ADVERTISEMENT

ವಸ್ತ್ರವಿನ್ಯಾಸಕರ ಮೊದಲ ಮಿಂಚು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST
ವಸ್ತ್ರವಿನ್ಯಾಸಕರ ಮೊದಲ ಮಿಂಚು
ವಸ್ತ್ರವಿನ್ಯಾಸಕರ ಮೊದಲ ಮಿಂಚು   

ವಿನ್ಯಾಸಕಿ ಉಮ್ಮೇ ಸಲ್ಮಾ ಅವರ ಕಿಮಿಯರ ಶ್ರೇಣಿ ಹಾಗೂ ವಿನ್ಯಾಸಕಿ ಪ್ರೀತಿ ಗುಣಶೇಖರ್ ಅವರ ಪೋಕಿಶುಂ ಜೆಡಿ ಫ್ಯಾಷನ್ ಟೆಕ್ನಾಲಜಿ ಆಯೋಜಿಸಿದ್ದ `ಇನ್‌ಸೈಡ್ ಮ್ಯಾಜಿಕ್~ ಫ್ಯಾಷನ್ ಶೋನ ಪ್ರಮುಖ ಆಕರ್ಷಣೆಗಳಾಗಿದ್ದವು.

ಸಿಂಹದ ತಲೆ, ಆಡಿನ ದೇಹ ಹಾಗೂ ಹಾವಿನ ಬಾಲವಿರುವ ಬೆಂಕಿಯುಗುಳುವ ಒಂದು ಪ್ರಾಣಿ ಕಿಮಿಯರ. ಗ್ರೀಕ್ ಪುರಾಣದಲ್ಲಿ ಬರುವ ಕಿಮಿಯರ ಪ್ರಾಣಿಯ ಪರಿಕಲ್ಪನೆಯಲ್ಲಿ ಸಲ್ಮಾ ತಮ್ಮ ವಿನ್ಯಾಸಕ್ಕೆ ಆಯ್ದುಕೊಂಡಿದ್ದರು. ಸುಂದರ ರೂಪದರ್ಶಿಗಳು ಸಲ್ಮಾ ವಿನ್ಯಾಸಗೊಳಿಸಿದ ಈ ವಸ್ತ್ರಗಳನ್ನು ಧರಿಸಿ ರ‌್ಯಾಂಪ್ ಮೇಲೆ ಕ್ಯಾಟ್‌ವಾಕ್ ಮಾಡಿದಾಗ ಫ್ಯಾಷನ್ ಪಂಡಿತರ ಕಣ್ಣುಗಳಲ್ಲಿ ಮೆಚ್ಚುಗೆಯ ನೋಟ. ಕರತಾಡನದ ಅಲೆ. ಕಿಮಿಯರ ಬಾಯಲ್ಲಿ ಬೆಂಕಿಯುಗುಳಿದರೆ; ಆ ಪ್ರಾಣಿಯಂತೆ ವಸ್ತ್ರ ಧರಿಸಿದ್ದ ರೂಪದರ್ಶಿಗಳು ಮೋಹಕ ನಗು ಬೀರಿ ಎಲ್ಲರನ್ನೂ ಸಮ್ಮೊಹನಗೊಳಿಸಿದರು. ಅಲ್ಲೊಂದು ಪುಟ್ಟ ಭ್ರಮಾಲೋಕ ಸೃಷ್ಟಿಸಿದರು. ಸಲ್ಮಾಳ ವಿಶಿಷ್ಟ ಪರಿಕಲ್ಪನೆಯ ವಿನ್ಯಾಸಕ್ಕೆ ಮುಡಿಗೇರಿದ್ದು `ಮೋಸ್ಟ್ ಇನ್ನೋವೇಟಿವ್ ಕಲೆಕ್ಷನ್ ಅವಾರ್ಡ್~.

ಪ್ರೀತಿ ಗುಣಶೇಖರ್ ಆಯ್ದುಕೊಂಡಿದ್ದು ಪೋಕಿಶುಂ ವಿನ್ಯಾಸ. ಪ್ರೀತಿ ವಿನ್ಯಾಸಗೊಳಿಸಿದ ವಸ್ತ್ರತೊಟ್ಟ ರೂಪದರ್ಶಿಗಳು ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದರೆ ತಮಿಳುನಾಡಿನಲ್ಲೊಂದು ಪಯಣ ಮಾಡಿದಂತಹ ಅನುಭವ ನೋಡುಗರದ್ದು. ರ‌್ಯಾಂಪ್ ಮೇಲೆ ಕಾಲಿಟ್ಟಾಕ್ಷಣ ಈ ರೂಪದರ್ಶಿಗಳು ತಮಿಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಕತ್ತು ತಿರುಗಿಸಿ, ಭರತನಾಟ್ಯ ಶೈಲಿಯಲ್ಲಿ ಕೈಮುಗಿದು ನಿಂತರು. ಹಿನ್ನೆಲೆಯಲ್ಲಿ `ಓಂ ನಮಃ ಶಿವಾಯ~ ಸಂಗೀತ ರಾಕ್ ಬೀಟ್‌ನಲ್ಲಿ ಧ್ವನಿಸುತ್ತಿತ್ತು. ಪ್ರೀತಿ ತಮ್ಮ ವಿನ್ಯಾಸಕ್ಕೆ ಭರ್ಜರಿ ರೇಷ್ಮೆ, ಕ್ರೇಪ್ ಮತ್ತಿತತರ ಸಾಧನಗಳನ್ನು ಬಳಸಿಕೊಂಡಿದ್ದರು. ಇವರ ವಿನ್ಯಾಸ ಎಲ್ಲರಿಗೂ ಇಷ್ಟವಾದವು.

ವಿನ್ಯಾಸಕಿ ಸ್ಮಿತಾ ಅವರ ಕ್ಯೂ ಕಲೆಕ್ಷನ್ ಫ್ಯಾಷನ್ ಶೋನ ಮತ್ತೊಂದು ಆಕರ್ಷಣೆ. ಕಲಾತ್ಮಕ ಹಾಗೂ ರೋಚಕ ಬಣ್ಣಗಳ ಸಮ್ಮಿಲನದಂತಿದ್ದ ಈ ವಸ್ತ್ರಗಳು 18ರಿಂದ 28 ವಯಸ್ಸಿನ ಯುವಕರಿಗೆ ಹೇಳಿ ಮಾಡಿಸಿದಂಥವು. ಝಗಮಗಿಸುತ್ತಿದ್ದ ಈ ವಸ್ತ್ರಗಳನ್ನು ಪುರುಷ ಮಾಡೆಲ್‌ಗಳು ಧರಿಸಿ ರೆಬೆಲ್ ಆಗಿ ರ‌್ಯಾಂಪ್ ವಾಕ್ ಮಾಡಿದರು. ಸ್ಮಿತಾ ವಿನ್ಯಾಸಗೊಳಿಸಿದ ಕ್ಯೂ ಶ್ರೇಣಿಯ ವಸ್ತ್ರಕ್ಕೆ ಗ್ಲಾಮರ್ ತುಂಬಿದ್ದು ಖ್ಯಾತ ವಿನ್ಯಾಸಕ ರಮೇಶ್ ದೆಂಬ್ಲಾ. ಈತ ಕೊನೆಯಲ್ಲಿ ರ‌್ಯಾಂಪ್‌ವಾಕ್ ಮಾಡಿ ಸ್ಮಿತಾ ಬೆನ್ನು ತಟ್ಟಿದರು.

ರೇಂಜು ಕೋಶಿ ವಿನ್ಯಾಸಗೊಳಿಸಿದ್ದ `ಮರೀಚಿಕೆ~ ಶ್ರೇಣಿಯ ವಸ್ತ್ರಗಳು ಕಣ್ಣುಕೋರೈಸಿದವು. ಇವರು ತಮ್ಮ ವಿನ್ಯಾಸಕ್ಕೆ ಜಗಮಗಿಸುವ ಸಿಲ್ಕ್ ಬಟ್ಟೆ ಆಯ್ದುಕೊಂಡಿದ್ದರು. ಈ ವಸ್ತ್ರ ತೊಟ್ಟ ರೂಪದರ್ಶಿಗಳು ರ‌್ಯಾಂಪ್ ಮೇಲೆ ಕಾಲಿಟ್ಟಾಗ ಸುತ್ತ ಕತ್ತಲು. ರೂಪದರ್ಶಿಗಳ ಎದೆಯ ಮೇಲಿದ್ದ ಕೃತಕ ಮಿಣುಕು ದೀಪಗಳು ಆ ಕತ್ತಲನ್ನು ಸೀಳುವಂತೆ ಮಿಂಚುತ್ತಿದ್ದವು.

ರೂಪದರ್ಶಿಗಳು ಕತ್ತಲಲ್ಲೇ ಒಂದು ರೌಂಡ್ ರ‌್ಯಾಂಪ್ ವಾಕ್ ಮಾಡಿದರು. ನಂತರ ರ‌್ಯಾಂಪ್ ಮೇಲೆ ಬೆಳಕು ಚೆಲ್ಲಿದಾಗ ರೂಪದರ್ಶಿಗಳ ಮೈಮೇಲೆ ಕೇವಲ ಸಿಲ್ಕೀ ಬಟ್ಟೆ ಮಾತ್ರ ಇದ್ದಂಥ ನೋಟ.

ಹಾಗೆಯೇ ವಿನ್ಯಾಸಕರಾದ ಸಾನು ಅವರ ಪಾಪ್ ಆರ್ಟ್, ಲಾವಣ್ಯ ಅವರ ಅಥೇನಾ, ಶ್ವೇತಾ ಉತ್ಮಣಿ ಅವರ ಡುಲ್ಸೆಟ್ ಹಾಗೂ ಸುರಭಿ ಭಾರದ್ವಾಜ್ ಅವರ ಕೊಹಿನೂರ್ ಶ್ರೇಣಿಯ ವಿನ್ಯಾಸ ಎಲ್ಲರ ಪ್ರಶಂಸೆಗೆ ಪಾತ್ರವಾದವು.

ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಆಯೋಜಿಸಿದ್ದ ವಾರ್ಷಿಕ ವಿನ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫ್ಯಾಷನ್‌ನದ್ದೇ ಕಾರುಬಾರು. ಇಲ್ಲಿ ವಿದ್ಯಾರ್ಥಿಗಳೇ ಡಿಸೈನರ್‌ಗಳು. `ಇನ್‌ಸೈಡ್ ಮ್ಯಾಜಿಕ್~ ಎಂಬುದು ಈ ವರ್ಷದ ಥೀಮ್. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದು ಅಪೂರ್ವ ವೇದಿಕೆ ಕಲ್ಪಿಸಿತ್ತು.

ಫ್ಯಾಷನ್ ಉದ್ಯಮ ಭಾರತದಲ್ಲಿ ಭಾರೀ ಪ್ರಗತಿ ಕಂಡಿದೆ. ಹೊಸ ಪ್ರತಿಭೆಗಳು ತಮ್ಮ ಛಾಪು ಮೂಡಿಸುತ್ತಿವೆ. ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಭವಿಷ್ಯದ ಡಿಸೈನರ್‌ಗಳು ತಯಾರಿಸಲು ಶ್ರಮಿಸುತ್ತಿದೆ.  ವಿಶ್ವ ದರ್ಜೆಯ ಫ್ಯಾಷನ್ ಡಿಸೈನರ್‌ಗಳನ್ನು ರೂಪಿಸುವ ಮೂಲಕ ಬದಲಾಗುತ್ತಿರುವ ಫ್ಯಾಷನ್ ಟ್ರೆಂಡ್ ಜತೆಗೆ ಸಾಗುವಂತೆ ಮಾಡುವುದು ಇದರ ಉದ್ದೇಶ. ಹಾಗಾಗಿ ಈ ವರ್ಷದ ಜೆಡಿ ವಾರ್ಷಿಕ ಡಿಸೈನ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿನ್ಯಾಸಕರು ಫ್ಯಾಷನ್, ಫಿಲ್ಮ್ ಹಾಗೂ ವಸ್ತ್ರ ಉದ್ಯಮ ಖ್ಯಾತನಾಮರೊಂದಿಗೆ ಬೆರೆಯುವ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನೀಲೇಶ್ ದಲಾಲ್ ಹೇಳಿದರು. ಇಡೀ ಕಾರ್ಯಕ್ರಮ ಅವರ ಉದ್ದೇಶವನ್ನು ಸಾರ್ಥಕಗೊಳಿಸಿದಂತೆ ಕಂಡಿತು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.