ADVERTISEMENT

ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಡ್‌ ಎಬ್ಬಿಂಗ್‌, ಮಿಸ್ಸೋರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಡ್‌  ಎಬ್ಬಿಂಗ್‌, ಮಿಸ್ಸೋರಿ
ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಡ್‌ ಎಬ್ಬಿಂಗ್‌, ಮಿಸ್ಸೋರಿ   

ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳನ್ನು ಪತ್ತೆ ಹಚ್ಚಲಾಗದ ವ್ಯವಸ್ಥೆಯ ವಿರುದ್ಧ ಮಹಿಳೆಯೊಬ್ಬಳು ಪ್ರತಿಭಟಿಸುವುದೇ ‘ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಡ್‌ ಎಬ್ಬಿಂಗ್‌, ಮಿಸ್ಸೋರಿ’ (three billboards outside ebbing, missouri) ಚಿತ್ರದ ಕಥನಭಿತ್ತಿ. ಮಾರ್ಟಿನ್‌ ಮೆಕ್‌ಡೊನಾಗ್‌ ನಿರ್ದೇಶನದ ಈ ಚಿತ್ರ ಇಂಗ್ಲೆಂಡ್‌ನಲ್ಲಿ 2017ರಲ್ಲಿ ಬಿಡುಗಡೆಯಾಯಿತು.

ಮೈಲ್ಡ್‌ರೆಡ್‌ ಹೇಸ್‌, ಪತಿಯನ್ನು ತ್ಯಜಿಸಿ ತನ್ನ ಮಗ– ಮಗಳ ಜತೆ ವಾಸಿಸುತ್ತಿರುತ್ತಾಳೆ. ಒಂದು ದಿನ ಅವಳ ಮಗಳನ್ನು ಅತ್ಯಾಚಾರವೆಸಗಿ ಕೊಲ್ಲಲಾಗುತ್ತದೆ. ಘಟನೆ ನಡೆದು ತಿಂಗಳೇ ಕಳೆದರೂ ಮಿಸ್ಸೋರಿ ಪೊಲೀಸ್‌ ಅಧಿಕಾರಿಗಳು ಅಪರಾಧಿಗಳನ್ನು ಪತ್ತೆ ಹಚ್ಚಲು ವಿಫಲರಾಗಿರುತ್ತಾರೆ. ಆಗ ಹೇಸ್‌, ತನ್ನ ಮನೆಯ ಸಮೀಪದಲ್ಲಿನ ಹೆದ್ದಾರಿ ಪಕ್ಕದ ಮೂರು ಜಾಹೀರಾತು ಫಲಕಗಳನ್ನು ಬಾಡಿಗೆ ಪಡೆದುಕೊಂಡು ಪೊಲೀಸರ ವೈಫಲ್ಯವನ್ನೂ, ತನ್ನ ಮಗಳಿಗಾದ ಅನ್ಯಾಯವನ್ನೂ ಘೋಷವಾಕ್ಯರೂಪದಲ್ಲಿ ಬರೆಸುತ್ತಾಳೆ. ಇದು ಆ ನಗರದ ಜನರು ಮತ್ತು ಪೊಲೀಸ್‌ ಅಧಿಕಾರಿಗಳ ಕೋ‍ಪಕ್ಕೆ ಕಾರಣವಾಗುತ್ತದೆ.

ಅತ್ಯಾಚಾರ ಮತ್ತು ಕೊಲೆಯನ್ನು ವಿಜೃಂಭಿಸದೆ ಅದರ ಪರಿಣಾಮಗಳನ್ನು, ತಾಯಿಯ ಆಕ್ರೋಶ, ಅಧಿಕಾರಿಗಳ ಕ್ರೌರ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಕಥನ ಹೆಣೆದಿರುವ ರೀತಿಯೇ ಮೆಚ್ಚುಗೆ ಹುಟ್ಟಿಸುತ್ತದೆ. ಹೆಣ್ಣೊಬ್ಬಳು ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗಿಳಿದಾಗ ಅವಳನ್ನು ದಮನಿಸಲು ಹೇಗೆಲ್ಲ ಪ್ರಯತ್ನಿಸಲಾಗುತ್ತದೆ ಎಂಬುದನ್ನು ನಿರ್ದೇಶಕರು ಬಹುಸೂಕ್ಷ್ಮವಾಗಿ ನಿವೇದಿಸಿದ್ದಾರೆ. ಇನ್ನೊಬ್ಬರನ್ನು ಹಿಂಸಿಸುವಾಗ ವಿಕೃತ ಖುಷಿ ಕೊಡುವ ಕ್ರೌರ್ಯವೆನ್ನುವುದು ತನ್ನ ಬದುಕಿನಲ್ಲಿಯೇ ಸಂಭವಿಸಿದಾಗ ಅದನ್ನು ಗ್ರಹಿಸುವ ಮನಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನೂ ಹೇಳಿದ್ದಾರೆ. ಕ್ರೌರ್ಯವೇ ಮೈವೆತ್ತಂಥ ಪೊಲೀಸ್‌ ಅಧಿಕಾರಿ ಡಿಕ್ಸನ್‌ ತಾನೇ ಬೆಂಕಿ ಅಪಘಾತದಲ್ಲಿ ಮೈಸುಟ್ಟುಕೊಂಡ ನಂತರ ಹೇಸ್‌ಳ ಬೆಂಬಲಕ್ಕೆ ನಿಲ್ಲುತ್ತಾನೆ.

ADVERTISEMENT

ಇಡೀ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಲು ಪ್ರಮುಖ ಕಾರಣ ಫ್ರಾನ್ಸಸ್‌ ಮೆಕ್‌ಡೊರ್ಮಾಂಡ್‌ ಅವರ ಭಾವತೀವ್ರ ನಟನೆ. ಮಗಳನ್ನು ಕಳೆದುಕೊಂಡ ಅಮ್ಮನೊಳಗಿನ ಸಂಕಟ, ಆತಂಕ, ಅದನ್ನು ಮೆಟ್ಟಿನಿಲ್ಲುವ ಛಲ ಎಲ್ಲವನ್ನೂ ಅವರು ಮನಮುಟ್ಟುವ ಹಾಗೆ ಅಭಿವ್ಯಕ್ತಿಸಿದ್ದಾರೆ. ಈ ಚಿತ್ರದ ನಟನೆಗಾಗಿ ಅವರಿಗೆ ಆಸ್ಕರ್‌ ಪ್ರಶಸ್ತಿಯೂ ಸಂದಿದೆ.

ಕಾರ್ಟರ್‌ ಬ್ಯೂರ್‌ವೆಲ್‌ ಅವರ ಸಂಗೀತ ಮತ್ತು ಬೆನ್‌ ಡೆವಿಸ್‌ ಛಾಯಾಗ್ರಹಣವೂ ಚಿತ್ರದ ಒಟ್ಟಾರೆ ಪರಿಣಾಮವನ್ನು ಹೆಚ್ಚಿಸುವಲ್ಲಿ ಕೊಡುಗೆ ನೀಡಿವೆ.

https://goo.gl/Xc1pdZ ಕೊಂಡಿ ಬಳಸಿ ಅಂತರ್ಜಾಲದಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.