ADVERTISEMENT

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌

ತಂತ್ರೋಪನಿಷತ್ತು

ವಿ.ಎಸ್.ಶರ್ಮಾ
Published 18 ಮಾರ್ಚ್ 2015, 19:30 IST
Last Updated 18 ಮಾರ್ಚ್ 2015, 19:30 IST

ಅಂತರ್ಜಾಲದ ವ್ಯಾಪ್ತಿ ಅಂಕೆಗೂ ಮೀರಿ ವಿಸ್ತರಿಸುತ್ತಿದೆ. ಎಲ್ಲವೂ ಅಂತರ್ಜಾಲ ಮಯವಾಗುತ್ತಿವೆ. ಇದು ಡಿಜಿಟಲ್‌ ಜಗತ್ತಿನಲ್ಲಿ ‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌’ (ಐಒಟಿ) ಪರಿಕಲ್ಪನೆ  ಹುಟ್ಟುಹಾಕಿದೆ. ಟಿ.ವಿ, ಫ್ರಿಜ್, ಎ.ಸಿ ಹೀಗೆ ಮನೆಯಲ್ಲಿರುವ ಎಲ್ಲಾ ಉಪಕರಣಗಳನ್ನೂ ಅಂತರ್ಜಾಲದ ವ್ಯಾಪ್ತಿಗೆ ತರುವುದೇ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಅಥವಾ ಇಂಟರ್‌ನೆಟ್‌ ಆಫ್‌ ಎವ್ರಿಥಿಂಗ್‌.

ಕಾರು ನಿಲ್ಲಿಸಲು ಎಲ್ಲೆಲ್ಲಿ ಪಾರ್ಕಿಂಗ್‌ ಸೌಲಭ್ಯವಿದೆ ಎನ್ನುವು ದನ್ನು ಗೂಗಲ್‌ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಅಲ್ಲಿ ನಮ್ಮ ಕಾರು ನಿಲ್ಲಿಸಲು ಜಾಗವಿದೆಯೇ ಎಂಬುದನ್ನು ತಿಳಿಯಲಾಗದು. ಆದರೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ನಿಂದ ಇದೂ ಸಾಧ್ಯವಾಗಲಿದೆ. ಮನೆಯಿಂದ ಹೊರಗೆ ಹೊರಡುವಾಗ ಸ್ಮಾರ್ಟ್‌ಫೋನಿನಲ್ಲಿ ‘Going out’ ಎಂಬ ಸಂದೇಶ ಟೈಪಿಸಿದ ತಕ್ಷಣ ಲೈಟ್‌ಗಳೆಲ್ಲವೂ ಆಫ್ ಆಗುವಂತಿ ದ್ದರೆ? ವಾಹನ ನಿಲ್ಲಿಸಲು ಎಲ್ಲಿ ಸೂಕ್ತ ಸ್ಥಳವಿದೆ ಎಂಬುದು ಮೊದಲೇ ಗೊತ್ತಾದರೆ? ಯಾವ ರಸ್ತೆಯಲ್ಲಿ ಟ್ರಾಫಿಕ್ ಕಮ್ಮಿ ಇದೆ ಎಂದು ತಿಳಿಯುವಂತಾದರೆ?

ಇಂತಹ ಉದ್ದೇಶಗಳನ್ನಿಟ್ಟುಕೊಂಡೇ ಸ್ಯಾಮ್ಸಂಗ್‌ ‘ಸ್ಮಾರ್ಟ್‌ ಹೋಮ್‌ ಆ್ಯಪ್‌’ ಪರಿಚಯಿಸಿದೆ. ಇದರಿಂದ ಮನೆಯಲ್ಲಿ ಇಲ್ಲದಿದ್ದರು ಸಹ, ಲೈಟ್‌ ಆಫ್‌/ಆನ್‌ ಮಾಡುವುದು, ಡೋರ್ ಲಾಕ್‌ ಮಾಡುವುದು... ಹೀಗೆ ಮನೆಯ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದು. ಇಂಟೆಲ್, ಸ್ಯಾಮ್ಸಂಗ್, ಸಿಸ್ಕಾ ಒಳಗೊಂಡು ಪ್ರಮುಖ ಕಂಪೆನಿ ಗಳೆಲ್ಲವೂ ಈಗ ಇಂಟರ್‌ನೆಟ್‌ ಆಫ್‌್ ಥಿಂಗ್ಸ್‌ ಕಡೆಗೆ ಹೆಚ್ಚಿನ ಗಮನ ನೀಡ­ಲಾರಂಭಿಸಿವೆ.

ಅಂತರ್ಜಾಲ ಬಳಕೆ ಪ್ರಭಾವ: ಸ್ಮಾರ್ಟ್‌ಫೋನ್ ಸೇರಿದಂತೆ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿವೆ. ಅಂತೆಯೇ ಅಂತ ರ್ಜಾಲ ಸಂಪರ್ಕ ಪಡೆಯು­ವವರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ಮೊಬೈಲ್ ಅಂತರ್ಜಾಲ ಬಳಕೆ ಹೆಚ್ಚುತ್ತಿರುವುದು ‘ಐಒಟಿ’ ಪರಿಕಲ್ಪನೆಗೆ ಹೆಚ್ಚು ಅವಕಾಶ ಕಲ್ಪಿಸುತ್ತಿದೆ. ದೇಶದಲ್ಲಿ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆ ಜೂನ್‌ಗೆ 21.30 ಕೋಟಿಗೆ ತಲುಪಲಿದೆ ಎಂದು ಭಾರ ತೀಯ ಅಂತರ್ಜಾಲ ಮತ್ತು ಮೊಬೈಲ್ ಸಂಸ್ಥೆ (ಐಎಎಂಎಐ) ಹೇಳಿದೆ. 2014ರ ಡಿಸೆಂಬರ್ ವೇಳೆಗಾಗಲೇ 7.30 ಕೋಟಿಗೆ ತಲುಪಿತ್ತು.

ಧರಿಸಬಹುದಾದ ಸಾಧನ: ಗೂಗಲ್ ಗ್ಲಾಸ್, ಸ್ಮಾರ್ಟ್‌ವಾಚ್‌, ಹೆಡ್ ಬ್ಯಾಂಡ್, ರಿಸ್ಟ್ ಬ್ಯಾಂಡ್, ಇ–ಟ್ಯಾಟೂ ಕೂಡ ‘ಐಒಟಿ’ ಭಾಗವೇ ಆಗಿದೆ. ಧರಿಸಬಹುದಾದ ಸಾಧನಗಳೇ ಮುಂದಿನ ನಾಲ್ಕೈದು ವರ್ಷಗಳಲ್ಲಿ ₹ 1,237 ಕೋಟಿಯಷ್ಟು ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎಂದು ಸಮೀಕ್ಷೆ­ಯೊಂದು ಅಂದಾಜು ಮಾಡಿದೆ. ಇಂಟರ್‌ನೆಟ್‌ ಆಫ್ ಥಿಂಗ್ಸ್ ತಂತ್ರಜ್ಞಾನ ಮತ್ತು ಸೇವೆಗಳು 2020ರ ವೇಳೆಗೆ ₹18.58 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎನ್ನುತ್ತದೆ ಗಾರ್ಟ್‌ನರ್ ವರದಿ.

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ನಮ್ಮ ಒಟ್ಟೂ ಜೀವನದ ಮೇಲೆ ಬಹಳ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ಹೊರಟಿದೆ ಎನ್ನಬಹುದು. ಹೀಗಿದ್ದರೂ, ಎಲ್ಲವೂ ಅಂತ ರ್ಜಾಲದ ವ್ಯಾಪ್ತಿಗೆ ಬರುವುದರಿಂದ ಸೈಬರ್‌ ದಾಳಿಗೆ ಹೊಸ ಆಯುಧವಾಗುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.