ADVERTISEMENT

ಆ ನೆನಪುಗಳು ಇಂದಿಗೂ ಹಸಿರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST

ನಾನು ಸ್ನಾತಕೋತ್ತರ ಪದವಿ ಪ್ರವೇಶಿಸಿದ ಮೊದಲ ವರ್ಷ. ಎಲ್ಲ ವಿಭಾಗಗಳಂತೆ ನಮ್ಮಲ್ಲೂ ಪ್ರತ್ಯೇಕ ಸಮವಸ್ತ್ರ ಮಾಡಲಾಗಿತ್ತು. ಅದರಲ್ಲೇನು ವಿಶೇಷ ಅಂತಿರಾ? ಹೌದು. ನಮ್ಮದು ಕೊಂಚ ವಿಭಿನ್ನ ಡ್ರೆಸ್‍ಕೋಡ್. ಅದುವೇ ಖಾದಿ ಸಮವಸ್ತ್ರ.

ಆ ವರ್ಷ ಸಮವಸ್ತ್ರದಲ್ಲಿ ಕೊಂಚ ಬದಲಾವಣೆ ತರಬೇಕು ಎಂದು ನಮ್ಮ ವಿಭಾಗದ ಮುಖ್ಯಸ್ಥರ ಇರಾದೆಯಾಗಿತ್ತು. ಅದರಂತೆ ಹೊಸ ರೀತಿಯ ಖಾದಿ ಉಡುಪಿಗೆ ತಯಾರಿ ನಡೆಸಿಯೇಬಿಟ್ಟೆವು. ಎಲ್ಲರೊಳು ಭಿನ್ನ ರೀತಿ ಗುರುತಿಸಿಕೊಳ್ಳಲು ನಮಗೆ ಖಾದಿ ಉಡುಪು ಸಾಥ್ ನೀಡಿತು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮೂರಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ನಾವೆಲ್ಲರೂ ಖಾದಿ ಬಟ್ಟೆ ಧರಿಸಿ ಮೇಳಕ್ಕೆ ಹೋದರೆ ನೆರೆದಿದ್ದ ಜನರ ಚಿತ್ತ ನಮ್ಮತ್ತಲೇ ನೆಟ್ಟಿತ್ತು. ಸಮ್ಮೇಳನದ ಜನಸಾಗರದಲ್ಲಿ ಎದ್ದು ಕಾಣುತ್ತಿದ್ದವರು ಖಾದಿ ಸಮವಸ್ತ್ರಧಾರಿಗಳಾದ ನಾವೇ. ಬಹಳ ಜನ ನಮ್ಮನ್ನು ನೋಡಿ ‘ಓ... ಮೋದಿ ಫ್ಯಾನ್ಸ್’ ಎಂದಾಗ ‘ಅಲ್ಲ, ನಾವು ಖಾದಿ ಫ್ಯಾನ್ಸ್‌’ ಎಂದು ಖಾದಿಯ ಬಗ್ಗೆ ಹೆಮ್ಮೆಯಿಂದ ಹೇಳಿದ್ದೆವು.

ADVERTISEMENT

ಮುಂದಿನ ದಿನಗಳಲ್ಲಿ ಖಾದಿಬಟ್ಟೆಯಲ್ಲಿ ಎಲ್ಲೇ ಹೋದರೂ, ಯಾರೇ ಆಗಲಿ ಗಮನಿಸದೇ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಸಮವಸ್ತ್ರ ಫೇಮಸ್ ಆಗಿತ್ತು. ಅಲ್ಲದೆ ಈ ಖಾದಿಯಿಂದಲೇ ಎಷ್ಟೋ ಜನ ನಮ್ಮನ್ನು ಗುರುತಿಸುವಂತಾಗಿತ್ತು.

ಒಂದು ಬಾರಿ ವಿಶ್ವವಿದ್ಯಾಲಯವೊಂದು ಏರ್ಪಡಿಸಿದ್ದ ಮಾಧ್ಯಮ ಹಬ್ಬದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದ ನಾವೆಲ್ಲರೂ ವಿವಿಯ ಆವರಣದಲ್ಲಿ ಬಸ್‍ನಿಂದ ಇಳಿಯುತ್ತಿದ್ದಂತೆಯೇ ಅಲ್ಲಿದ್ದವರು ‘ಬಂದ್ರು ನೋಡು ವಿಜಾಪುರದವ್ರು’ ಎಂದು ಮಾತನಾಡಿದ್ದು ನಮ್ಮ ಖಾದಿ ಜನಪ್ರಿಯತೆಯನ್ನು ತಿಳಿಸಿತ್ತು. ಇಡೀ ಸಮಾರಂಭದಲ್ಲಿ ಶಿಸ್ತಿನಿಂದ ಸಮವಸ್ತ್ರ ಧರಿಸಿದ ಏಕೈಕ ವಿವಿ ನಮ್ಮದಾಗಿತ್ತು.

ಖಾದಿಯಲ್ಲಿ ತೆಗೆಸಿಕೊಂಡ ಛಾಯಾಚಿತ್ರಗಳು ಕ್ಯಾಂಪಸ್‍ನ ಗೋಡೆ ಮೇಲೆ ಇಂದಿಗೂ ನಳನಳಿಸುತ್ತಿವೆ. ಖಾದಿ ಉಡುಪು ನಮ್ಮಲ್ಲಿ ಹಲವು ನೆನಪುಗಳನ್ನು ಇಂದಿಗೂ ಹಸಿರಾಗಿಸಿದೆ.

⇒-ಕವಿತಾ ಪಾಟೀಲ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.