ADVERTISEMENT

ಸಂಕ್ರಾಂತಿಗೆ ಫ್ಯಾಷನ್‌ ಖದರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಸಂಕ್ರಾಂತಿಗೆ ಫ್ಯಾಷನ್‌ ಖದರು
ಸಂಕ್ರಾಂತಿಗೆ ಫ್ಯಾಷನ್‌ ಖದರು   

ಸಂಕ್ರಾಂತಿ ಎಂದರೆ ಎಲ್ಲೆಲ್ಲೂ ಸಂಭ್ರಮ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಖುಷಿಯಿಂದ ಆಚರಿಸುತ್ತಾರೆ. ಮನೆಮನೆಗೆ ತೆರಳಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುವುದರ ಜೊತೆಗೆ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವಂತೆ ಫ್ಯಾಷನ್‌ ದೃಷ್ಟಿಯಿಂದಲೂ ಎಲ್ಲರೂ ಅಪ್‌ಡೇಟ್‌ ಆಗುವ ಕಾಲವಿದು. ಕುಟುಂಬದವರೆಲ್ಲಾ ಸೇರಿ ಸಂಭ್ರಮಿಸುವ ಸಂದರ್ಭ ಇದಾಗಿರುವುದರಿಂದ ಆದಷ್ಟು ಸಾಂಪ್ರದಾಯಿಕ ದಿರಿಸುಗಳನ್ನೇ ಧರಿಸಿ.

ಸಾಂಪ್ರದಾಯಿಕ ದಿರಿಸುಗಳಿಗೆ ಆಧುನಿಕ ಸ್ಪರ್ಶ ನೀಡಿರುವ ಬಗೆಬಗೆಯ ವಿನ್ಯಾಸಗಳು ಬಂದಿರುವುದರಿಂದ ಚೆಲುವಾಗಲು ಸಾಕಷ್ಟು ಆಯ್ಕೆಗಳಿವೆ. ವಿನ್ಯಾಸಕಾರರೂ ಎಲ್ಲ ಬಗೆಯ ಫ್ಯಾಷನ್‌ ಪ್ರಿಯರಿಗೆ ಸರಿಹೊಂದುವಂಥ ವಿವಿಧ ವಿನ್ಯಾಸದ ದಿರಿಸುಗಳನ್ನು ಪರಿಚಯಿಸಿದ್ದಾರೆ.

ಈ ಬಾರಿಯ ಸಂಕ್ರಾಂತಿಗೆ ಗಾಢ ಹಳದಿ, ಕೆಂಪು, ಗುಲಾಬಿ, ನೀಲಿ ಬಣ್ಣಗಳಿಗೆ ಆದ್ಯತೆ ಇರಲಿ. ಸೀರೆ ಮತ್ತು ಲೆಹೆಂಗಾಗಳು ಹಬ್ಬಕ್ಕೆ ಹೇಳಿ ಮಾಡಿಸಿದ ಉಡುಗೆಗಳು. ಇತ್ತೀಚೆಗೆ ಎಲ್ಲೆಲ್ಲೂ ಮೆರೆಯುವುದು ಚೂಡಿದಾರವೇ. ಅದರಲ್ಲಿರುವ ನೂರಾರು ವಿನ್ಯಾಸಗಳು ಹೊಸತನಕ್ಕೆ ಸ್ಪಷ್ಟ ರೂಪ ನೀಡುತ್ತವೆ.

ADVERTISEMENT

ಅನಾರ್ಕಲಿಗೆ ಈಗ ಎಲ್ಲಿಲ್ಲದ ಬೇಡಿಕೆ. ಕೈಮಗ್ಗದಿಂದ ಮಾಡಿದ ಸಲ್ವಾರ್‌ ಕಮೀಜ್‌ಗಳು ಜನಪ್ರಿಯಗೊಳ್ಳುತ್ತಿದ್ದು ಹಬ್ಬಕ್ಕೆ ವಿಶೇಷ ಮೆರುಗು ತಂದುಕೊಡಬಲ್ಲವು. ಚೂಡಿದಾರಕ್ಕೆ ಒಪ್ಪುವಂಥ ವಿವಿಧ ಗಾತ್ರದ ಜಾಕೆಟ್‌ಗಳನ್ನು ಧರಿಸುವುದೂ ಬಹುಜನಪ್ರಿಯ ಟ್ರೆಂಡ್‌. ಅದನ್ನೊಮ್ಮೆ ಪ್ರಯತ್ನಿಸಿ ನೋಡಬಹುದು.

ಮೊಣಕಾಲಿನವರೆಗೆ ಚಾಚಿದ ಇಲ್ಲವೇ ಅದಕ್ಕಿಂತಲೂ ಚಿಕ್ಕದಾದ ಚೂಡಿದಾರದ ಟಾಪ್‌ಗೆ ಪಟಿಯಾಲಾ ಪ್ಯಾಂಟ್‌ ಧರಿಸಿದರೆ ಚೆನ್ನಾಗಿ ಒಪ್ಪುತ್ತದೆ. ಜರ್ದೋಸಿ ವಿನ್ಯಾಸ ಇರುವ ಉಡುಪು ವಿಶೇಷ ಎನಿಸಬಲ್ಲುದು. ಕರೀನಾ, ಆಲಿಯಾ ಭಟ್‌ ಸೇರಿದಂತೆ ಸಿನಿತಾರೆಯರು ತಮ್ಮ ಚಿತ್ರಗಳಲ್ಲಿ ಆಗಾಗ ಇಂಥ ದಿರಿಸು ತೊಟ್ಟು ಮಿಂಚುತ್ತಲೇ ಇರುವುದರಿಂದ ಈ ದಿರಿಸು ಔಟ್‌ಡೇಟ್ ಎನಿಸುವುದೇ ಇಲ್ಲ. ಈ ದಿರಿಸು ಧರಿಸಿದಾಗ ಕುತ್ತಿಗೆಗೆ ಸರಳ ಆಭರಣ ಧರಿಸಿ. ಜುಮುಕಿ ತರಹದ ದೊಡ್ಡ ಕಿವಿಯೋಲೆ ಚೆನ್ನಾಗಿ ಒಪ್ಪುತ್ತದೆ.

ಅನಾರ್ಕಲಿ ಸೂಟ್‌ಗಳಿಗೆ ಎಂದಿಗೂ ಬೇಡಿಕೆ ಕಡಿಮೆ ಆಗಿಲ್ಲ. ತೆಳು ಗುಲಾಬಿ ಬಣ್ಣದ ಟಾಪ್‌ಗೆ ಬಂಗಾರ ಬಣ್ಣದ ಪ್ಯಾಂಟ್‌ ಹಾಗೂ ಸಲ್ವಾರ್‌ ಹೆಚ್ಚು ಹೊಂದುತ್ತದೆ. ಹುಮಾ ಖುರೇಷಿ ಧರಿಸಿದ ಈ ವಿನ್ಯಾಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಯೂ ದಕ್ಕಿದೆ. ಈ ವಿನ್ಯಾಸದಲ್ಲಿಯೂ ಕೋಲ್ಡ್‌ ಶೋಲ್ಡರ್‌, ಕೂಲ್‌ ಶೋಲ್ಡ್‌ರ್‌ ವಿನ್ಯಾಸಗಳೂ ಲಭ್ಯವಿವೆ.

ತೆಳು ಅಥವಾ ಒಂದೇ ಬಣ್ಣದ ಮೊಣಕೈವರೆಗೆ ಚಾಚಿದ ಕೋಲ್ಡ್‌ ಶೋಲ್ಡರ್‌ ಟಾಪ್‌ಗೆ ತದ್ವಿರುದ್ಧ ಬಣ್ಣದ ಸಿಗರೇಟ್‌, ಸ್ಟ್ರೇಟ್‌ ಪ್ಯಾಂಟ್‌ ಧರಿಸುವುದೂ ಇಂದಿನ ಫ್ಯಾಷನ್‌.

ಸಾಂಪ್ರದಾಯಿಕ ದಿರಿಸಿನಲ್ಲಿಯೂ ಫ್ಯಾಷನ್‌ ಹುಡುಕುವವರು ನೀವಾಗಿದ್ದರೆ ಜಾಕೆಟ್‌ ರೀತಿಯ ಕುರ್ತಾವನ್ನು ಧರಿಸಿ. ಇವೆಲ್ಲವುಗಳಿಗೆ ಸರಳವಾದ ಸರಿಹೊಂದುವ ಆಕ್ಸೆಸರೀಸ್‌ಗಳನ್ನು ಬಳಸಿ. ಫ್ಯಾಷನೆಬಲ್‌ ಜ್ಯುವೆಲ್ಲರಿ ನಿಮಗಿಷ್ಟವಾಗಿದ್ದರೆ ಆಕ್ಸಿಡೈಸ್ಟ್‌ ಜ್ಯುವೆಲ್ಲರಿಗಳನ್ನು ಮ್ಯಾಚ್‌ ಮಾಡಿಕೊಳ್ಳಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.