ADVERTISEMENT

‘ನಾಗಕನ್ನಿಕೆ’ ಕಸರತ್ತು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
‘ನಾಗಕನ್ನಿಕೆ’ ಕಸರತ್ತು
‘ನಾಗಕನ್ನಿಕೆ’ ಕಸರತ್ತು   

‘ಗುಂಡ್ಯನ ಹೆಂಡ್ತಿ’, ‘ನಾಗಕನ್ನಿಕೆ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದವರು ಅದಿತಿ ಪ್ರಭುದೇವ್‌. ಈಗ ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ನಟಿಯರು ಮಾತ್ರವಲ್ಲ, ಎಲ್ಲಾ ಮಹಿಳೆಯರು ಫಿಟ್‌ನೆಸ್‌ ಬಗ್ಗೆ ಗಮನ ನೀಡಬೇಕು ಎಂಬುದು ಇವರ ಮಾತು.

ಫಿಟ್‌ನೆಸ್‌ ಎಂದರೆ ಏನು? ಅದಕ್ಕಾಗಿ ಇವರು ಎಷ್ಟೆಲ್ಲಾ ಕಸರತ್ತು ನಡೆಸುತ್ತಾರೆ ಎನ್ನುವುದನ್ನು ಅವರದೇ ಮಾತಿನಲ್ಲಿ ಕೆಳೋಣ.

‘ಬೆಳಿಗ್ಗೆ ಆರು ಗಂಟೆಗೆ ಎದ್ದುಬಿಡುತ್ತೇನೆ. ಯೋಗ, ವರ್ಕೌಟ್‌ ಮೂಲಕ ನನ್ನ ದಿನ ಪ್ರಾರಂಭವಾಗುತ್ತದೆ. ವರ್ಕೌಟ್‌ ಎನ್ನುವುದು ನನಗೆ ಒತ್ತಡದಿಂದ ಹೊರಬರುವ ದಾರಿ. ಅದದೇ ಕೆಲಸದಿಂದ ಬೋರ್‌ ಎನಿಸಿದಾಗ ವ್ಯಾಯಾಮ ಮಾಡಲು ಅಣಿಯಾಗುತ್ತೇನೆ. ಇದು ಮನಸು ಮತ್ತು ದೇಹ ಚಟುವಟಿಕೆಯಿಂದಿರಲು ನೆರವಾಗುತ್ತದೆ. ವಾರದಲ್ಲಿ ನಾಲ್ಕು ದಿನವಾದರೂ ಜಿಮ್‌ನಲ್ಲಿ ಬೆವರಿಳಿಸುತ್ತೇನೆ.

ADVERTISEMENT

‘ಇಂಥದ್ದೇ ವ್ಯಾಯಾಮ ಮಾಡಬೇಕು ಎಂಬ ನಿಯಮ ಹಾಕಿಕೊಂಡಿಲ್ಲ. ಒಮ್ಮೆ ಯೋಗ, ಇನ್ನೊಮ್ಮೆ ಜಿಮ್‌, ಮತ್ತೊಮ್ಮೆ ನೃತ್ಯ... ಹೀಗೆ ಮನಸಿಗೆ ಖುಷಿ ನೀಡುವ ಕಸರತ್ತಿನಲ್ಲಿ ತೊಡಗಿಸಿಕೊಳ್ಳುತ್ತೇನೆ. ಸುಮ್ಮನೆ ಮನೆಯ ಬಳಿಯೇ ಒಂದು ಗಂಟೆ ವಾಕಿಂಗ್‌ ಕೂಡ ಮಾಡುತ್ತೇನೆ.

‘ಆಹಾರದ ವಿಷಯದಲ್ಲಿಯೂ ನಾನು ಚ್ಯೂಸಿ. ನಮ್ಮಮನೆಯಲ್ಲಿ ಆರೋಗ್ಯಕರ ಆಹಾರಕ್ಕೆ ಪ್ರಾಮುಖ್ಯತೆ. ನನಗೆ ಡಯೆಟ್‌ ಪ್ರಜ್ಞೆ ಬರುವ ಮುಂಚಿನಿಂದಲೂ ಅಮ್ಮ ಮೊಳಕೆ ಕಾಳು, ಹಸಿ ತರಕಾರಿಗಳನ್ನು ತಿನ್ನಲು ಕೊಡುತ್ತಿದ್ದರು. ಬರೀ ಉಪ್ಪು ಹಾಕಿ ತರಕಾರಿ ಬೇಯಿಸಿ ತಿನ್ನುವುದು ನನಗೆ ಇಷ್ಟ. ಬಿಟ್ರೋಟ್‌, ಕ್ಯಾರೆಟನ್ನು ಆಗಾಗ್ಗೆ ಹಸಿಯಾಗಿ ತಿನ್ನುತ್ತೇನೆ. ಬೆಳಿಗ್ಗೆ ಬಾಳೆಹಣ್ಣು, ಬಾದಾಮಿ ವಾಲ್‌ನಟ್‌ ಪೌಡರ್‌, ಶೇಂಗಾಬೀಜವನ್ನು ಸೇರಿಸಿ ಪ್ರೋಟಿನ್‌ ಶೇಕ್‌ ಮಾಡಿ ಕುಡಿಯುತ್ತೇನೆ. ಖಾರದ ತಿನಿಸುಗಳೆಂದರೆ ನನಗೆ ಇಷ್ಟವಿಲ್ಲ. ಜಂಕ್‌ಫುಡ್‌ಗಳು ಇಷ್ಟವಾಗುವುದಿಲ್ಲ.

‘ಫಿಟ್‌ನೆಸ್‌ ಅಗತ್ಯವನ್ನು ಪ್ರತಿಯೊಬ್ಬರು ಕಂಡುಕೊಳ್ಳಬೇಕು. ನಾವು ಹುಡುಗಿಯರು ಬೇಗ ಭಾವುಕರಾಗುತ್ತೇವೆ. ವ್ಯಾಯಾಮ ಮಾಡುವುದರಿಂದ ದೇಹದ ಜೊತೆಗೆ ಮನಸು ಫಿಟ್‌ ಆಗಿರುತ್ತದೆ. ಇದರಿಂದ ಭಾವನೆಗಳನ್ನು ಹಿಡಿದಿಡುವುದು ಸಾಧ್ಯವಾಗುತ್ತದೆ. ನಟಿಯರು ಮಾತ್ರವಲ್ಲ, ಎಲ್ಲ ಮಹಿಳೆಯರು ಪ್ರತಿದಿನ 20 ನಿಮಿಷವಾದರೂ ವರ್ಕೌಟ್‌ ಮಾಡಬೇಕು. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಮಾನಸಿಕ ಸಮತೋಲಕ್ಕೆ ವರ್ಕೌಟ್‌ ಮೊರೆ ಹೋಗುವುದು ಅಗತ್ಯ. ವರ್ಕೌಟ್‌ ಮಾಡುವುದರಿಂದ ಹಲವು ಹಾರ್ಮೋನ್‌ ಸಮಸ್ಯೆಗಳಿಂದ ಮುಕ್ತಿ ಹೊಂದುವುದು ಸಾಧ್ಯವಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.