ADVERTISEMENT

ಆನ್‌ಲೈನ್‌ ಬ್ಯಾಂಕಿಂಗ್‌ಗೆ ‘ವರ್ಮ್‌’ ಕಾಟ

ವಿ.ಎಸ್.ಶರ್ಮಾ
Published 18 ಫೆಬ್ರುವರಿ 2015, 19:30 IST
Last Updated 18 ಫೆಬ್ರುವರಿ 2015, 19:30 IST

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟಿನ ಸುರಕ್ಷತೆ ಬಹಳ ದೊಡ್ಡ ಸವಾಲಾಗಿದೆ. ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟಿಗೆ ಹಾನಿ ಮಾಡಲೆಂದು ‘ಕ್ರಿಡೆಕ್ಸ್’ (Cridex) ಎಂಬ ಹೊಸ ವರ್ಮ್‌ ಬಂದಿದೆ. ಇದರ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರುವಂತೆ ಸೈಬರ್‌ ಭದ್ರತಾ ತಂಡ ಎಚ್ಚರಿಕೆ ನೀಡಿದೆ.

ಇದು ಆನ್‌ಲೈನ್‌ ಮೂಲಕ ಬ್ಯಾಂಕಿಂಗ್‌ ವಹಿವಾಟು ನಡೆಸುವವರ ಪಾಸ್‌ವರ್ಡ್‌ ಮತ್ತು ರಹಸ್ಯ ಮಾಹಿತಿಗಳನ್ನು ಕದಿಯುವ ಸಾಮರ್ಥ್ಯ ಹೊಂದಿದೆ ಎಂದು ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಆಫ್‌ ಇಂಡಿಯಾ (ಸಿಇಆರ್‌ಟಿಐ) ಹೇಳಿದೆ. ಈ ವರ್ಮ್‌ ಟ್ರೋಜನ್‌ ಜಾತಿಗೆ ಸೇರಿದ್ದು, ಬಹಳ ಅಪಾಯ­ಕಾರಿ­ಯಾಗಿದೆ.

ಪೆನ್‌ಡ್ರೈವ್‌ ತರಹದ ರಿಮೂವಬಲ್‌ ಸಾಧನಗಳ ಮೂಲಕ ಹರಡುತ್ತದೆ ಎಂದು ಮಾಹಿತಿ ನೀಡಿದೆ. ಇದು ಒಮ್ಮೆ ಕಂಪ್ಯೂಟರಿಗೆ ಹರಡಿದರೆ ಅಲ್ಲಿಂದ ಹಣಕಾಸು ಸಂಸ್ಥೆ ಅಥವಾ ಬ್ಯಾಂಕಿನ ಎಚ್‌ಟಿಎಂಎಲ್‌ (HTML) ಪುಟಕ್ಕೆ ದಾಳಿ ಮಾಡುತ್ತದೆ. ನಂತರ ಬ್ಯಾಂಕಿನ ಜಾಲತಾಣವನ್ನು ತನ್ನ ನಿಯಂತ್ರಣಕ್ಕೆ ಪಡೆದು ಅಥವಾ ಗ್ರಾಹಕರನ್ನು ನಕಲಿ ಜಾಲತಾಣಕ್ಕೆ ಕರೆದೊಯ್ದು ಅವರ ಆನ್‌ಲೈನ್‌ ಬ್ಯಾಂಕಿಂಗ್‌ ಮಾಹಿತಿಗಳನ್ನು ಕದಿಯುತ್ತದೆ.

ಈ ವರ್ಮ್‌ ಬ್ಯಾಂಕ್‌ಗಳಷ್ಟೇ ಅಲ್ಲದೆ, ಫೇಸ್‌ಬುಕ್‌, ಟ್ವಿಟರ್‌ ತರಹದ ಸಾಮಾಜಿಕ ಜಾಲತಾಣಗಳ ಮೇಲೂ ದಾಳಿ ಮಾಡುತ್ತದೆ ಎಂದು ಸೈಬರ್‌ ಭದ್ರತಾ ತಂಡ ಮಾಹಿತಿ ನೀಡಿದೆ. Geodo, Dapato, W23/Kryptik.BVB, Worm, Win32.Cridex, PWS:Win32/Zbot ಮತ್ತು Trojan.Gen.2 ಈ ಕಂಪ್ಯೂಟರ್‌ ವರ್ಮ್‌ಗಿರುವ ಅಡ್ಡ ಹೆಸರುಗಳಾಗಿವೆ.

ಮುನ್ನೆಚ್ಚರಿಕಾ ಕ್ರಮ: ಈ ವರ್ಮ್‌ ದಾಳಿಗೆ ತುತ್ತಾಗುವುದನ್ನು ಸಾಧ್ಯವಾದಷ್ಟೂ ತಡೆಯಲು ಕಂಪ್ಯೂಟರ್‌ ಬಳಕೆದಾರರು ಅದರಲ್ಲೂ ಅಂತರ್ಜಾಲ ವ್ಯವಸ್ಥೆ ಹೊಂದಿರುವವರು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸು ವಂತೆ ತಿಳಿಸಿದೆ. ಕಂಪ್ಯೂಟರಿನಲ್ಲಿ ಫೈರ್‌ವಾಲ್‌ ಸಕ್ರಿಯವಾಗಿರುವಂತೆ ನೋಡಿಕೊಳ್ಳುವ ಜತೆಗೆ ಅದನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುವಂತೆ ಹೇಳಿದೆ.

ಹೆಚ್ಚು ಕ್ಲಿಷ್ಟವಾದ ಪಾಸ್‌ವರ್ಡ್‌ ಬಳಕೆ, ಪರಿಚಿತ ಅಥವಾ ಅಪರಿಚಿತ ಮೂಲ ಗಳಿಂದ ಬರುವ ಇ–ಮೇಲ್‌ ಅಟ್ಯಾಚ್‌ ಮೆಂಟ್ಸ್‌ಗಳನ್ನು ತೆರೆಯು­ವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ಪೈರೇಟೆಡ್‌ ಸಾಫ್ಟ್‌ವೇರ್‌­ಗಳನ್ನು ಡೌನ್‌ಲೋಡ್ ಮಾಡದೇ ಇರುವುದೇ ಒಳಿತು.
ಆನ್‌ಲೈನ್‌ ವಹಿವಾಟು ನಡೆಸುವಾಗ   ಇ–ಕಾಮರ್ಸ್‌ ತಾಣದ ಲಾಗಿನ್‌ ಆಗಲು ಮತ್ತು ಹಣ ಪಾವತಿಸುವಾಗ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಲಾಗಿನ್‌ ಆಗುವಾಗ ಹೆಚ್ಚು ಕ್ಲಿಷ್ಟವಾದ ಪಾಸ್‌ವರ್ಡ್‌ ಬಳಕೆ ಮಾಡುವುದು ಅತ್ಯಗತ್ಯ.

ಡೈರೆಜಾ: ಈ ಹಿಂದೆ ಅಂದರೆ ಡಿಸೆಂಬರ್‌ನಲ್ಲಿ ‘ಡೈರೆಜಾ’ ಎಂಬ ಟ್ರೋಜನ್‌ ಬಗ್ಗೆ ಸೈಬರ್‌ ಭದ್ರತಾ ತಂಡ ಎಚ್ಚರಿಕೆ ನೀಡಿತ್ತು. ಮೈಕ್ರೋಸಾಫ್ಟ್‌ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಬಳಸುತ್ತಿರುವ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿ ಕೊಂಡು ಇದನ್ನು ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.