ADVERTISEMENT

ಚೂಟಿ ಹುಡುಗಿಯರಿಗೆ ಸ್ಕೂಟಿ!

ಪ್ರಜಾವಾಣಿ ವಿಶೇಷ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST
ಚೂಟಿ ಹುಡುಗಿಯರಿಗೆ ಸ್ಕೂಟಿ!
ಚೂಟಿ ಹುಡುಗಿಯರಿಗೆ ಸ್ಕೂಟಿ!   

ಕಾಲೇಜು ಹುಡುಗಿಯರಿಗೆ ಓಡಾಡಲೊಂದು ಸ್ಕೂಟರ್ ಇರಲೇಬೇಕು. ಅದರಲ್ಲೂ ಅಪ್ಪ ಅಮ್ಮನನ್ನು ಕಾಡಿಸಿ ಕೊಳ್ಳುವುದೇ ಸ್ಕೂಟಿ. ಅದೇಕೋ ಏನೋ ಗೊತ್ತಿಲ್ಲ ಸ್ಕೂಟಿ ಏರಿ ಹೊರಟ ಹುಡುಗಿಯರನ್ನು ಕಂಡರೆ ಹುಡುಗರಿಗೂ ಹೆಚ್ಚು ಪ್ರೀತಿ. ಕಾಲೇಜ್ ಕ್ಯಾಂಪಸ್‌ಗಳಲ್ಲಿ ಸ್ಕೂಟಿ ಇಲ್ಲದೇ ಇದ್ದರೆ ಬ್ಯೂಟಿಯೂ ಇರುವುದಿಲ್ಲ.

ಹಾಗಾದರೆ ಅದಕ್ಕೆ ಕಾರಣ ಇರಬೇಕಲ್ಲವೇ? ಖಂಡಿತಾ ಇದೆ. ಅದು ಸರಳ ಸೌಂದರ್ಯ, ಚಿಕ್ಕ ಗಾತ್ರ. ಹುಡುಗಿಯರ ಶಕ್ತಿ ಸಾಮರ್ಥ್ಯಗಳು ಹೆಚ್ಚಿದ್ದು, ಬುಲೆಟ್ ಬೈಕ್ ಚಲಾಯಿಸುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರಾದರೂ, ಕೋಮಲೆಯರಿಗೆ ಸ್ಕೂಟಿ ಎಂದರೆ ಮೆಚ್ಚು. ಕಡಿಮೆ ತೂಕದ, ಅಷ್ಟೇ ಚುರುಕಾದ ಸವಾರಿಯನ್ನೂ ನೀಡಬಲ್ಲ ವಾಹನವಿದು.

ಅದಕ್ಕೇ ಇದು ಚೂಟಿ ಹುಡುಗಿಯರ ಜಾಣ ಆಯ್ಕೆ.  ಇದು ಭಾರತದ ಪ್ರಪ್ರಥಮ ಸ್ಕೂಟರೆಟ್. ಕೈನೆಟಿಕ್ ಹೋಂಡಾ ಪ್ರಪ್ರಥಮ ಗಿಯರ್‌ಲೆಸ್ ಸ್ಕೂಟರ್ ಹೊರಬಿಟ್ಟ ಮೇಲೆ ಸ್ಕೂಟರೆಟ್ ಹೊರಬಿಟ್ಟಿದ್ದು, ಟಿವಿಎಸ್ ಸಂಸ್ಥೆಯ ದಿಶೆಯನ್ನೇ ಬದಲಿಸಿತು. ಸ್ಕೂಟರೆಟ್ ಎಂದರೆ ಸ್ಕೂಟರ್‌ಗೂ ಚಿಕ್ಕದಾದ, 60 ಸಿಸಿ (ಕ್ಯೂಬಿಕ್ ಕೆಪಾಸಿಟಿ)ಯಿಂದ 100 ಸಿಸಿವರೆಗೆ ಸಾಮರ್ಥ್ಯ ಹೊಂದಿರುವ ವಾಹನ.

ಸ್ಕೂಟರೆಟ್ ಸಾಮಾನ್ಯವಾಗಿ ಗಿಯರ್‌ಲೆಸ್ ವಾಹನವೇ. ಅತ್ಯಂತ ಹಗುರಾದ, ಕಾಲೇಜು ಹುಡುಗಿಯರಿಗೆಂದೇ ತಯಾರಾದ ವಾಹನವಿದು. ತೋಳಲ್ಲಿ ಬಲ ಬಂದು ಸ್ಕೂಟರ್ ಕೊಳ್ಳುವ ಮೊದಲು, ಕಲಿಯಲು, ಮೋಜು ಮಾಡಲು ಸ್ಕೂಟಿ ಕೊಳ್ಳುವುದು ಹುಡುಗಿಯರ ಆಸೆ. ಸರಾಗವಾಗಿ ನಿಭಾಯಿಸಬಲ್ಲ, ಹೆಚ್ಚೇನು ತ್ರಾಸ ಬಯಸದ, ಕಾಲೇಜು ಹುಡುಗಿಯರಿಗೇ ಹೇಳಿ ಮಾಡಿಸಿದ ಸ್ಕೂಟರೆಟ್ ಇದು.

ಟಿವಿಎಸ್ ಸ್ಕೂಟಿಯನ್ನು ಹುಡುಗರೂ ಓಡಿಸುತ್ತಾರಾದರೂ, ಇದು ಹುಡುಗಿಯರ ಬ್ರ್ಯಾಂಡ್. 1996ರಲ್ಲಿ ಟಿವಿಎಸ್ ಸಂಸ್ಥೆ ಹೊರಬಿಟ್ಟ ಸ್ಕೂಟಿ, 2 ಸ್ಟ್ರೋಕ್ ಎಂಜಿನ್ ಹಾಗೂ 60 ಸಿಸಿ ಎಂಜಿನ್ ಹೊಂದಿತ್ತು. ಸಾಮಾನ್ಯ ಹಗುರ ದೇಹ, ಹೆಡ್‌ಲೈಟ್, ಟೇಲ್ ಲೈಟ್‌ಗಳಿದ್ದವು. ನಂತರ ಅದೇ ವರ್ಷದಲ್ಲೆೀ ಸ್ಕೂಟಿ ಇಎಸ್ (1996), ಸ್ಕೂಟಿ ಪೆಪ್ (2003), ಸ್ಕೂಪಿ ಪೆಪ್ ಪ್ಲಸ್ (2005), ಸ್ಕೂಟಿ ಟೀನ್ಸ್ (2007) ಮತ್ತು ಸ್ಕೂಟಿ ಸ್ಟ್ರೀಕ್ (2007) ಹೀಗೆ ವಿವಿಧ ಅವತರಣಿಕೆಗಳು ಹೊರಬಂದಿವೆ.

2007ರಲ್ಲಿ ಬಿಡುಗಡೆಯಾದ ಸ್ಕೂಟಿ ಟೀನ್ಸ್‌ನಲ್ಲಿ ವಿದ್ಯುಚ್ಚಾಲಿತ ಸ್ಕೂಟರೆಟ್ ಹೊರಬಿಟ್ಟಿದ್ದು ವಿಶೇಷ. ಇಂದಿಗೂ ಇದರ ಉತ್ಪನ್ನವಿದೆ. ಆದರೆ ಕೊಳ್ಳುವವರು ಮಾತ್ರ ಕಡಿಮೆ.

ಸ್ಕೂಟಿಯ ಎಲ್ಲ ಅವತರಣಿಕೆಗಳೂ ಸರಾಸರಿ 1 ಲೀಟರ್ ಪೆಟ್ರೋಲ್‌ಗೆ 35 ಕಿಲೋಮಿಟರ್ ಮೈಲೇಜ್ ನೀಡುತ್ತವೆ. ಸೆಲ್ಫ್  ಸ್ಟಾರ್ಟ್ ಸಾಮಾನ್ಯ ತಂತ್ರಜ್ಞಾನ. ಈಗ ಸ್ಕೂಟಿ ಸ್ಟ್ರೀಕ್ (ಎಕ್ಸ್ ಶೋರೂಂ ಬೆಲೆ- ರೂ. 38, 905), ಸ್ಕೂಟಿ ಪೆಪ್ ಪ್ಲಸ್ (ರೂ. 36, 735) ಹಾಗೂ ಸ್ಕೂಟಿ ಟೀನ್ಸ್ (ರೂ. 30, 230) ಮಾರುಕಟ್ಟೆಯಲ್ಲಿ ಲಭ್ಯ.  -

ತಾಂತ್ರಿಕ ಮಾಹಿತಿ:
ಟಿವಿಎಸ್ ಸ್ಕೂಟಿ
*ಎಂಜಿನ್ ಸಾಮರ್ಥ್ಯ 60 ಸಿಸಿ, 2 ಸ್ಟ್ರೋಕ್ ಎಂಜಿನ್
* ಬಿಎಚ್‌ಪಿ 3.5  5500 ಆರ್‌ಪಿಎಂ     (ರೊಟೇಷನ್ಸ್ ಪರ್ ಮಿನಿಟ್)
*ನಿವ್ವಳ ತೂಕ 79.50 ಕಿಲೋಗ್ರಾಂ
* ವೀಲ್‌ಬೇಸ್ 1200 ಮಿಲಿ ಮೀಟರ್
*ಗ್ರೌಂಡ್ ಕ್ಲಿಯರೆನ್ಸ್ 135 ಮಿಲಿ ಮೀಟರ್
*ಮೈಲೇಜ್ 1ಲೀಟರ್‌ಗೆ 35 ಕಿಲೋಮೀಟರ್
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್
*ಎಂಜಿನ್ ಸಾಮರ್ಥ್ಯ 74.6 ಸಿಸಿ, 4 ಸ್ಟ್ರೋಕ್ ಎಂಜಿನ್
* ಬಿಎಚ್‌ಪಿ 3ಕಿಲೋವ್ಯಾಟ್ 6500 ಆರ್   ಪಿಎಂ (ರೊಟೇಷನ್ಸ್ ಪರ್ ಮಿನಿಟ್)
*ನಿವ್ವಳ ತೂಕ 85 ಕಿಲೋಗ್ರಾಂ
*ವೀಲ್‌ಬೇಸ್ 1230 ಮಿಲಿ ಮೀಟರ್
*ಗ್ರೌಂಡ್ ಕ್ಲಿಯರೆನ್ಸ್ 135 ಮಿಲಿ ಮೀಟರ್
* ಮೈಲೇಜ್ 1 ಲೀಟರ್‌ಗೆ 35 ಕಿಲೋಮೀಟರ್
ಟಿವಿಎಸ್ ಸ್ಕೂಟಿ ಸ್ಟ್ರೀಕ್
* ಎಂಜಿನ್ ಸಾಮರ್ಥ್ಯ 87.80 ಸಿಸಿ, 4 ಸ್ಟ್ರೋಕ್ ಎಂಜಿನ್
* ಬಿಎಚ್‌ಪಿ 3.6 ಕಿಲೋವ್ಯಾಟ್  6500 ಆರ್   ಪಿಎಂ (ರೊಟೇಷನ್ಸ್ ಪರ್ ಮಿನಿಟ್)
*ನಿವ್ವಳ ತೂಕ 96 ಕಿಲೋಗ್ರಾಂ
* ವೀಲ್‌ಬೇಸ್ 1230 ಮಿಲಿ ಮೀಟರ್
* ಗ್ರೌಂಡ್ ಕ್ಲಿಯರೆನ್ಸ್ 135 ಮಿಲಿ ಮೀಟರ್
* ಮೈಲೇಜ್ 1 ಲೀಟರ್‌ಗೆ 35 ಕಿಲೋಮೀಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT