ADVERTISEMENT

ಒಡೆಯುವ ತ್ವಚೆಗೆ ಮುಲಾಮು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಒಡೆಯುವ ತ್ವಚೆಗೆ ಮುಲಾಮು
ಒಡೆಯುವ ತ್ವಚೆಗೆ ಮುಲಾಮು   

ಚಳಿಗಾಲ ಆರಂಭವಾಗಿದೆ. ಚಳಿಯಿಂದ ತ್ವಚೆ ಒಡೆಯುವುದನ್ನು ತಡೆಗಟ್ಟುವಲ್ಲಿ ಕೋಲ್ಡ್‌ ಕ್ರೀಂಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಕ್ರೀಂ ಅನ್ನು ಹಚ್ಚಿಕೊಂಡಾಗ ಚರ್ಮಕ್ಕೆ ಚಳಿಚಳಿ ಅನುಭವ. ಚಳಿಗಾಲದಲ್ಲೇ ಇದರ ಬಳಕೆ ಹೆಚ್ಚಿರುವುದರಿಂದ ಇದನ್ನು ಕೋಲ್ಡ್‌ ಕ್ರೀಂ ಎಂದು ಕರೆದಿರಬಹುದು.

ಈ ಕೋಲ್ಡ್‌ ಕ್ರೀಂನಲ್ಲಿರುವ ಎಣ್ಣೆ ಅಂಶ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಆಲಿವ್‌ ಅಥವಾ ಬಾದಾಮಿ ಎಣ್ಣೆ, ಜೇನುಮೇಣ ಮಿಶ್ರಣವೇ ಈ ಕೋಲ್ಡ್‌ ಕ್ರೀಂ. ಬಳಿಕ ಬಣ್ಣ, ಪರಿಮಳಕ್ಕೆ ಅನುಗುಣವಾಗಿ ಬೇರೆ ಪದಾರ್ಥಗಳನ್ನು ಬಳಸುತ್ತಾರೆ. ಬಗೆಬಗೆಯ ತ್ವಚೆ ಇರುವವರನ್ನು ಗಮನದಲ್ಲಿಟ್ಟುಕೊಂಡೇ ಅಗತ್ಯ ಪದಾರ್ಥಗಳನ್ನು ಕೋಲ್ಡ್‌ ಕ್ರೀಂ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಕೋಲ್ಡ್ ಕ್ರೀಂ ಬಹುತೇಕ ಒಣತ್ವಚೆಯವರಿಗೆ ಸರಿಹೊಂದುತ್ತದೆ. ಚರ್ಮದ ಪೋಷಣೆ ಜೊತೆಗೆ ಸುಕ್ಕುಗಟ್ಟುವಿಕೆಯ ನಿವಾರಣೆ ಮಾಡುತ್ತದೆ.

ತ್ವಚೆ ರಕ್ಷಣೆ ಅಷ್ಟೇ ಅಲ್ಲದೇ ಮೇಕಪ್‌ ರಿಮೂವರ್‌ ಹಾಗೂ ಮಾಯಿಶ್ಚರೈಸರ್‌ ಆಗಿಯೂ ಕೋಲ್ಡ್‌ ಕ್ರೀಂ ಅನ್ನು ಬಳಸುತ್ತಾರೆ. ಮೇಕಪ್‌ ಇರುವ ಮುಖಕ್ಕೆ ಕೋಲ್ಡ್‌ ಕ್ರೀಂ ಹಚ್ಚಿ ಕೆಲ ನಿಮಿಷಗಳ ಕಾಲ ಮುಖವನ್ನು ವೃತ್ತಾಕಾರವಾಗಿ ಮಸಾಜ್‌ ಮಾಡಬೇಕು. ಹಾಗೆಯೇ ಕಣ್ಣಿನ ಮೇಕಪ್‌, ಮಸ್ಕರಾ, ಐಲೈನರ್‌ಗಳನ್ನು ಅಳಿಸಲು ಬಳಸಬಹುದು. ಕೋಲ್ಡ್‌ಕ್ರೀಂ ಅನ್ನು ಮುಖಕ್ಕೆ ಹಚ್ಚಿ 2 ನಿಮಿಷಗಳ ಕಾಲ ಬಿಟ್ಟು, ಬಳಿಕ ಒದ್ದೆ ಬಟ್ಟೆಯಿಂದ ಮುಖ ಒರೆಸಬೇಕು.

ADVERTISEMENT

ಯಾರಿಗೆ ಯಾವ ಕ್ರೀಂ ಸೂಕ್ತ

l ಕೇಸರಿ, ಅಲೊವೇರಾ, ಆಲಿವ್‌ ಎಣ್ಣೆಗಳಿಂದ ಮಾಡಿರುವ ಕೋಲ್ಡ್‌ ಕ್ರೀಂಗಳು ಮಾರುಕಟ್ಟೆಯಲ್ಲಿವೆ. ಈ ಕ್ರೀಂಗಳು ಒಣತ್ವಚೆಯವರಿಗೆ ಉತ್ತಮ. ಈ ಕ್ರೀಂ ಮೈ ಬಣ್ಣವನ್ನು ಹೊಳಪಾಗಿಸುತ್ತದೆ.

l ವಿಟಮಿನ್‌ ಇ ಇರುವ ಕೋಲ್ಡ್‌ ಕ್ರೀಂಗಳು ಚರ್ಮವನ್ನು ಹೈಡ್ರೇಟ್‌ ಮಾಡುವುದರೊಂದಿಗೆ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಮಧ್ಯ ವಯಸ್ಸಿನವರಿಗೆ ಇದು ಸೂಕ್ತ.

l ನೈಟ್‌ ಟ್ರೀಟ್‌ಮೆಂಟ್‌ ಕೋಲ್ಡ್‌ ಕ್ರೀಂ ರಾತ್ರಿ ಸಮಯಕ್ಕೆ ಸೂಕ್ತ. ಬಹುತೇಕ ಶ್ರೀಗಂಧ, ಕೇಸರಿಯಿಂದ ಮಾಡಿರುವ ಈ ಕ್ರೀಂಗಳನ್ನು ರಾತ್ರಿಯಲ್ಲಿ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುವ ಹಾಗೇ ತಯಾರಿಸಲಾಗಿದೆ. ಇದು ಎಲ್ಲಾ ವಯಸ್ಸಿನವರಿಗೆ ಸರಿ ಹೊಂದುತ್ತದೆ.

***

ಮಾಯಿಶ್ಚರೈಸರ್‌ ಹಾಗೂ ಕೋಲ್ಡ್‌ ಕ್ರೀಂಗಳು ಒಂದೇ ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಎರಡರ ಉಪಯೋಗಗಳು ಬೇರೆ ಬೇರೆ. ಮಾಯಿಶ್ಚರೈಸರ್‌ಗಳನ್ನು ಹಗಲು ಹೊತ್ತಿನಲ್ಲಿ ಹಚ್ಚಿಕೊಂಡರೆ, ಕೋಲ್ಡ್‌ ಕ್ರೀಂ ಅನ್ನು ಹೆಚ್ಚಾಗಿ ಚಳಿಗಾಲದಲ್ಲಿ ರಾತ್ರಿ ವೇಳೆ ಹಚ್ಚುತ್ತೇವೆ. ಕೋಲ್ಡ್‌ ಕ್ರೀಂಗಳಿಗೆ ಹೋಲಿಸಿದರೆ ಮಾಯಿಶ್ಚರೈಸರ್‌ ಹೆಚ್ಚು ತೆಳುವಾಗಿರುತ್ತದೆ. ಹಗಲು ಹೊತ್ತಿನಲ್ಲಿ ದೂಳು, ಸೂರ್ಯನ ಬೆಳಕಿನಿಂದ ಬರುವ ವಿಕಿರಣದಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಹಚ್ಚುತ್ತಾರೆ. ಕೋಲ್ಡ್‌ ಕ್ರೀಂಗಳು ದಪ್ಪವಾಗಿದ್ದು, ಚಳಿ ಹಾಗೂ ಒಣ ವಾತಾವರಣದಲ್ಲಿ ಚರ್ಮದ ರಕ್ಷಣೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.