ADVERTISEMENT

ಸಾಗರದಾಳದಲ್ಲೂ ರೈಲು!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2016, 19:58 IST
Last Updated 26 ಏಪ್ರಿಲ್ 2016, 19:58 IST
ಸಾಗರದಾಳದಲ್ಲೂ ರೈಲು!
ಸಾಗರದಾಳದಲ್ಲೂ ರೈಲು!   

ಮಾಮೂಲಿ ರೈಲಿನಂತೆ ಕಾಣುವ ಈ ರೈಲು ಕೇವಲ ರಸ್ತೆಯ ಮೇಲಲ್ಲದೇ ಸಾಗರದಾಳದಲ್ಲೂ ಸಂಚರಿಸಲಿದೆ!

ಹೌದು. ಇದು ಉದ್ದೇಶಿತ ಮುಂಬೈ ಮತ್ತು ಅಹಮದಾಬಾದ್ ನಡುವಣ ಭಾರತದ ಚೊಚ್ಚಲ ಬುಲೆಟ್ ರೈಲು. ಇದು ಸಾಗರದ ಒಳಗೆ ಸಂಚರಿಸಿ ಪ್ರಯಾಣಿಕರಿಗೆ ಕಚಗುಳಿ ನೀಡುವ ಯಾತ್ರೆಯನ್ನು ಮಾಡಿಸಲಿದೆ ಎಂದಿದೆ ರೈಲ್ವೆ ಇಲಾಖೆ.

ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಮತ್ತು ವಿಶೇಷ ಉದ್ದೇಶದ ವಾಹನ ಸಂಸ್ಥೆ (ಎಸ್‌ಪಿವಿ) ಇದಕ್ಕೆ ಚಾಲನೆ ನೀಡಿದ್ದು, 500 ಕೋಟಿ ರೂಪಾಯಿಗಳ ಬಂಡವಾಳ ಹೂಡಲಾಗಿದೆ.

ಈ ರೈಲು ಸಂಚಾರಕ್ಕಾಗಿ  508ಕಿ.ಮೀ ದೂರದ ಮಾರ್ಗ ನಿರ್ಮಿಸಲಾಗುತ್ತಿದೆ. ಅದರಲ್ಲಿ ಸಮುದ್ರದ ಅಡಿಯಲ್ಲಿ 21 ಕಿ. ಮೀ. ಉದ್ದದವರೆಗೆ  ಸುರಂಗ ಮಾರ್ಗ ನಿರ್ಮಿಸುವ ಯೋಜನೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ. 

ವಾಣಿಜ್ಯ ನಗರಿ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಣ ಬುಲೆಟ್ ರೈಲು ಒಟ್ಟು 508 ಕಿ.ಮೀಗಳ ದೂರವನ್ನು ಕ್ರಮಿಸಲಿದೆ.  ಮುಂಬೈ ಹಾಗೂ ಅಹಮದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ. ಇದರಿಂದಾಗಿ ಬುಲೆಟ್ ರೈಲಿನೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ.

‘ಆರಂಭದಲ್ಲಿ ಸಮುದ್ರದ ಮೇಲಿಂದ ಟ್ರ್ಯಾಕ್ ನಿರ್ಮಾಣದ ಬಗ್ಗೆ ಸೂಚಿಸಲಾಗಿತ್ತು. ಆದರೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಥಾಣೆ ಕೊಲ್ಲಿಯಿಂದ ವಿರಾರ್‌ವರೆಗೆ ಸಮುದ್ರದಡಿಯಲ್ಲಿ ಹಳಿ ನಿರ್ಮಾಣಕ್ಕೆ ಜೆಐಸಿಎ ಸಮಗ್ರ ವಿವರಣೆ ಸಲ್ಲಿಸಿದೆ. ಇದು ಯಶಸ್ವಿಯಾದರೆ ಮುಂದೆ ಎಲ್ಲ ಸಲೀಸಾಗಲಿದೆ’ ಎಂದಿದ್ದಾರೆ ಅಧಿಕಾರಿಗಳು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ (ಐಐಎಂ- ಎ) ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ದಿನಕ್ಕೆ ಕನಿಷ್ಠ 88ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಿದ್ದಲ್ಲಿ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂಬುದಾಗಿ ವರದಿ ತಿಳಿಸಿದೆ. ಅದರ ಆಧಾರದ ಮೇಲೆ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಬುಲೆಟ್‌ ರೈಲು ಯೋಜನೆಗೆ ವಿಶೇಷ ರಿಯಾಯಿತಿ ಸಾಲ ಒದಗಿಸಿದ್ದ ಜಪಾನ್ ಯೋಜನೆಯ ಶೇಕಡಾ 80ರಷ್ಟು ಅಂದರೆ 97,636 ಕೋಟಿ ರೂಪಾಯಿಗಳ ಸಾಲವನ್ನು ನೀಡಲಿದೆ. ಇದನ್ನು 50 ವರ್ಷಗಳ ಅವಧಿಯಲ್ಲಿ ಭಾರತ ಮರು ಪಾವತಿ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.