ಸಹೋದರತ್ವದ ಬಾಂಧವ್ಯ ಬೆಸೆಯುವ ‘ರಕ್ಷಾಬಂಧನ’ದ ಸಂದರ್ಭದಲ್ಲಿ, ಹಲವು ನಮೂನೆಯ ರಾಖಿಗಳು ಕಣ್ಮನ ಸೆಳೆಯುತ್ತವೆ. ವರ್ಷವರ್ಷವೂ ರೂಪ ಬದಲಿಸಿಕೊಂಡು ವೈವಿಧ್ಯ ಸಾರುವ ರಾಖಿಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ಮಯ ಆಗಿರುತ್ತವೆ. ಆದರೆ ಈ ಬಾರಿ ನೀವು ಕೊಳ್ಳುವ ರಾಖಿಗೊಂದು ಅರ್ಥ ಕಲ್ಪಿಸಿಕೊಟ್ಟಿದೆ ಮೈಸೂರಿನ ‘ಕೃಷಿಕಲಾ’ ಸಂಸ್ಥೆ.
ಬಳಸಿ ಬಿಸಾಡುವ ತರಕಾರಿ, ಹಣ್ಣಿನ ಬೀಜಗಳಿಂದ ರಾಖಿ ತಯಾರಿಸುವ ಮೂಲಕ ಹಬ್ಬವನ್ನು ಪರಿಸರಸ್ನೇಹಿ ಆಗಿಸಲು ಅದು ಮುಂದಾಗಿದೆ. ಕಾಡುಹಣ್ಣಿನ ಬೀಜಗಳೂ ಜೊತೆಗೂಡಿದ ರಾಖಿಗಳು ಹೊಸತನ ಸಾರುತ್ತಿವೆ.
ಬೇಲಿಯ ಸಂದಿ–ಗೊಂದಿಗಳಲ್ಲಿ ಬೆಳೆಯುವ ಗುಲಗಂಜಿ, ಕುಂಬಳ, ಹೀರೆ, ಅಂಟವಾಳ, ರುದ್ರಾಕ್ಷಿ, ತುಪ್ಪದ ಹೀರೆಕಾಯಿ, ಅವರೆ, ಔಡಲ, ಸೀತಾಫಲದ ಬೀಜಗಳು ರಾಖಿಯ ರೂಪದಲ್ಲಿ ಪರಿಸರ ಪ್ರಜ್ಞೆಯ ರೂವಾರಿಗಳಾಗಿ ಅಣ್ಣ–ತಮ್ಮಂದಿರ ಮುಂಗೈಗಳಲ್ಲಿ ನಲಿಯಲಿವೆ. ಪ್ರಕೃತಿದತ್ತ ಬಣ್ಣ, ವಿನ್ಯಾಸದ ಬೀಜಗಳಿಗೆ ಮಾಂತ್ರಿಕ ಸ್ಪರ್ಶ ನೀಡಿ, ಅವು ಇನ್ನಷ್ಟು ಆಕರ್ಷಕವಾಗುವಂತೆ ಮಾಡಿದ್ದಾರೆ ಕೃಷಿಕಲಾದ ಸಂಸ್ಥಾಪಕಿ ಸೀಮಾ ಪ್ರಸಾದ್.
ತಮ್ಮ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಲು ಅವರು ಬಳಸಿಕೊಂಡದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ನೀರಲಗಿಯ ಮಹಿಳೆಯರನ್ನು. ದೂರದ ನೀರಲಗಿಯನ್ನು ಅವರು ಆಯ್ದುಕೊಳ್ಳುವುದಕ್ಕೂ ಒಂದು ಕಾರಣವಿದೆ. ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯು ಕುಂದಗೋಳದಲ್ಲಿ ರಾಗಿ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಈ ಸಂಸ್ಥೆಯ ಬೆಂಬಲದೊಂದಿಗೆ, ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ದಿಸೆಯಲ್ಲಿ ಕೃಷಿಕಲಾ ಈಗಾಗಲೇ ಅಲ್ಲಿ ಕಾರ್ಯನಿರತವಾಗಿದೆ. ನೀರಲಗಿಯು ಹಳ್ಳಿಯಾಗಿರುವುದರಿಂದ ಅಲ್ಲಿ ಕಾಡಿನ ಬೀಜಗಳ ಸಂಗ್ರಹಕ್ಕೂ ಯಥೇಚ್ಛ ಅವಕಾಶಗಳಿವೆ. ಹೀಗಾಗಿ, ರಾಖಿ ತಯಾರಿಕೆಗೆ ಕೃಷಿಕಲಾ ಅಲ್ಲಿಯೇ ಘಟಕವೊಂದನ್ನು ತೆರೆದಿದೆ.
ರಾಖಿ ಸಿದ್ಧಪಡಿಸಲು ಅಗತ್ಯವಾದ ಬೀಜ, ದಾರ ಹಾಗೂ ರಂಧ್ರ ಕೊರೆಯುವ ಯಂತ್ರವನ್ನು ಪೂರೈಸಿ, ಬೀಜವನ್ನು ದಾರಕ್ಕೆ ಪೋಣಿಸಿ ಸುಂದರವಾಗಿಸಿದ ಒಂದು ರಾಖಿಗೆ ಕೃಷಿಕಲಾದಿಂದ ₹ 15 ನೀಡಲಾಗುತ್ತಿದೆ. ಇದರಿಂದ ಹಳ್ಳಿಮನೆಯ ಮಹಿಳೆಯರಿಗೆ ಕೈಗೊಂದು ಕೆಲಸ ಸಿಕ್ಕಿ, ಸ್ವಾವಲಂಬನೆಗೆ ದಾರಿಯಾಗಿದೆ. ‘ಒಂದು ರಾಖಿಗೆ 6ರಿಂದ 10 ಬೀಜಗಳನ್ನು ಬಳಸಲಾಗುತ್ತಿದೆ. ಜೊತೆಗೆ ಮಣಿಗಳನ್ನೂ ಸೇರಿಸಿ ಸುಂದರಗೊಳಿಸಲಾಗುತ್ತದೆ. ಈ ವರ್ಷ ಈವರೆಗೆ 500 ರಾಖಿಗಳನ್ನು ಸಿದ್ಧಪಡಿಸಿರುವೆ’ ಎಂದು ಖುಷಿಯಿಂದ ಹೇಳುತ್ತಾರೆ ನೀರಲಗಿಯ ರೇಖಾ.
ಕೌಶಲ ಪ್ರದರ್ಶನಕ್ಕೂ ಇಲ್ಲಿ ಬಹಳಷ್ಟು ಅವಕಾಶವಿದೆ. ಹೀಗೆ ಬೀಜದ ರಾಖಿಯು ಬಾಂಧವ್ಯ ಬೆಸುಗೆಯ ಬೀಜ ಕುಡಿಯೊಡೆಯಲು ಸಹ ನೆರವಾಗಿದೆ.
‘ಕೃಷಿಕಲಾ’ ಸಿದ್ಧಪಡಿಸಿರುವ ಬೀಜದ ರಾಖಿ
‘ಕೃಷಿಕಲಾ’ ಸಿದ್ಧಪಡಿಸಿರುವ ಬೀಜದ ರಾಖಿ
‘ಕೃಷಿಕಲಾ’ ಸಿದ್ಧಪಡಿಸಿರುವ ಬೀಜದ ರಾಖಿ
‘ಕೃಷಿಕಲಾ’ ಸಿದ್ಧಪಡಿಸಿರುವ ಬೀಜದ ರಾಖಿ
‘ಕೃಷಿಕಲಾ’ ಸಿದ್ಧಪಡಿಸಿರುವ ಬೀಜದ ರಾಖಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.