ಅನಂತ್ ಪಾಟೀಲ್
ಇದು ರಾಜ್ಯದ ಯುವಕ ಅನಂತ್ ಪಾಟೀಲ್ ಅವರ ಕೃಷಿ ಮಾಹಿತಿಯ ಯಶಸ್ವಿ ಕಥೆ. ಬಾಗಲಕೋಟೆ ಜಿಲ್ಲೆಯ ಅಕ್ಕಿಮರಡಿ ಗ್ರಾಮದ ಬಡ ರೈತನ ಮಗ ಅನಂತ್ ಪಾಟೀಲ್ ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡರು. ನಂತರ ಕಷ್ಟಪಟ್ಟು ಕೃಷಿ ಕೆಲಸಗಳನ್ನು ಮಾಡುತ್ತ ಬಿಜಾಪುರದಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದರು. ಇದಾದ ನಂತರ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು.
ಕಂಪೆನಿಯಲ್ಲಿ ಕೆಲಸ ಮಾಡುತ್ತಲೇ ಅನಂತ್ ಹೆಚ್ಚಿನ ಆಸ್ಥೆ ವಹಿಸಿ ಕೃಷಿ ಕೆಲಸ ಮಾಡಿಸುತ್ತಿದ್ದರು. ಕೃಷಿ ಸಂಬಂಧಿತ ಮಾಹಿತಿಗಳನ್ನು ಇಂಟರ್ನೆಟ್‌ನಲ್ಲಿ ಹುಡುಕ ತೊಡಗಿದರು. ಆದರೆ ಯಾವುದೇ ಪರಿಪೂರ್ಣ ಮಾಹಿತಿ ಸಿಗುತ್ತಿರಲಿಲ್ಲ. ಕೃಷಿಗೆ ಸಂಬಂಧಪಟ್ಟ ಮಾಹಿತಿಯನ್ನು ಒಂದು ಕಡೆ ಕ್ರೋಢೀಕರಿಸಿ ವೆಬ್‌ಸೈಟ್‌ವೊಂದನ್ನು ಯಾಕೆ ರೂಪಿಸಬಾರದು ಎಂದು ಚಿಂತಿಸಿದರು. ತಮ್ಮ ಆಲೋಚನೆಯನ್ನು ಸಾಕಾರಗೊಳಿಸಿದ ಅನಂತ್, ಯುವ ರೈತರಿಗಾಗಿ ‘ಅಗ್ರಿ ಮಾಹಿತಿ’ ಎಂಬ ವೆಬ್‌ಸೈಟ್ ರೂಪಿಸಿಯೇಬಿಟ್ಟರು.
ಇದರಲ್ಲಿ ಕೃಷಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಗಳು ಲಭ್ಯವಿವೆ. ಮಣ್ಣಿನ ಮಾದರಿ, ಬಿತ್ತನೆ ಕ್ರಮ, ಬೆಳೆ ನಿರ್ವಹಣೆ, ರಸ ಗೊಬ್ಬರ ಮತ್ತು ಔಷಧಿ ಸಿಂಪಡಣೆ ಕ್ರಮ, ಕಟಾವು, ಮಾರುಕಟ್ಟೆ, ಬೆಲೆ ಇತ್ಯಾದಿ ಕೃಷಿ ಸಂಬಂಧಿತ ಮಾಹಿತಿಗಳನ್ನು ‘ಅಗ್ರಿ ಮಾಹಿತಿ ’ಯಲ್ಲಿ ಬಿತ್ತರಿಸಿದ್ದಾರೆ.
ಕೃಷಿಯನ್ನು ವೃತ್ತಿ ಮಾಡಿಕೊಳ್ಳುವವರಿಗೆ ಅಗ್ರಿ ಮಾಹಿತಿ ಬಹು ಉಪಯುಕ್ತ ವೆಬ್‌ಸೈಟ್. ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕ್ರಮ ಮತ್ತು ಕೃಷಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆಯೂ ಇಲ್ಲಿ ಮಾಹಿತಿ ಲಭ್ಯ. ಯುವಕರನ್ನು ಕೃಷಿ ಕ್ಷೇತ್ರದ ಕಡೆ ಸೆಳೆಯುವುದು ಮತ್ತು ಪರಿಣಾಮಕಾರಿ ತರಬೇತಿ ನೀಡುವುದು ಅನಂತ್ ಪಾಟೀಲ್ ಅವರ ಉದ್ದೇಶ. ಅವರ ವೆಬ್‌ಸೈಟ್ www.Agrimahiti.org
.....
ಶೈಲೇಂದ್ರ ಮತ್ತು ರಾಜೇಶ್

ನಗರದಿಂದ ಹಳ್ಳಿಗೆ ಬಂದು ಯಶಸ್ಸು ಪಡೆದ ಯುವಕರ ಕಥೆ ಇದು. ಶೈಲೆಂದ್ರ ದಾಖಡ್ ಮತ್ತು ರಾಜೇಶ್ ಸಗ್ಲಿತಾ ವಿಜ್ಞಾನ ಪದವೀಧರರು. ನಗರದ ಒತ್ತಡದ ಬದುಕು ಮತ್ತು ಜಂಜಡಗಳಿಗೆ ಬೇಸತ್ತು ಹಳ್ಳಿಗೆ ಬಂದು ಕೃಷಿಯನ್ನು ಅಪ್ಪಿಕೊಂಡವರು.
ತಮ್ಮ ತಾತಂದಿರು ವಾಸಿಸುತ್ತಿದ್ದ ಮಧ್ಯಪ್ರದೇಶದ ಮೀಮುಚ್ ಗ್ರಾಮಕ್ಕೆ ಶೈಲೇಂದ್ರ ಮತ್ತು ರಾಜೇಶ್ ಬಂದರು. ಹತ್ತಾರು ಎಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ಮೊದಲ ವರ್ಷದಲ್ಲಿ ಅಷ್ಟೇನೂ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ವ್ಯವಸಾಯ ಮಾತ್ರ ಕುಂಟುತ್ತ ಸಾಗಿತು.
ಲಾಭದ ದೃಷ್ಟಿಯಿಂದ ಹೊಸ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಿದರು. ಆಗ ಹೊಳೆದದ್ದು ಸಾವಯವ ಕೃಷಿ ಪದ್ಧತಿ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬದಲು ನೈಸರ್ಗಿಕ ಪೋಷಕಾಂಶಗಳನ್ನು ನೀಡಿದರು. ಇದರಿಂದ ಉತ್ತಮ ಫಸಲು ದೊರೆಯಿತು ಹಾಗೂ ಈ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯೂ ಲಭ್ಯವಾಯಿತು. ತಮ್ಮೂರಿನ ರೈತರಿಗೆ ಸಾವಯವ ಕೃಷಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿದರು. ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ಕೊಟ್ಟರು. ಇದೇ ಪದ್ದತಿಯಲ್ಲಿ ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡಿದರು.
ಮಾರುಕಟ್ಟೆ ಮತ್ತು ಸಾವಯವ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ ಕಾರ್ಮಲ್ ಆರ್ಗಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿ ತೆರೆದಿದ್ದಾರೆ. ಸಾವಯವ ಬೆಳೆ ಬೆಳೆಯುವ ರೈತರನ್ನು ನೋಂದಾಯಿಸಿಕೊಂಡು ಬೀಜ, ಗೊಬ್ಬರ ನೀಡಿ ಅವರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದಾರೆ. 2012–2013ನೇ ಸಾಲಿನಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ.
ಕೃಷಿಯನ್ನು ಉದ್ಯಮವನ್ನಾಗಿ ರೂಪಿಸುವುದು ಈ ಯುವಕರ ಗುರಿ. ಈ ಕಂಪೆನಿ ಅಡಿಯಲ್ಲಿ ಬೆಳೆ ತೆಗೆಯುವುದರಿಂದ ರೈತರಿಗೆ ಉತ್ತಮ ಲಾಭವಿದೆ ಎನ್ನುತ್ತಾರೆ ಶೈಲೇಂದ್ರ. ಕೃಷಿ ಮಾಡದೇ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವ ಯುವಕರಿಗೆ ಇವರು ಮಾದರಿಯಾಗಿದ್ದಾರೆ. ಅವರ ವೆಬ್‌ಸೈಟ್ www.Carmel Organics.org
.....
ಪ್ರೀತಾ ಸುಖ್ತಂಕರ್
ಆಟಗಾರರು ಅಥವಾ ಸಿನಿಮಾ ನಟ ನಟಿಯರು ಯಾವುದೋ ಒಂದು ಉತ್ಪಾದಿತ ವಸ್ತುವಿಗೆ ಜಾಹೀರಾತು ನೀಡಿದ್ದಾರೆ ಎಂದರೆ ಮುಗ್ಧ ಜನರು ಅದನ್ನು ಅವರು ಬಳಸುತ್ತಿದ್ದಾರೆ ಎಂದು ನಂಬಿ ತಾವೂ ಆ ವಸ್ತುವನ್ನು ಬಳಸಲು ಆರಂಭಿಸುತ್ತಾರೆ. ಕಂಪೆನಿಗಳು ಜಾಹೀರಾತು ನೀಡುವುದು ಮಾರಾಟ ತಂತ್ರಕ್ಕಾಗಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ಸೆಲೆಬ್ರಿಟಿಗಳು ಮತ್ತು ಕಂಪೆನಿಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಹಣಗಳಿಸುವುದೇ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್‌ನ ಮುಖ್ಯ ಉದ್ದೇಶ.
ಶೂನ್ಯ ಬಂಡವಾಳದಲ್ಲಿ ಯಾರು ಬೇಕಾದರೂ ಇಂತಹ ಕಂಪೆನಿಗಳನ್ನು ಆರಂಭಿಸಬಹುದು. ಸೆಲೆಬ್ರಿಟಿಗಳು ಮತ್ತು ಕಂಪೆನಿಯ ಉತ್ಪನ್ನಗಳನ್ನು ಜಾಹೀರಾತು ಕಂಪೆನಿಗಳಿಗೆ ಲಿಂಕ್ ಮಾಡುವುದೇ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್‌ನ ಕೆಲಸ ಎಂದು ಗುಟ್ಟು ಬಿಟ್ಟು ಕೊಟ್ಟವರು ಪ್ರೀತಾ ಸುಖ್ತಂಕರ್. ಪುಣೆಯ 32ರ ಹರೆಯದ ಸುಖ್ತಂಕರ್ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು ಆಕಸ್ಮಿಕವಾಗಿ. ಇಂದು ಈ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಭಾರತೀಯ ಯೂತ್ ಐಕಾನ್ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಅರ್ಥಶಾಸ್ತ್ರ ಪದವೀಧರೆಯಾದ ಸುಖ್ತಂಕರ್ ಕಾಲೇಜು ದಿನಗಳಲ್ಲಿ ‘ದಿ ಸಂಡೆ ಆಬ್ಸರ್ವರ್’ ಪತ್ರಿಕೆಗೆ ಹವ್ಯಾಸಕ್ಕಾಗಿ ಬರೆಯುತ್ತಿದ್ದರು. ನಂತರ ಅದೇ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಪ್ರಾರಂಭದಲ್ಲಿ ಕಾಲೇಜು ವಿಭಾಗ ನೋಡಿಕೊಳ್ಳುತ್ತಿದ್ದ ಸುಖ್ತಂಕರ್ ಕೇವಲ 6 ತಿಂಗಳಲ್ಲಿ ಯುವ ವಿಭಾಗದ ಮುಖ್ಯಸ್ಥೆಯಾದರು. ಮುಂದೆ ವಿವಿಧ ಟೀವಿ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಅನುಭವ ಪಡೆದರು. ಅದ್ಯಾಕೊ ಈ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ.
ಗೆಳೆಯರ ಸಲಹೆಯಂತೆ ‘ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್’ ಕಂಪೆನಿಯೊಂದನ್ನು ಆರಂಭಿಸಿದರು. ಅದೇ ‘ದಿ ಲೇಬಲ್ ಕಾರ್ಪ್ ಸೆಲೆಬ್ರಿಟಿ’ ಮ್ಯಾನೇಜ್‌ಮೆಂಟ್ ಸಂಸ್ಥೆ. ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಈ ಕಂಪೆನಿ ಇಂದು ವಾರ್ಷಿಕ ಹತ್ತಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಅವರ ವೆಬ್‌ಸೈಟ್ www. Label Corp.org
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.