ಹೊಲದ ಬದಿಯ ಎಕ್ಕದ ಗಿಡದಲ್ಲಿ ಕುಳಿತಿದ್ದವು ಬಣ್ಣ ಬಣ್ಣದ ಮಿಡತೆಗಳು. ಅವು ಒಂದರ ಮೇಲೊಂದು ಕುಳಿತು ಮಿಲನದಲ್ಲಿ ತನ್ಮಯವಾಗಿದ್ದವು. ಅವುಗಳ ಮೇಲ್ಮೈ ಬಹುವರ್ಣದಿಂದ ಕೂಡಿದ್ದ ಕಾರಣ, ಅವುಗಳನ್ನು ಕಾಮನಬಿಲ್ಲಿನ ಬಣ್ಣದ ಮಿಡತೆಗಳೆನ್ನುವರು.
ಒಂದೇ ಗಿಡದಲ್ಲಿ ಎರಡು ಪ್ರಭೇದಗಳ ಮಿಡತೆಗಳನ್ನು ಕಂಡಾಗ ಅಚ್ಚರಿಯಾಯಿತು. ಆಕಾಶ ಪಟಪಟನೆ ಹಲವು ಕೋನಗಳಲ್ಲಿ ಅವುಗಳ ಫೋಟೊ ಕ್ಲಿಕ್ಕಿಸಿಕೊಂಡ.
ಇವು ಸಂದಿಪದಿ ವಂಶದ ಅಕ್ರಿಡಿಡೇ ಕುಟುಂಬದ ಮಿಡಿತೆಗಳು. ಡ್ಯಾಕ್ಟಿಲೋಟಂ ಬೈಕಲರ್ ವೈಜ್ಞಾನಿಕ ಹೆಸರು. ಜರ್ಮನ್ ಕೀಟ ಶಾಸ್ತ್ರಜ್ಞ ಟೌಸಂಟ್ ಡಿ ಕಾರ್ಪೆಂಟರ್ 1843 ರಲ್ಲಿ ಮೊಟ್ಟ ಮೊದಲಿಗೆ ಇವನ್ನು ಗುರುತಿಸಿ, ವಿವರಣೆ ದಾಖಲಿಸಿದ.
ಗಂಡು ಮಿಡತೆಯ ಉದ್ದ 20 ಮಿ.ಮೀ. ಹೆಣ್ಣು ಮಿಡತೆಯ ಉದ್ದ 35 ಮಿ.ಮೀ ಇರುತ್ತದೆ. ತಲೆಯು ಭರ್ಚಿಯಂತಿರುತ್ತದೆ. ಪ್ರೌಢ ಕೀಟದ ತಲೆ, ಎದೆ ಮತ್ತು ಹೊಟ್ಟೆಯ ಭಾಗದ ಮೇಲೆ ಹಳದಿ, ನೀಲಿ ಪಟ್ಟಿಗಳಿವೆ. ರೆಕ್ಕೆಯ ಮುಂಭಾಗ ಹಸಿರು, ಹಳದಿಯಾಗಿಯೂ, ಹಿಂಭಾಗ ಕೆಂಪಾಗಿಯೂ ಹಾರುವಾಗ ಗೋಚರಿಸುತ್ತವೆ. ಹಿಂಗಾಲಿನ ಟಿಬಿಯಾದ ಮೇಲೆ 6-8 ಮುಳ್ಳಿನಂಥ ರಚನೆಗಳಿವೆ. ರೆಕ್ಕೆಗಳು ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕಾಗಿ ಅವು ದೂರ ಹಾರಲಾಗುವುದಿಲ್ಲ. ಇದುವರೆಗೆ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬೇರೆ ಬೇರೆ ವರ್ಣ ಸಂಯೋಜನೆಗಳಿವೆ. ಇವು ಹೆಚ್ಚಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಮೆಕ್ಸಿಕೊ ಹುಲ್ಲುಗಾವಲುಗಳಲ್ಲಿ ಕಂಡುಬರುತ್ತವೆ.
ಭಾರತದಲ್ಲಿ ‘ಪೋಯಿಕಿಲೋಸೆರಸ್ ಪಿಕ್ಟಸ್’ ಎಂಬುದು ಹೆಚ್ಚಾಗಿ ಕಂಡುಬರುವ ಪ್ರಭೇದ. ಇದೂ ದಟ್ಟ ಬಣ್ಣದ್ದು. ಹೊಟ್ಟೆಯ ಭಾಗದಲ್ಲಿ ದಟ್ಟ ಕೆಂಪು ಬಣ್ಣದ ಚಿಕ್ಕ ಕಲೆಗಳಿವೆ. ಇದು ಪೈರ್ಗೋಮಾರ್ಫಿಡೇ ಕುಟುಂಬಕ್ಕೆ ಸೇರಿದೆ. ಇವೆರಡೂ ಕೆಲೋಟ್ರೋಪಿಸ್ ಗಿಗ್ಯಾಂಟಿಯಾದ (ಎಕ್ಕ) ವಿಷಕಾರಿ ಎಲೆಗಳನ್ನು ಸೇವಿಸುತ್ತವೆ. ಭದ್ರವಾಗಿ ಹಿಡಿದರೆ ಹಾಲಿನಂಥ, ತೆಳು ಹಳದಿ, ಕೆಟ್ಟ ವಾಸನೆಯ ದ್ರವವನ್ನು ಕೆಲವು ಇಂಚುಗಳವರೆಗೆ ಚಿಮ್ಮುತ್ತವೆ. ಇದು ರಕ್ಷಣಾತ್ಮಕ ತಂತ್ರವೆನ್ನಲಾಗಿದೆ.
ಇವು ಸರ್ವಭಕ್ಷಕಗಳು. ಮುಂಜಾನೆ ಮತ್ತು ಸಂಜೆಯ ಹೊತ್ತಿಗೆ ಸಸ್ಯದ ಕೆಳ ಭಾಗದಲ್ಲಿ ಎಲೆಯನ್ನು ತಿನ್ನುತ್ತಿರುತ್ತವೆ. ಇವು ಮಧ್ಯಾಹ್ನದ ಹೊತ್ತಿಗೆ ಪೊದೆಯೊಳಗೆ ಸೇರಿಕೊಳ್ಳುತ್ತವೆ. ರಾತ್ರಿ ಪೊದೆಯ ತುದಿಯಲ್ಲಿ ಆಶ್ರಯ ಪಡೆಯುತ್ತವೆ. ಇದು ಕೂಡ ವೈರಿಗಳಿಂದ ತಪ್ಪಿಸಿಕೊಳ್ಳುವ ಉಪಾಯ ಎನ್ನಲಾಗಿದೆ.
ಕೀಟಗಳು ಮಿಲನಕ್ಕೆ ಮೊದಲು ನೆಲೆಯನ್ನು ಗುರುತಿಸುತ್ತವೆ. ಗಂಡು ಬೇಗ ಪ್ರೌಢಾವಸ್ಥೆ ತಲುಪುತ್ತದೆ. ಹೆಣ್ಣು ಪ್ರೌಢಾವಸ್ಥೆ ತಲುಪಿದೊಡನೆ ಮಿಲನಕ್ಕೆ ಎರಡೂ ಕಾತರಿಸುತ್ತವೆ. ಫೆರೋಮೋನ್ ಎಂಬ ರಸಾಯನಿಕವನ್ನು ಬಳಸಿ ಸಂಗಾತಿಯ ಇರುವಿಕೆಯನ್ನು ಗುರುತಿಸುತ್ತವೆ. ಒಂದಾಗಲು ನಿರ್ಧಿಷ್ಟ ತಾಣಗಳಲ್ಲಿ ಗುಂಪುಗೂಡುತ್ತವೆ.
ಇವುಗಳಲ್ಲಿ ಯಾವುದೇ ಮಿಲನ ಪೂರ್ವ ಪ್ರಣಯದ ನಡವಳಿಕೆಗಳು ಕಂಡುಬರುವುದಿಲ್ಲ. ಹೆಣ್ಣನ್ನು ಗಂಡು ತನ್ನ ಕುಡಿಮೀಸೆ ಇಲ್ಲವೇ ಕಾಲಿನಿಂದ ಪ್ರೀತಿ ಪ್ರಕಟಿಸಿ ತಟ್ಟುತ್ತದೆ. ಆಗ ಅವು ಕುಣಿಯಬಹುದು, ರೆಕ್ಕೆ ಬಿಚ್ಚಿ ವೃತ್ತಾಕಾರದಲ್ಲಿ ಸುತ್ತಬಹುದು. ಇಂಥ ಹಲವು ನಡವಳಿಕೆಗಳನ್ನು ನೋಡಬಹುದು. ನಾನು, ಇಲ್ಲಿನ ಫೋಟೊಗಳಲ್ಲಿ ಎರಡಕ್ಕಿಂತ ಹೆಚ್ಚು ಮಿಡತೆಗಳು ಮಿಲನದಲ್ಲಿ ತೊಡಗಿದುದನ್ನು ಕಂಡೆ. ಅಂದರೆ ಬಹು ಪತ್ನಿತ್ವ / ಬಹು ಪತಿತ್ವ ಇರಬಹುದೇನೋ? ಆಕರ್ಷಕವಾದ ಈ ಮಿಡತೆಗಳನ್ನು ನೋಡುತ್ತಿದ್ದರೆ ಮೈಮರೆತು ಬಿಡುತ್ತೇವೆ. ಇವುಗಳ ಪ್ರಣಯಾರಾಧನೆಯನ್ನು ಅಧ್ಯಯನ ಮಾಡಲಾಗಿಲ್ಲ.
ಮಿಡತೆಗಳಲ್ಲಿ ಆಂತರಿಕ ಗರ್ಭಧಾರಣೆ ನಡೆಯುತ್ತದೆ. ಗಂಡು ತನ್ನ ಅಂಗವನ್ನು ಹೆಣ್ಣಿನ ಜನನಾಂಗದಲ್ಲಿ ಸೇರಿಸಿ ವೀರ್ಯವನ್ನು ಸುರಿಸುತ್ತದೆ. ಜೂನ್ ತಿಂಗಳಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ತತ್ತಿಗಳನ್ನಿಡುತ್ತವೆ. ಒಂದು ಬೀಜಕೋಶದಲ್ಲಿ 70-200 ತತ್ತಿಗಳಿರುತ್ತವೆ. ತತ್ತಿಗಳು ಕಂದು-ಹಳದಿ ಬಣ್ಣದವಾಗಿರುತ್ತವೆ. ಸೆಪ್ಟೆಂಬರ್‌ನಲ್ಲಿ ಮರಿಗಳು ಹೊರಬರುತ್ತವೆ.
ಇವುಗಳ ಬಣ್ಣ ಹಲ್ಲಿಗಳಿಗೆ ಹೆಚ್ಚು ಆಕರ್ಷಕವಾಗಿ ಕಂಡುಬರುವುದಿಲ್ಲ. ಇದು ಅವುಗಳಿಗೆ ಮುನ್ನೆಚ್ಚರಿಕೆಯೂ ಹೌದು. ಹಲ್ಲಿ, ಓತಿಗಳ ಪರಿಸರದಲ್ಲಿ ಈ ಮಿಡತೆಗಳು ಇರುವುದಿಲ್ಲ. ಕಾರಣ ಅವುಗಳಿಗೆ ಅಪರಿಚಿತವೂ ಹೌದು. ಪಕ್ಷಿಗಳಿಗೂ ಈ ಮಿಡತೆಗಳು ರುಚಿಯೆನಿಸುವುದಿಲ್ಲ. ಕಾರಣ ಬಚಾವಾಗುತ್ತವೆ.
ಚಿತ್ರಗಳು : ಆಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.