ADVERTISEMENT

ಕಲಿತದ್ದು ಅಂದು; ಓಡಿಸಿದ್ದು ಇಂದು

ವಿಕ್ರಂ ಕಾಂತಿಕೆರೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಅಂಜು ಬಾಬಿ ಜಾರ್ಜ್‌
ಅಂಜು ಬಾಬಿ ಜಾರ್ಜ್‌   

ಕಾ‌ರಿನ ಜೊತೆ ನನ್ನ ನಂಟು ಬಾಲ್ಯದಲ್ಲೇ ಬೆಳೆದಿತ್ತು. ತರಬೇತಿ ಮತ್ತು ಸ್ಪರ್ಧೆಗಾಗಿ ಕೇರಳದ ನನ್ನ ಊರಿನಿಂದ ಬೆಂಗಳೂರಿಗೆ ಬಂದ ನಂತರವಂತೂ ಅದರಲ್ಲೇ ಓಡಾಟ. ಆದರೂ ನಾನು ಕಾರು ಓಡಿಸಲು ಕಲಿತದ್ದು ಸ್ವಲ್ಪ ತಡವಾಗಿಯೇ. 22ನೇ ವಯಸ್ಸಿನಲ್ಲಿ ಡ್ರೈವಿಂಗ್‌  ಕಲಿತಿದ್ದರೂ ಕಾರಿನೊಂದಿಗೆ ಒಬ್ಬಳೇ ರಸ್ತೆಗೆ ಇಳಿದದ್ದು ಇತ್ತೀಚೆಗೆ; ಎರಡು ವರ್ಷಗಳ ಹಿಂದೆ. ಅರ್ಥಾತ್‌ ಚಾಲನೆ ಕಲಿತು, ಪರವಾನಗಿ ಪಡೆದು 16 ವರ್ಷಗಳ ನಂತರ!

ಡ್ರೈವಿಂಗ್‌ ಮಾಡುವುದನ್ನು ಕಲಿಯುವುದು ತಡವಾಗಲು ನಾನು ತರಬೇತಿಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದುದೇ ಕಾರಣ. ಸ್ವಂತ ಬಲದಿಂದ ಕಾರು ಓಡಿಸುವುದಕ್ಕೆ ತಡವಾಗಿದ್ದು ಪತಿ, ಬಾಬಿ ಜಾರ್ಜ್‌ ಅವರ ಪ್ರೀತಿ ಮತ್ತು ಕಾಳಜಿಯಿಂದ. ವಾಹನ ಚಲಾಯಿಸಲು ತಿಳಿದಿದ್ದರೂ ರಸ್ತೆಗೆ ಇಳಿಸಲು ಬಾಬಿ ಅನುಮತಿ ನೀಡುತ್ತಿರಲಿಲ್ಲ. ಎಲ್ಲಾದರೂ ಅಪಾಯವಾದರೆ, ಅಪಘಾತ ಸಂಭವಿಸಿದರೆ ಎಂಬ ಆತಂಕವೇ ಇದಕ್ಕೆ ಕಾರಣ.

ಸುಮಾರು ಎರಡು ದಶಕಗಳ ಹಿಂದಿನ ಮಾತು. ಆಗ ನಾವು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿ ದ್ದೆವು. ಕಾರು ಓಡಿಸೋಕೆ ಕಲಿಯಲು ಕೊನೆಗೂ ಅನುಮತಿ ಪಡೆದ ನಾನು, ಮೊದಲ ದಿನವೇ ಕುತೂಹಲಕಾರಿ ಘಟನೆಗೆ ಸಾಕ್ಷಿಯಾದೆ. ತರಬೇತುದಾರ ಪಕ್ಕದ ಆಸನದಲ್ಲಿ ಕುಳಿತಿದ್ದ. ನನಗೆ ಮೊದಲೇ ಕಾರುಗಳ ಬಗ್ಗೆ ಗೊತ್ತಿದ್ದ ಕಾರಣ ಕಲಿಯಲು ಕಷ್ಟವಾಗಲಿಲ್ಲ.

ADVERTISEMENT

ನನ್ನ ರಥ ಬನಶಂಕರಿಯಲ್ಲಿ ಮುಂದೆ ಸಾಗುತ್ತಿದ್ದಂತೆ ಬಲಬದಿಯಿಂದ ಏಕಾ ಏಕಿ ನುಗ್ಗಿ ಬಂದ ವ್ಯಕ್ತಿ ಯೊಬ್ಬ ಮಿರರ್‌ಗೆ ಗುದ್ದಿದ. ಆತನಿಗೆ ಪೆಟ್ಟು ಆಗಲಿಲ್ಲ. ಆದರೆ ಈ ಪ್ರಸಂಗ

ಈಗಲೂ ನಗೆ ಉಕ್ಕಿಸುತ್ತಿದೆ. ಅಂದು ಮನೆಗೆ ಬಂದ ಕೂಡಲೇ ನಾನು ಅಪಘಾತದ ಬಗ್ಗೆ ಪತಿಗೆ ಹೇಳಿದೆ. ಅಷ್ಟರಲ್ಲಿ ಓಡಿ ಬಂದ ಕಾರಿನ ತರಬೇತುದಾರ ‘ಸರ್‌... ಎಲ್ಲರೂ ಕಾರು ಚಾಲನೆ ಕಲಿಯುವಾಗ ತಾವೇ ಯಾವುದಕ್ಕಾ ದರೂ ಗುದ್ದಿಸುತ್ತಾರೆ. ಆದರೆ ಮೇಡಂ ವಿಷಯ ದಲ್ಲಿ ಉಲ್ಟಾ ಆಯಿತು. ವ್ಯಕ್ತಿಯೇ ಬಂದು ಕಾರಿಗೆ ಗುದ್ದಿದ’ ಎಂದರು. ಆಗ ಮನೆಯಲ್ಲಿ ನಗುವೋ ನಗು...

ನನ್ನ ‘ಬಲ’ವನ್ನು ನಾನೇ ಮರೆತ ದಿನ...
ಹತ್ತು ದಿನಗಳಲ್ಲಿ ಒಪ್ಟ್ರಾ ಓಡಿಸುವುದರಲ್ಲಿ ಪ್ರವೀಣಳಾದೆ. ಆದರೆ ಮೊದಲ ಬಾರಿ ಸ್ವಂತ ಕಾರು ಓಡಿಸಲು ಮೂರು ವರ್ಷ ಕಾಯಬೇಕಾಯಿತು. ಅದೊಂದು ದಿನ ಪತಿಯ ನಿರ್ದೇಶನದಲ್ಲಿ ವಾಹನ ಚಲಾಯಿಸುತ್ತಾ ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿದೆ. ನಾನು ತುಂಬ ಗಾಬರಿಯಾಗಿದ್ದೆ.

ಮುಂದೆ ಸಾಗುತ್ತಿದ್ದಂತೆ ಯಾವುದೋ ವಸ್ತು ಅಡ್ಡ ಬಂತು. ಬಾಬಿ ಏಕಾಏಕಿ ಬಲಕ್ಕೆ ತಿರುಗಿಸುವಂತೆ ಹೇಳಿದರು. ನನ್ನ ಕಾಲು ಬ್ರೇಕ್‌ ಅದುಮಿತು. ಏನು ಮಾಡಬೇಕೆಂದು ತಿಳಿಯದ ನಾನು ‘ನನ್ನ ಬಲ ಬದಿ ಯಾವುದು’ ಎಂದು ಕೇಳಿದೆ. ಬಾಬಿ ಜೋರಾಗಿ ನಕ್ಕರು. ನಂತರ ನಾನೂ ನಕ್ಕೆ. ಮನೆಗೆ ಬಂದ ನಂತರ ಇಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಕ್ಕೆವು. ಈಗಲೂ ಗೆಳೆಯರು ಸಿಕ್ಕಿದಾಗಲೆಲ್ಲ ಬಾಬಿ ಅದನ್ನೇ ಹೇಳಿ ಕೆಣಕುತ್ತಾರೆ.

ಕಾರು ನಮ್ಮ ಮನೆಯ ಸದಸ್ಯನಂತೆ...
ಕ್ರೀಡಾಕೂಟಗಳಿಗೆ ಅಭ್ಯಾಸ ಮಾಡಿ, ಪದಕಗಳನ್ನು ಗೆದ್ದು ಆಯಿತು; ಮಕ್ಕಳನ್ನು ಹೆತ್ತು ಸಾಕಿದ್ದೂ ಆಯಿತು. ಈಗ ನನಗೆ ಹೆಚ್ಚು ಕಮಿಟ್‌ಮೆಂಟ್ ಇಲ್ಲ. ಹೀಗಾಗಿ ಕಾರು ಓಡಿಸುವುದಕ್ಕೆ ನಿರ್ಬಂಧವೂ ಇಲ್ಲ. ಎರಡು ವರ್ಷಗಳಿಂದ ವಾಹನದೊಂದಿಗೆ ಒಬ್ಬಳೇ ಹೊರಗೆ ಹೋಗುತ್ತಿದ್ದೇನೆ. ಹೊಸ ಕಾರು ಖರೀದಿಸುವ ಲೆಕ್ಕಾಚಾರವೂ ನಡೆದಿದೆ. ಆದರೆ ಬಾಬಿಗೆ ಈಗ ಇರುವ ಕಾರೇ ಬೇಕಂತೆ. ಅವರು ಅದನ್ನು ಮನೆಯ ಸದಸ್ಯನಂತೆ ನೋಡುತ್ತಾರೆ. ನಿತ್ಯವೂ ಅದರ ಆರೈಕೆ ಮಾಡುವುದಕ್ಕೇ ಸಮಯ ತೆಗೆದಿರಿಸುತ್ತಾರೆ. ದಕ್ಷಿಣ ಭಾರತ ಪ್ರವಾಸ ಇದ್ದರೆ ಕಾರಿನಲ್ಲೇ ತೆರಳುವುದು ರೂಢಿಯಾಗಿದೆ. ಬೆಂಗಳೂರಿನಿಂದ ಕನ್ಯಾಕುಮಾರಿವರೆಗೂ ಸ್ವಂತ ಕಾರಿನಲ್ಲಿ ಹೋಗಿದ್ದೇವೆ. ‘ಹೊಸ ಕಾರು ಖರೀದಿಸಿದರೂ ಹಳೆಯದನ್ನು ಬಿಡಲಾರೆ’ ಎಂದು ಹೇಳುವ ಬಾಬಿ ಮಾತಿಗೆ ಹ್ಹೂಂ ಎಂದಿದ್ದೇನೆ.

ಚೇರಂಚಿರದಿಂದ ಅಥೆನ್ಸ್‌ಗೆ ‘ಜಿಗಿದ’ ಅಂಜು
ಕೇರಳದ ಕೊಟ್ಟಾಯಂ ಜಿಲ್ಲೆ ಚಂಙನಾಶೇರಿಯ ಚೀರಂಚಿರ ಗ್ರಾಮದಲ್ಲಿ ಹುಟ್ಟಿ ಬೆಳೆದ ಅಂಜು, ಲಾಂಗ್‌ಜಂಪ್‌ನಲ್ಲಿ ಇತಿಹಾಸ ನಿರ್ಮಿಸಿದವರು. ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಅಥೆನ್ಸ್‌ ಒಲಿಂಪಿಕ್ಸ್‌ ಕೂಟದವರೆಗೂ ಹೆಜ್ಜೆ ಇಟ್ಟ ಪ್ರತಿಭೆ. ವಿಶ್ವ ಚಾಂಪಿಯನ್‌ಷಿಪ್‌ನ (2003 ) ಜಂಪಿಂಗ್‌ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಪದಕ (ಕಂಚು) ಗಳಿಸಿಕೊಟ್ಟ ದಾಖಲೆಯನ್ನು ಹೊಂದಿದ್ದಾರೆ ಅಂಜು. ಅವರ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ ಮುರಿಯಲು ಇನ್ನೂ ಯಾರಿಗೂ ಆಗಲಿಲ್ಲ. ತಂದೆ ಕೆ.ಟಿ.ಮಾರ್ಕೋಸ್ ಅವರ ಪ್ರೇರಣೆಯಿಂದ ಅಥ್ಲೆಟಿಕ್ಸ್‌ಗೆ ಧುಮುಕಿದ ಅಂಜು ಆರಂಭದಲ್ಲಿ ವೇಗದ ಓಟಗಾರ್ತಿ ಮತ್ತು ಹರ್ಡಲ್ಸ್‌ ಪಟು ಆಗಿದ್ದರು.

ಲಾಂಗ್‌ಜಂಪ್‌ನಲ್ಲಿ ಲಯ ಕಂಡುಕೊಂಡ ನಂತರ ಅದಕ್ಕೇ ಗಟ್ಟಿಯಾಗಿ ಅಂಟಿಕೊಂಡರು. 1996ರಲ್ಲಿ ದೆಹಲಿಯಲ್ಲಿ ನಡೆದ ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಮೂಲಕ ಜಯದ ಓಟ ಆರಂಭಿಸಿದ ಅವರು 2002ರ ಮ್ಯಾಂಚೆಸ್ಟರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚು ಗಳಿಸಿಕೊಟ್ಟಿದ್ದರು. ಎರಡು ವರ್ಷಗಳ ನಂತರ ನಡೆದ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರು. ಅಥ್ಲೀಟ್ ಮತ್ತು ಕೋಚ್‌ ಬಾಬಿ ಜಾರ್ಜ್‌ ಅವರನ್ನೇ ಅಂಜು ಬಾಳ ಸಂಗಾತಿಯಾಗಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.