ADVERTISEMENT

ರಾಜೀವ್‌ ಅಕ್ಷಯ್‌ ಆಗಿದ್ದು!

​ಪ್ರಜಾವಾಣಿ ವಾರ್ತೆ
Published 24 ಜನವರಿ 2016, 19:30 IST
Last Updated 24 ಜನವರಿ 2016, 19:30 IST
ರಾಜೀವ್‌  ಅಕ್ಷಯ್‌  ಆಗಿದ್ದು!
ರಾಜೀವ್‌ ಅಕ್ಷಯ್‌ ಆಗಿದ್ದು!   

ನಾನು ರಾಜೀವ್‌ ಹರಿಓಂ ಭಾಟಿಯಾ. ಢಾಕಾದಲ್ಲಿ ಕೆಲಸ ಮಾಡಿದ್ದೇನೆ. ಕೋಲ್ಕತ್ತಾದಲ್ಲಿ ಟ್ರಾವೆಲ್‌ ಏಜೆಂಟ್‌ ಬಳಿ ಸಹಾಯಕನಾಗಿ ದುಡಿದೆ. ದೆಹಲಿಯಿಂದ ಕುಂದನ್‌ ಆಭರಣಗಳನ್ನು ತಂದು ಮುಂಬೈನ ಬೀದಿಗಳಲ್ಲಿ ಮಾರಾಟ ಮಾಡಿದ್ದೇನೆ. ಬ್ಯಾಂಕಾಕ್‌ಗೆ ಹೋದೆ. ಸಮರ ಕಲೆಯನ್ನು ಕಲಿತೆ. ಸಮರ ಕಲೆಯ ಶಿಕ್ಷಕನಾದೆ. ರೂಪದರ್ಶಿಯಾದೆ. ಅದಕ್ಕೆ ದುಡ್ಡು ಸಿಕ್ಕಾಗ ಫೋಟೊಗ್ರಾಫರ್‌ ಆಗಬೇಕೆನಿಸಿತು. ಜಯ್‌ಸೇಠ್‌ ಬಳಿ ಲೈಟ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿದೆ. ನಂತರ ಹಲವಾರು ಬಾಲಿವುಡ್‌ ತಾರೆಯರ ಶೂಟ್‌ ಮಾಡಿದೆ. ಗೋವಿಂದಾ, ಸಂಗೀತಾ ಬಿಜಲಾನಿ, ರೇಖಾ ಮುಂತಾದವರ ಚಿತ್ರಗಳನ್ನು ತೆಗೆದೆ.

ಗೋವಿಂದಾ ಒಮ್ಮೆ ಬೆಳ್ಳಗೆ, ತೆಳ್ಳಗೆ ಚೆನ್ನಾಗಿದಿಯಾ... ಹೀರೊ ಆಗೋದಲ್ವಾ ಅಂತ ಹೇಳಿ ಹೋದರು... ಅವರು ಹೇಳಿದೊಡನೆ ಜಯ್‌ ಸೇಠ್‌ ಪೋರ್ಟ್‌ಫೋಲಿಯೊ ಮಾಡಿ ಕೊಟ್ಟರು. ಪ್ರಮೋದ್‌ ಚಕ್ರವರ್ತಿ ಮೊದಲ ಅವಕಾಶ ಕೊಟ್ಟರು. ಮೊದಲ ನೋಟದಲ್ಲಿಯೇ ತಮ್ಮ ಮುಂದಿನ ಮೂರು ಚಿತ್ರಗಳಿಗೆ ಹೀರೊ ಆಗಿ ಸೈನ್‌ ಮಾಡಿಸಿಕೊಂಡಿದ್ದರು.

ಯಾವುದಕ್ಕೂ ಒಂದೇ ಸೂತ್ರ... ಯಾವುದಾದರೂ ಸರಿ ಕೆಲಸ ಮಾಡುತ್ತಿರಿ. ಅದು ಯಾವುದೇ ಆಗಿರಲಿ... ನಿಮ್ಮೆಲ್ಲ ಶಕ್ತಿಸಾಮರ್ಥ್ಯ ನೀಡುತ್ತ, ಬದ್ಧರಾಗಿ ಕೆಲಸ ಮಾಡಿ. ಪ್ರತಿಫಲ ಸಿಕ್ಕೇಸಿಗುತ್ತದೆ. ಒಂದಷ್ಟು ಸಮಯ ಕಾಯಬೇಕಾಗಬಹುದು. ಆದರೆ ಯಶಸ್ಸು ಸಿಕ್ಕೇ ಸಿಗುತ್ತದೆ. ಒಮ್ಮೆ ಸಿಕ್ಕರೆ ಅದನ್ನು ಒಲಿಸಿಕೊಳ್ಳಲೂ ಶ್ರಮ ಪಡಬೇಕು. ಒಮ್ಮೆ ಗುರಿಸಾಧನೆಯಾದರೆ ಅಲ್ಲಿಗೆ ವಿರಮಿಸಬಾರದು... ದ್ವಿಗುಣ ದುಡಿಯಬೇಕು. ಅದು ಮತ್ತೆಲ್ಲಿಯೂ ಹೋಗದಂತೆ.

ಆದರೆ ಅದಕ್ಕೂ ಹಿಂದಿನದೊಂದು ಕತೆ ಇದೆ... ಓದು ಬರಹ ಬಲ್ಲೆ. ಓದಲು ಕುಳಿತರೆ ನಿದ್ದೆ ಬರ್ತಿತ್ತು. ಅದೊಂದನ್ನು ಹೊರತು ಪಡಿಸಿದರೆ ಏನೇ ಮಾಡಿದರೂ ಅತಿಶ್ರದ್ಧೆಯಿಂದ ಮಾಡುತ್ತಿದ್ದೆ. ಅಪ್ಪನಿಗೆ ನನ್ನನ್ನು ಓದಿಸಬೇಕೆಂಬ ಬಯಕೆ ಇತ್ತು. ಆದರೆ ಅವರೆಂದೂ ಒತ್ತಾಯ ಮಾಡಲಿಲ್ಲ. ಕೊನೆಯ ಪಕ್ಷ ಯಾರ ಮುಂದೆಯೂ ತಲೆ ತಗ್ಗಿಸದಷ್ಟು ಓದು ಎಂದು ಹೇಳುತ್ತಿದ್ದರು. ಕ್ರೀಡೆಯಲ್ಲಿ ನನಗೆ ಆಸಕ್ತಿ ಇತ್ತು. ನನ್ನೊಡನೆ ಫುಟ್‌ಬಾಲ್‌ ಅಂಗಳಕ್ಕೆ ಬರುತ್ತಿದ್ದರು. ನಾನು ಆಡುವುದನ್ನು ನೋಡುತ್ತಿದ್ದರು. ಅಪ್ಪ ನನಗೆ ಬೆಂಬಲವಾಗಿ ನಿಂತರು. ಸಮರ ಕಲೆ ಕಲಿಯುವೆನೆಂದಾಗ ಸಾಲ ಮಾಡಿ ಬ್ಯಾಂಕಾಕ್‌ ಕಳಿಸಿದರು. ಅಲ್ಲಿ ವೇಟರ್‌ ಆಗಿ, ಶೆಫ್‌ ಆಗಿ ಕೆಲಸ ಮಾಡುತ್ತಲೇ ಸಮರಕಲೆ ಕಲಿತೆ. ನಟನಾಗುವೆ ಎಂದಾಗ ಆಯಿತು... ಯತ್ನಿಸು ಎಂದರು.

ಯಾವುದೇ ಕ್ಷೇತ್ರದಲ್ಲಿಯಾದರೂ ನನ್ನ ಇಡೀ ಶಕ್ತಿ ಸಾಮರ್ಥ್ಯವನ್ನು ಪಣಕ್ಕಿಡುತ್ತಿದ್ದೆ. ಅಪ್ಪ ಹೇಳಿಕೊಟ್ಟ ಜೀವನಪಾಠವಿದು. ಅವರು ಸೇನೆಯಲ್ಲಿದ್ದರು. ಕದನ ಕೇವಲ ರಣಾಂಗಣದಲ್ಲಿರುವುದಿಲ್ಲ. ಬದುಕು ಸಹ ಸಂಘರ್ಷದಿಂದಲೇ ಕೂಡಿರುತ್ತದೆ. ಎಲ್ಲಿಯೂ ಸೋತೆನೆಂದು ಹತಾಶನಾಗಬಾರದು. ಗೆದ್ದೆನೆಂದು ಬೀಗಬಾರದು. ಆ ಪಾಠ ಮರೆಯಲೇ ಇಲ್ಲ. ನಾನೀಗ ಅಕ್ಷಯ್‌ ಕುಮಾರ್‌ ಆಗಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.