ADVERTISEMENT

ಹಾಡಿನಲ್ಲಿ ಹುಬ್ಬಳ್ಳಿ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಹಾಡಿನಲ್ಲಿ ಹುಬ್ಬಳ್ಳಿ ಸೌಂದರ್ಯ
ಹಾಡಿನಲ್ಲಿ ಹುಬ್ಬಳ್ಳಿ ಸೌಂದರ್ಯ   

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿ. ಆದರೆ ದಕ್ಷಿಣ ಕರ್ನಾಟಕದ ಮಂದಿಗೆ ಹುಬ್ಬಳ್ಳಿ ಅಂದ್ರೆ ಇನ್ನೂ ಅಭಿವೃದ್ಧಿಯಾಗದ ಜಿಲ್ಲೆ. ಅಲ್ಲಿ ಯಾವ ಸೌಕರ್ಯಗಳೂ ಇಲ್ಲ, ಜನರೂ ಒರಟು ಸ್ವಭಾವದವರು ಎಂಬ ಭಾವನೆ ಇದೆ.

ಇದೆಲ್ಲವಕ್ಕೆ ಉತ್ತರವೆಂಬಂತೆ ಹುಬ್ಬಳ್ಳಿ ಅಂದ್ರೆ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮರಸ್ಯ, ಕೈಗಾರಿಕಾ, ವಾಣಿಜ್ಯಾತ್ಮಕ ಚಟುವಟಿಕೆ ನಗರ, ಚೋಟಾ ಮುಂಬೈ ಎಂದು ಹಾಡಿನ ಮೂಲಕ ಹುಬ್ಬಳ್ಳಿ ನಗರದ ಪರಿಚಯ ಮಾಡಿಕೊಟ್ಟಿದ್ದಾರೆ ಕಿಶನ್‌ ಜರ್ತಗರ್‌ ಹಾಗೂ ತಂಡ. ಕರ್ನಾಟಕದ ಎರಡನೇ ಅತಿ ದೊಡ್ಡ ಹಾಗೂ ಅತಿ ವೇಗದಲ್ಲಿ ಅಭಿವೃದ್ಧಿಯಾಗುತ್ತಿರುವ ನಗರ ಹುಬ್ಬಳ್ಳಿ. ವ್ಯಾಪಾರ ಹಾಗೂ ಸಾಂಸ್ಕೃತಿಕ ವೈವಿಧ್ಯಕ್ಕೆ ಈ ನಗರ ಸಾಕ್ಷಿ ಎಂಬಂತೆ ‘The Hubli Song - ನಮ್ಮ ಹುಬ್ಬಳ್ಳಿ ಹಾಡು’ ಹಾಡಿನಲ್ಲಿ ನಗರವನ್ನು ಕಟ್ಟಿಕೊಡಲಾಗಿದೆ.

ಹುಬ್ಬಳ್ಳಿ ರೈಲ್ವೆ ಸ್ಟೇಷನ್‌ನಲ್ಲಿ ರೈಲು ನಿಂತಾಗ ಅದರಲ್ಲಿರುವ ಯುವತಿಗೆ ರೈಲು ನಿಲ್ದಾಣದಲ್ಲಿ ಬುಡಬುಡಿಕೆ ಬಾರಿಸುತ್ತಿರುವ ಅಜ್ಜ ಗಮನ ಸೆಳೆಯುತ್ತಾನೆ. ಅವನ ಪೋಟೊವನ್ನು ತನ್ನ ಕ್ಯಾಮೆರಾದಲ್ಲಿ ಹತ್ತಿರದಿಂದ ಸೆರೆಹಿಡಿಯಬೇಕು ಎಂದು ರೈಲಿಂದ ಇಳಿಯುವ ಯುವತಿಗೆ ರೈಲು ತಪ್ಪಿ ಹೋಗುತ್ತದೆ. ಇನ್ನೇನು ಮಾಡುವುದು ಎಂದು ಹುಬ್ಬಳ್ಳಿ ನಗರ ಸುತ್ತುವ ಆಲೋಚನೆ ಮಾಡುತ್ತಾಳೆ.

ADVERTISEMENT

ಈಗ ಇಂಟರ್ನೆಟ್‌ ಕಾಲ. ಇಂಟರ್ನೆಟ್‌ನಲ್ಲಿ ಹುಡುಕಾಡಿದಾಗ ಹುಬ್ಬಳ್ಳಿಯ ಪ್ರೇಕ್ಷಣೀಯ ಸ್ಥಳಗಳನ್ನು ಗುರುತು ಮಾಡಿಕೊಂಡು ಸುತ್ತಾಟ ಆರಂಭಿಸುತ್ತಾಳೆ. ಉಣಕಲ್‌ ಕೆರೆ, ಪ್ರಸಿದ್ಧ ಬೆಟ್ಟಗಳನ್ನು ನೋಡುತ್ತಾಳೆ. ಅಟೋ, ಕುದುರೆ ಬಂಡಿಗಳಲ್ಲಿ ಕುಳಿತು ಊರು ಸುತ್ತುತ್ತಾಳೆ. ದೇವಸ್ಥಾನ, ಮಾರುಕಟ್ಟೆ,  ಶಿಕ್ಷಣ ಸಂಸ್ಥೆಗಳು, ಮಠಗಳ ಪರಿಚಯ ಮಾಡುತ್ತಾಳೆ. ಗಣೇಶೋತ್ಸವ, ರೊಟ್ಟಿಯೂಟ, ಗಿರಮಿಟ್ಟು, ಡಾಬಾ ಊಟ, ಡೊಳ್ಳು ಕುಣಿತ, ಜನಪ್ರಿಯ ಉತ್ಸವಗಳು ಎಲ್ಲವನ್ನೂ ಈ ಹಾಡಿನಲ್ಲಿ ತೋರಿಸಿದ್ದಾರೆ.

ಹುಬ್ಬಳ್ಳಿ ಅಂದ್ರೆ ಸಣ್ಣ ಮುಂಬೈ. ಇಲ್ಲಿನ ಇತಿಹಾಸ, ಆರ್ಥಿಕ ಸ್ಥಿತಿ, ವಾತಾವರಣ, ಆಹಾರ, ಸಂಸ್ಕೃತಿ ಎಲ್ಲದರಲ್ಲೂ ಶ್ರೀಮಂತಿಕೆ ಇದೆ. ‘ಟ್ರೈನ್‌ ಮಿಸ್ಡ್‌ ಯಾರ್‌, ಎಲ್ಲಾ ಅನ್‌ನೋನ್‌ಯಾರ್‌...ಏನು ಮಾಡ್ಲಿ ಗುರು ನಾನು’ ಸಾಹಿತ್ಯವಿರುವ 4 ನಿಮಿಷದ ಹಾಡಿನ ತುಂಬಾ ಮುದ್ದು ಮೊಗದ ಚೈತ್ರಾ ಸುಂಕದ್‌  ನಗರದ ಸೌಂದರ್ಯವನ್ನು ತೋರಿಸಿದ್ದಾರೆ. ಕ್ಯಾಮೆರಾ ಹೆಗಲೇರಿಸಿಕೊಂಡು ಹುಬ್ಬಳ್ಳಿಯಲ್ಲಿ ಅವರು ಶಾಂಪಿಂಗ್‌, ಸುತ್ತಾಟದಲ್ಲಿ ಖುಷಿ ಪಡುತ್ತಾ ನಮ್ಮ ಮನಸ್ಸಿನ ತುಂಬವೂ ಹುಬ್ಬಳ್ಳಿ ಬಗ್ಗೆ ಪ್ರೀತಿ ಮೂಡಿಸುತ್ತಾ ಹೋಗುತ್ತಾರೆ.

ಕಿಶನ್‌ ಜರ್ತಗರ್‌ ಅವರ ಸಿನಿಮಾಟೋಗ್ರಾಫ್‌ ಹಾಗೂ ನಿರ್ದೇಶನ ಈ ಹಾಡಿಗಿದೆ. ಹುಸೇನ್‌ ನದಾಫ್‌ ಸಾಹಿತ್ಯಕ್ಕೆ ಪ್ರಣತಿ ಎ.ಎಸ್‌ ತಮ್ಮ ಮಧುರ ಕಂಠದ ಮೂಲಕ ಹಾಡು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.