ಹುಬ್ಬಳ್ಳಿಯ ಉಣಕಲ್ ಪ್ರದೇಶಕ್ಕೆ ಉಣಕಲ್ ಎಂಬ ಹೆಸರು ಬರಲು ಕಾರಣವೇನು?
‘ಬಾದಾಮಿಯ ಚಾಲುಕ್ಯರು ಈ ಪ್ರದೇಶದಲ್ಲಿ 12ನೇ ಶತಮಾನದಲ್ಲಿ ಚಂದ್ರಮೌಳೇಶ್ವರ ದೇವಸ್ಥಾನ ಕಟ್ಟಿಸಿದರು. ದೊರೆ ನರಸಿಂಹ ರಾಜನ ಕಾಲದಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸ್ಮಾರಕಗಳ ಸಾಲಿಗೆ ಸೇರುವ ಈ ದೇವಾಲಯದ ರೂವಾರಿ ಜಕ್ಕಣಾಚಾರಿ. ಸಂಪೂರ್ಣಕಲ್ಲಿನ ಈ ದೇವಸ್ಥಾನದ ನಿರ್ಮಾಣ ಕಾರ್ಯ ನಡೆದದ್ದು ಒಂದೇ ರಾತ್ರಿಯಲ್ಲಿ.
‘ದೇವಾಲಯ ನಿರ್ಮಾಣದ ಬಹುತೇಕ ಕಾರ್ಯಗಳು ಪೂರ್ಣಗೊಂಡು, ಗೋಪುರ ನಿರ್ಮಾಣ ಮಾತ್ರ ಬಾಕಿ ಉಳಿದಿದೆ. ಆ ಹೊತ್ತಿಗೆ ನಿರ್ಮಾಣ ಕಾರ್ಯದಲ್ಲಿ ತೊಡಗಿದವರಿಗಾಗಿ ಊಟ ಸಿದ್ಧವಾಗಿದೆ.ಇನ್ನೇನು ಊಟ ಮಾಡಬೇಕು ಎಂದು ಕೂತಾಗ ಕೋಳಿ ಕೂಗಿದ ಅನುಭವವಾಗಿದೆ. ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಬೆಳಗಾಯಿತು, ಒಂದೇ ರಾತ್ರಿಯಲ್ಲಿ ದೇವಾಲಯ ನಿರ್ಮಿಸುವ ಕಾರ್ಯ ಫಲಿಸಲಿಲ್ಲ ಎಂಬ ಬೇಸರದಲ್ಲಿ ಎಲ್ಲರೂ ‘ಉಣ್ಣಲೇ ಉಣಕಲ್ಲ’ ಎಂದು ಊಟ ಮಾಡದೇ ಹೊರಟುಹೋದರು. ಹೀಗಾಗಿ ಈ ಪ್ರದೇಶಕ್ಕೆ ಉಣಕಲ್ ಹೆಸರು ಬಂತು...
ಇದು ಉಣಕಲ್ ಎಂಬ ಹೆಸರು ಬರಲು ಕಾರಣವಾದ ಚಂದ್ರಮೌಳೇಶ್ವರ ದೇವಸ್ಥಾನ ನಿರ್ಮಾಣದ ಬಗೆಗೆ ಇರುವ ಕಥೆಯನ್ನು ದೇವಾಲಯದ ಅರ್ಚಕ ಈಶ್ವರ ಹೂಗಾರ ನೆನಪಿಸಿಕೊಳ್ಳುವ ಪರಿ.‘ಕೋಳಿಯ ಹಾಗೆ ಕೂಗಿದ್ದು ಒಬ್ಬ ಅಜ್ಜಿ’ಎಂದು ತಮ್ಮ ಹಿರಿಯರು ಹೇಳಿದ ಮಾತುಗಳನ್ನೂ ಅವರು ನೆನೆಯುತ್ತಾರೆ.
ನಾಲ್ಕೂ ದಿಕ್ಕಿನಲ್ಲಿ ಪ್ರವೇಶ ದ್ವಾರ
ಪೂರ್ವಾಭಿಮುಖವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ. ಆದರೆ ನಾಲ್ಕೂ ದಿಕ್ಕುಗಳಲ್ಲೂ ಪ್ರವೇಶ ದ್ವಾರಗಳಿರುವುದು ವಿಶೇಷ. ಗರ್ಭಗುಡಿ ತಲುಪಲು ಮೂರುಬಾಗಿಲುಳನ್ನು ದಾಟಬೇಕು. ಅದೇ ರೀತಿ ನಾಲ್ಕು ದಿಕ್ಕುಗಳಲ್ಲೂ ತಲಾ ಮೂರು ಬಾಗಿಲುಗಳಂತೆ ಒಟ್ಟು 12 ಬಾಗಿಲುಗಳು ಇವೆ. ಸದ್ಯ ಪೂರ್ವ ದಿಕ್ಕಿನ ಬಾಗಿಲಿನಿಂದ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.ಪ್ರವೇಶ ದ್ವಾರದ ಕಡೆಯಲ್ಲಿ ಎರಡು ನಂದಿ ಮೂರ್ತಿಗಳನ್ನು ಇಡಲಾಗಿದೆ.
ಪೂರ್ವಾಭಿಮುಖವಾಗಿಇರುವ ಬಾಗಿಲಿನ ಮೇಲ್ಭಾಗದಲ್ಲಿ ಅರ್ಧ ಗೋಳಾಕೃತಿಯ ಮೂರು ಕಿಂಡಿಗಳನ್ನು ಬಿಡಲಾಗಿದೆ. ಈ ಪೈಕಿ ಮಧ್ಯದ ಕಿಂಡಿಯಿಂದ ಯುಗಾದಿ ಪಾಡ್ಯದಂದು ಬೆಳ್ಳಂಬೆಳಿಗ್ಗೆ ಸೂರ್ಯನ ಕಿರಣ ಹಾದು, ಗರ್ಭಗುಡಿಯಲ್ಲಿರುವ ಶಿವಲಿಂಗದ ಮುಖಭಾಗಕ್ಕೆ ಬೀಳುತ್ತದೆ.
ಪಶ್ಚಿಮಾಭಿಮುಖವಾಗಿ ಇರುವ ಮೊದಲ ಬಾಗಿಲು ದಾಟಿದ ತಕ್ಷಣ ಮತ್ತೊಂದು ಶಿವಲಿಂದ ಇದೆ. ಇದು ಚತುರ್ಮುಖ, ಉದ್ಭವ ಮೂರ್ತಿ ಎಂದು ಹೇಳಲಾಗುತ್ತದೆ.
ದೇವಾಲಯಕ್ಕೆ ನಾಲ್ಕೂ ಕಡೆಯಿಂದ ಪ್ರವೇಶ ದ್ವಾರಗಳು, 12 ಬಾಗಿಲುಗಳು ಮತ್ತು ಎರಡು ಶಿವಲಿಂಗ, ಎರಡು ನಂದಿ ವಿಗ್ರಹಗಳು ಕಾಣಸಿಗುವುದು ವಿರಳ.
ಬಾಗಿಲುಗಳ ಅಂಚುಗಳಲ್ಲಿ ವಿವಿಧ ದೇವರುಗಳ ಚಿತ್ರ ಕೆತ್ತಲಾಗಿದೆ. ಸಂಗೀತ ವಾದ್ಯಗಳನ್ನು ನುಡಿಸುತ್ತ ನರ್ತಿಸುವ ದೇವತೆಯರನ್ನು ಬಳ್ಳಿಯಾಕಾರದಲ್ಲಿ ಕೆತ್ತಲಾಗಿದೆ. ಕಟ್ಟಿಗೆಯ ಮೇಲೆ ಕಾಣಬಹುದಾದ ಸೂಕ್ಷ್ಮ ಕೆತ್ತನೆಯ ಕೌಶಲ ಕಲ್ಲಿನ ಮೇಲೆ ಮೂಡಿಬಂದಿದೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶವಿದೆ. ಪ್ರತಿ ಸೋಮವಾರ ವಿಶೇಷ ಪೂಜೆ ಮಾಡಲಾಗುತ್ತದೆ. ದೀಪಾವಳಿ ಮತ್ತು ಮಹಾನವಮಿಯಂದು ಇಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಶಿವರಾತ್ರಿಯಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಲಿಂಗದ ಮೇಲೆ ಸದಾ ನೀರು ತೊಟ್ಟಿಕ್ಕುವಂತೆ ವ್ಯವಸ್ಥೆ ಮಾಡಲಾಗಿದೆ.
ಪುರಾತತ್ವ ಇಲಾಖೆ ವಹಿಸಿಕೊಂಡ ನಂತರ...
ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದಿರುವ ಪುರಾತತ್ವ ಸರ್ವೇಕ್ಷಣ ಇಲಾಖೆ, ಇದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಿದೆ.ದೇವಸ್ಥಾದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ದೇವಸ್ಥಾನದ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಆವರಣವನ್ನು ಸ್ವಚ್ಛವಾಗಿಡಲು ಸ್ಥಳೀಯರೊಬ್ಬರನ್ನು ನೇಮಿಸಲಾಗಿದೆ. ಅಲ್ಲದೆ, ಉಸ್ತುವಾರಿಗೆ ಅಧಿಕಾರಿಯೊಬ್ಬರನ್ನು ನೇಮಿಸಿದೆ.
‘ದೇವಸ್ಥಾನದ ಒಳಗಡೆ ಕೆಲವು ವರ್ಷಗಳ ಹಿಂದೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲದಿದ್ದರೆ ಒಳಗೆ ಆವರಿಸುವ ಕತ್ತಲೆಯ ಕಾರಣ ನಮಗೂ ಒಳಗೆ ಹೋಗಲು ಭಯವಾಗುವಂತಿತ್ತು’ ಎನ್ನುತ್ತಾರೆ ಇಲ್ಲಿ ಸುಮಾರು 35 ವರ್ಷಗಳಿಂದ ಪೂಜೆ ಮಾಡುತ್ತಿರುವ ಶಿವಾನಂದ ಹೂಗಾರ.
‘ದೇವಸ್ಥಾನ ನಿರ್ಮಾಣ ಆದಾಗಿನಿಂದಲೂ ನಮ್ಮ ಮನೆತನದವರೇ ನಿತ್ಯ ಪೂಜೆ ನಡೆಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಟಿ.ವಿ, ಪತ್ರಿಕೆಗಳಲ್ಲಿ ದೇವಸ್ಥಾನದ ಬಗ್ಗೆ ಮಾಹಿತಿ ಪ್ರಚಾರ ಆದ ನಂತರ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ. ಮೊದಲೆಲ್ಲ ಜನರೇ ಬರುತ್ತಿರಲಿಲ್ಲ’ ಎಂದು ಅವರು ಹೇಳಿದರು.
ಸರ್ಕಾರದ ಸೌಲಭ್ಯ ಇಲ್ಲ
‘ಸರ್ಕಾರ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿರುವುದೇನೋ ನಿಜ. ಆದರೆ, ನಮಗೆ ಏನೂ ಸೌಲಭ್ಯಗಳನ್ನು ಒದಗಿಸಿಲ್ಲ. ಪೂಜೆಗೆ ಹೂ ಮಾಲೆ, ದೀಪದ ಎಣ್ಣೆಯನ್ನು ನಮ್ಮ ಖರ್ಚಿನಿಂದಲೇ ತರುತ್ತೇವೆ. ಪ್ರವಾಸಿಗರು ದೇವಸ್ಥಾನಕ್ಕೆ ದಾರಿ ಹುಡುಕಿಕೊಂಡು ಬರುವ ಪರಿಸ್ಥಿತಿ ಇದೆ. ಇಲ್ಲೊಂದು ಐತಿಹಾಸಿಕ ಸ್ಮಾರಕ ಇದೆ ಎಂಬುದೂ ಯಾರಿಗೂ ಗೊತ್ತಿಲ್ಲ’ ಎನ್ನುತ್ತಾರೆ ಈಶ್ವರ ಹೂಗಾರ.
‘ಕಾಲ ಕಳೆದಂತೆ ದೇವಾಲಯದ ಗೋಡೆ, ಬಾಗಿಲುಗಳಲ್ಲಿ ಇರುವ ಸೂಕ್ಷ್ಮ ಕೆತ್ತನೆ ಕೆಲವು ಕಡೆಗಳಲ್ಲಿ ಮುಕ್ಕಾಗಿವೆ. ಇನ್ನೂ ಹೆಚ್ಚು ಹಾನಿ ಆಗದಂತೆ ಎಚ್ಚರ ವಹಿಸಬೇಕಿದೆ’ ಎಂಬುದು ಅವರ ಕಾಳಜಿ.
ಮುಂದೇನು?
ಪುರಾತತ್ವ ಇಲಾಖೆಯು ದೇವಸ್ಥಾನದ ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ. ದೇವಸ್ಥಾನದ 300 ಮೀ. ಸುತ್ತಳತೆಯಲ್ಲಿರುವ ಮನೆಗಳನ್ನು ತೆರವು ಮಾಡಲು ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.