ADVERTISEMENT

ಪಿಚ್ಚರ್ ನೋಡಿ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಪಿಚ್ಚರ್ ನೋಡಿ
ಪಿಚ್ಚರ್ ನೋಡಿ   

ಅದು 1864. ಅಮೆರಿಕದಲ್ಲಿ ನಡೆಯುತ್ತಿದ್ದ ನಾಗರಿಕ ಯುದ್ಧದ ಕೊನೆಯ ಘಟ್ಟ. ಮಾರ್ತಾ ಫಾರ್ನ್ಸ್‌ವರ್ಥ್‌ ಒಂದು ಶಾಲೆಯನ್ನು ನಡೆಯುತ್ತಿರುತ್ತಾಳೆ. ಯುದ್ಧದ ಕಾರಣಕ್ಕೆ ಎಲ್ಲ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಶಾಲೆ ಬಿಟ್ಟು ಹೋಗಿದ್ದಾರೆ. ಈಗ ಐದು ವಿದ್ಯಾರ್ಥಿನಿಯರು ಮತ್ತು ಒಬ್ಬಳು ಶಿಕ್ಷಕಿ ಮಾತ್ರ ಮಾರ್ತಾ ಜತೆಗೆ ಇದ್ದಾರೆ.

ಒಂದು ಮುಂಜಾವು ಅಣಬೆ ಆರಿಸಲು ಕಾಡಿಗೆ ಹೋದ ಆ್ಯಮಿಗೆ ಗಾಯಗೊಂಡ ಸೈನಿಕ ಸಿಗುತ್ತಾನೆ. ಯೂನಿಯನ್‌ ಆರ್ಮಿಯ ಸೈನಿಕ ಮೆಕ್‌ಬೆರ‍್ರಿಯ ಕಾಲಿಗೆ ಗಂಭೀರ ಗಾಯವಾಗಿದೆ. ಆ್ಯಮಿ ಅವನನ್ನು ಶಾಲೆಗೆ ಕರೆದುಕೊಂಡು ಬರುತ್ತಾಳೆ. ಏಳು ಹೆಣ್ಣುಮಕ್ಕಳೇ ಇರುವ ಕಟ್ಟಡದಲ್ಲಿ ಮೆಕ್‌ಬೆರ‍್ರಿ ಸೇರಿಕೊಳ್ಳುತ್ತಾನೆ.

ಮೇಲ್ನೋಟಕ್ಕೆ ಶಾಂತವಾಗಿ ಕಾಣಿಸುತ್ತಿದ್ದರೂ ಆ ಶಾಲೆಯಲ್ಲಿನ ಎಲ್ಲರಿಗೂ ತಾವು ಬಂಧನದಲ್ಲಿದ್ದೇವೆ ಎಂಬ ಭಾವ ಮನಸಲ್ಲಿದೆ. ದೊಡ್ಡ ಕಟ್ಟಡದ ಆವರಣ, ಅದರ ಗೇಟು ಅವರಿಗೆ ಸೆರೆಮನೆಯಂತೇ ಭಾಸವಾಗುತ್ತಿದೆ. ಆದರೆ ಮೇಲ್ನೋಟಕ್ಕೆ ಅದನ್ನು ಯಾರೂ ವ್ಯಕ್ತಪಡಿಸುತ್ತಿಲ್ಲ. ಇಂಥ ವಾತಾವರಣದಲ್ಲಿ ಗಾಯಾಳುವಾಗಿ ಸೇರಿಕೊಳ್ಳುವ ಸೈನಿಕ ಅವರೆಲ್ಲರಿಗೂ ಒಂದೇ ಸ್ಥಳದಲ್ಲಿ ನಿಂತುಹೋದ ತಮ್ಮ ಬದುಕಿನ ಚಲನೆಯ ದಾರಿಯಾಗಿ ಕಾಣಿಸುತ್ತದೆ.

ADVERTISEMENT

ಏಳು ಹೆಣ್ಣುಮಕ್ಕಳ ಭಾವತಲ್ಲಣಗಳನ್ನು ತೀವ್ರವಾಗಿ ಮತ್ತು ಅಚ್ಚುಕಟ್ಟಾಗಿ ಹೇಳುವ ಸಿನಿಮಾ ದ ಬಿಗಾಯಲ್ಡ್‌.

ಸೋಫಿಯಾ ಕೊಪ್ಪೋಲಾ ನಿರ್ದೇಶನದ ಈ ಚಿತ್ರ ತಯಾರಾಗಿದ್ದು ಅಮೆರಿಕದಲ್ಲಿ. ಥಾಮಸ್‌ ಪಿ. ಚುಲ್ಲಿನಾನ್‌ ಬರೆದ ಪೇಂಟೆಡ್‌ ಡೆವಿಲ್‌ ಎಂಬ ಕಾದಂಬರಿ ಆಧಾರಿಸಿದ ಸಿನಿಮಾವೊಂದು 1971ರಲ್ಲಿಯೇ ಬಂದಿತ್ತು. ಸೋಫಿಯಾ ಇದೇ ಸಿನಿಮಾವನ್ನು ಹೆಣ್ಣಿನ ಭಾವಲೋಕದಿಂದ ಮತ್ತೊಮ್ಮೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಫಿಲಿಫೈನ್‌ ಲೇ ಸೋರ್ಡ್‌ ಕ್ಯಾಮೆರಾ ಕಲಾವಿದರ ಕಣ್ಣಲ್ಲಿ ಭಾವತೀವ್ರ ಅಭಿನಯವನ್ನು ಸಶಕ್ತವಾಗಿ ಸೆರೆಯಹಿಡಿಯುವುದರ ಜತೆಗೆ ಆಕಾಶಕ್ಕೆ ಚಪ್ಪರ ಹಾಕಿದಂಥ ಬೃಹತ್‌ ಮರಗಳ ಪರಿಸರವನ್ನು ಮೋಹಕವಾಗಿ ಕಟ್ಟಿಕೊಟ್ಟಿದೆ. ಫಿನಿಕ್ಸ್‌ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಕೋಲಿನ್‌ ಫಾರ್ರೆಲ್‌, ನಿಕೋಲ್‌ ಕಿಡಮನ್‌, ಕ್ರಿಸ್ಟನ್‌ ಡಂಸ್ಟ್‌, ಎಲ್ಲೆ ಪ್ಯಾನಿಂಗ್‌ ಎಲ್ಲರ ಅಭಿನಯವೂ ಸೇರಿ ಚಿತ್ರಕ್ಕೊಂದು ಭಾವವಲಯವನ್ನು ನಿರ್ಮಿಸಿದೆ. ಅಂತರ್ಜಾಲದಲ್ಲಿ https://bit.ly/2InUIgZ ಕೊಂಡಿ ಮೂಲಕ ‘ದ ಬಿಗಾಯಲ್ಡ್‌’ ಸಿನಿಮಾವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.