ADVERTISEMENT

ಆಹಾ... ಜಿಎಸ್‌ಟಿ ಮೀಮ್‌ಗಳ ವರಸೆಯೇ!

ಹರವು ಸ್ಫೂರ್ತಿ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಆಹಾ... ಜಿಎಸ್‌ಟಿ ಮೀಮ್‌ಗಳ ವರಸೆಯೇ!
ಆಹಾ... ಜಿಎಸ್‌ಟಿ ಮೀಮ್‌ಗಳ ವರಸೆಯೇ!   

ಯಾವುದೇ ವಿಷಯವನ್ನು ಹಾಸ್ಯವಾಗಿ ಹೇಳಿದರೆ ಜನರಿಗೆ ಬೇಗ ತಲುಪುತ್ತದೆ ಎಂಬ ಸಿದ್ಧ ಸೂತ್ರವನ್ನು ಇಟ್ಟುಕೊಂಡು ಮೀಮ್‌ಗಳನ್ನು ಮಾಡುತ್ತಿದ್ದಾರೆ ‘ಟ್ರೋಲ್ ಹೈಕ್ಳು’.

2012ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೋಲ್ ಹೈಕ್ಳು’ ಪುಟವನ್ನು ಆರಂಭಿಸಿ ವರ್ತಮಾನದ ಸುದ್ದಿಗಳನ್ನು ಟ್ರೋಲ್ ಮಾಡುತ್ತಾ ಬಂದಿದ್ದಾರೆ. ಹಾಗೇ ಇಂದು ದೇಶಾದ್ಯಂತ ಭಾರೀ ಸುದ್ದಿಯಾಗಿರುವ ಜಿಎಸ್‌ಟಿ ವಿಚಾರವಾಗಿಯೂ ಈ ತಂಡ ಟ್ರೋಲ್‌ ಮಾಡುತ್ತಿದ್ದು ಇವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತೆರಿಗೆ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ಕಬ್ಬಿಣದ ಕಡಲೆ ಎನ್ನುವವರ ನಡುವೆ ಜಿಎಸ್‌ಟಿಯ ಸಾಧಕ ಬಾಧಕಗಳನ್ನು ಸರಳೀಕರಿಸಿ, ತೆಳು ಹಾಸ್ಯದೊಂದಿಗೆ ಮೀಮ್‌ ಮಾಡುವುದು ಸವಾಲಿನ ಕೆಲಸವೇ ಎನ್ನುತ್ತದೆ ‘ಟ್ರೋಲ್ ಹೈಕ್ಳು’ ತಂಡ.

ADVERTISEMENT

ತಂಡದ ಸದಸ್ಯರಲ್ಲಿ ಎಲ್ಲರೂ ಎಲ್ಲಾ ವಿಚಾರದ ಬಗ್ಗೆ ಟ್ರೋಲ್ ಬರೆಯುವುದಿಲ್ಲ. ಇದಕ್ಕೂ ವಿಶೇಷ ತಜ್ಞರಿದ್ದಾರೆ! ಸದ್ಯ ವೈರಲ್ ಆಗಿರುವ ಜಿಎಸ್‌ಟಿ ಟ್ರೋಲ್‌ಗಳನ್ನು ಮಾಡುತ್ತಿರುವವರು ಚಂದ್ರಶೇಖರ್ ಡಿ.ಆರ್. ಇವರು ತುಮಕೂರಿನ ಎಸ್‌ಬಿಐ ಬ್ಯಾಂಕ್ ಉದ್ಯೋಗಿ. ‘ದೃಶ್ಯ ಮಾಧ್ಯಮದಲ್ಲಿ ಬರುವ ವಿಷಯಗಳು ಇಂದು ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ’ ಎನ್ನುವ ಚಂದ್ರಶೇಖರ್, ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಮೀಮ್ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

‘ಮೀಮ್‌ ಬರೆಯುವುದು ಕ್ರಿಯಾತ್ಮಕ ಕೆಲಸ. ಇಂದು ಸುದ್ದಿ ತಿಳಿದುಕೊಳ್ಳಲು 60ರಷ್ಟು ಜನ ಟೀವಿ ನೋಡಿದರೆ 80ರಷ್ಟು ಜನ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಈ ಮಾಧ್ಯಮದಲ್ಲಿ ಜನ ಹೆಚ್ಚು ಸಕ್ರಿಯರಾಗಿದ್ದಾರೆ ಹಾಗಾಗಿ ನಾವು ಬರೆದ ಮೀಮ್‌ಗಳು ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯುತ್ತಿವೆ’ ಎನ್ನುತ್ತಾರೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ಮೊದಲಿಗೆ ಎಲ್ಲರನ್ನು ಕಾಡಿದ ಪ್ರಶ್ನೆ ಜಿಎಸ್‌ಟಿ ಎಂದರೇನು?. ಟ್ರೋಲ್ ಬರೆಯಲು ಇದೊಂದು ಕ್ಲಾಸಿಕ್ ಪ್ರಶ್ನೆಯಾಗಿ ಸಿಕ್ಕಿದೆ. ಈ ಪ್ರಶ್ನೆ ಇಟ್ಟುಕೊಂಡು ಮಾಡಿದ ಹಲವು ಮೀಮ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಟ್ರೋಲ್ ಮೀಮ್‌ಗಳಿಗೆ ಜನಪ್ರಿಯ ವ್ಯಕ್ತಿಗಳನ್ನು ಬಳಸಿಕೊಳ್ಳುವ ಬಗ್ಗೆ ವಿವರಿಸುವ ತಂಡ ‘ಯಾವುದೇ ವ್ಯಕ್ತಿ ಪರವಾಗಿ ವಿರೋಧವಾಗಿ ನಾವೂ ಬರೆಯುವುದಿಲ್ಲ. ವಿಷಯಕ್ಕೆ ಇಂಥವರ ವ್ಯಕ್ತಿತ್ವ ಹೊಂದುತ್ತದೆ ಎನ್ನುವುದಾದರೆ ಅವರ ಚಿತ್ರ ಬಳಸಿಕೊಂಡು ಮೀಮ್ ಮಾಡುತ್ತೇವೆ. ಯಾರಿಗೂ ಅವಮಾನ ಮಾಡುವ ಉದ್ದೇಶವಿಲ್ಲ. ಜಿಎಸ್‌ಟಿಗೆ ಡಾ.ರಾಜಕುಮಾರ್, ಸುದೀಪ್ ಅವರ ಚಿತ್ರ ಬಳಸಿಕೊಂಡಿದ್ದೇವೆ. ಅದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಹಾಗೇ ನಟಿ ಶುಭಾ ಪೂಂಜ ಬಗ್ಗೆ ಮಾಡಿದ ಮೀಮ್‌ಗೆ ವಿರೋಧ ವ್ಯಕ್ತವಾಗಿತ್ತು ನಾವು ಅದನ್ನು ತಿದ್ದಿಕೊಂಡೆವು. ತರಲೆ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಹೀಗಾಗುತ್ತದೆ, ನಾವು ತಕ್ಷಣ ಅಂಥ ಮೀಮ್‌ಗಳನ್ನು ತೆಗೆಯುತ್ತೇವೆ’ ಎನ್ನುತ್ತಾರೆ ಚಂದ್ರಶೇಖರ್.

ಫೋಟೊ ಮೀಮ್‌ಗಳ ಜೊತೆ ವಿಡಿಯೊ ಜಿಎಫ್ಐ ಮೀಮ್‌ಗಳನ್ನೂ ಅವರು ಮಾಡುತ್ತಾರೆ. ಮೀಮ್‌ ಜನಪ್ರಿಯತೆ ಬಗ್ಗೆ ಮಾತನಾಡುವ ಚಂದ್ರಶೇಖರ್ ‘ಯಾವುದೇ ವಿಷಯವನ್ನು ಜನ ಸಾಮಾನ್ಯರ ದೃಷ್ಟಿಕೋನದಲ್ಲಿ ನೋಡುತ್ತೇವೆ. ಒಬ್ಬ ನಾಗರಿಕನಿಗೆ ಜಿಎಸ್‌ಟಿ ಬಗ್ಗೆ ಇರುವ ಗೊಂದಲ, ಆತಂಕವನ್ನೇ ಇಟ್ಟುಕೊಂಡು ಮೀಮ್‌ ಬರೆದೆವು ಹಾಗಾಗಿ ಇದು ಹೆಚ್ಚು ಜನರನ್ನು ತಲುಪಿತು’ ಎನ್ನುತ್ತಾರೆ.

ಟ್ರೋಲ್‌ ಹೈಕ್ಳು ತಂಡ ಮೀಮ್‌ ಬರೆಯುತ್ತಾ ಹೊಸ ಬಗೆಯ ಟ್ರೆಂಡ್‌ ಸೃಷ್ಟಿಸಲು ಸಾಧ್ಯವಾಗಿದ್ದು ಸೋಷಿಯಲ್ ಮೀಡಿಯಾದಿಂದ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ಪುಟಗಳಾದ, ‘ಬನವಾಸಿ ಬಳಗ’, ‘ಕನಡ್ ಗೊತ್ತಿಲ್ಲ’ ಹಾಗೇ ನಟ ನಟಿಯರು, ರಾಜಕಾರಣಿಗಳು, ಪತ್ರಕರ್ತರು, ಉದ್ಯಮಿಗಳನ್ನು ಹಿಂಬಾಲಿಸುತ್ತಾ ಅವರು ಹಂಚುವ ಸುದ್ದಿಗಳನ್ನು ಇಟ್ಟುಕೊಂಡು ಟ್ರೋಲ್‌ ಬರೆಯುತ್ತಾರೆ.

‘ಟ್ರೋಲ್‌ ಹೈಕ್ಳು’ ತಂಡವನ್ನು ಆರಂಭಿಸಿದವರು ಚಿತ್ರದುರ್ಗ ಮೂಲದ ಮೋಹನ್. ಬೆಂಗಳೂರಿನ ವೆಂಕಟೇಶ್‌, ತೇಜಸ್‌, ಅಭಿಷೇಕ್ ಸಾವಳಿಗೆ. ಎಲ್ಲರೂ ಎಂಜಿನಿಯರ್ ಆಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಂತರ ‘ಟ್ರೋಲ್ ಹೈಕ್ಳು’ ತಂಡಕ್ಕೆ ಆಕಸ್ಮಿಕಾ, ರಕ್ಷಿತ್ ಶಿವಶಂಕರ್, ಮೆರ್ವಿನ್ ಫರ್ನಾಂಡಿಸ್, ತೇಜಸ್, ಆಕಾಶ್, ಶ್ರೀವತ್ಸ, ಅಪ್ರಮೇಯ ಭಾರದ್ವಾಜ್ ಸೇರಿ ತಂಡದಲ್ಲಿ 12 ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.