ADVERTISEMENT

ಐತಿಹಾಸಿಕ ಆಲದ ಮರ

ಗೋವಿಂದ ಕುಲಕರ್ಣಿ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

‘ಮರಗಳನ್ನು ನಾವು ಕಾಪಾಡಿದರೆ ಅವು ನಮ್ಮನ್ನು ಕಾಪಾಡುತ್ತವೆ’ ಎಂಬುದು ಜನಜನಿತ ನಾಣ್ಣುಡಿ. ಆದರೆ ನಗರೀಕರಣದ ಭರಾಟೆಯಲ್ಲಿ ಸಾಕಷ್ಟು ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಈ ನಡುವೆಯೂ ಐತಿಹಾಸಿಕ ಪರಂಪರೆಯುಳ್ಳ ಆಲದ ಮರವೊಂದನ್ನು ಕುಟುಂಬವೊಂದು ತಲೆತಲಾಂತರಗಳಿಂದ ಸಂರಕ್ಷಿಸುತ್ತಾ ಬಂದಿದೆ. ಅಂದಹಾಗೆ ಈ ಆಲದ ಮರ ಇರುವುದು ಮೈಸೂರು ಕೇಂದ್ರ ಭಾಗದಿಂದ  ಸುಮಾರು 10ಕಿ.ಮಿ. ದೂರದಲ್ಲಿರುವ ನರಸೀಪುರ ರಸ್ತೆಯಲ್ಲಿ ಬರುವ ಚಿಕ್ಕಹಳ್ಳಿ ಗ್ರಾಮದಲ್ಲಿ.

ಸರಿ ಸುಮಾರು 1.2 ಎಕರೆ ವಿಸ್ತಾರದಲ್ಲಿ ಇದು ಹರಡಿಕೊಂಡಿದೆ. 2 ಗುಂಟೆ ಮರದ ಬೇರು ಆವರಿಸಿದೆ. ಖಾಸಗಿ ಜಮೀನಿನಲ್ಲಿ ಹರಡಿಕೊಂಡಿರುವ ಈ ಬೃಹತ್‌ ಆಲದ ಮರವನ್ನು ಪುರಾತತ್ವ ಇಲಾಖೆಯು ಪಾರಂಪರಿಕ ವೃಕ್ಷವೆಂದು ಘೋಷಿಸಿದೆ. ಈ ವೃಕ್ಷವನ್ನು ಕಾಳಯ್ಯ ಕುಟುಂಬ ನೋಡಿಕೊಳ್ಳುತ್ತ ಬಂದಿದೆ. ಅವರ ನಂತರ ನಾಲ್ಕು ತಲೆಮಾರಿನವರು ಇದರ ಕಾಳಜಿ ವಹಿಸುತ್ತಾ ಬಂದಿದ್ದಾರೆ. ಸದ್ಯ ಇದರ ರಕ್ಷಣೆ ಮಾಡುತ್ತಿರುವ ಚಿಕ್ಕಮಾದಯ್ಯನವರು. ದಿನನಿತ್ಯ ಈ ಮರದ ಬಳಿ ದೀಪ ಹಚ್ಚುತ್ತಾರೆ. ಸದಾ ಗಾಳಿ ಬೀಸುತ್ತಿರುವ ಈ ಬಯಲು ಪ್ರದೇಶದಲ್ಲೂ ದೀಪ ಆರದೇ ಇರುವುದು ಇಲ್ಲಿಯ ವಿಶೇಷ. ಇದಕ್ಕೆ ಕಾರಣ ಇಲ್ಲಿ ನೆಲೆಸಿರುವ ಮೌನೇಶ್ವರ ಸ್ವಾಮಿ ಹಾಗೂ ಮರವನ್ನು ಕಾಯುತ್ತಿರುವ ಸರ್ಪ ಎನ್ನುವುದು ಭಕ್ತರ ನಂಬಿಕೆ.

ಇಲ್ಲಿ ಚಿತ್ರೀಕರಣ ಮಾಡಿದರೆ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಚಿತ್ರ ನಿರ್ಮಾಪಕರು, ನಿರ್ದೇಶಕರು ಮಾತ್ರವಲ್ಲದೇ ಚಿತ್ರನಟರದ್ದು ಕೂಡ. ಅದಕ್ಕಾಗಿಯೇ ರಜಿನಿಕಾಂತ್‌ ಅವರ ಬಾಬಾ ಚಿತ್ರ, ಅಮೀರಖಾನ್ ಅವರ ರಾಜಹಿಂದೂಸ್ತಾನಿ, ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಅಷ್ಟೇ ಅಲ್ಲದೇ, ನವಗ್ರಹ, ಡ್ರಾಮ, ಉಗ್ರಂ, ದಂಡುಪಾಳ್ಳ... ಹೀಗೆ ನೂರಾರು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡು ಯಶಸ್ವಿಯಾಗಿವೆ.

ಆದರೆ, ಈ ಮರದ ಅಭಿವೃದ್ಧಿಗೆ ಸರ್ಕಾರ ಯಾವುದೇ ರೀತಿ ಸಹಾಯ ಮಾಡುತ್ತಿಲ್ಲ ಎಂಬ ಕೊರಗು ಚಿಕ್ಕಮಾದಯ್ಯ ಕುಟುಂಬದ್ದು. ‘ಇದರ ಅಭಿವೃದ್ಧಿಗೆ ಇದುವರೆಗೆ ಹಣ ವಿನಿಯೋಗ ಆಗಿಲ್ಲ.  ಇದಕ್ಕೆ ಅನುದಾನ ನೀಡುವಂತೆ ಕೋರಿ ಅರಣ್ಯ ಇಲಾಖೆ, ಜಿಲ್ಲಾಪಂಚಾಯತಿ, ಅರಮನೆ ಮಂಡಳಿ, ಪ್ರವಾಸೋದ್ಯಮ ಇಲಾಖೆಗೆ ಓಡಾಡಿ ಸುಸ್ತಾಗಿದ್ದೇವೆ’ ಎಂದು ಬೇಸರಿಸುತ್ತಾರೆ ಅವರು.

‘ಈ ಸ್ಥಳದಲ್ಲಿ  ಸಭೆ, ಸಮಾರಂಭ , ಧ್ಯಾನ, ತಪಸ್ಸು, ಯೋಗಕ್ಕೆ ಉಚಿತವಾಗಿ  ಸ್ಥಳಾವಕಾಶ ನೀಡಲಾಗುತ್ತಿದೆ. ಇದು ಪಿತ್ರಾರ್ಜಿತ ಆಸ್ತಿ. ಈ ಜಾಗ ಮಾರಿದರೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಆದರೆ  ಈ ಮರವನ್ನು ಸಂರಕ್ಷಿಸುವುದೇ ನಮ್ಮ ಗುರಿ.  ಆದ್ದರಿಂದ ಪಾರಂಪರಿಕ ವೃಕ್ಷವಾಗಿರುವ ಈ ಮರದತ್ತ ಸಂಬಂಧಿತರ ಕೃಪಾದೃಷ್ಟಿ ಹರಿಯಬೇಕಿದೆ’ ಎನ್ನುವುದು  ಚಿಕ್ಕಮಾದಯ್ಯ ಅವರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.