ADVERTISEMENT

ಸಿಹಿ ಸೇವನೆಗಿರಲಿ ಮಿತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ಸಿಹಿ ಸೇವನೆಗಿರಲಿ ಮಿತಿ
ಸಿಹಿ ಸೇವನೆಗಿರಲಿ ಮಿತಿ   

ಸಕ್ಕರೆ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಸ್ಥೂಲಕಾಯ ಹಾಗೂ ಮಧುಮೇಹದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸದಂತೆ ನಿಗಾ ವಹಿಸುವುದು ಅಗತ್ಯ. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಯಾವುದು ಒಳ್ಳೆಯ ಆಹಾರ ಎನ್ನುವುದನ್ನು ತಿಳಿಸಿಕೊಡಬೇಕಾಗಿದೆ. ಮುಗ್ಧ ಮನಸಿನ ಮಕ್ಕಳನ್ನು ಸಿಹಿ ಪದಾರ್ಥದಿಂದ ಆದಷ್ಟು ದೂರವಿಡಲು ಕೆಲ ಉಪಾಯಗಳು ಇಲ್ಲಿವೆ.

*ಆಹಾರದಲ್ಲಿಯೂ ಬಣ್ಣ ವೈವಿಧ್ಯ ಇರಲಿ. ರುಚಿಯಾದ ಆಹಾರಗಳನ್ನು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಿ ನೀಡಿ. ಆಹಾರ ಮೊದಲು ಅವರ ನೋಟವನ್ನು ಸೆರೆಹಿಡಿಯಲಿ.

*ವೈವಿಧ್ಯತೆಯೇ ಬದುಕಿನ ಮೂಲ. ಹೀಗಾಗಿ ಮಕ್ಕಳಿಗೆ ಆರೋಗ್ಯಯುತವಾದ ಬಗೆಬಗೆಯ ತಿಂಡಿಗಳ ಆಯ್ಕೆಗಳನ್ನಿಡಿ. ನೀವು ಮಾಡಿಕೊಟ್ಟಿದ್ದನ್ನೇ ಮಕ್ಕಳು ತಿನ್ನಬೇಕು ಎಂದು ಅಪೇಕ್ಷಿಸುವ ಬದಲು, ಮಕ್ಕಳು ಇಷ್ಟಪಡುವ ತಿಂಡಿಗಳನ್ನೇ ಮಾಡಿಕೊಡಿ. ಒಣಹಣ್ಣುಗಳು, ಹುರಿದ ಕಾಳು, ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಒಳಿತು.

ADVERTISEMENT

*ಸಕ್ಕರೆಯ ಅಂಶ ಹೆಚ್ಚಾಗಿರುವ ತಂಪು ಪಾನೀಯ, ಜ್ಯೂಸ್‌ ಕೊಡುವುದನ್ನು ಕಡಿಮೆ ಮಾಡಿ. ಅವುಗಳ ಬದಲು ಕಿತ್ತಳೆ ಅಥವಾ ನಿಂಬೆಹಣ್ಣಿನ ಶರಬತ್ತು ಕೊಡಿ. ತಣ್ಣೀರಿಗೆ ಪುದೀನಾ, ಸ್ಟ್ರಾಬೆರಿ ಹಾಕಿಕೊಟ್ಟರೂ ಮಕ್ಕಳಿಗೆ ಇಷ್ಟವಾಗುತ್ತೆ. ಅದು ಆರೋಗ್ಯಕ್ಕೆ ಒಳ್ಳೆಯದು.

*ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಸಂಪೂರ್ಣವಾಗಿ ತ್ಯಜಿಸುವಂತೆ ಮಕ್ಕಳಿಗೆ ಹೇಳುವುದೂ ಸರಿಯಲ್ಲ. ಇದರಿಂದ ಮಕ್ಕಳ ಮನಸ್ಸಿಗೆ ನೋವಾಗುವುದಲ್ಲದೆ, ಅದನ್ನು ಯಾವುದಾದರೂ ರೀತಿಯಲ್ಲಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಅಪರೂಪಕ್ಕೊಮ್ಮೆ ಅವುಗಳನ್ನು ನೀಡಿ. ಉದಾಹರಣೆಗೆ ಚಾಕೊಲೇಟ್ ನೀಡುವುದನ್ನು ಸಂಪೂರ್ಣ ನಿಲ್ಲಿಸುವ ಬದಲು ಯಾವಾಗಲಾದರೊಮ್ಮೆ ನೀಡಬಹುದು.

*ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಸಿಹಿತಿಂಡಿಗಳಿಗಿಂತ ಮನೆಯಲ್ಲಿಯೇ ತಯಾರಿಸಿದ ತಿಂಡಿಗಳನ್ನು ಕೊಡುವುದು ಒಳಿತು. ಊಟದಲ್ಲಿ ಸಿಹಿಯ ಬಳಕೆ ಸಾಧ್ಯವಾದಷ್ಟೂ ಕಡಿಮೆ ಮಾಡಿ.

*ಆರೋಗ್ಯಯುತ ಆಹಾರ ಸೇವನೆಯ ಮಹತ್ವವನ್ನು ಸಾರುವ ಉದಾಹರಣೆಗಳನ್ನು ಮಕ್ಕಳಿಗೆ ಆಗಾಗ ತಿಳಿಹೇಳಿ. ಮನೆಯವರೆಲ್ಲಾ ಒಟ್ಟಾಗಿ ಕುಳಿತು ಆಹಾರ ಸೇವಿಸುವ ಸಂಪ್ರದಾಯ ಕೂಡ ಮಕ್ಕಳು ಉತ್ತಮ ಆಹಾರದ ಬಗೆಗೆ ತಿಳಿದುಕೊಳ್ಳಲು ಹೆಚ್ಚು ಉಪಯುಕ್ತ. ಕುಟುಂಬದ ಸದಸ್ಯರೊಂದಿಗೆ ಊಟದಲ್ಲಿ ಭಾಗಿಯಾಗುವ ಮಕ್ಕಳು ಹೆಚ್ಚಾಗಿ ಹಣ್ಣು, ತರಕಾರಿಗಳನ್ನು ಸೇವಿಸುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಾರೆ.→→ v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.