಶುರಾಮ್‌ ಕನವಾಡೆ ನಿರ್ದೇಶನದ ಮರಾಠಿಯ ‘ಸಾಬರ್‌ಬಾಂಡಾ’ ಪಾಪಾಸುಕಳ್ಳಿಯ ಫಲ ಎಂಬರ್ಥದ ಈ ಚಿತ್ರದಲ್ಲಿ ಸಲಿಂಗ ಕಾಮದ ನವಿರಾದ ಕಥನವಿದೆ. ಇದನ್ನು ಸಲಿಂಗ ಕಾಮವೆನ್ನಬೇಕೆ? ಪ್ರೇಮವೆನ್ನಬೇಕೆ? ಪ್ರೀತಿ ಎನ್ನಬೇಕೆ? ಅಥವಾ ಕೇವಲ ಸಾಂಗತ್ಯವೆನ್ನಬೇಕೆ? ಸಾಂಗತ್ಯದಲ್ಲಿ ಮಾತ್ರ ಮೈಮನಸುಗಳೆರಡೂ ಅರಳುತ್ತವೆ ಎಂಬುದನ್ನು ಹೇಳುತ್ತಲೇ, ಪಾಲಕರು ಮಕ್ಕಳ ಇಂಥ ಬಾಂಧವ್ಯ ಮತ್ತು ಲೈಂಗಿಕತೆ (sexuality) ಹೇಗೆ ಸ್ವೀಕರಿಸಬಹುದು ಎಂಬುದನ್ನು ಹೇಳುತ್ತದೆ. ಯಾವುದೇ ಶಬ್ದಾಡಂಬರವಿಲ್ಲದ, ಸಂಗೀತದ ಅಬ್ಬರವಿಲ್ಲದ, ಸರಳ ನಿರೂಪಣೆಯ ಚಿತ್ರ ಇದು.

ಕಾರ್ಬಿ ಭಾಷೆಯ ‘ಕಾಂಗ್ಡೊ ಅಲೋಟಿ’ ಚಿತ್ರವೂ ತೀವ್ರವಾದ ಮತ್ತು ಸೌಮ್ಯವಾದಗಳ ನಡುವಿನ ಜಿಜ್ಞಾಸೆಯನ್ನು ನಮ್ಮೊಳಗೆ ತಳ್ಳುತ್ತದೆ. ಕಂಜನ್‌ ಕಿಶೋರನಾಥ ಅವರು ಚಿತ್ರದಲ್ಲಿ ಅರಳುವ ಒಂದು ಮೌನ ನಲುಮೆಯ ನೋವನ್ನೂ ನಮ್ಮೊಳಗಿಳಿಸುತ್ತಾರೆ.

ಜನಪದ ಕಲೆಯನ್ನು ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುತ್ತ, ಪಾರಂಪರಿಕವಾಗಿ ಹೆಣ್ಣುಮಕ್ಕಳು ಹಾಡದ ಆ ಹಾಡುಗಳನ್ನು ಹೆಣ್ಣುಮಕ್ಕಳೇ ಪ್ರಸ್ತುತ ಪಡಿಸುವ ಸಶಕ್ತ ಮಹಿಳಾ ಪಡೆಯಚಿತ್ರ ‘ಗಣರಾಗ್‌’. ಸ್ತ್ರೀಶಕ್ತಿ ಇಂಥ ಬಂಡಾಯದಲ್ಲಿ ಮಾತ್ರವಲ್ಲ, ರಾಜಕಾರಣದಲ್ಲಿ ಪಾಲ್ಗೊಳ್ಳುವಿಕೆಯನ್ನೂ ಹೇಳುತ್ತಲೇ ಕ್ಷುಲ್ಲಕ ರಾಜಕಾರಣದ ಎಲ್ಲ ಮಜಲುಗಳನ್ನೂ ದೀಪ್‌ ಭೂಯಾನ್‌ ಅಸ್ಸಾಮೀ ಚಿತ್ರದಲ್ಲಿ ತೆರೆದಿಡುತ್ತಾರೆ.

ನಗರೀಕರಣ, ಗುಳೆ ಸಮಸ್ಯೆಯೊಂದಿಗೆ ಊರುಗಳು ಖಾಲಿಯಾಗುತ್ತಿರುವ ಮರಾಠಿಯ ಸರಳ ಚಿತ್ರ ‘ಗಮನ್’.

ಮರಾಠಿ, ಮಲಯಾಳ ಚಿತ್ರಗಳೆಲ್ಲವೂ ಸಿನಿಮಾ ಮಾಧ್ಯಮ ಮಾಡಬೇಕಾದ ಕೆಲಸವನ್ನು ಸಶಕ್ತವಾಗಿ ನಿಭಾಯಿಸುತ್ತವೆ. ಒಂದು ಪ್ರಶ್ನೆಯನ್ನಂತೂ ಹುಟ್ಟುಹಾಕುತ್ತವೆ. ಪರಿಸ್ಥಿತಿಯ ಸ್ಪಷ್ಟ ಚಿತ್ರಣ ನೀಡುವುದರೊಂದಿಗೆ ರಾಜಿಯಾಗಬೇಕೆ? ಪ್ರಶ್ನಿಸಬೇಕೆ? ಬಂಡಾಯವೇಳಬೇಕೆ? ಎಂಬಂಥ ಕಡೆಗೋಲನ್ನು ನೀಡುತ್ತವೆ.

ಮರಾಠಿ ಮತ್ತು ಮಲಯಾಳ ಭಾಷೆಯ ಚಿತ್ರಗಳು ಸಮಕಾಲೀನ ಸಮಾಜದ ವೈವಿಧ್ಯಮಯ ಸೂಕ್ಷ್ಮ ಚಹರೆಗಳನ್ನು ಚಿತ್ರರೂಪಕ್ಕೆ ಇಳಿಸಿವೆ. ಚಿತ್ರ ಭಾರತಿ ವಿಭಾಗದಲ್ಲಿ ಸ್ಪರ್ಧೆಗೆ ಬಂದ ಬಹುತೇಕ ಚಿತ್ರಗಳ ವಿಷಯ ಕಾಡು, ಕಾಡಿನ ಜೀವನ, ಕಾಡುಗಳಿಂದ ಜನರನ್ನು ಸ್ಥಳಾಂತರಿಸುವುದು, ಬಡುಕಟ್ಟು ಜನಾಂಗದ ದೈವ, ಭೂತಾರಾಧನೆ, ದೈವ ಯಾವುದು, ಭೂತ ಯಾವುದು ಇಂಥವುಗಳ ಜೊತೆಗೆ ಅಲ್ಲಿಯ ಜಾತಿ ತರತಮ, ಪಾಳೇಗಾರಿಕೆ ಮನೋಭಾವವನ್ನು ವಾಚ್ಯವಾಗಿಸದಂತೆ ತೋರುತ್ತ ಹೋಗುತ್ತಾರೆ.

ಚಿತ್ರದ ಮೊದಲೇ ಆಗಿರುವ ಅಧ್ಯಯನ ಆ ಬಿಗಿಯಾದ ನಿರೂಪಣೆಯಲ್ಲಿ ಎದ್ದು ಕಾಣುತ್ತದೆ. ಆದರೆ ಕನ್ನಡದ ಸಿನಿಮಾದಲ್ಲಿ ನಿರೂಪಕರ ಧ್ವನಿಯೇ ಹಲವೆಡೆ ವಿಜ್ರಂಭಿಸುತ್ತದೆ. (ಈ ಮಾತು, ಈ ವಿಭಾಗದ ಪ್ರವೇಶಕ್ಕೆ ಬಂದ ಸಿನಿಮಾಗಳಿಗೆ ಮಾತ್ರ ಅನ್ವಯವಾಗುತ್ತದೆ) ಜಾತಿ ಪದ್ಧತಿ ಎಂದರೆ ಅಲೆಮಾರಿಗಳಿಗೆ ಮಾತ್ರ ಸಂಬಂಧಿಸಿದ್ದು ಎಂಬಂತೆ. ಔದಾರ್ಯ ತೋರುವ ನೆವದಲ್ಲಿ ಪುರುಷ ಪ್ರಧಾನ ಸಮಾಜದ ತಿಳಿವಳಿಕೆಯನ್ನೇ ಮತ್ತಷ್ಟು ಸಶಕ್ತವಾಗಿ ತೋರುವುದು, ಹೆಣ್ಣುಮಗಳೊಬ್ಬಳು ತನ್ನ ಆಯ್ಕೆಯ ಬದುಕನ್ನು ಹೇಳುವುದೂ ಸಹಜವಾದುದು ಎಂಬುದನ್ನೇ ಸಮಾಜದ ಧಾರಾಳಿತನ ಎಂಬಂತೆ ತೋರಿಸಲಾಗಿದೆ.

ಸ್ವಾತಂತ್ರ್ಯಪೂರ್ವದ ಚಿತ್ರಗಳನ್ನು ಮಾಡುವಾಗ ಆ ಕಾಲದ ರೀತಿ ರಿವಾಜು, ಪದ್ಧತಿಗಳನ್ನು ತಿಳಿಯದೆಯೇ ಚಿತ್ರ ಮಾಡುವುದನ್ನು ಕಂಡಾಗ ಸೋಜಿಗವೆನಿಸುತ್ತದೆ. ಮಕ್ಕಳ ಚಿತ್ರಗಳಂತೂ ಮಕ್ಕಳಿಗಾಗಿಯೇ ಅಥವಾ ಮಕ್ಕಳು ದೊಡ್ಡವರಿಗೆ ಉಪದೇಶ ಕೊಡುವಂಥವೋ ಎಂಬ ಗೊಂದಲವನ್ನು ಉಳಿಸುವಂತೆ ಸಮಾಜದ ಎಲ್ಲ ಸಮಸ್ಯೆಗಳನ್ನೂ ತೋರಿಸಬೇಕು, ಅವುಗಳಿಗೆ ಪರಿಹಾರ ದೊರಕಿಸುವ ಹಟ ತೊಟ್ಟಂತೆ, ಸೂತ್ರವಿಲ್ಲದ ಪಟಗಳಂತೆ ದೃಶ್ಯಗಳು ಹಾರಾಡುತ್ತವೆ. ಪ್ರೇಕ್ಷಕರೇ ಹೊಂದಿಸಿ, ನೋಡಿ, ಅರ್ಥ ಮಾಡಿಕೊಳ್ಳಬೇಕು.

ಕನ್ನಡದ ಒಂದು ಸಿನಿಮಾ ಹಲವಾರು ಉತ್ಸವಗಳಲ್ಲಿ ಪಾಲ್ಗೊಂಡ ಹಿರಿಮೆಯನ್ನು ಟೈಟಲ್‌ ಕಾರ್ಡಿನಲ್ಲಿ ಹೇಳಿಕೊಂಡಿದೆ. ಉತ್ಸವದಲ್ಲಿ ಬರುವ ಇತರ ಸಿನಿಮಾಗಳನ್ನು ನೋಡಿದ್ದರೆ ಅವರ ಸಂಕಲನ ಎಲ್ಲಿ ತಪ್ಪಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬಹುದಿತ್ತು. ಹಿರಿಮೆ, ಗರಿಮೆ ಎಂಬುದು ಸಂಖ್ಯಾತ್ಮಕವಲ್ಲ, ಗುಣಾತ್ಮಕವಾಗಬೇಕು.

ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಅದೇ ಆಸೆ–ದುರಾಸೆ, ವಾಂಛೆ–ಮಮಕಾರ, ಅಧಿಕಾರ, ಅಹಂಕಾರ, ಶೋಷಣೆ, ಶೋಷಕ, ಮಾನವೀಯತೆ ಇಂಥ ಮೂಲ ಗುಣಗಳ ಸುತ್ತಲೇ ಹೆಣೆದಿರುವ ಚಿತ್ರಗಳೇ ಆಗಿರುತ್ತವೆ. ತಂತ್ರಗಾರಿಕೆ, ಕತೆ ಹೇಳುವ ವಿನ್ಯಾಸ, ಬಿಗಿಯಾದ ನೇಯ್ಗೆ ಇವನ್ನೆಲ್ಲ ಗಮನಿಸುವ ಅವಕಾಶಗಳು ಇಲ್ಲಿ ಬರುವ ಚಿತ್ರಗಳಿಂದ ದೊರೆಯುವಂತಾಗಬೇಕು. ಕನ್ನಡದ ಚಿತ್ರಗಳು ಕಲಿಯಲು ಸಾಕಷ್ಟಿದೆ ಎಂಬ ಹತಾಶೆಯ ಬದಲಿಗೆ, ಕನ್ನಡದ ಸಿನಿಮಾದಿಂದಲೂ ಕಲಿಯುವಂಥದ್ದು ಸಾಕಷ್ಟಿದೆ ಎನಿಸುವಂಥ ಭಾವ ಮೂಡಿಸಿದರೆ ಸಾಕು.

ಕನ್ನಡದಲ್ಲಿ ಚಂದದ ಮತ್ತು ಚಿಂತನೆಗೆ ಹಚ್ಚುವ ಚಿತ್ರಗಳೇ ಇಲ್ಲವೆ? ಎಂಬ ಸದ್ಯದ ಈ ಪ್ರಶ್ನೆಗೆ, ಕನ್ನಡದಲ್ಲಿ ಕಾಡುವ ಚಿತ್ರಗಳು ಚಿತ್ರೋತ್ಸವದಲ್ಲಿ ಕಾಣುತ್ತಿಲ್ಲ. ಚಿತ್ರೋತ್ಸವಕ್ಕೆ ಬಂದ ಚಿತ್ರಗಳು ಕಾಡಲಿಲ್ಲ ಎಂಬ ವಿಷಾದ ಸ್ಥಾಯಿಯಾಗುತ್ತದೆ.

ಅ ಪ್ರೆಗ್ನೆಂಟ್‌ ವಿಡೊ 
ಗಮನ್‌ 
ಸಾಬರ್‌ ಬಾಂಡಾ ಸಿನಿಮಾದ ದೃಶ್ಯ
ಸಾಬರ್‌ ಬಾಂಡಾ ಸಿನಿಮಾದ ದೃಶ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.