ADVERTISEMENT

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

ಎಸ್.ರಶ್ಮಿ
Published 10 ಮೇ 2025, 23:30 IST
Last Updated 10 ಮೇ 2025, 23:30 IST
<div class="paragraphs"><p>ಬೆಳಗಾವಿ ನಗರದ ವಡಗಾವಿಯ ಕೋರಿ ಗಲ್ಲಿಯ ಸ್ವಾವಲಂಬಿ ಮಹಿಳೆ ಮೀನಾಕ್ಷಿ ಸದಾನಂದ ಮಿಶ್ರಿಕೋಟಿ ಅವರ ಜತೆಗೆ ಕೆಲಸ ಮಾಡುವ ವನಿತೆಯರು ಬಿಸಿಬಿಸಿ ಹೋಳಿಗೆ ಸಿದ್ಧಪಡಿಸಿದ್ದು ಹೀಗೆ</p><p></p></div>

ಬೆಳಗಾವಿ ನಗರದ ವಡಗಾವಿಯ ಕೋರಿ ಗಲ್ಲಿಯ ಸ್ವಾವಲಂಬಿ ಮಹಿಳೆ ಮೀನಾಕ್ಷಿ ಸದಾನಂದ ಮಿಶ್ರಿಕೋಟಿ ಅವರ ಜತೆಗೆ ಕೆಲಸ ಮಾಡುವ ವನಿತೆಯರು ಬಿಸಿಬಿಸಿ ಹೋಳಿಗೆ ಸಿದ್ಧಪಡಿಸಿದ್ದು ಹೀಗೆ

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ADVERTISEMENT

‘ಜನುಮ, ಇಷ್ಟೇ ಅಂತನಿಸಿದಾಗ ಏನರೆ ಮಾಡ್ಕೊಂಡಿದ್ರ ಗೋಡೆ ಮೇಲಿನ ಫೋಟೊದಾಗಿರ್ತಿದ್ದೆ. ಆದ್ರ ಜನುಮ ಅದ ಅಂದ್ರ, ಏನರೆ ಮಾಡಾಕ ಇರಬೇಕು ಅಂತ ಅಪ್ಪಾರು ಹೇಳಿದ್ರು. ಗಟ್ಟಿಯಾದೆ. ನಾಕು ಮಂದಿ ಬಾಯಾಗ ಮೀನಾಕ್ಷಿ ಮಿಶ್ರಿಕೋಟಿ ಅಂದ್ರ ಅನ್ನಪೂರ್ಣ ಅನ್ನೂಹಂಗ ಆಗೇದ’.

ಬೆಳಗಾವಿಯ ಮೀನಾಕ್ಷಿ ಮಿಶ್ರಿಕೋಟಿ ತಮ್ಮ ಬದುಕನ್ನು ಎರಡು ಸಾಲಿನಲ್ಲಿ ಹೇಳಿದ್ದು ಹೀಗೆ.

ಇವರೊಡನೆ ಕೈ ಜೋಡಿಸಿದ ಸುಶೀಲಾ ರಾಜಶೇಖರ ಗೋಣಿ ಅವರೀಗ 65–70ರ ಆಸುಪಾಸಿನಲ್ಲಿರುವವರು. ‘ನಾ ಬಂದಾಗ ನಲ್ವತ್ತು ರೂಪಾಯಿ ಕೂಲಿ ಸಿಗ್ತಿತ್ತು. ಈಗ ಅಡುಗೆ ಇದ್ರ ₹450. ಇರಲಿಕ್ರ ₹250 ಅಂತೂ ಖಾತ್ರಿರಿ. ಇವರ ಕೂಡ ದುಡಕೊಂತ ಇಬ್ರು ಹೆಣ್ಮಕ್ಕಳಿಗೆ ಮದಿವಿ ಮಾಡಿದೆ. ಮೂರು ಗಂಡುಮಕ್ಕಳು ನೆಲಿನಿಂತ್ರು. ಮನ್ಯಾಗ ಮಗ್ಗ ಅದ. ಜೀವನ ಸರಳ ಆಗೇದ.’

‘ಮದಿವಿಯಾದ ವರ್ಷಕ್ಕ ಗಂಡ ಸತ್ತುಹೋದ್ರು. ಬಡತನ ಸ್ಥಿತಿಯೊಳಗಿದ್ವಿ. ಕೈಕಟ್ಕೊಂಡು ಕುಂತ್ರ ಕೂಳಿಗೆ ಮೂಲ ಆದಂಗ ಆಗ್ತಿತ್ತು. ನಮ್ಮತ್ತಿಗೆ ನೋಡ್ಕೊಂಡು ನಾನೂ ಅಗ್ದಿ ಮರ್ಯಾದಿಲೆ ಬದುಕೂಹಂಗಾಯ್ತು. ನಮ್ಮತ್ತಿ ಸೇವಾ ಮಾಡಿದೆ. ಯಾವುದಕ್ಕೂ ಕಡಿಮಿ ಆಗದ್ಹಂಗ ನೋಡ್ಕೊಂಡೆ. ನೀನೆ ನನ್ಮಗ ಆದಿ ತಾಯಿ ಅಂದಾಗ ನನಗೂ ಕಣ್ಣೀರು ಬಂದಿದ್ವು ನೋಡ್ರಿ. ಮರ್ಯಾದಿಯಿಂದ ಬದುಕೂದು ಮೀನಕ್ಕನ ಕೂಡ ಬಂದಿದ್ದಕ್ಕ ಸಾಧ್ಯ ಆಯ್ತು’– ಹೀಗೆ ಹೇಳುತ್ತಾರೆ ಲಕ್ಷ್ಮಿ ನಾಗಪ್ಪ.

ಕಸ್ತೂರಿ ಮಲ್ಲಿಕಾರ್ಜುನ್ ಹಿರೇಮಠ, ಗೀತಾ ಜವಳೆ.. ಹೀಗೆ ಇನ್ನೂ ಹತ್ತು ಹದಿನೈದು ಜನರು ಇವರೊಟ್ಟಿಗೆ ಕೈಜೋಡಿದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಕಷ್ಟದ ಕತೆ. ಇಷ್ಟದ ಕೆಲಸ, ಹಸನಾದ ಜೀವನ. 

ಇದಕ್ಕೆ ಕಾರಣ ಆಗಿದ್ದು ಮೀನಾಕ್ಷಿ ಕೇಟರ್ಸ್‌ನ ಮೀನಾಕ್ಷಿ ಸದಾನಂದ ಮಿಶ್ರಿಕೋಟಿ ಅವರು. ರೊಟ್ಟಿ ತಟ್ಟುತ್ತ, ತಮ್ಮೊಡನೆ ಇದ್ದವರ ಬದುಕು ಹಸನು ಮಾಡಿದವರ ಕತೆ ಇದು.

ಮದುವೆಯಾದ ಒಂದು ವರ್ಷಕ್ಕೇ ಪತಿ ಆತ್ಮಹತ್ಯೆ ಮಾಡಿಕೊಂಡರು. ಒಡಲೊಳಗಿದ್ದ ಮಗುವೊಂದು ಜಾರಿಹೋದ ಹೊತ್ತದು. ಬದುಕು ಬೇಡವೆನಿಸಿದ ಕ್ಷಣವದು.  ಮದುವೆಗೆ ಮೊದಲು ತವರು ಮನೆಯಲ್ಲಿದ್ದಾಗ ಹಪ್ಪಳ, ಉಪ್ಪಿನಕಾಯಿ ಮಾರಾಟ ಮಾಡಿದ ಅನುಭವ ಇತ್ತು. ಅಪ್ಪ ಸಂಗಪ್ಪ ಬಾಳಪ್ಪ ಅಂಗಡಿ ಅಮ್ಮ ಸುಶೀಲಾ ಸಂಗಪ್ಪ ಅಂಗಡಿ ಬೆಂಬಲಕ್ಕೆ ನಿಂತರು. ಮೀನಾಕ್ಷಿ ಮತ್ತೆ ಸ್ವಾವಲಂಬಿ ಬದುಕಿಗೆ ಅಡಿ ಇಟ್ಟರು. ಮೊದಲಿಗೆ ಬಂಡವಾಳ ಇರಲಿಲ್ಲ. ರೊಟ್ಟಿ, ಚಪಾತಿ, ಬೇಕೆಂದವರ ಬಳಿಯೇ ಹಣ ಪಡೆದು, ಮಾಡಿ ಕೊಡುತ್ತಿದ್ದರು. ಸಣ್ಣ ಪುಟ್ಟ ಲಾಭ ಇರುತ್ತಿತ್ತು. ಶ್ರಮಕ್ಕೆ ತಕ್ಕ ಲಾಭವಲ್ಲ. ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಜವಾರಿ ಊಟ ಸರಬರಾಜು ಮಾಡುವ ಪ್ರಯತ್ನ ಆರಂಭಿಸಿದಾಗ ಕೈಕೊಟ್ಟ ಸಮಯವೂ ಕೈ ಹಿಡಿದು ನಡೆಸತೊಡಗಿತು.

ಬಹುತೇಕರಿಗೆ ಕಾಳು, ಝುಣಕಾ, ಸೊಪ್ಪಿನ ಪಲ್ಯ, ಇವರು ಕೊಡುವ ಎಳೆ ಸೌತೆಕಾಯಿ, ಗಜ್ಜರಿ ಮತ್ತು ಬಿಸಿ ರೊಟ್ಟಿಯೂಟ ಆರೋಗ್ಯವನ್ನು ಗಟ್ಟಿಗೊಳಿಸಿತು. ಬಾಯಿಂದ ಬಾಯಿಗೆ ರುಚಿಕರ ಅಡುಗೆಯ ಕುರಿತ ಮೆಚ್ಚುಗೆಯ ಮಾತು ಹರಡಿದಂತೆಲ್ಲ ಮೀನಾಕ್ಷಿ ಅವರ ಆತ್ಮಬಲ ದೃಢವಾಗುತ್ತ ಹೋಯಿತು. ಸರ್ಕಾರಿ ಕಚೇರಿಯ ಔತಣಗಳು ಬರತೊಡಗಿದವು. ಮನೆಯಲ್ಲಿ ಸಹೋದರ ಮತ್ತು ತಂದೆ ಇವರ ಬೆನ್ನಿಗೆ ನಿಂತರು. ಸಂತೆ ಮಾಡುವುದು, ಗುಣಮಟ್ಟದ ಸರಕು ಒದಗಿಸುವುದು ಅವರ ಜವಾಬ್ದಾರಿ ಆಯಿತು. ಅಮ್ಮ ಸಾಂಪ್ರದಾಯಿಕ ಅಡುಗೆಗಳನ್ನೆಲ್ಲ ಕಲಿಸಿಕೊಟ್ಟರು. ಅತ್ತಿಗೆಯರಾದ ವೀಣಾ ಮಲ್ಲಿಕಾರ್ಜುನ್‌ ಅಂಗಡಿ ಮತ್ತು ಪ್ರಿಯಾ ಮಹೇಶ ಅಂಗಡಿ ಇಬ್ಬರೂ ಮೇಲ್ವಿಚಾರಣೆಗೆ ಜೊತೆಯಾದರು. ಅಣ್ಣ ಮಲ್ಲಿಕಾರ್ಜುನ್ ದೈವಾಧೀನರಾದರು.ಅವರ ಮಕ್ಕಳನ್ನು ಓದಿಸಿ ತಮ್ಮ ಕಾಲಮೇಲೆ ನಿಲ್ಲಿಸಿದ್ದೂ ಇದೇ ವ್ಯಾಪಾರ.  

ಕೆಲಸ ಬೆಳೆದಂತೆಲ್ಲ ಸಹಾಯದ ಕೈಗಳು ಬೇಕೆನಿಸಿದವು. ವೈಧವ್ಯ ಅನುಭವಿಸಿ, ವೈರಾಗ್ಯ ತಳೆದು, ಬದುಕು ಬೇಡವೆಂದಿದ್ದ ಮೀನಾಕ್ಷಿಗೆ ಆ ನೋವಿನ ಅರಿವಿತ್ತು. ಅಂಥವರಿಗೇ ಸಹಾಯ ಮಾಡಬಾರದೇಕೆ ಅನಿಸಿದ್ದೇ ದುರ್ಬಲ ಮಹಿಳೆಯರನ್ನು ಒಟ್ಟುಗೂಡಿಸಿದರು. ವಿಧವೆಯರು, ಗಂಡ ಬಿಟ್ಟವರು ಇವರೊಟ್ಟಿಗೆ ಕೈ ಜೋಡಿಸಿದರು. ಬೆಳಗಾವಿಯ ಗ್ರಾಮೀಣ ವಿಭಾಗದಲ್ಲಿ ಈಗಲೂ ಮನೆಯಿಂದಾಚೆ ಬಾರದ ಮಹಿಳೆಯರಿದ್ದಾರೆ. ಅವರ ಬಳಿ ಹೋಗಿ ಹಿಟ್ಟು ಕೊಟ್ಟು ಬಂದು, ಸೌತಿ ಬೀಜ, ಪರಡಿ, ಶ್ಯಾವಿಗೆಗಳನ್ನು ಮಾಡಿಕೊಡಲು ಕೇಳಿದರು. ಅವರಿಗೂ ಸೀಮಿತ ಚೌಕಟ್ಟಿನಲ್ಲಿ ಆದಾಯ ಒದಗಿಸುವ ಕೆಲಸ ನೀಡಿದರು.

ಇನ್ನೂ ಕೆಲವಷ್ಟು ಜನರು ಬಾಳಕದ ಮೆಣಸಿನಕಾಯಿ, ಬಗೆಬಗೆಯ ಹಪ್ಪಳ ಮಾಡಿಕೊಡಲಾರಂಭಿಸಿದರು. ಮೀನಾಕ್ಷಿ ಅವರ ಮಾರುಕಟ್ಟೆ ವಿಸ್ತರಿಸತೊಡಗಿತ್ತು. ಒಮ್ಮೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಅವರಿಗೆ ಊಟ ಬಡಿಸಿದಾಗ, ರುಚಿಕಟ್ಟಾದ ಊಟ ಮಾಡಿ, ಇವರ ವ್ಯವಸ್ಥೆಯನ್ನೆಲ್ಲ ವಿಚಾರಿಸಿಕೊಂಡಿದ್ದರು. ಡ್ವಾಕ್ರಾ ಯೋಜನೆ ಅಡಿ ಇವರಿಗೆ ಕೈಗಾರಿಕಾ ಪ್ರದೇಶದಲ್ಲಿ ನಿವೇಶನವನ್ನು ರಿಯಾಯ್ತಿ ದರದಲ್ಲಿ ಒದಗಿಸಿಕೊಡುವ ವ್ಯವಸ್ಥೆ ಮಾಡಿದರು. ಇದೀಗ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಚಕ್ಕಲಿ, ಕೋಡುಬಳೆ, ಅವಲಕ್ಕಿ, ಚುರುಮುರಿ, ಭಡಂಗ್‌ ಮುಂತಾದ ಕುರುಕಲು ತಿಂಡಿಗಳನ್ನು ತಯಾರಿಸುತ್ತಾರೆ. 

‘ಬದುಕು ಬೇಡವೆನಿಸಿದ ಗಳಿಗೆಯಲ್ಲಿ ಒಂದಡಿ ಮುಂದಡಿ ಇಟ್ಟಿದ್ದರೆ ಸಾವಿತ್ತು. ಒಂದಡಿ ಹಿಂದಿಟ್ಟರೆ ನೋವಿತ್ತು. ಆದರೆ ಬದುಕಿನಲ್ಲಿ ಅಚಲವಾಗಿ ನಿಲ್ಲಲು ಅಪ್ಪ, ಅಮ್ಮ, ಅಣ್ಣಂದಿರು, ಅಕ್ಕಂದಿರು ಸಹಾಯ ಮಾಡಿದರು. ಜೊತೆಗೆ ನಿಂತರು. ಅವರ ಮಕ್ಕಳನ್ನೇ ನನ್ನ ಮಕ್ಕಳೆಂದುಕೊಂಡು, ಶಿಕ್ಷಣ ಕೊಡಿಸಿದೆ. ನನಗೆ ಮಾತನಾಡಲು ಆಗುವುದಿಲ್ಲ. ಈಗಲೂ ನೇಣಿಗೆ ಶರಣಾದ ನನ್ನ ಗಂಡನ ಮುಖವೇ ಕಣ್ಮುಂದೆ ಬರುತ್ತದೆ. ಮತ್ತೆ ನನ್ನಂಥ ಅಬಲೆಯರಿಗೆ ಸಹಾಯ ಮಾಡುವ ಉಮ್ಮೇದೂ ಮೂಡುತ್ತದೆ. ನಮ್ಮ ನೋವು, ನಮಗೆ ದೊಡ್ಡದಾಗಿರಬಹುದು. ಇನ್ನೊಬ್ಬರಿಗೆ ಆ ನೋವು ನಲಿವಾಗಿ ಬದಲಿಸುವ ಶಕ್ತಿ ನಮಗೇ ಇರುತ್ತದೆ‘ ಎನ್ನುತ್ತಲೇ ತಮ್ಮ ಕಣ್ಣ ಪಸೆ ಒರೆಯಿಸಿಕೊಂಡರು. 

‘ನನ್ನ ಬಳಿ ಕೆಲಸಕ್ಕೆ ಇರುವವರೆಲ್ಲ ದಶಕದಿಂದಲೂ ಜೊತೆಗಾರ್ತಿಯರಾಗಿದ್ದಾರೆ. ಒಮ್ಮೆ ರೊಟ್ಟಿ ಬಡಿಯಲು ಕುಳಿತರೆ ಎಲ್ಲರೂ ಸೇರಿ ಐದು ಸಾವಿರ ರೊಟ್ಟಿ ಬಡೆಯುತ್ತೇವೆ. ನಮ್ಮ ಧೀಃಶಕ್ತಿಗೆ ಮನೋಸ್ಥೈರ್ಯವೇ ಕಾರಣ. ಜಿಲ್ಲಾಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ನಮ್ಮ ಬೆಂಬಲಕ್ಕೆ ನಿಂತಿದೆ. ಸರ್ಕಾರದ ಯೋಜನೆಗಳನ್ನು ತಿಳಿಸಿ ಹೇಳುತ್ತಾರೆ. ಅವುಗಳ ಲಾಭ ಪಡೆದಿದ್ದೇವೆ. ಮುನ್ನಡೆಯುತ್ತಿದ್ದೇವೆ. ನಮ್ಮೆಲ್ಲರದ್ದೂ ಒಂದೇ ಮನಸು. ಒಂದೇ ಕನಸು, ಯಾವ ವಿಧವೆಯೂ ಆತ್ಮಗೌರವ ಇಲ್ಲದಂತಿರಬಾರದು’

‘ಮಾತಾಡೋರು ನೂರು ಮಾತಾಡ್ತಾರೆ. ಗಂಡ ಸತ್ತರೂ ಇವಳು ಮೆರೆಯೋದು ಬಿಡಲಿಲ್ಲ ಎಂದೆಲ್ಲ ಜರೆದರು. ಜರೆದವರು ಯಾರೂ ನನ್ನ ಕಣ್ಣೀರು ಒರೆಯಿಸಿದವರಲ್ಲ. ಮಾತಾಡುವಷ್ಟು ವಿರಾಮದ ಸಮಯ ಇದ್ದೋರು ಅವರೆಲ್ಲ. ನಾನು ನನ್ನ ಕಣ್ಣೀರು ಒರೆಯಿಸಿಕೊಂಡು, ಇನ್ನೊಬ್ಬರ ಕಣ್ಣೀರು ಒರೆಸಲೆಂದೇ ಈ ಜನುಮ ಉಳಿದಿರೋದು ಎಂದು ನಂಬಿದಾಕೆ. ಎಲ್ಲಕ್ಕೂ ಬೆನ್ನು ಹಾಕಿ ಮುನ್ನಡೆದೆ’

ಹೀಗೆ ಆತ್ಮಸ್ಥೈರ್ಯದ ಮತ್ತು ಆತ್ಮಗೌರವದ ಮಾತಾಡುವ ಮೀನಾಕ್ಷಿ ಸದಾ ಹಾಡು ಕೇಳುತ್ತ, ಹಾಡು ಗುನುಗುತ್ತ ರೊಟ್ಟಿ ಬಡಿಯುತ್ತಾರೆ. ಚಪಾತಿ ಒತ್ತುತ್ತಾರೆ. ಉತ್ತರ ಕರ್ನಾಟಕದ ವಿಶೇಷ ತಿನಿಸಾದ ಜೋಳದ ವಡಿಯನ್ನು ಪ್ರೀತಿಯಿಂದ ಮಾಡಿ, ಗಟ್ಟಿಮೊಸರು, ಚಟ್ನಿಯೊಡನೆ ಉಣಬಡಿಸುತ್ತಾರೆ. ದೂರದ ಗಂಗಾವತಿ, ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬೆಂಗಳೂರಿಗೂ ಬಂದು ಊಟದ ವ್ಯವಸ್ಥೆ ಮಾಡಿಕೊಡುವ ಮೀನಾಕ್ಷಿ ಅವರಿಗೆ ಮರೆಯದ ನೆನಪೆಂದರೆ ಅಣ್ಣಾ ಹಜಾರೆ ಅವರು ಉಂಡು, ಒಂದಗುಳನ್ನೂ ಬಿಡದೆಯೇ ಟ್ಟೆ ತೊಳೆದು, ಆ ನೀರನ್ನು ಸೇವಿಸಿ, ಮೀನಾಕ್ಷಿ ಅವರಿಗೆ ವಂದಿಸಿದ್ದು. 

ಅನ್ನಪೂರ್ಣೆಯ ಅನುಗ್ರಹವಿದೆ. ಅನ್ನದೇವರ ಮುಂದೆ ನಾವೆಲ್ಲರೂ ಭಕ್ತರು ಎಂಬ ವಿನೀತ ಭಾವ ಇರುವುದರಿಂದಲೇ 2000–5000 ಜನರಿಗೆ ಊಟದ ವ್ಯವಸ್ಥೆ ಮಾಡುವುದೂ ಸಲೀಸಾಗಿದೆ ಎನ್ನುವ ಮೀನಾಕ್ಷಿ ಮಿಶ್ರಿಕೋಟಿ ಅವರ ಬಳಿ, ಮಿಶ್ರಿ ಸವಿಯ ಕೋಟಿಕೋಟಿ ಕತೆಗಳಿವೆ.

ಮೀನಾಕ್ಷಿ ಮಳಿಗೆಯಲ್ಲಿ ಊಟದ ವೈವಿಧ್ಯ

ಇಂದು ರಾಜ್ಯದಾದ್ಯಂತ ಮೀನಾಕ್ಷಿ ಕೇಟರರ್ಸ್‌ ಹೆಸರು ಮಾಡಿದೆ. ವಿದೇಶಕ್ಕೂ ಇವರು ತಯಾರಿಸಿದ ಉಪ್ಪಿನಕಾಯಿ, ಹೋಳಿಗೆ ಹಾಗೂ ವೈವಿಧ್ಯಮಯ ಉಂಡೆಗಳು ತಲುಪಿವೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪೊಲೀಸ್‌ ಇಲಾಖೆಗೆ ಮೂರು ಹೊತ್ತೂ ಬಿಸಿಬಿಸಿ ಊಟ ತಲುಪಿಸುವ ಜವಾಬ್ದಾರಿ ಇವರದ್ದೇನೆ. 

ಬಿಳಿಜೋಳ, ಸಜ್ಜೆ, ಮೆಕ್ಕೆಜೋಳ, ರಾಗಿ ರೊಟ್ಟಿ, ಹೂರಣದ ಹೋಳಿಗೆ, ಸೇಂಗಾ, ಕಾಯಿ, ಖರ್ಜೂರ ಹಾಗೂ ಸಜ್ಜಿಗೆಯ ಹೋಳಿಗೆ, ಸೀಸನ್‌ ಇದ್ದಾಗ ಗೆಣಸಿನ ಹೋಳಿಗೆಯನ್ನೂ ಸಿದ್ಧ ಪಡಿಸಿಕೊಡುತ್ತಾರೆ. ಗೋದಿ, ಬೇಸನ್‌, ರವೆ, ಹೆಸರು, ಅಂಟಿನುಂಡೆ, ಡಿಂಕಿನುಂಡೆ ಆರೋಗ್ಯಕರ ಉಂಡೆಗಳು, ಶುದ್ಧ ತುಪ್ಪದಲ್ಲಿ ತಯಾರಿಸುವುದರಿಂದ ನಾಲ್ಕೈದು ತಿಂಗಳೂ ಕೆಡುವುದಿಲ್ಲವಂತೆ. ಇವರ ಬಳಿ ಮಾಡಿದ್ದೆಲ್ಲವೂ ಎರಡೇ ದಿನಗಳಲ್ಲಿ ಖರ್ಚಾಗುತ್ತವೆ. ಪ್ರತಿ ಎರಡು ದಿನಗಳಿಗೆ ಒಮ್ಮೆ ಉಂಡೆಯನ್ನು ಮಾಡಿಕೊಡುತ್ತಾರೆ.

ಬಳ್ಳೊಳ್ಳಿ, ಅಗಸಿ, ಗುರೆಳ್ಳು, ಸೇಂಗಾ, ಮಸಾಲಿಖಾರ, ಮೆಂತ್ಯ ಹಿಟ್ಟು, ಹುಣಸಿತೊಕ್ಕು, ಹುಣಸಿಚಿಗಳಿ, ಡ್ರೈಫ್ರೂಟ್‌ ಉಪ್ಪಿನಕಾಯಿ, ಸಿಹಿ ಉಪ್ಪಿನಕಾಯಿ, ನಿಂಬೆ, ಮಾವು, ಮಿಕ್ಸ್‌ ಉಪ್ಪಿನಕಾಯಿಗಳನ್ನೆಲ್ಲ ಮಾಡುತ್ತಾರೆ. ಫ್ಯಾಕ್ಟರಿಯಲ್ಲಿ ಸದಾ ಕೆಲಸ ಸಾಗುತ್ತಿರುತ್ತದೆ. ಸೀಮಂತಕ್ಕೆ, ಮದುವೆಯ ಸುರಗಿ ನೀಡಲು ಇವರ ಬಳಿ ವೈವಿಧ್ಯಮಯ ತಿಂಡಿಗಳನ್ನು ಮಾಡಿಸಿಕೊಂಡು ಹೋಗುತ್ತಾರೆ.

 ಸಾಂಪ್ರದಾಯಿಕವಾಗಿ ಮಾಡುವ ಸೌತಿಬೀಜ, ಪರಡಿ, ಜೋಳದ ವಡಿ ಮಾದ್ಲಿ, ಕರಚಿಕಾಯಿಗಳನ್ನು ಮಾರಾಟ ಮಾಡುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.