ADVERTISEMENT

ನೀರಿನಡಿ ತೇಲುವ ಸುರಂಗ ಮಾರ್ಗವಿದು...!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ನೀರಿನಡಿ ತೇಲುವ ಸುರಂಗ ಮಾರ್ಗವಿದು...!
ನೀರಿನಡಿ ತೇಲುವ ಸುರಂಗ ಮಾರ್ಗವಿದು...!   

ಅಂಟ್ಲಾಂಟಿಕ್ ಸಾಗರದ ತೀರದಲ್ಲಿರುವ ಪ್ರಕೃತಿ ಸುಂದರ ತಾಣ ನಾರ್ವೆ. ಮನಸೂರೆಗೊಳ್ಳುವ ಪ್ರಕೃತಿಯಿಂದ ಹಾಗೂ ವಿಸ್ಮಯ ಎನಿಸುವ ರಸ್ತೆಗಳಿಂದ ಸುಪ್ರಸಿದ್ಧವಾಗಿರುವ ನಾರ್ವೆಯು ಈಗ ನೀರಿನಡಿ ತೇಲುವ ಸುರಂಗಮಾರ್ಗವನ್ನು ರೂಪಿಸಲು ಹೊರಟಿದೆ, ಅದೂ ವಾಹನಗಳ ಸಂಚಾರಕ್ಕೆ! ಈ ಮೂಲಕ ವಿಶ್ವದ ಪ್ರಥಮಗಳ ಸಾಲಿನಲ್ಲಿ ನಾರ್ವೆ ಸೇರ್ಪಡೆಯಾಗಲಿದೆ.

ಸಾರಿಗೆ ಸಮಸ್ಯೆ ಬಗೆಹರಿಸಲು ನಾರ್ವೇಜಿಯನ್ ಸಾರ್ವಜನಿಕ ಸಾರಿಗೆ ಆಡಳಿತ (ಎನ್‌ಪಿಆರ್‌ಎ) ವಿಭಾಗವು 2012ರಿಂದಲೇ ನಡೆಸಿದ್ದ ಅಧ್ಯಯನ ಫಲವಾಗಿ ಈ ಯೋಜನೆ ರೂಪು ಪಡೆದಿದೆ.

ಈ ಸುರಂಗಮಾರ್ಗವು ಕ್ರಿಸ್ಟಿಯಾನ್ ಸ್ಯಾಂಡ್ ಮತ್ತು ಟ್ರಾಂಡ್ಹೇಮ್ ಎಂಬ ಎರಡು ಪ್ರಮುಖ ನಗರಗಳನ್ನು ಸಂಧಿಸಲಿದೆ. ಯೋಜನೆಯ ಆರಂಭಿಕ ಹಂತವಾಗಿ ಸೋಗ್ನೇಫ್‌ಜೋರ್ಡ್‌ ಸರೋವರದಲ್ಲಿ ತೇಲುವ ಸುರಂಗ ನಿರ್ಮಿಸಲಾಗುವುದು. ಇದು ಈ ತುದಿಯಿಂದ ಓಪ್ಪೆಡ್ಯಾಲ್ ಸರೋವರ ಮಾರ್ಗವಾಗಿ ಲ್ಯಾವಿಕ್ ನಗರವನ್ನು ಸಂಧಿಸಲಿದೆ. ಈ ಎರಡು ನಗರಗಳ ನಡುವೆ ಈಗ ಓಡಾಡಲು 21 ಗಂಟೆ ಬೇಕಾಗುತ್ತದೆ. ಈ ಸುರಂಗ ಮಾರ್ಗ ಸಂಪೂರ್ಣ ಯಶಸ್ವಿಯಾದರೆ ಓಡಾಟದ ಸಮಯವು 10ಗಂಟೆಗಿಂತಲೂ ಕಡಿಮೆಯಾಗಲಿದೆ ಎನ್ನಲಾಗಿದೆ.

ಸುಮಾರು ನಾಲ್ಕು ಸಾವಿರ ಅಡಿ ಉದ್ದದ ಕಾಂಕ್ರೀಟ್ ಟ್ಯೂಬ್‌ಗಳಿಂದ  ಈ ಮಾರ್ಗ ರೂಪಿಸಲಾಗುವುದು.  ಇದರ ಇನ್ನೊಂದು ವಿಶೇಷತೆ ಎಂದರೆ ಯಾವುದೇ ರೀತಿಯ ಹವಾಮಾನ ವೈಪರೀತ್ಯಕ್ಕೂ ಸುರಂಗ ಮಾರ್ಗದಿಂದ ತೊಂದರೆ ಆಗುವುದಿಲ್ಲವಂತೆ.

ಇದರಿಂದ ಹಡಗುಗಳ ಸಂಚಾರಕ್ಕೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ತಜ್ಞರು, ‘ಜಲಮಟ್ಟದಿಂದ 65ರಿಂದ 100 ಅಡಿ ಆಳದಲ್ಲಿ ಸುರಂಗಸೇತುವೆ ನಿರ್ಮಿಸಲಾಗುವುದು. ಸಾಗರದಾಳದಲ್ಲಿರುವ ಸುರಂಗಸೇತುವೆಯ ಟ್ಯೂಬ್‌ಗಳನ್ನು ನೀರಿನ ಮೇಲಿರುವ ತೆಪ್ಪದಂತಿರುವ ಪ್ಯಾಂಟೂನ್‌ಗಳಿಂದ ನಿಯಂತ್ರಿಸಲಾಗುವುದು. ಇದರಿಂದ ಹಡಗಿಗೆ ಹಾದು ಹೋಗಲು ಯಾವುದೇ ರೀತಿಯ ತೊಂದರೆ ಎದುರಾಗದು’ ಎಂದಿದ್ದಾರೆ.

‘ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅನೇಕ ಭೂವೈಜ್ಞಾನಿಕ ಸಮೀಕ್ಷೆಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ. ಒಮ್ಮೆ ಕಾಮಗಾರಿ ಆರಂಭಗೊಂಡಲ್ಲಿ ಪೂರ್ಣಗೊಳ್ಳಲು ಕನಿಷ್ಠ 10 ವರ್ಷ ಸಮಯ ತಗುಲಲಿದೆ. 2035ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದಿದ್ದಾರೆ ತಜ್ಞರು. ಅಂದಹಾಗೆ, ಇದು 25 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 25 ಸಾವಿರ ಕೋಟಿ) ವೆಚ್ಚದ ಯೋಜನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.