ADVERTISEMENT

ನೀನು ಮರೆತವರು ನಿನ್ನ ನೆನೆದರು

ಘನಶ್ಯಾಮ ಡಿ.ಎಂ.
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
‘ಏರ್‌ಲಿಫ್ಟ್‌’ನಲ್ಲಿ ಅಕ್ಷಯ್‌ಕುಮಾರ್
‘ಏರ್‌ಲಿಫ್ಟ್‌’ನಲ್ಲಿ ಅಕ್ಷಯ್‌ಕುಮಾರ್   

ಭೂಲಾ ಜಿಸೆ ತುಝ್‌ಕೋ ವೊ ಯಾದ್ ಕರ್ತಾ ರಹಾ…

ಇದು ‘ಏರ್‌ಲಿಫ್ಟ್‌’ (2016) ಸಿನಿಮಾದ ಜನಪ್ರಿಯ ಗೀತೆ. ವಿದೇಶದಲ್ಲಿ ಪಟಪಟಿಸುತ್ತಿರುವ ರಾಷ್ಟ್ರಧ್ವಜದ ಎದುರು ನಿಂತವರನ್ನೇ ಉದ್ದೇಶಿಸಿ ಹೇಳಿದಂತಿರುವ ಈ ಗೀತೆಯ ಭಾವ: ‘ನೀನು ಅವಳನ್ನು ಮರೆತೆ, ಆಕೆ ನಿನ್ನನ್ನು ನೆನೆಯುತ್ತಲೇ ಇದ್ದಳು’. ಇಲ್ಲಿ ಅವಳು ಪದವು ದೇಶ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಸಿನಿಮೋತ್ಸವದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಮಲಯಾಳಂ ಚಿತ್ರ ‘ಟೇಕಾಫ್’ ನೋಡಿದ ಅನೇಕರಿಗೆ ಮತ್ತೆ ಮತ್ತೆ ‘ಏರ್‌ಲಿಫ್ಟ್’ ಮತ್ತು ಈ ಗೀತೆ ನೆನಪಾಗುತ್ತಿತ್ತು.

ಭಾರತೀಯರು ಯಾವ ದೇಶದಲ್ಲಿದ್ದರೂ ಭಾರತೀಯರೇ. ಅವರು ಸಂಕಷ್ಟಕ್ಕೆ ಸಿಲುಕಿದಾಗ ರಕ್ಷಣೆಗೆ ಧಾವಿಸಬೇಕಾದದ್ದು ನಮ್ಮ ಸರ್ಕಾರದ ಕರ್ತವ್ಯ. ಇಂಥ ಎರಡು ಪ್ರಸಂಗಗಳನ್ನು ‘ಏರ್‌ಲಿಫ್ಟ್’ ಮತ್ತು ‘ಟೇಕಾಫ್’ ಭಿನ್ನ ನೆಲೆಗಟ್ಟಿನಲ್ಲಿ ಕಟ್ಟಿಕೊಡಲು ಯತ್ನಿಸುತ್ತವೆ.

ADVERTISEMENT

ಇರಾಕ್ ಸೇನೆ ಕುವೈತ್‌ ವಶಪಡಿಸಿಕೊಂಡ ನಂತರ ಅಲ್ಲಿದ್ದ 1.70 ಲಕ್ಷ ಭಾರತೀಯರು ಸಂಕಷ್ಟಕ್ಕೆ ಸಿಲುಕಿದರು. ಅವರನ್ನು ಭಾರತ ಸರ್ಕಾರವು ಜೋರ್ಡಾನ್ ಮೂಲಕ ವಾಯುಮಾರ್ಗದಲ್ಲಿ ಮಾತೃಭೂಮಿಗೆ ಕರೆತಂದಿತು. ವಾಯುಮಾರ್ಗ ಬಳಸಿ ನಡೆದ ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ಇದು. ಈ ಕಾರ್ಯಾಚರಣೆಯ ಹಿಂದಿನ ವಿದ್ಯಮಾನಗಳನ್ನು ಬಾಲಿವುಡ್ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನವೇ ‘ಏರ್‌ಲಿಫ್ಟ್‌’.

ಕುವೈತ್‌ನಲ್ಲಿ ನೆಲೆಸಿರುವ ಭಾರತ ಸಂಜಾತ ಉದ್ಯಮಿ ರಂಜಿತ್ ಕಟಿಯಾಲ್‌ (ಅಕ್ಷಯ್‌ಕುಮಾರ್) ಹಣಕ್ಕಷ್ಟೇ ಬೆಲೆ ಕೊಡುವ ಮನುಷ್ಯ. ಹುಟ್ಟಿದ ದೇಶವನ್ನು ಮರೆತು, ‘ನನ್ನ ದೇಶ ಕುವೈತ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮನಸ್ಥಿತಿಯವ. ಇರಾಕ್ ಆಕ್ರಮಣದ ನಂತರ ಕುವೈತ್‌ ಅರಾಜಕತೆಯ ಬೀಡಾಗುತ್ತದೆ. ರಂಜಿತ್‌ನ ಭಾರತೀಯ ಸಂಜಾತ ಚಾಲಕ ತನ್ನ ಮಾಲೀಕನನ್ನು ರಕ್ಷಿಸುವ ಯತ್ನದಲ್ಲಿ ಸಾಯುತ್ತಾನೆ. ಇದು ರಂಜಿತ್‌ನ ಕಣ್ತೆರೆಸುತ್ತದೆ.

‘ಕುವೈತ್‌ನಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರನ್ನು ಮಾತೃಭೂಮಿಗೆ ಕರೆತರಲು ಶ್ರಮಿಸಿದ ಸರ್ಕಾರಿ ಅಧಿಕಾರಿಗಳನ್ನು ಚಿತ್ರದಲ್ಲಿ ವಿಲನ್‌ಗಳಂತೆ ಚಿತ್ರಿಸಲಾಗಿದೆ. ಇತಿಹಾಸವನ್ನು ಅತಿ ಸರಳೀಕರಿಸುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯಲಾಗಿದೆ’ ಎನ್ನುವುದು ಈ ಚಿತ್ರದ ಮೇಲಿರುವ ಬಹುದೊಡ್ಡ ಆರೋಪ. ಬಾಲಿವುಡ್‌ನ ಸಿದ್ಧಸೂತ್ರಗಳನ್ನು ಮೀರುವ ಎಲ್ಲ ಸಾಧ್ಯತೆಗಳು ಮುಕ್ತವಾಗಿದ್ದರೂ ನಿರ್ದೇಶಕ ರಾಜಕೃಷ್ಣ ಮೆನನ್‌ ಅಂಥ ಧೈರ್ಯ, ಪ್ರಯತ್ನಗಳಿಗೆ ಹೆಚ್ಚು ಗಮನಕೊಟ್ಟಿಲ್ಲ.

‘ಏರ್‌ಲಿಫ್ಟ್‌’ಗೆ ಹೋಲಿಸಿದರೆ ‘ಟೇಕಾಫ್’ (2017) ಮೂಲ ಘಟನಾವಳಿಗಳಿಗೆ ಹೆಚ್ಚು ನಿಷ್ಠವಾಗಿರುವ ಸಿನಿಮಾ.

(‘ಟೇಕಾಫ್’ನಲ್ಲಿ ಕುಂಚಕೊ ಬೊಬನ್, ಪಾರ್ವತಿ ಮತ್ತು ಫಹಾಬ್ ಫಾಸಿಲ್)

2014ರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಇರಾಕ್‌ನ ಟಿಕ್ರಿತ್ ಮತ್ತು ಮೊಸುಲ್ ನಗರಗಳನ್ನು ವಶಪಡಿಸಿಕೊಂಡರು. ಅಲ್ಲಿದ್ದ ಕೇರಳ ಮೂಲದ 19 ನರ್ಸ್‌ಗಳು ಒತ್ತೆಯಾಳುಗಳಾಗಿ ಸಿಲುಕಿಕೊಂಡರು. ಭಾರತ ಸರ್ಕಾರವು ಇರಾಕ್ ರಾಯಭಾರ ಕಚೇರಿಯ ಮೂಲಕ ಅವರನ್ನು ಹೇಗೆ ಬಿಡಿಸಿಕೊಂಡಿತು ಎಂಬುದು ಈ ಚಿತ್ರದ ಒಂದೆಳೆ ಕಥೆ.

ಯುವತಿಯೊಬ್ಬಳ ಬದುಕು ಚಿತ್ರಿಸುವ ಮೂಲಕ ಇತಿಹಾಸವನ್ನೇ ಕಟ್ಟಿಕೊಡಲು ನಿರ್ದೇಶಕ ಮಹೇಶ್ ನಾರಾಯಣ್ ಯತ್ನಿಸಿದ್ದಾರೆ. ಇದು ಬದುಕನ್ನು, ದೇಶ ದೇಶಗಳ ಸಂಬಂಧಗಳನ್ನು ಹೆಣ್ಣಿನ ಕಣ್ಣಿನಲ್ಲಿ ನೋಡುವ ವಿಶಿಷ್ಟ ಕ್ರಮಕ್ಕೆ ಉತ್ಕೃಷ್ಟ ಮಾದರಿ. ಚಿತ್ರದ ಯಾವ ಪಾತ್ರವನ್ನೂ ನಿರ್ದೇಶಕರು ಔಚಿತ್ಯ ಮೀರಿ ಬಿಂಬಿಸಿಲ್ಲ. ಹೀಗಾಗಿಯೇ ಚಿತ್ರವನ್ನು ಆವರಿಸಿಕೊಂಡಿರುವ ಸಮೀರಾಳಷ್ಟೇ (ಪಾರ್ವತಿ) ಪರಿಣಾಮಕಾರಿಯಾಗಿ ಶಹೀದ್ (ಕುಂಚಕೊ ಬೊಬನ್) ಸಹ ಪ್ರೇಕ್ಷಕರ ಮನಸಿನಲ್ಲಿ ದಾಖಲಾಗುತ್ತಾನೆ. ಇರಾಕ್‌ನಲ್ಲಿ ಕುಳಿತು ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಾ ಒತ್ತೆಯಾಳುಗಳನ್ನು ಬಿಡಿಸಲು ಶ್ರಮಿಸುವ ರಾಯಭಾರಿ ಮನೋಜ್‌ನಂತೆಯೇ (ಫಹಾದ್ ಫಾಸಿಲ್) ಹೆಸರು ಪ್ರಸ್ತಾಪವಾಗದ ವಿದೇಶಾಂಗ ಸಚಿವೆ, ಕೇರಳದ ಮುಖ್ಯಮಂತ್ರಿಯ ಕನವರಿಕೆಗಳೂ ಹೃದಯಕ್ಕೆ ತಟ್ಟುತ್ತವೆ.

ಘಟನಾವಳಿಗಳ ಸಂಕೀರ್ಣತೆಯನ್ನು ಸರಳೀಕರಿಸುವ ಗೋಜಿಗೆ ಹೋಗದೆ ಇದ್ದದ್ದನ್ನು ಇದ್ದಂತೆ ಪ್ರೇಕ್ಷಕರ ಮುಂದಿಡಲು ಚಿತ್ರ ಯತ್ನಿಸುತ್ತದೆ. ದುಬೈನಲ್ಲಿರುವ ಕೇರಳ ಮೂಲದ ಉದ್ಯಮಿಯ ಮಧ್ಯಸ್ಥಿಕೆ, ಉಗ್ರರೊಂದಿಗೆ ಭಾರತದ ಪರವಾಗಿ ಮಾಡಿಕೊಳ್ಳುವ ರಹಸ್ಯ ಒಪ್ಪಂದ, ನರ್ಸ್‌ಗಳ ಬಿಡುಗಡೆ ಹೀಗೆ 2.19 ಗಂಟೆಯ ಸಿನಿಮಾದ ದೃಶ್ಯ ಸರಣಿಗಳು ಪ್ರೇಕ್ಷಕರನ್ನು ಕುರ್ಚಿಗಂಟಿಕೊಂಡಂತೆ ಕೂಡಿಸುವಷ್ಟು ಶಕ್ತವಾಗಿವೆ.

ಎರಡೂ ಚಿತ್ರಗಳಲ್ಲಿ ಕನ್ನಡಿಗ ಪ್ರಕಾಶ್ ಬೆಳವಾಡಿ ಇದ್ದಾರೆ. ‘ಏರ್‌ಲಿಫ್ಟ್‌’ನಲ್ಲಿ ತಲೆ ತಿನ್ನುವ ಜಾರ್ಜ್ ಪಾತ್ರದಲ್ಲಿ ಒಂದಿಷ್ಟು ನಗು, ಬೇಸರ, ಸಿಟ್ಟು ಹುಟ್ಟಿಸುತ್ತಾರೆ. ‘ಟೇಕಾಫ್‌’ನಲ್ಲಿ ಅವರು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿ ಸರ್ಕಾರಿ ಅಧಿಕಾರಿಗಳು ಎದುರಿಸುವ ದ್ವಂದ್ವವನ್ನು ಪ್ರತಿನಿಧಿಸಿದ್ದಾರೆ.

ದೂರದೇಶದಲ್ಲಿ ಬದುಕುವ ಭಾರತೀಯರು ಕಷ್ಟ ಬಂದಾಗ ಆಸರೆಗಾಗಿ ಸ್ವದೇಶದತ್ತ ನೋಡುತ್ತಾರೆ. ಇಂಥವರ ಕಣ್ಣಿಗೆ ಬೀಳುವ ಸ್ವದೇಶದ ಬಾವುಟ ‘ತನಗಾಗಿ ತುಡಿಯುವವರು ಯಾರೋ ಇದ್ದಾರೆ’ ಎಂಬ ಸಮಾಧಾನ ಕೊಡುತ್ತದೆ. ಈ ಸಂಗತಿಯನ್ನು ಎರಡೂ ಚಿತ್ರಗಳು ಸಶಕ್ತವಾಗಿ ಕಟ್ಟಿಕೊಟ್ಟಿವೆ. ಬಹುಶಃ ಇದೇ ಕಾರಣಕ್ಕೆ ಇರಬೇಕು, ಎರಡೂ ಚಿತ್ರಗಳ ಕ್ಲೈಮ್ಯಾಕ್ಸ್‌ನಲ್ಲಿ ಕೆಲ ಸೆಕೆಂಡುಗಳ ಮೌನದಲ್ಲಿ ರಾಷ್ಟ್ರಧ್ವಜ ಪಟಪಟಿಸುತ್ತದೆ. ಚಿತ್ರದ ಪಾತ್ರಗಳಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಅದು ನೆಮ್ಮದಿಕೊಡುತ್ತದೆ.

ಎರಡೂ ಚಿತ್ರಗಳು ಯುಟ್ಯೂಬ್‌ನಲ್ಲಿ (Airlift ಮತ್ತು TakeOff) ಸಿಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.