ADVERTISEMENT

ಡಿಂಪಲ್ ಬೇಕೇ ಡಿಂಪಲ್!

ಡಾ.ಅರುಣ್ ಇಸ್ಲೂರ್
Published 21 ಸೆಪ್ಟೆಂಬರ್ 2012, 19:30 IST
Last Updated 21 ಸೆಪ್ಟೆಂಬರ್ 2012, 19:30 IST

ಸುಂದರ ವದನದಲ್ಲಿ `ಡಿಂಪಲ್~ಗೆ (ಗುಳಿಕೆನ್ನೆ) ಪ್ರತ್ಯೇಕ ಸ್ಥಾನವಿದೆ. ಯಾವುದೇ ಮಹಿಳೆ ಅಥವಾ ಪುರುಷ ಎಷ್ಟೇ ಸುಂದರವಾಗಿದ್ದರೂ, ಡಿಂಪಲ್ ಹೊಂದಿರದೇ ಇದ್ದರೆ ಅವರ ಸೌಂದರ್ಯ ಅಪೂರ್ಣ ಎನ್ನುವವರೂ ಇದ್ದಾರೆ.

ಅಂತೆಯೇ ನೋಡಲು ಸಾಧಾರಣವಾಗಿದ್ದರೂ, ಡಿಂಪಲ್ ಹೊಂದಿದ್ದರೆ ಆ  ಸೌಂದರ್ಯವೇ ಬೇರೆ ರೀತಿಯದು. ಹೀಗಾಗಿ ಡಿಂಪಲ್ ಹೊಂದಿರುವ ಮಹಿಳೆ-ಪುರುಷ ಯಾವುದೇ ಸಭೆ, ಸಮಾರಂಭಗಳಲ್ಲಿ ಮಾತನಾಡುವಾಗ ಎಲ್ಲರ ಗಮನ ಸೆಳೆಯುತ್ತಾರೆ.

ಇನ್ನು ಶಾಲಾ ಕಾಲೇಜುಗಳಲ್ಲಂತೂ ಡಿಂಪಲ್ ಹೊಂದಿರುವ ಯುವಕ-ಯುವತಿಯರಿಗೆ ಇನ್ನಿಲ್ಲದ ಬೇಡಿಕೆ!

ಎರಡೂ ಕೆನ್ನೆಗಳಲ್ಲಿ ಡಿಂಪಲ್ ಹೊಂದಿರುವ ನನ್ನ ಬಗ್ಗೆ ಚಿಕ್ಕವನಿದ್ದಾಗ ನೆರೆಹೊರೆಯ ಸ್ನೇಹಿತರು ಅಸೂಯೆಪಡುತ್ತಿದ್ದರು. ಈಗ ನನ್ನ ಎಂಟು ವರ್ಷದ ಮಗನಿಗೂ ಎರಡೂ ಕೆನ್ನೆಗಳಲ್ಲಿ ಅಂದವಾದ ಡಿಂಪಲ್‌ಗಳಿವೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಬಾಲಿವುಡ್‌ನ ಹಲವು ತಾರೆಯರು ಒಮ್ಮಿಂದೊಮ್ಮೆಗೇ ಡಿಂಪಲ್‌ಗಳನ್ನು ಹೊಂದುತ್ತಾ ಜನಪ್ರಿಯತೆ ಗಳಿಸಲು ಯತ್ನಿಸುತ್ತಿದ್ದಾರೆ. ಶೃಂಗಾರ ವರ್ಧನೆಯಲ್ಲಿ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಮುಂತಾದ ಆಧುನಿಕ ವಿಧಾನಗಳು ಈಗಾಗಲೇ ಪ್ರಮುಖ ಪಾತ್ರ ವಹಿಸುತ್ತಿದ್ದು, ಜನಸಾಮಾನ್ಯರೂ ಇದರತ್ತ ಆಸಕ್ತಿ ತೋರುತ್ತಿದ್ದಾರೆ. ಇದೀಗ ಕೃತಕ ಡಿಂಪಲ್‌ಗಳನ್ನು ನಿರ್ಮಿಸುವ ಸುಲಭದ ಶಸ್ತ್ರಚಿಕಿತ್ಸೆಯೂ ಬಂದಿದೆ, ಅಲ್ಲದೆ ಅದು ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ!

ಹೀಗೆ ಬಹುಜನರ ಬೇಡಿಕೆಯ ಡಿಂಪಲ್ ಮಾಲೀಕರು ಅದು ತಂದುಕೊಡುವ ಜನಪ್ರಿಯತೆಯಿಂದ ಬೀಗಬೇಕಾಗಿಲ್ಲ. ಯಾಕೆಂದರೆ ಈ ಡಿಂಪಲ್‌ಗಳು ಉಂಟಾಗುವುದು ಕೆಲವು ದೋಷಗಳಿಂದ!
ಆಧುನಿಕ ವೈದ್ಯ ವಿಜ್ಞಾನದ ಪ್ರಕಾರ, ನೈಸರ್ಗಿಕ ಗುಳಿಕೆನ್ನೆಗಳು ಮಗು ಜನಿಸುವ ಮೊದಲೇ ಭ್ರೂಣದಲ್ಲಿ ನಿರ್ಮಾಣವಾಗುತ್ತವೆ.
 
ಗರ್ಭಸ್ಥ ಮಗುವಿನ ಬೆಳವಣಿಗೆ ಆಗುವಾಗ ಕೆನ್ನೆ ಭಾಗದ ಕೆಲವು ಸ್ನಾಯುಗಳು ಸರಿಯಾಗಿ ಬೆಳೆಯದಿದ್ದರೆ ಅದು ಮುಂದೆ ಡಿಂಪಲ್‌ನ ರೂಪದಲ್ಲಿ ವದನದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗೆ ಸ್ನಾಯುಗಳ ದೋಷದಿಂದ ಕೆನ್ನೆಯಲ್ಲಿನ ಚರ್ಮ ತುಸು ಸಡಿಲವಾಗಿ, ಮಾತನಾಡುವಾಗ ಅಥವಾ ನಗುವಾಗ ಅದು ಕುಳಿಯನ್ನು ನಿರ್ಮಾಣ ಮಾಡುತ್ತದೆ.

ದೋಷದಿಂದಲಾದರೂ ಸರಿ ಅಂತಹದ್ದೊಂದು ಗುಳಿಕೆನ್ನೆ ನನಗೂ ಇರಬಾರದಿತ್ತೇ ಎಂದು ಕೊರಗುವ ಯಾರು ಬೇಕಾದರೂ ಇನ್ನು ಮುಂದೆ ಒಂದು ಆಧುನಿಕ ಹಾಗೂ ಸುಲಭವಾದ ಶಸ್ತ್ರಚಿಕಿತ್ಸೆಯಿಂದ ತಮ್ಮ ನೆಚ್ಚಿನ ಡಿಂಪಲ್‌ನ ಒಡೆಯರಾಗಬಹುದು.

ಗುಳಿಕೆನ್ನೆಗೆ ಸಂಬಂಧಿಸಿದ ಖ್ಯಾತ ವಿದೇಶಿ ತಜ್ಞ ಡಾ. ಡೋನಿ ನಾಸಾರ್ ಅವರ ಪ್ರಕಾರ, ಈ ಸುಲಭದ ಶಸ್ತ್ರಚಿಕಿತ್ಸೆಗೆ ತಗಲುವ ಸಮಯ 10-30 ನಿಮಿಷ ಮಾತ್ರ. ಈ ಶಸ್ತ್ರಚಿಕಿತ್ಸೆಯಲ್ಲಿ ಕೆನ್ನೆಯ ಭಾಗಕ್ಕೆ ಅರಿವಳಿಕೆ ನೀಡಿ ಬಾಯಿಯ ಒಳಭಾಗದಲ್ಲಿ ಪುಟ್ಟ ಯಂತ್ರದಿಂದ ಜೀವಕಣಗಳನ್ನು (ಬಯಾಪ್ಸಿ) ರಂಧ್ರದ ರೂಪದಲ್ಲಿ ತೆಗೆಯುತ್ತಾರೆ.

ಈ ಮೂಲಕ, ಕೆನ್ನೆಯ ಭಾಗದಲ್ಲಿರುವ ಕೊಬ್ಬಿನ ಅಂಗಾಂಶ ಹಾಗೂ ಕೆಲವು ಸ್ನಾಯುಗಳನ್ನು ನಾಶ ಮಾಡುತ್ತಾರೆ. ಬಳಿಕ ರಂಧ್ರಕ್ಕೆ ಒಳಭಾಗದಿಂದ ಹೊಲಿಗೆ ಹಾಕುತ್ತಾರೆ. ಕೆನ್ನೆಯಲ್ಲಿನ ಸ್ನಾಯುಗಳು ನಾಶವಾಗುವುದರಿಂದ ಅದು ಕುಳಿಗಳನ್ನು ಉಂಟುಮಾಡುತ್ತದೆ. ಒಂದು ಕೆನ್ನೆಯ ಮೇಲೆ ಅಥವಾ ಎರಡೂ ಕೆನ್ನೆಗಳಲ್ಲೂ ಬೇಕಾದ ಗಾತ್ರದ ಕುಳಿಗಳನ್ನು ನಿರ್ಮಿಸಬಹುದು.

`ಕಡಿಮೆ ಸಮಯ ಹಾಗೂ ಕಡಿಮೆ ಖರ್ಚು ತಗಲುವ ಈ ಶಸ್ತ್ರಚಿಕಿತ್ಸೆಯ ಬಳಿಕ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು~ ಎನ್ನುತ್ತಾರೆ ಡಾ. ಟೋನಿ.

ಅಂತೆಯೇ ಈ ಶಸ್ತ್ರಚಿಕಿತ್ಸೆಯಿಂದ ದೀರ್ಘಕಾಲೀನ ತೊಂದರೆಗಳು ಉಂಟಾಗಬಹುದೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.