ADVERTISEMENT

ಕ್ಯಾನ್ಸರ್ ಕಂಡು ಸಿಗರೇಟ್ ಬಿಟ್ಟರು

ಮಂಜುಶ್ರೀ ಎಂ.ಕಡಕೋಳ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಕ್ಯಾನ್ಸರ್ ಕಂಡು ಸಿಗರೇಟ್ ಬಿಟ್ಟರು
ಕ್ಯಾನ್ಸರ್ ಕಂಡು ಸಿಗರೇಟ್ ಬಿಟ್ಟರು   

ಒಂದಾನೊಂದು ಕಾಲದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಿಗರೇಟಿನ ದಾಸರಾಗಿದ್ದರು. ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಸಿಗರೇಟ್ ಸೇದದಿದ್ದರೆ ವಿವೇಕ್‌ ಮನಸಿಗೆ ಸಮಾಧಾನವೇ ಇರುತ್ತಿರಲಿಲ್ಲವಂತೆ.

ತಾನೊಬ್ಬ ನಟ ಎಂಬುದನ್ನೂ ಮರೆತು ವಿವೇಕ್ ಮುಂಬೈನ ಸಾರ್ವಜನಿಕ ಪ್ರದೇಶದಲ್ಲೇ ಎಗ್ಗಿಲ್ಲದೇ ಸಿಗರೇಟು ಸೇದುತ್ತಿದ್ದರು. ಹೀಗೆ ಸಿಗರೇಟು ಸೇದುತ್ತಿದ್ದ ಸ್ನೇಹಿತರ ಜತೆ ಕುಳಿತಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ತನ್ನ ಇಮೇಜಿಗೆ ಧಕ್ಕೆ ಬರುತ್ತದೆ, ಬಿಟ್ಟುಬಿಡಿ ಎಂದು ಗೋಗರೆದರೂ ಪೊಲೀಸ್‌ ಅಧಿಕಾರಿಗಳು ವಿವೇಕ್ ಅವರನ್ನು ಬಿಡಲಿಲ್ಲ. ಇದು ವಿವೇಕ್ ಮೇಲೆ ಅಪಾರ ಪರಿಣಾಮ ಬೀರಿತಂತೆ. ಅಲ್ಲಿಂದ ಸಿಗರೇಟ್‌ ಬಿಡಬೇಕೆಂದು ಮನಸು ಮಾಡಿದರೂ ಆ ಆಸೆ ಈಡೇರುತ್ತಿರಲಿಲ್ಲ.

ಅದೊಂದು ದಿನ ಕ್ಯಾನ್ಸರ್ ರೋಗಿಗಳ ಆಸ್ಪತ್ರೆ ಉದ್ಘಾಟನೆಗೆಂದು ಅತಿಥಿಯಾಗಿ ವಿವೇಕ್ ಹೋದಾಗ, ಅಲ್ಲಿದ್ದ ನೂರಾರು ರೋಗಿಗಳು ತಂಬಾಕು ಮತ್ತು ಅದರ ಉತ್ಪನ್ನಗಳಿಗೆ ಬಲಿಯಾಗಿದ್ದನ್ನು ವಿವೇಕ್ ಕಣ್ಣಾರೆ ಕಂಡರು. ಅಂದೇ ಸಿಗರೇಟು ಬಿಡಬೇಕೆಂಬ ದೃಢ ಸಂಕಲ್ಪ ಮಾಡಿದ ವಿವೇಕ್ ಮತ್ತೆಂದೂ ಸಿಗರೇಟಿನತ್ತ ಮುಖ ಮಾಡಲಿಲ್ಲ.

ADVERTISEMENT

2004ರಲ್ಲಿ ಸುನಾಮಿ ಉಂಟಾದಾಗ ತಮ್ಮ ಸಂಸ್ಥೆ ಮೂಲಕ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ವಿವೇಕ್‌ಗೆ ರೆಡ್ ಅಂಡ್ ವೈಟ್ ಬ್ರೆವರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಪ್ರಶಸ್ತಿ ನೀಡುತ್ತಿದ್ದ ಸಂಸ್ಥೆ ತಂಬಾಕಿನ ಉತ್ಪನ್ನಗಳು ಮತ್ತು ಸಾರಾಯಿ ತಯಾರಿಕೆ ಮಾಡುತ್ತಿದ್ದರಿಂದ ವಿವೇಕ್ ಆ ಪ್ರಶಸ್ತಿಯನ್ನು ತಿರಸ್ಕರಿಸಿಬಿಟ್ಟರು.

ಇದೀಗ ವಿವೇಕ್‌ ಒಬೆರಾಯ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಬಾಕು ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.