ADVERTISEMENT

ಪಾಠ ಕಲಿಸಿದ ದೂರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST
ಪಾಠ ಕಲಿಸಿದ ದೂರು
ಪಾಠ ಕಲಿಸಿದ ದೂರು   

ಅದು ಎಸ್‍ಎಂಎಸ್‍ಗಳ ಕಾಲ. ಹೊಸ ನಂಬರ್ ತಗೊಂಡೆ ಅಂದ್ರೆ ಅದರಿಂದ ಪರಿಚಿತರಿಗೆ ನನ್ನ ಹೆಸರು ಹೇಳದೇ ಮೆಸೇಜ್ ಮಾಡಿ ಆಟ ಆಡಿಸುವ ವಿಚಿತ್ರ ಕ್ರೇಜ್ ನನಗೆ ಇತ್ತು. ಅವರ ಗೋಳಾಟ ನೋಡಿ ಖುಷಿಪಡುತ್ತಿದ್ದೆ.

ಒಮ್ಮೆ ದೂರದೂರಿನ ಗೆಳೆಯನಿಗೆ ನನ್ನ ಹೊಸ ನಂಬರ್‍ನಿಂದ ಸಂದೇಶಗಳನ್ನು ಕಳುಹಿಸಲು ಶುರುವಿಟ್ಟುಕೊಂಡೆ. ಯಾರು? ಯಾರು? ಅಂತ ಹತ್ತಾರು ಬಾರಿ ಕೇಳಿದರೂ ನಾನು ನನ್ನ ಹೆಸರು ಹೇಳದೆ ಸತಾಯಿಸಿದ್ದೆ. ಸುಮಾರು ಒಂದು ತಿಂಗಳ ನಂತರ ಅದೇ ನಂಬರ್‍ಗೆ ನನಗೊಂದು ಕರೆ ಬಂತು. ನಾನು ಮನೆಯಲ್ಲಿರಲಿಲ್ಲ.

‘ಹಲೋ ಎಲ್ಲಿದ್ದೀರಿ?’ ಎಂದು ನನ್ನ ಹೆಸರು ಕರೆದು ಮಾತಾಡಿದರು. ‘ಅರ್ಜೆಂಟಾಗಿ ನಿಮ್ಮ ಮನೆಯ ಹತ್ರ ಬನ್ನಿ’ ಅಂದ್ರು. ನಾನು ಯಾರಿರಬಹುದು ಎಂಬ ಕುತೂಹಲದಿಂದ ಬೇಗ ಬೇಗ ಮನೆ ಕಡೆ ಹೊರಟೆ. ಮನೆಯಲ್ಲಿ ಪೋಲಿಸ್. ಎದೆ ಒಂದೇ ಸಲಕ್ಕೆ ಧಸಕ್ ಎಂದಿತ್ತು.

ADVERTISEMENT

‘ಈ ನಂಬರ್ ನಿಮ್ದೇನಾ? ನೀವೇ ಯೂಸ್ ಮಾಡ್ತಿದ್ದೀರಾ?’ ಕೇಳಿದರು. ನಂಬರ್ ನೋಡಿ ಹೌದು ಅಂದೆ. ‘ನಿಮ್ಮ ಮೇಲೆ ದೂರಿದೆ ಬನ್ನಿ’ ಅಂದ್ರು. ‘ಯಾರು ದೂರು ಕೊಟ್ಟಿದ್ದು?’ ಅಂತ ನಡುಗುತ್ತಲೇ ಕೇಳಿದೆ. ನನ್ನ ಗೆಳೆಯನ ಹೆಸರು ಅವರ ಬಾಯಿಂದ ಹೊರ ಬಿತ್ತು. ಎಲ್ಲವೂ ಗೊತ್ತಾಯ್ತು. ತಕ್ಷಣ ಅವನಿಗೆ ಪೋನ್ ಮಾಡಿ ನಿಜ ಸಂಗತಿ ಹೇಳಿದೆ. ಅವನು ನನ್ನನ್ನು ಚೆನ್ನಾಗಿ ಬೈದು ದೂರು ವಾಪಸ್ ಪಡೆದ. ಅಂದಿನಿಂದ ಅಪರಿಚಿನಂತೆ ಕಾಲ್ ಮಾಡುವ, ಮೆಸೇಜ್ ಮಾಡುವ ತಪ್ಪು ಮಾಡಲಿಲ್ಲ. ನನ್ನ ಗೆಳೆಯ ಅವನಿಗೆ ತಿಳಿಯದೇ ನನಗೆ ಸರಿಯಾಗಿ ಬುದ್ಧಿ ಕಲಿಸಿದ.
–ಸದಾಶಿವ್ ಸೊರಟೂರು,
ದೊಡ್ಡಬೊಮ್ಮನಹಳ್ಳಿ. ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.