ADVERTISEMENT

ಜೋಡಿ ನೋಡಲು ಹೋದಾಗ...

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಜೋಡಿ ನೋಡಲು ಹೋದಾಗ...
ಜೋಡಿ ನೋಡಲು ಹೋದಾಗ...   

ಮೊದಲ ಪರೀಕ್ಷೆಯೇ ಕೊನೆಯದಾದಾಗ
ಪದವಿ ಮುಗಿಸಿ, ಕಂಪ್ಯೂಟರ್ ಕೋರ್ಸ್ ಮಾಡುತ್ತ, ನನ್ನಿಷ್ಟದ ಹೂದೋಟ ಬೆಳೆಸುವುದು, ಕಾದಂಬರಿ ಓದುವುದು ಎಂದೆಲ್ಲಾ ಆರಾಮಾಗಿದ್ದೆ. ಹೀಗೆ ವರ್ಷ ಕಳೆಯುವಷ್ಟರಲ್ಲಿ ‘ಇನ್ನು ಮದುವೆಯಾಗಿ ಬಿಡು’ ಎಂದರು. ನಿರಾಕರಿಸಲು ನನಗೂ ಕಾರಣಗಳಿರಲಿಲ್ಲ.

ವರಾನ್ವೇಷಣೆ ಶುರುವಾಯ್ತು. ಒಂದು ಶನಿವಾರ ಕೆಲದಿನ ಅತ್ತೆಯ (ಅಪ್ಪನ ತಂಗಿ) ಜೊತೆಗಿರಲೆಂದು ಹೋಗಿದ್ದೆ. ಭಾನುವಾರ ಬೆಳ್ಳಂಬೆಳಗ್ಗೆ ಅಪ್ಪನಿಂದ ಫೋನ್ ಬಂತು. ಹತ್ತು ಗಂಟೆಗೆ ಗಂಡಿನವರು ಬರುತ್ತಾರಂತೆ ರೆಡಿಯಾಗಿರು, ಕರೆದುಕೊಂಡು ಹೋಗಲು ಬರುತ್ತೇನೆಂದು. ನಾನೋ ತಲೆಸ್ನಾನ ಮಾಡಲೆಂದು ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಂಡು ಕುಳಿತಿದ್ದೆ.

ಗಡಿಬಿಡಿಯಲ್ಲಿ ಸ್ನಾನ ಮಾಡಿದ್ದರಿಂದ ಜಿಡ್ಡು ಸರಿಯಾಗಿ ಹೋಗದೆ ಕೂದಲು ಅಧ್ವಾನವಾಯಿತು. ಮೊದಲೇ ತಿಳಿಸದೆ ಹೀಗೆ ಏಕಾಏಕಿ ಬರುತ್ತೇನೆಂದ ಗಂಡಿನವರ ಮೇಲೆ ಕೋಪವೂ ಬಂತು. ಹನ್ನೊಂದು ಗಂಟೆಗೆ ಬಂದಿತು ಗಂಡಿನವರ ಸವಾರಿ. ಹುಡುಗನ ಜೊತೆ ಬಂದಿದ್ದು ಅವರಪ್ಪ, ಮತ್ತಿಬ್ಬರು ಸಂಬಂಧಿಕರು. ಅವರ ಆತಿಥ್ಯ ಮುಗಿಸಿ ಮಹಡಿಯಲ್ಲಿ ಎಲ್ಲರೂ ಸೇರಿದರು. ಏನೇನು ಮಾತುಕತೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಗಮನ ಇರಲಿಲ್ಲ. ಮೊದಲೇ ತಿಳಿಸದೆ ಬಂದರು ಎಂಬ ಮುನಿಸಿತ್ತಲ್ಲ.

ADVERTISEMENT

ನನ್ನ ಎಣ್ಣೆಜಿಡ್ಡಿನ ರೂಪ ನೋಡಿ ಗಂಡಂತೂ ಒಪ್ಪಲಾರ ಎಂದು ನನಗೆ ಖಾತ್ರಿಯಿತ್ತು. ಒಮ್ಮೆ ಮೆಲ್ಲಗೆ ಹುಡುಗನ ಕಡೆ ದೃಷ್ಟಿ ಹರಿಸಿದರೆ, ಆತ ಎತ್ತಲೋ ನೋಡುತ್ತಿದ್ದ. ಆಗಲಂತೂ ಇದು ಸುಮ್ಮನೆ ತಿಂಡಿ ತಿಂದು ಹೋಗುವ ಗಿರಾಕಿ ಎಂದುಕೊಂಡು ಬಿಟ್ಟೆ. ಅಷ್ಟರಲ್ಲಿ ಯಾರೋ ಹೇಳಿದರು, ‘ಹುಡುಗ ಹುಡುಗಿ ಬೇಕಾದರೆ ಮಾತಾಡಲಿ’ ಎಂದು. ನನ್ನ ಜೊತೆ ದೊಡ್ಡಮ್ಮ, ಅವನ ಜೊತೆ ಸಂಬಂಧಿಕನೊಬ್ಬ ಹಿಂಬಾಲಿಸಿದರು. ಏನು ಮಾತಾಡುವುದೆಂದು ತೋಚದೆ ನೆಲ ನೋಡುತ್ತಾ ನಿಂತೆ. ಆತನೇ ಮಾತಿಗೆ ಶುರುವಿಟ್ಟ.

ತನ್ನ ನೌಕರಿ, ವಿದ್ಯಾಭ್ಯಾಸದ ಬಗ್ಗೆ ಹೇಳಿದ. ನನ್ನ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಿಸಿಕೊಂಡ. ನಮಗಿಂತ ಹೆಚ್ಚಿನ ಮಾತಾಡಿದ್ದು ಜೊತೆಗಿದ್ದವರೆ! ಮಾತು ಮುಗಿಯಿತು. ಬಂದವರು ಹೊರಟರು. ಒಂದು ವಾರದೊಳಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದಾರಂತೆ ಅಪ್ಪನ ಹತ್ತಿರ. ಚೆಂಡು ನಮ್ಮ ಅಂಗಳದಲ್ಲಿತ್ತು. ಅಪ್ಪ ಅಮ್ಮನಿಗೆ ಸಂಬಂಧ ಇಷ್ಟವಾಗಿತ್ತು. ನನಗೂ ನಿರಾಕರಿಸಲು ಕಾರಣಗಳಿರಲಿಲ್ಲ. ಆದರೂ ಒಪ್ಪಿಕೊಳ್ಳಲು ಹಿಂಜರಿಕೆ, ಕಾರಣ ಇಷ್ಟೇ, ಅವ ನನ್ನ ಸರಿಯಾಗಿ ನೋಡಿದ್ದನೋ ಇಲ್ಲವೋ ಎಂಬ ಅನುಮಾನ. ಧ್ಯೆರ್ಯ ಮಾಡಿ ಹೂಂ ಎಂದು ಬಿಟ್ಟೆ.

ನಾನು ವಧುಪರೀಕ್ಷೆ ಎದುರಿಸಿದ ಮೊದಲ ಹುಡುಗನೇ ನನ್ನ ಜೀವನಸಂಗಾತಿ. ಈಗಲೂ ಒಮ್ಮೊಮ್ಮೆ ನಾನು ನನ್ನವನನ್ನು ಛೇಡಿಸುವುದುಂಟು, ‘ನೀನು ಖಂಡಿತ ನನ್ನ ಆ ದಿನ ಸರಿಯಾಗಿ ನೋಡಿರಲಿಲ್ಲ,ಒಪ್ಪಿಕೊಂಡಿದ್ಯಾಕೋ’ ಎಂದು.
-ಮೇಧಾ ಭಟ್ ಬೆಂಗಳೂರು

*
ಮದುವೆ ಗಂಡು ನಾನಲ್ಲ ರೀ!
ನಮ್ಮ ಗೆಳೆಯನಿಗೆ ಮದುವೆ ಮಾಡಬೇಕು ಎಂದು ಅವರ ಮನೆಯಲ್ಲಿ ತೀರ್ಮಾನ ಮಾಡಿದ್ದರು. ಗೆಳೆಯನ ಅಕ್ಕ, ಮಾವ, ನಾನು ಮತ್ತು ಸಣ್ಣ ಮಗು ಜೊತೆಗೆ ಮದುವೆ ಗಂಡು ನನ್ನ ಗೆಳೆಯ ಸೇರಿ ಹೆಣ್ಣು ನೋಡಲು ಹೋಗಿದ್ದೆವು. ಸಂಪ್ರದಾಯದ ಪ್ರಕಾರ ಐದು ಜನರು ಹೋಗುವುದು ವಾಡಿಕೆ. ಹೀಗಾಗಿ ಐದು ಜನರು ಸೇರಿ ಹೋಗಿದ್ದೆವು. ಹುಡುಗಿ ನೋಡಲು ಹೇಗಿರಬೇಕು ಎಂದು ಗೆಳೆಯನನ್ನು ದಾರಿ ಉದ್ದಕ್ಕೂ ಕೇಳಿಕೊಂಡು ಹೋಗುತ್ತಿದ್ದೆ. ಅವನ ಸಾವಿರ ಕಲ್ಪನೆ ಸೇರಿಸಿ ಹೇಳಿದ.

ಅವನ ಕಲ್ಪನಾ ಲಹರಿ, ಮಾತುಗಳು ಮುಗಿಯುವ ಮುನ್ನವೇ ಹುಡುಗಿಯ ಊರಿಗೆ ತಲುಪಿದೆವು. ಹುಡುಗಿಯ ಮನೆಗೆ ಹೋದ ತಕ್ಷಣ ಕಾಲು ತೊಳೆಯಲು ನೀರು ಕೊಟ್ಟರು. ಕಾಲು ತೊಳೆದು ಒಳ ನಡೆದೆವು. ನಂತರ ಅಲ್ಪ ಉಪಾಹಾರದ ಜೊತೆಗೆ ಟೀ ಉಪಚಾರ ಮಾಡಿದರು. ಸರಿ, ಹುಡುಗಿ ತೋರಿಸಿ ಅಂತ ಗೆಳೆಯ ಹೇಳಿದ. ಹುಡುಗಿ ಸೀರೆಯನ್ನುಂಟುಕೊಂಡು ಬಂದಳು. ಎಲ್ಲರಿಗೂ ನಮಸ್ಕಾರ ಮಾಡಿದಳು. ಹುಡುಗಿ ತುಂಬಾ ಮೃದು, ತೀರಾ ಸಂಪ್ರದಾಯಸ್ಥರು ಅಂದುಕೊಂಡೆವು.

ಇನ್ನೇನು ಹುಡುಗಿ ಒಳಹೋಗುವ ಮುನ್ನ ‘ನನ್ನ ಮದುವೆ ಆಗುವ ಗಂಡು ನೀವೇ ತಾನೇ’ ಅಂತ ಧೈರ್ಯದಿಂದ ನನ್ನನ್ನೇ ಕೇಳಿಬಿಟ್ಟಳು. ‘ಮದುವೆ ಗಂಡು ನಾನಲ್ಲ ರೀ’ ಅಂತ ಹೇಳಿದೆ. ನನ್ನ ಗೆಳೆಯ ಜೊತೆ ಹಾಗೆ ಬಂದೆ ಅಂದೆ. ಆ ದಿನ ಈಗಲೂ ನೆನೆಸಿಕೊಂಡಾಗ ನಗು ಉಕ್ಕಿ ಬರುತ್ತದೆ.
–ನಾಗಪ್ಪ ಕೆ ಎಂ. ಧಾರವಾಡ

*
ಎದೆಯೊಳಗೆ ಹಸಿರಾಗಿ ನಿಂದುದು ಸುಳ್ಳೆ!

ಹುಡುಗಿ ಸರಕಲ್ಲ. ನೋಡಿದ ಮೇಲೆ ಹುಡುಗಿ ಇಷ್ಟವಾಗದೇ ಇದ್ದರೆ, ಹಾಗೆ ಹೇಳಿ ನಿರಾಕರಿಸುವುದರಿಂದ ಅವಳ ಮನಸ್ಸಿಗೆ ನೋವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಹಾಗಾಗಿ ಯಾವುದಾದರೂ ಹುಡುಗಿಯನ್ನು ಸಹಜವಾಗಿ ನೋಡಿ, ಇಬ್ಬರಿಗೂ ಒಪ್ಪಿಗೆಯಾದರೆ ಮದುವೆಯಾಗುವುದು, ಇಲ್ಲದಿದ್ದರೆ ಇಲ್ಲ ಎಂದುಕೊಂಡು ಹುಡುಗಿ ನೋಡುವ ಕಾರ್ಯಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದೆ.

ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ಹುಡುಗಿಯೊಬ್ಬಳನ್ನು ನೋಡಲು ಹೋಗ ಬೇಕಾಯಿತು. ಸಂದರ್ಭದ ಒತ್ತಾಯದಿಂದ ಹುಡುಗಿ ನೋಡಲು ಹೋಗಿದ್ದೆ. ಹುಡುಗಿ ಟೀ ಜೊತೆ ಸಿಹಿ, ಖಾರ ತಿನಿಸುಗಳನ್ನು ತಂದುಕೊಟ್ಟು ನಮ್ಮ ಎದುರಿಗೆ ಕುಳಿತಿದ್ದ ತನ್ನ ಅಪ್ಪನ ಸೂಚನೆಯಂತೆ ಅವರ ಬಳಿ ಕುಳಿತಳು. ಅವಳನ್ನು ನೋಡಿದೆ. ಚೆನ್ನಾಗಿದ್ದಾಳೆ, ಸ್ವಲ್ಪ ಚಿಕ್ಕವಳು ಎನಿಸಿತು. ಅಲ್ಲಿಂದ ನನ್ನ ಸಂಬಂಧಿಕರ ಮನೆಗೆ ಮತ್ತೆ ಬಂದೆ.

ಅವರು ನನಗೆ ಮಾವ. ನನಗಿಂತ ಚಿಕ್ಕವಳಾದ ಅವರ ಹೆಂಡತಿ, ‘ಅಣ್ಣ, ಆ ಹುಡುಗಿ ನೀವು ಯಾಕೋ ಏನನ್ನೂ ತಿನ್ನಲಿಲ್ಲ ಎನ್ನುತ್ತಿದ್ದಳು. ನಾವು ಹುಡುಗಿಯ ಮನೆಯಿಂದ ಹೊರ ಟಾಗ ಮೇಲಿಂದ ಹುಡುಗಿ ನಿಮ್ಮನ್ನು ನೋಡುತ್ತಿದ್ದಳು, ನೀವು ಅಲ್ಲಿಂದ ಹೊರಟಾಗ ಇನ್ನೂ ಸ್ವಲ್ಪ ಹೊತ್ತು ಅಲ್ಲೇ ನಿಂತಿರಬೇಕಿತ್ತು ಎಂದಳು’ ಎಂದು ಮಾತು ಸೇರಿಸಿದರು.

‘ಕನ್ನೆಯೊಳಗಣ ಸ್ನೇಹ’ವನ್ನು ತಿಳಿಸುವಂತಿದ್ದ ಆ ಮಾತುಗಳು ನನ್ನ ಮನಸ್ಸನ್ನು ಸೆರೆ ಹಿಡಿದುವು. ಆದರೆ, ನಿರಾಕರಣೆಯ ಸಂದೇಶವನ್ನೇ ನೀಡುವ ನನ್ನ ತಾಟಸ್ಥ್ಯದಿಂದ ಕಲದಲಿಲ್ಲ. ನನ್ನ ನಿರ್ಧಾರ ಮಾತ್ರ ಬದಲಾಗಿರಲಿಲ್ಲ.

ಎರಡು ತಿಂಗಳ ನಂತರ ನಾನು ಒಪ್ಪಿಗೆ ಸೂಚಿಸಿ ಮದುವೆ ಪ್ರಸ್ತಾಪ ಮಾಡಿದೆ. ಆದರೆ ಹುಡುಗಿಯ ಮನೆಯವರು ಧಾರವಾಡಕ್ಕೆ ತಮ್ಮ ಮಗಳನ್ನು ಕಳುಹಿಸಲಾರೆವು ಎಂದು ಹೇಳಿ ನನ್ನ ಮದುವೆ ಪ್ರಸ್ತಾಪ ತಳ್ಳಿಹಾಕಿದರು!

ಅವಳು ನನಗೆ ಇಷ್ಟವಾಗಿದ್ದಾಳೆ ಎಂಬುದನ್ನು ಅರಿತ ನನ್ನ ಗುರುಗಳು ಎರಡು ವರ್ಷಗಳ ಬಳಿಕ ತಾವು ಮಧ್ಯ ಪ್ರವೇಶಿಸಿ, ಅವಳೊಡನೆ ನನಗೆ ಮದುವೆ ಮಾಡಿಸಿದರು. ಆಮೇಲೆ ನಮ್ಮ ಮದುವೆಗೆ ಕಾರಣವಾದ ಅವಳದೆಂಬ ಮಾತು ಗಳನ್ನು ನಾನು ಅವಳಿಗೆ ತಿಳಿಸಿದೆ. ಅದಕ್ಕೆ ಅವಳು, ‘ನಾನು ಹಾಗೇನೂ ಹೇಳಿಲ್ಲ. ಅಷ್ಟೇ ಅಲ್ಲ, ನೀವು ಮೊದಲ ಸಲ ನನ್ನನ್ನು ನೋಡಲು ಬಂದಿದ್ದಾಗ ನಾನು ನಿಮ್ಮನ್ನು ನೋಡಿರಲೇ ಇಲ್ಲ’ ಎಂದುಬಿಟ್ಟಳು! ‘ಸಾವಿರ ಸುಳ್ಳನ್ನಾದರೂ ಹೇಳಿ ಮದುವೆ ಮಾಡಿಸು’ ಎಂಬ ಗಾದೆಮಾತು ನನ್ನ ಜೀವನದಲ್ಲಿ ದಿಟವಾಯಿತು.
ಸುಳ್ಳೇ ಆಗಿದ್ದರೂ ಆ ಮಾತುಗಳು ನನ್ನ ಎದೆಯಲ್ಲಿ ಇನ್ನೂ ಹಸಿರಾಗಿಯೇ ಉಳಿದಿವೆ.
-ಮಧುವನ ಶಂಕರ

*
ಐಬು ಇರಬಹುದಾ!

ಆಗ ವರನ ಕಡೆಯವರು ಹುಡುಗಿಯ ತಂದೆ ತಾಯಿಗಳಿಗೆ ವರದಕ್ಷಿಣೆ ಹಾಗೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇಡುತ್ತಿದ್ದ ಕಾಲ. ಸಾಮಾನ್ಯವಾಗಿ ಯುವಜನರಲ್ಲಿ ಏನೇನೋ ಕನಸುಗಳಿರುತ್ತವೆ. ಹಾಗೆಯೇ ನಾನು ನನ್ನ ಜೀವನದಲ್ಲಿ ಆದರ್ಶಮಯಿ ವ್ಯಕ್ತಿಯಾಗಿ ಬದುಕಬೇಕೆಂಬ ಕನಸು ಕಾಣುತ್ತಿದ್ದೆ. ನನ್ನ ಮದುವೆಯ ವಿಚಾರದಲ್ಲೂ ನಾನು ವರದಕ್ಷಿಣೆ, ಚಿನ್ನ ಯಾವುದನ್ನೂ ನಿರೀಕ್ಷಿಸದೇ ತುಂಬಾ ಸರಳವಾಗಿ ಮದುವೆಯಾಗಬೇಕೆಂಬ ಕನಸು ಹೊತ್ತಿದ್ದೆ.

ನನಗೆ ಹೆಣ್ಣು ಕೊಡಲು ಹಲವರು ವರದಕ್ಷಿಣೆ ಹಾಗೂ ಚಿನ್ನ ಎಷ್ಟು ಬೇಕಾದರೂ ಕೊಡುತ್ತೇವೆಂದು ಮುಂದೆ ಬಂದಿದ್ದರು ಅವರಲ್ಲಿ ನಮಗೆ ಹೊಂದಾಣಿಕೆಯಾಗುವಂಥ ಒಂದು ಸಂಬಂಧವನ್ನು ಆಯ್ಕೆ ಮಾಡಿ, ನಾನು ವರದಕ್ಷಿಣೆ ಬೇಡವೆಂದೂ ನಮ್ಮ ತಂದೆ–ತಾಯಿಯವರ ಮೂಲಕ ಅವರಿಗೆ ವರ್ತಮಾನ ಕಳಿಸಿದೆ.

ನಿಗದಿಯಾದ ದಿನ ಹುಡುಗಿಯ ತಂದೆ ತಾಯಿ, ತಮ್ಮ ಮಗಳೊಂದಿಗೆ ನಾಲ್ಕಾರು ಜನ ಅವರ ಹತ್ತಿರದ ಸಂಬಂಧಿಗಳನ್ನು ಕರೆದುಕೊಂಡು ಹುಡುಗಿ ತೋರಿಸಲು ಬಂದರು. ಈ ಕಾಲದಲ್ಲೂ ವರದಕ್ಷಿಣೆ, ಚಿನ್ನ ಏನೂ ಬೇಡವೆಂದೂ ಹಾಗೂ ಸರಳವಾಗಿ ಮದುವೆ ಮಾಡಿಕೊಡಬೇಕೆಂದೂ ಕೇಳುವವರು ಇದ್ದಾರಲ್ಲ ಎಂದು ಅವರಿಗೆ ಏನೋ ಅನುಮಾನ.

ಇವನಿಗೆ ದೈಹಿಕವಾಗಿ ಅಥವಾ ಇನ್ಯಾವುದೋ ರೀತಿಯಲ್ಲಿ ಏನಾದರೂ ಐಬು ಇರಬಹುದಾ ಎಂಬ ಸಂಶಯ ಅವರಲ್ಲಿ ಮನೆ ಮಾಡಿತ್ತು. ಹಾಗಾಗಿ ಹುಡುಗಿಯನ್ನೂ ಸೇರಿದಂತೆ ಅವರೆಲ್ಲರೂ ನಾನು ಓಡಾಡುವಾಗ, ಮಾತನಾಡುವಾಗ ನನ್ನನ್ನು ಮೇಲಿನಿಂದ ಕೆಳಗಿನವರೆಗೆ ಅಚ್ಚರಿಯಿಂದ ನೋಡುತ್ತಲೇ ಇದ್ದರು. ಅದೊಂಥರ ಮುಜುಗರ ತಂದ ದಿನ. ಅವರ ಆ ನೋಟ ಇಂದಿಗೂ ನನ್ನ ಮನಸ್ಸಿನೊಳಗೆ ಅಚ್ಚಳಿಯದೇ ಉಳಿದಿದೆ.
–ಚಾವಲ್ಮನೆ ಸುರೇಶ್ ನಾಯಕ್ ಹಾಲ್ಮುತ್ತೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.