ADVERTISEMENT

ಸಿರಿಧಾನ್ಯ ರೆಸಿಪಿಗೊಂದು ಸರಳ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಸಿರಿಧಾನ್ಯ ರೆಸಿಪಿಗೊಂದು ಸರಳ ಆ್ಯಪ್‌
ಸಿರಿಧಾನ್ಯ ರೆಸಿಪಿಗೊಂದು ಸರಳ ಆ್ಯಪ್‌   

ಪ್ಲೇಸ್ಟೋರ್‌ನಲ್ಲಿ ಆಹಾರಕ್ಕೆ ಸಂಬಂಧಪಟ್ಟ ಆ್ಯಪ್‌ಗಳು ಸಾಕಷ್ಟಿವೆ ಆದರೆ ‘ಸಿರಿಧಾನ್ಯ’ (Kannada Food Recipe) ಆ್ಯಪ್ ಸಿರಿಧಾನ್ಯಗಳನ್ನು ಬಳಸಿ ಮಾಡಬಹುದಾದ ಆಹಾರಗಳ ರೆಸಿಪಿ ನೀಡುತ್ತದೆ.

ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ದೊರಕುವ ಈ ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಂಡರೆ ಸಾಕು ನಿಮ್ಮ ಮುಂದೆ ಸಿರಿಧಾನ್ಯ ಬಳಸಿ ಮಾಡಬಹುದಾದ ಖಾದ್ಯಗಳ ರೆಸಿಪಿಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ.

ಸಾಮೆ ಕಿಚಡಿ, ನವಣೆ ಜಾಮೂನು, ರಾಗಿ ಕಾಫಿ, ಸಿರಿಧಾನ್ಯದ ಲಡ್ಡು, ನವಣೆ ತಂಬಿಟ್ಟು, ನವಣೆ ಹೋಳಿಗೆ, ನವಣೆ ಅಕ್ಕಿ ಮಸಾಲೆ ದೋಸೆ, ನವಣೆ ವಡೆ, ನವಣೆ ಪೊಂಗಲ್, ಸಜ್ಜೆ ಇಡ್ಲಿ, ಹಾರಕದ ಮೊಸರನ್ನ, ಬರಗು ಪೊಂಗಲ್, ಆರ್ಕ ಉಸಲಿ, ಸಜ್ಜೆ ಪಾನಿಪೂರಿ ಹೀಗೆ ಬಾಯಲ್ಲಿ ನೀರೂರಿಸುವ ಜೊತೆಗೆ ದೇಹಕ್ಕೆ ಹಿತವಾದ ನೂರಾರು ರೆಸಿಪಿಗಳು ಆ್ಯಪ್‌ನಲ್ಲಿವೆ.

ADVERTISEMENT

ಕೇವಲ ಸಾಂಪ್ರದಾಯಿಕ ಆಹಾರಗಳಲ್ಲದೆ ಹೊಸ ರೀತಿಯ ಖಾದ್ಯಗಳನ್ನು ಸಿರಿಧಾನ್ಯ ಬಳಸಿ ಮಾಡುವ ರೆಸೆಪಿ ನೀಡಲಾಗಿದೆ.

ಖಾದ್ಯ ಮಾಡಲು ಬೇಕಾದ ಸಾಮಗ್ರಿಗಳ ಮಟ್ಟಿ ಮತ್ತು ಮಾಡುವ ವಿಧಾನವನ್ನು ಸರಳ ವಾಕ್ಯಗಳಲ್ಲಿ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿರುವುದು ಆ್ಯಪ್‌ ವಿಶೇಷಗಳಲ್ಲೊಂದು.

ರೆಸಿಪಿಗಳನ್ನು ಇತರರಿಗೆ ವಾಟ್ಸ್‌ಆ್ಯಪ್ ಅಥವಾ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಅವಕಾಶವನ್ನೂ ಆ್ಯಪ್‌ನಲ್ಲಿ ಕಲ್ಪಿಸಲಾಗಿದೆ. ರೆಸಿಪಿಗಳ ಜೊತೆಗೆ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಒದಗಿಸುವ ಲೇಖನಗಳ ಮಾಲೆಯನ್ನೂ ಆ್ಯಪ್‌ನಲ್ಲಿ ಸೇರಿಸಲಾಗಿದೆ.

ಸಿರಿಧಾನ್ಯಗಳ ಬಗ್ಗೆ ಮಾಹಿತಿ, ಅವುಗಳ ಪ್ರಾಮುಖ್ಯತೆ, ಧಾರ್ಮಿಕ ವಲಯದಲ್ಲಿ ಸಿರಿಧಾನ್ಯಗಳಿಗಿರುವ ಮಹತ್ವ, ಸಿರಿಧಾನ್ಯಗಳಿಂದ ಆರೋಗ್ಯಕ್ಕಾಗುವ ಲಾಭಗಳು, ಸಿರಿಧಾನ್ಯಗಳನ್ನು ಬಳಸುವ ರೀತಿ, ಆಯುರ್ವೇದ ಕ್ಷೇತ್ರದಲ್ಲಿ ಸಿರಿಧಾನ್ಯಗಳ ಬಳಕೆ, ಸಿರಿಧಾನ್ಯ ಕೃಷಿ, ಸಿರಿಧಾನ್ಯಗಳ ಬಗೆಗೆ ವೈಜ್ಞಾನಿಕ ದೃಷ್ಟಿಕೋನ ಹರಿಸುವ ಲೇಖನಗಳು ಹೀಗೆ ಹಲವು ವಿಧದ ಮಾಹಿತಿಯುಳ್ಳ ಲೇಖನಗಳು ಆ್ಯಪ್‌ನಲ್ಲಿವೆ.

ಸಿರಿಧಾನ್ಯ ಮಾತ್ರವಲ್ಲದೆ ಇತರೆ ರೆಸಿಪಿಗಳನ್ನೂ ಆ್ಯಪ್‌ನಲ್ಲಿ ನೀಡಲಾಗಿದೆ. ಅನ್ನ ಬಳಸಿ ಮಾಡುವ ಖಾದ್ಯಗಳು, ಉಪ್ಪಿನಕಾಯಿ, ಚಾಟ್ಸ್‌, ಬಗೆಬಗೆ ದೋಸೆಗಳನ್ನು ಮಾಡುವ ವಿಧಾನದ ಬಗ್ಗೆ ಆ್ಯಪ್ ಮಾಹಿತಿ ನೀಡುತ್ತದೆ.

ಓದುಗರು ಆ್ಯಪ್‌ ಬಗ್ಗೆ ಸಲಹೆ, ಸೂಚನೆ ದೂರುಗಳನ್ನು ನೀಡಲು ಆಯ್ಕೆ ನೀಡಲಾಗಿದೆ. ಈಗಾಗಲೇ 400ಕ್ಕೂ ಹೆಚ್ಚು ರೆಸಿಪಿಗಳು ಆ್ಯಪ್‌ನಲ್ಲಿವೆ ಇನ್ನಷ್ಟು ರೆಸಿಪಿಗಳನ್ನು ಸೇರಿಸುವುದಾಗಿ ಆ್ಯಪ್ ಅಭಿವೃದ್ಧಿ ತಂಡ ಹೇಳಿದೆ.

ಪದೇಪದೇ ತೆರೆದುಕೊಳ್ಳುವ ಜಾಹೀರಾತು ಹೊರತುಪಡಿಸಿದರೆ ಆ್ಯಪ್‌ ಬಳಸಲು ಸರಳವಾಗಿದೆ. ಇಲ್ಲಿಯವರೆಗೆ 5000ಕ್ಕೂ ಡೌನ್‌ಲೋಡ್‌ಗಳನ್ನು ಸಿರಿಧಾನ್ಯ ಆ್ಯಪ್‌ ಕಂಡಿದೆ. ಓದುಗರಿಂದ ಉತ್ತಮ ಕಮೆಂಟ್‌ಗಳನ್ನೂ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.