ADVERTISEMENT

ಆಟೊ ಟೆಕ್

ನೇಸರ ಕಾಡನಕುಪ್ಪೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಧ್ವನಿಯಲ್ಲೇ ನಿರ್ಧರಿಸು, ಮಾಹಿತಿಯನ್ನೂ ಪಡೆದುಕೊ

ಕುಳಿತಲ್ಲೇ ಕೆಲಸ ಆಗಬೇಕು ಎಂಬುದು ಈಗಿನ ಕಾಲ. ಆರಂಭದಲ್ಲಿ ಟೀವಿಗಳಿಗೆ ರಿಮೋಟ್ ಕಂಟ್ರೋಲ್ ಬಂದಾಗ ಅದನ್ನು ನಂಬುವುದಕ್ಕೇ ಕಷ್ಟ ಎಂಬಂತೆ ಜನ ಅಚ್ಚರಿ ಪಟ್ಟಿದ್ದರು. ಕುಳಿತಲ್ಲೇ ಟೀವಿಯ ಪ್ರತಿಯೊಂದು ಕಾರ್ಯವನ್ನೂ ಆ ಪುಟ್ಟ ಸಾಧನ ನಿಯಂತ್ರಿಸುತ್ತಿದ್ದುದು ತಂತ್ರಜ್ಞಾನದ ಶ್ರೇಷ್ಠತೆಯೇ ಸರಿ. ಈಗ ರಿಮೋಟ್ ಕಂಟ್ರೋಲ್ ಬರಿ ಟೀವಿಗೇ ಏಕೆ, ಬಹತೇಕ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೂ ಕಾಲಿಟ್ಟುಬಿಟ್ಟಿದೆ. ಎಸಿ, ಆಡಿಯೊ ಸಿಸ್ಟಂ ಪ್ರತಿಯೊಂದರಲ್ಲೂ ಇರುತ್ತದೆ.

ಆದರೆ ಈಗ ರಿಮೋಟ್ ಕಂಟ್ರೋಲ್ ಅನ್ನೂ ಮೀರಿಸುವಂತೆ ತಂತ್ರಜ್ಞಾನ ಮುನ್ನಡೆ ಸಾಧಿಸಿದೆ. ರೇಡಿಯೊ ಅಲೆಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದ್ದ ರಿಮೋಟ್ ಕಂಟ್ರೋಲ್‌ನ ನಿಸ್ತಂತು ತಂತ್ರಜ್ಞಾನಕ್ಕೆ ಹೊಸ ಸ್ವರೂಪ ಸಿಕ್ಕಿದೆ. ಸಾಮಾನ್ಯವಾಗಿ ಯಾವುದೇ ರಿಮೋಟ್ ಕಂಟ್ರೋಲರ್‌ನಲ್ಲಿ ಮುಂಚಿತವಾಗಿ ಮಾಹಿತಿ ತುಂಬಲಾಗಿರುವ ಆಜ್ಞೆಗಳನ್ನು ಇಡಲಾಗಿರುತ್ತದೆ.

ಅದಕ್ಕೆ ಸ್ಪಂದಿಸುವ ಮತ್ತೊಂದು ಸಾಧನ ಸಂಬಂಧಿತ ಎಲೆಕ್ಟ್ರಾನಿಕ್ ಸಾಧನದಲ್ಲಿ ಇರುತ್ತದೆ. ಈ ಎರಡೂ ತುದಿಗಳಲ್ಲಿ ನಡೆಯುವ ಸಂವಹನ ಕಾರ್ಯದಿಂದ ಬೇಕಾದ ಆಜ್ಞೆ ಕಾರ್ಯರೂಪಕ್ಕೆ ಬರುತ್ತದೆ. ಆದರೆ ಈಗಿನ ಹೊಸ ತಂತ್ರಜ್ಞಾನ ರಿಮೋಟ್ ಅನ್ನೇ ಬೇಡವಾಗಿಸಿದೆ. ಕೇವಲ ಧ್ವನಿಯನ್ನೇ ಆಧರಿಸಿ ಆಜ್ಞೆ ನೀಡಬಹುದಾದ ತಂತ್ರಜ್ಞಾನ ಬೆಳೆದಿದೆ.

ವಾಯ್ಸ ಕಂಟ್ರೋಲ್ ಸಿಸ್ಟಂ
ಈ ತಂತ್ರಜ್ಞಾನ ಬಹು ಸುಲಭ. ವಾಸ್ತವದಲ್ಲಿ ಈ ತಂತ್ರಜ್ಞಾನ ಸಹ ರಿಮೋಟ್ ಕಂಟ್ರೋಲ್‌ನಂತೆ ಟೀವಿಯಲ್ಲೇ ಮೊದಲು ಬಂದದ್ದು. ಈ ತಂತ್ರಜ್ಞಾನ ಬಳಸಿಕೊಂಡು ಯಾವುದೇ ಆಜ್ಞೆಯನ್ನು ನೀಡಬಹುದು. ಚಾನೆಲ್ ಬದಲಿಸು, ಧ್ವನಿ ಏರಿಸು, ಇಳಿಸು, ಟೀವಿ ಆಫ್ ಮಾಡು, ಇತ್ಯಾದಿ. ಕೆಲವು ಐಷಾರಾಮಿ ಮನೆಗಳಲ್ಲಿ ದೀಪ ಹೊತ್ತಿಸಲು, ನಂದಿಸಲು ಈ ಧ್ವನಿ ತಂತ್ರಜ್ಞಾನ ಬಳಕೆಯಲ್ಲಿದೆ.

ಅಂತೆಯೇ ಈಗ ಕಾರ್‌ಗಳಲ್ಲಿ ಈ ತಂತ್ರಜ್ಞಾನ ಸೇರ್ಪಡೆಗೊಂಡಿದೆ. ಆಡಿಯೊ ಸಿಸ್ಟಂನಲ್ಲಿ ಗೀತೆ ಬದಲಿಸು, ಧ್ವನಿ ಏರಿಸು, ಇಳಿಸು ಎಂದೂ, ಕಾರ್‌ನ ದೀಪ ಹೊತ್ತಿಸಲು, ನಂದಿಸಲು, ವೈಫರ್ ಆನ್ ಮಾಡಲು, ಹೀಗೆ ವಿವಿಧ ಕಾರ್ಯಗಳನ್ನು ಧ್ವನಿಯ ಮೂಲಕವೇ ನಿಯಂತ್ರಿಸಿಕೊಳ್ಳಬಹುದು.

ಇದಕ್ಕಾಗಿ ಕಾರ್‌ನಲ್ಲಿ ಧ್ವನಿಯನ್ನು ಗ್ರಹಿಸಬಲ್ಲ ಪುಟ್ಟ ಸಾಧನವೊಂದನ್ನು ಇಡಲಾಗಿರುತ್ತದೆ. ಧ್ವನಿಯನ್ನು ಗುರುತಿಸಿ ಬೇಕಾದ ಕಾರ್ಯ ಮಾಡುತ್ತದೆ. ಎಲ್ಲರ ಧ್ವನಿಗೂ ಅದು ಸ್ಪಂದಿಸುವುದಿಲ್ಲ. ಮಾಲೀಕನ ಹಾಗೂ ಆತ ಹೇಳಿದವರ ಧ್ವನಿಯನ್ನು ಮಾತ್ರ ಅದು ಗುರುತಿಸುತ್ತದೆ.

ADVERTISEMENT

ಚಾಲಕ ಮಾಹಿತಿ ಕೇಂದ್ರ
ಈಗಿನ ಬಹುತೇಕ ಎಸ್‌ಯುವಿಗಳಲ್ಲಿ ಈ ಸೌಲಭ್ಯ ನೀಡಲಾಗಿರುತ್ತದೆ. ನೀವು ದೂರ ಪ್ರಯಾಣ ಮಾಡುತ್ತಿದ್ದೀರ ಎಂದುಕೊಳ್ಳೋಣ. ನಿಮ್ಮ ಕಾರ್‌ನಲ್ಲಿ ಇಂಧನ ಎಷ್ಟಿದೆ ಎನ್ನುವುದನ್ನು ಕಾರ್‌ನ ಸ್ಪೀಡೊಮೀಟರ್ ಪಕ್ಕದ ಫ್ಯೂಯೆಲ್ ಗೇಜ್ ತೋರಿಸುತ್ತಿರುತ್ತದೆ.

ಆದರೆ, ಉಳಿದ ಇಂಧನದಲ್ಲಿ ಎಷ್ಟು ದೂರ ಸಾಗಬಹುದು ಎನ್ನುವುದು ಮಾತ್ರ ಗೊತ್ತಾಗುವುದೇ ಇಲ್ಲ. ಆಗೇನು ಮಾಡುವುದು? ಅಂದಾಜಿನ ಮೇಲೆ ವಾಹನ ಚಲಾಯಿಸುವುದು. ಆದರೆ ಈಗ ಈ ಸಮಸ್ಯೆ ಬಹುತೇಕ ದೂರವಾಗಿದೆ. ಕಾರ್‌ಗಳಲ್ಲಿ ಈಗ ಚಾಲಕ ಮಾಹಿತಿ ಕೇಂದ್ರ ಇರುತ್ತದೆ. ಎಂಜಿನ್ ಅನ್ನು ಅನುಸರಿಸಿ ಕಂಪ್ಯೂಟರ್ ಚಿಪ್ ಒಂದು ಉಳಿದ ಇಂಧನದಲ್ಲಿ ಸಿಗುವ ಮೈಲೇಜ್ ಅನ್ನು ತಿಳಿಸುತ್ತದೆ.

ಎಷ್ಟು ಕಿಲೋಮೀಟರ್ ಸಾಗಬಹುದು ಎಂದು ಹೇಳುತ್ತದೆ. ಸುಧಾರಿತ ಸಾಧನಗಳಲ್ಲಿ ಧ್ವನಿಯ ಮೂಲಕವೂ ಮಾಹಿತಿ ಸಿಗುತ್ತದೆ. ಜಿಪಿಎಸ್ ಇರುವ ವಾಹನಗಳಲ್ಲಿ ಮುಂದೆ ಸಿಗುವ ಪೆಟ್ರೋಲ್ ಬಂಕ್ ಬಗ್ಗೆಯೂ ಮಾಹಿತಿ ಸಿಗುತ್ತದೆ. ಇದರ ಜತೆಗೆ ವಾಹನದ ಒಳಗಿನ ಉಷ್ಣಾಂಶ, ಸಮಯ ಮುಂತಾದ ಸಣ್ಣಪುಟ್ಟ ಮಾಹಿತಿಯೂ ಸಿಗುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.