ADVERTISEMENT

ಬಲವರ್ಧಕ ಅಶ್ವಗಂಧ

ಮುರಲೀಧರ ಕುಲಕರ್ಣಿ
Published 25 ಅಕ್ಟೋಬರ್ 2013, 19:30 IST
Last Updated 25 ಅಕ್ಟೋಬರ್ 2013, 19:30 IST

ಅಶ್ವಗಂಧ ಎಂದರೆ ಕುದುರೆಯ ವಾಸನೆಯುಳ್ಳದ್ದು ಎಂದು ಅರ್ಥ. ಆಯುರ್ವೇದೀಯ ಔಷಧಿಗಳಲ್ಲಿ ಅಶ್ವಗಂಧ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಅಶ್ವಗಂಧ ಕುದುರೆಯ ವಾಸನೆಯನ್ನು ಹೊಂದಿರುವುದಿಲ್ಲ. ಬದಲಾಗಿ ಅಶ್ವಗಂಧವನ್ನು ಸೇವಿಸುವವರು ಕುದುರೆಯಂತೆ ಬಲಯುತರೂ, ಚೈತನ್ಯಶಾಲಿಗಳು ಹಾಗೂ ಸ್ಫೂರ್ತಿಯುಳ್ಳವರೂ ಆಗುತ್ತಾರೆ ಎಂದು ಅರ್ಥ.

ಅಶ್ವಗಂಧ ಒಂದು ಬೇರು. ಇದು ಪಶ್ಚಿಮ ಭಾರತದ ಗುಜರಾತ್, ಮಹಾರಾಷ್ಟ್ರ, ರಾಜಸ್ತಾನಗಳಲ್ಲದೆ ಉತ್ತರ ಭಾರತದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಹೆಚ್ಚಾಗಿ ಬೆಳೆಯುತ್ತದೆ. ಔಷಧಕ್ಕಾಗಿಯೇ ವಿಶೇಷವಾಗಿ ಇದನ್ನು ಬೆಳೆಯಲಾಗುತ್ತದೆ. ಅಶ್ವಗಂಧ ಸಸ್ಯ ಬದನೆ ಗಿಡವನ್ನು ಹೋಲುತ್ತದೆ. ಅದು ಸುಮಾರು 3 ಅಡಿಗಳಷ್ಟು ಉದ್ದವಾಗಿ ಬೆಳೆಯುತ್ತದೆ. ಅದರ ಎಲೆಗಳು ಹಂದಿಯ ಕಿವಿಗಳನ್ನು ಹೋಲುವುದರಿಂದ ಅದನ್ನು `ವರಾಹಾಕರ್ಣಿ' ಎಂದು ಕೂಡ ಕರೆಯುತ್ತಾರೆ. ಅಶ್ವಗಂಧ ಸಸಿಯ ಕೆಳಭಾಗದಲ್ಲಿ ಮೂಲಂಗಿ ಆಕಾರದ ಒಂದು ಕಂದವಿರುತ್ತದೆ. ಅದು ಅಶ್ವಗಂಧ ಸಸ್ಯದ ಬೇರು. ಅದು 6 ಅಂಗುಲದಿಂದ 12 ಅಂಗುಲದವರೆಗೆ ಉದ್ದ ಇರುತ್ತದೆ. ರುಚಿಯಲ್ಲಿ ಕಹಿಯಾಗಿರುತ್ತದೆ. ಅದನ್ನು ಒಣಗಿಸಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ.

ಅಶ್ವಗಂಧ ಪುಡಿ ಉಷ್ಣಕಾರಕ ಆದ್ದರಿಂದ ಅದನ್ನು ಚಳಿಗಾಲದಲ್ಲಿ ಸೇವಿಸುತ್ತಾರೆ. ಅಶ್ವಗಂಧ ಪೌಷ್ಟಿಕ ಆಗಿರುವುದರಿಂದ ಶರೀರಕ್ಕೆ ಬಲ ನೀಡುತ್ತದೆ. ವೀರ್ಯವರ್ಧಕವೂ ಆಗಿದೆ. ಲೈಂಗಿಕ ದೌರ್ಬಲ್ಯವನ್ನು ನಿವಾರಿಸಿ ವೀರ್ಯವೃದ್ಧಿ ಮಾಡುವುದರಿಂದ ಇದನ್ನು ವಾಜಿಗಂಧಾ ಮತ್ತು ವಾಜಿಕಾರ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಇದು ವೀರ್ಯದಲ್ಲಿ ಶುಕ್ರಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕಾಗಿ `ಶುಕ್ರಲಾ' ಎಂದು ಕೂಡ ಕರೆಯುವುದುಂಟು. ಇದು ಶರೀರದ ಸಪ್ತಧಾತುಗಳಿಗೆ ಪೋಷಣೆ ನೀಡುವುದಲ್ಲದೆ, ವಾತರೋಗವನ್ನು ಸಹ ಗುಣಪಡಿಸುತ್ತದೆ. ಇದರಲ್ಲಿ ಖನಿಜಗಳು ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮೂಳೆಗಳು ಟೊಳ್ಳಾಗುವುದನ್ನು ತಡೆಗಟ್ಟುತ್ತದೆ.

ಕಾಮೋದ್ದೀಪಕ ಗುಣವುಳ್ಳ ಅಶ್ವಗಂಧದ ಪುಡಿಯನ್ನು ಲೈಂಗಿಕ ದೌರ್ಬಲ್ಯ ನಿವಾರಿಸುವ ಎಲ್ಲ ಔಷಧಿಗಳಲ್ಲಿ ಬಳಸುತ್ತಾರೆ. ಅಶ್ವಗಂಧ ಕಫ ನಿವಾರಕ, ಶ್ವೇತ ಕುಷ್ಠ ನಿವಾರಕ, ಕ್ಷಯರೋಗ ನಿವಾರಕ ಮತ್ತು ವಾಯು ವಿಕಾರಗಳನ್ನು ಗುಣಪಡಿಸುವ ಔಷಧಿಯಾಗಿದೆ. ಧಾತು ದೌರ್ಬಲ್ಯ, ಯೋನಿ ಶೂಲ, ಕೈಕಾಲುಗಳಲ್ಲಿನ ಸೆಳೆತ, ಆಮವಾತ, ಜ್ವರ, ದಾಹ, ಕೀಲುನೋವು, ಶ್ವಾಸರೋಗ, ಗರ್ಭಾಶಯ ದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ಆಯಾಸ, ವೃದ್ಧಾಪ್ಯದ ದೌರ್ಬಲ್ಯ, ರೋಗ ಗುಣಮುಖವಾದ ನಂತರ ಬರುವ ದೌರ್ಬಲ್ಯ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಅಶ್ವಗಂಧ ನಮಗೆ ಪುಡಿ ಮತ್ತು ಬೇರು ಎರಡು ರೂಪದಲ್ಲೂ ದೊರೆಯುತ್ತದೆ. ಬೇರಿನ ರೂಪದ ಅಶ್ವಗಂಧಕ್ಕೆ ಬೆಲೆ ಕಡಿಮೆ. ಅದನ್ನು ಮನೆಯಲ್ಲಿ ಕುಟ್ಟಿ ಪುಡಿ ಮಾಡಿ ಬಟ್ಟೆಯಿಂದ ಸೋಸಿದಾಗ ನುಣುಪಾದ ಪುಡಿ ದೊರಕುತ್ತದೆ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡು ನಿಯಮಿತವಾಗಿ ಸೇವಿಸಬೇಕು.

ಸೇವಿಸುವ ವಿಧಾನ: ಅಶ್ವಗಂಧದ ಪುಡಿಯನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಎರಡು ವಿಧದಲ್ಲಿ ಸೇವಿಸಬಹುದು. ಹಾಲಿನೊಂದಿಗೆ ಸೇವಿಸಬೇಕಾದರೆ ಹಾಲಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಮುಂಜಾನೆ ಹಾಗೂ ರಾತ್ರಿ ಒಂದೊಂದು ಚಮಚೆಯನ್ನು ಸೇವಿಸಬೇಕು. ಅಶ್ವಗಂಧ, ಜಟಾಮಾಸಿ, ಬ್ರಾಹ್ಮಿ ಮೂರನ್ನೂ ಸಮಪ್ರಮಾಣದಲ್ಲಿ ಮಿಶ್ರ ಮಾಡಿ, ಒಂದರಿಂದ ಮೂರು ಗ್ರಾಂವರೆಗೆ ಜೇನುತುಪ್ಪದೊಂದಿಗೆ ಸೇವಿಸಿದರೆ ಅಧಿಕ ರಕ್ತದೊತ್ತಡ ಗುಣವಾಗುತ್ತದೆ. ಅಶ್ವಗಂಧದಿಂದ ಹಲವು ಔಷಧಗಳನ್ನು ತಯಾರಿಸುತ್ತಾರೆ. ಅಶ್ವಗಂಧಾರಿಷ್ಟಪಾಕ, ಅಶ್ವಗಂಧಾರಿಷ್ಟ ಘೃತ, ಅಶ್ವಗಂಧಾ ಚೂರ್ಣ, ಕಾಮೇಶ್ವರ ಪಾಕ ಇತ್ಯಾದಿ. ಅಶ್ವಗಂಧ ಚೂರ್ಣಕ್ಕೆ ಬದಲಾಗಿ ಈ ಸಿದ್ಧ ಔಷಧಿಗಳನ್ನು ಕೂಡ ಸೇವಿಸಬಹುದು.
                      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.