ADVERTISEMENT

ಟೈರ್ ಎಂದರೆ ಬರೇ ಚಕ್ರವಲ್ಲ!

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಚಕ್ರಗಳು ವಾಹನಗಳಲ್ಲಿ ತೀರಾ ನಿರ್ಲಕ್ಷ್ಯಕ್ಕೊಳಗಾಗುವ ಭಾಗ. ಇದರ ನಿರ್ಲಕ್ಷ್ಯದಿಂದ ಕೇವಲ ಚಕ್ರಗಳು ಮಾತ್ರ ಸವೆಯದೇ ಕಾರಿನ ಸಮತೋಲನವೂ ತಪ್ಪಲಿದೆ. ಸ್ಟಿಯರಿಂಗ್ ತನ್ನ ಮೃದುತ್ವವನ್ನು ಕಳೆದುಕೊಳ್ಳಲಿದೆ. ಆಕ್ಸಲರೇಟರ್ ತುಳಿದಾಗ ನೀಡುವ ಆ ಶಕ್ತಿ ಕುಗ್ಗಿಹೋಗುತ್ತದೆ. ಇಂಧನ ಕ್ಷಮತೆ ಇತ್ಯಾದಿ ಸಮಸ್ಯೆಗಳು ತಲೆದೋರಬಹುದು.

ನೆಲದೊಂದಿಗೆ ನೇರ ಸಂಪರ್ಕ ಹೊಂದುವ ಚಕ್ರಗಳು ಹಾಕಿದಷ್ಟು ಭಾರವನ್ನು ಹೊತ್ತು, ರಸ್ತೆಯ ಅಂಕು-ಡೊಂಕುಗಳಲ್ಲಿ ಸುತ್ತಿ, ಹಳ್ಳ ದಿಣ್ಣೆಗಳನ್ನು ಹತ್ತಿಳಿದು, ಕಲ್ಲು ಮುಳ್ಳುಗಳ ದಾರಿಯಲ್ಲಿ ಸಾಗುವ ಟೈರ್‌ಗಳ ಆರೈಕೆ ಮಾಡಬೇಕಾದ್ದು ಅನಿವಾರ್ಯ. ಹೀಗೆ ಚಕ್ರಗಳ ಗುಣಲಕ್ಷಣ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಒಂದಷ್ಟು ಆರೈಕೆ ಹಾಗೂ ಎಚ್ಚರ ವಹಿಸಿದರೆ ಭಾರವನ್ನು ಹೊತ್ತೊಯ್ಯುವ ಅವುಗಳು ದೀರ್ಘ ಕಾಲ ಬಾಳಿಕೆ ಬರಲಿವೆ.

ವೀಲ್ ಅಲೈನ್ಮೆಂಟ್ ಹಾಗೂ ಬ್ಯಾಲೆನ್ಸಿಂಗ್
ಕಾರುಗಳ ಚಕ್ರಗಳು ಕಾಲಕಾಲಕ್ಕೆ ವೀಲ್ ಅಲೈನ್ಮೆಂಟ್ ಹಾಗೂ ಬ್ಯಾಲೆನ್ಸಿಂಗ್ ಮಾಡಿಸುವುದನ್ನು ಮರೆಯಬಾರದು. ಸಾಮಾನ್ಯ ವೇಗದಲ್ಲಿ ಕಾರು ನೇರವಾಗಿ ಚಲಿಸುವಾಗ ಯಾವುದಾದರೂ ಒಂದು ಕಡೆ ಎಳೆಯುತ್ತಿದ್ದಲ್ಲಿ; ಹಿಡಿದ ಸ್ಟಿಯರಿಂಗ್ ಹೆಚ್ಚು ನಡಗುತ್ತಿದ್ದರೆ ಟೈರ್‌ಗಳ ಗ್ರಿಪ್‌ಗಳ ನಡುವೆ ಲಂಬವಾಗಿರುವ ಗೆರೆಗಳಲ್ಲಿ ಅಸಮತೋಲಿತ ಸವೆತದಿಂದಾಗಿ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದರ್ಥ. ಇದನ್ನು ಆರಂಭದಲ್ಲೇ ಸರಿಪಡಿಸದಿದ್ದಲ್ಲಿ ಟೈರ್‌ಗಳ ಸವೆತ ಹೆಚ್ಚಾಗಿ ಬಾಳಿಕೆ ಕಡಿಮೆಯಾಗುತ್ತದೆ. ಜತೆಗೆ ದೀರ್ಘಕಾಲದಲ್ಲಿ ಇದು ಕಾರಿನ ಸಸ್ಪೆನ್ಷನ್ ಮೇಲೂ ಭಾರೀ ಪರಿಣಾಮ ಬೀರಲಿದೆ.

ಕಾರಿನ ಆರ್ಮ್‌ಗಳಲ್ಲಿರುವ ಕ್ಯಾಂಬರ್ ಮತ್ತು ಕ್ಯಾಸ್ಟರ್ ಎಂಬ ಎರಡು ಭಾಗಗಳು ಕಾರಿನ ಸಮತೋಲನ ಕಾಪಾಡುತ್ತವೆ. ಇವುಗಳ ನಡುವಿನ ಅಂತರ ಸಮಪ್ರಮಾಣದಲ್ಲಿರಬೇಕು. ಒಂದೊಮ್ಮೆ ಬಲಭಾಗಕ್ಕೆ 0.5 ಹೆಚ್ಚಿದ್ದಲ್ಲಿ, ಎಡಭಾಗದಲ್ಲೂ 0.5 ಹೆಚ್ಚಿರಬೇಕು. ಒಂದೊಮ್ಮೆ ಎಡ-ಬಲದ ನಡುವೆ ವ್ಯತ್ಯಾಸವಿದ್ದಲ್ಲಿ ಮೆಕ್ಯಾನಿಕ್ ಬಳಿ ಕೇಳಲು ಮರೆಯಬಾರದು. ಕ್ಯಾಸ್ಟರ್‌ಗೂ ಇದೇ ನಿಯಮ ಅನ್ವಯಿಸುತ್ತದೆ.

ಒಂದು ರೂಪಾಯಿ ನಾಣ್ಯ ನಿಯಮ
ಕೆಟ್ಟ ರಸ್ತೆಗಳಿಂದ ಟೈರ್‌ಗಳ ಸವೆತ ಹಾಗೂ ಸವಕಳಿ ಅಸಮಾನ್ಯವಾಗಿರುತ್ತದೆ. ಒಂದು ರೂಪಾಯಿ ನಾಣ್ಯವನ್ನು ಟೈರ್ ಮೇಲಿರುವ ಲಂಬವಾದ ಕುಳಿಯ ನಡುವೆ ಇಡಿ. ನಾಣ್ಯದ ಮುಕ್ಕಾಲು ಭಾಗ ಚಕ್ರದ ಕುಳಿಯೊಳಗೆ ಹಿಡಿಸಿದರೆ ಟೈರ್ ಉತ್ತಮವಾಗಿದೆ ಎಂದರ್ಥ. ಇದು ಪ್ರತಿಯೊಂದು ಕುಳಿಗಳ ನಡುವೆ ಸಮವಾಗಿದ್ದಲ್ಲಿ ಟೈರ್‌ಗಳು ಸಮವಾಗಿ ಸವೆಯುತ್ತಿವೆ ಎಂದರ್ಥ. ಈ ಪ್ರಯೋಗವನ್ನು ಪ್ರತಿ ತಿಂಗಳು ಎಲ್ಲಾ ಚಕ್ರಗಳಿಗೂ ಅನುಸರಿಸುವುದು ಉತ್ತಮ. ಒಂದೊಮ್ಮೆ ಉತ್ತಮ ರಸ್ತೆಯ ಮೇಲೆ ಕಾರು ಚಲಿಸುತ್ತಿದ್ದಲ್ಲಿ ಇದನ್ನು ಮೂರು ತಿಂಗಳಿಗೊಮ್ಮೆ ಮಾಡಿದರೆ ಸಾಕು. ಇದು ವಾಹನಗಳ ಮಾದರಿಯ ಮೇಲೆ ಅವಲಂಭಿಸಿರುತ್ತದೆ. ಏಕೆಂದರೆ 3 ಬಾಕ್ಸ್‌ಗಳುಳ್ಳ ಸೆಡಾನ್ ಕಾರಿನ ಟೈರ್‌ಗಳು ಎಸ್‌ಯುವಿ ಟೈರ್‌ಗಳಿಗಿಂಥ ಹೆಚ್ಚಿನ ಆರೈಕೆ ಬೇಡುತ್ತವೆ.

ಅದಲು ಬದಲು
ಟೈರ್‌ಗಳು ಸಮವಾಗಿ ಸವೆಯುತ್ತಿಲ್ಲವೆಂದಾದಲ್ಲಿ ಅದಕ್ಕೆ ಕಾರಣ ಹಿಂದಿನ ಚಕ್ರಗಳಿಗಿಂತ ಮುಂದಿನ ಚಕ್ರಗಳು ಹೆಚ್ಚು ಒತ್ತಡ ಹೊಂದಿರುವುದು. ತಿರುವುಗಳಲ್ಲಿ ಮುಂದಿನ ಚಕ್ರಗಳ ಮೇಲೆ ಹೆಚ್ಚಿನ ಒತ್ತಡ ಹೆಚ್ಚಿರುತ್ತದೆ. ಹೀಗಾಗಿ ಮೆಕ್ಯಾನಿಕ್ ಸೂಚಿಸಿದಾಗ ಟೈರ್‌ಗಳನ್ನು ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಅದಲು ಬದಲು ಮಾಡುವುದು ಸೂಕ್ತ. ಇದು ಸದಾ ಕ್ರಿಸ್ ಕ್ರಾಸ್ ಮಾದರಿಯಲ್ಲೇ ಇರಬೇಕು. ಅಂದರೆ ಮುಂದಿನ ಬಲ ಚಕ್ರದ ಟೈರ್ ಅನ್ನು ಹಿಂದಿನ ಎಡ ಚಕ್ರದ ಟೈರ್‌ನೊಂದಿಗೆ ಬದಲಾಯಿಸಬೇಕು. ಮತ್ತೊಂದು ಬಗೆ ಹೆಚ್ಚುವರಿ ಚಕ್ರ (ಸ್ಟೆಪ್ನಿ)ವನ್ನೂ ಸೇರಿಕೊಂಡಂತೆ ಗಡಿಯಾರದಂತೆ ವೃತ್ತಾಕಾರದಲ್ಲಿ ಬದಲಿಸಿದಲ್ಲಿ ಕಾರಿನ ಐದೂ ಚಕ್ರಗಳು ಸಮವಾಗಿ ಸವೆಯಲಿವೆ.

ಹೊಸ ಚಕ್ರದ ಬದಲಾವಣೆ
ಒಂದು ರೂಪಾಯಿ ನಾಣ್ಯದ ಪ್ರಯೋಗವನ್ನು ನಡೆಸುತ್ತಿರಿ. ಕುಳಿ ಹೆಚ್ಚು ಆಳ ಇಲ್ಲವೆಂದಾದಲ್ಲಿ ಟೈರ್‌ಗಳು ಸವೆದಿವೆ ಎಂದರ್ಥ. ಬದಲಿಸುವಾಗಿ ನಾಲ್ಕು ಅಥವಾ ಐದು ಟೈರ್‌ಗಳನ್ನು ಬದಲಿಸುವುದು ಸೂಕ್ತ. ಇದು ಯಾವ ರೀತಿ ಅದಲು ಬದಲು ತಂತ್ರಗಳನ್ನು ಬಳಸುತ್ತಿದ್ದೀರಿ ಎನ್ನುವುದನ್ನು ಅವಲಂಬಿಸಿರುತ್ತದೆ.

ಯಾವ ಟೈರಿಗೆ ಎಂಥಾ ಗಾಳಿ?
ಇವಿಷ್ಟು ಟೈರ್‌ಗಳ ಆರೈಕೆಗೆ ಕೆಲ ಸಲಹೆಗಳು. ಅದರಂತೆ ಟೈರ್‌ಗಳು ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಶಾಖ ಎನ್ನುವುದು ಟೈರ್‌ನ ರೂಪವನ್ನೇ ಬದಲಿಸಬಿಡಬಹುದು. ಶಾಖಕ್ಕೆ ತಕ್ಕಂತೆ ಟೈರ್‌ನ ರಬ್ಬರ್ ಹಾಗೂ ಗಾಳಿಯಲ್ಲಿ ಏರಿಳಿತ ಸಾಮಾನ್ಯ. ಬೇಸಿಗೆ ಕಾಲದಲ್ಲಿ ಕಾರು ಚಲಿಸುವಾಗ ಟೈರ್‌ನ ಒತ್ತಡ ಹೆಚ್ಚಾಗುತ್ತದೆ.

ಹಾಗೆಯೇ ನಿಲ್ಲಿಸಿದಾಗ ಅದು ಇಳಿಕೆಯೂ ಆಗುತ್ತದೆ. ಇದು ಹೆಚ್ಚಾದಲ್ಲಿ ಟೈರ್ ಸವೆತ ಹೆಚ್ಚಾಗುತ್ತದೆ. ಜತೆಗೆ ಟೈರ್ ಸಿಡಿದು ಹರಿದುಹೋಗುವ ಅಪಾಯವೂ ಇದೆ.

ಇದಕ್ಕೆ ಪರಿಹಾರವೆಂದರೆ ವಾರಕ್ಕೊಮೆಯಾದರೂ ಟೈರ್‌ನಲ್ಲಿ ಗಾಳಿಯ ಒತ್ತಡವನ್ನು ಪರೀಕ್ಷಿಸಬೇಕು. ಬೇಸಿಗೆಯಲ್ಲಿ ಕಾರು ಹೆಚ್ಚು ಚಲಿಸಿದ ನಂತರ ಟೈರ್‌ಗೆ ಸ್ವಲ್ಪ ತಣ್ಣೀರು ಹಾಕುವುದು ಉತ್ತಮ. ಕಾರನ್ನು ಹೆಚ್ಚಾಗಿ ನೆರಳು ಇರುವ ಪ್ರದೇಶದಲ್ಲಿ ನಿಲ್ಲಿಸಿದರೆ ಟೈರ್‌ಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಟೈರ್‌ಗೆ ಗಾಳಿಯ ಬದಲಾಗಿ ನೈಟ್ರೋಜೆನ್ ತುಂಬಿಸಿದಲ್ಲಿ ಪದೇ ಪದೇ ಟೈರ್‌ನ ಒತ್ತಡವನ್ನು ಪರೀಕ್ಷಿಸುವ ಗೋಜು ಇರದು. ಏಕೆಂದರೆ ಗಾಳಿಯಂತೆ ನೈಟ್ರೋಜೆನ್ ಹಿಗ್ಗದು. ಆದರೆ ನೈಟ್ರೋಜೆನ್ ಹಾಕಿಸಿದ ಮಾತ್ರಕ್ಕೆ ಟೈರ್‌ನ ಆರೈಕೆ ನಿರ್ಲಕ್ಷಿಸಬಾರದು.

ಗಾಳಿ ತುಂಬಿಸಲು ಎಲ್ಲಾ ಟೈರ್/ಟ್ಯೂಬ್‌ಗಳಲ್ಲಿ ಒಂದು ಪಿನ್ ಸಹಿತ ನಾಳವಿರುತ್ತದೆ. ಇದು ಸರಿಯಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಜತೆಗೆ ವಾಲ್ವ್‌ನ ಮುಚ್ಚಳ ಸರಿಯಾಗಿ ಹಾಕಿದೆಯೇ ಎಂಬುದನ್ನೂ ಪರೀಕ್ಷಿಸಬೇಕು. ಒಂದೊಮ್ಮೆ ಮುಚ್ಚಳ ಸಡಿಲವಾಗಿದ್ದಲ್ಲಿ ಗಾಳಿ ಸೋರಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು, ಹೆಚ್ಚುವರಿ ಚಕ್ರದ ಆರೈಕೆ: ಚಲಿಸುವ ನಾಲ್ಕು ಚಕ್ರಗಳ ಬಗ್ಗೆ ತೆಗೆದುಕೊಳ್ಳುವ ಆರೈಕೆಯನ್ನು ಹೆಚ್ಚುವರಿ ಚಕ್ರದ ಕುರಿತೂ ವಹಿಸುವುದು ಬಹಳ ಮುಖ್ಯ. ಏಕೆಂದರೆ ಪಂಚರ್ ಆದ ಸಂದರ್ಭದಲ್ಲಿ ಐದನೇ ಚಕ್ರ ಉತ್ತಮ ಸ್ಥಿತಿಯಲ್ಲಿರಬೇಕಾದ್ದು ಅನಿವಾರ್ಯ.

ವೇಗಕ್ಕೆ ತಕ್ಕ ಟೈರ್
ಕಾರು ಖರೀದಿಸಿದಾಗ ಟೈರ್ ಮೇಲಿರುವ ಟೈರ್‌ನ ವಿವರಣೆಯನ್ನು ಗಮನಿಸಿ.  ಉದಾಹರಣೆಗೆ `205/45 ಆರ್16 83ವಿ~ ಹೀಗೆಂದು ಇರುತ್ತದೆ. ಈ ವಿವರಣೆಯ ಕೊನೆಯಲ್ಲಿ ಇರುವ ಇಂಗ್ಲಿಷ್‌ನ ಅಕ್ಷರ ಟೈರ್‌ನ ಗುಣವನ್ನು ತಿಳಿಸುತ್ತದೆ. ಒಂದೊಮ್ಮೆ ಟೈರ್ ಬದಲಿಸಬೇಕಾದ ಸಂದರ್ಭದಲ್ಲಿ ಕಾರು ತಯಾರಕರು ಸೂಚಿಸಿದ ಮಾದರಿಯ ಟೈರ್ ಅನ್ನೇ ಖರೀದಿಸುವುದು ಸೂಕ್ತ. ಉದಾಹರಣೆಗೆ ಟೈರ್ ವಿವರಣೆಯ ಕೊನೆಯಲ್ಲಿ `ವಿ~ ಎಂದಿದ್ದರೆ ಅಂತ ಟೈರ್ ಗಂಟೆಗೆ 240 ಕಿ.ಮೀ. ವೇಗದಲ್ಲಿ ಉತ್ತಮ ರಸ್ತೆ ಹಿಡಿತ ಹೊಂದಿದೆ ಎಂದರ್ಥ. ಒಂದೊಮ್ಮೆ ಕೊನೆಯ ಅಕ್ಷರ `ಯು~ ಎಂದಿದ್ದರೆ ಪ್ರತಿ ಗಂಟೆಗೆ ಗರಿಷ್ಠ 200 ಕಿ.ಮೀ. ವೇಗ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದರ್ಥ. ಹೀಗಾಗಿ ಕಾರಿನ ಸಾಮರ್ಥ್ಯವನ್ನು ಅರಿತು ಟೈರ್ ಆಯ್ಕೆ ಮಾಡಬೇಕಾಗುತ್ತದೆ.

ಟೈರ್‌ಗಳು ಬಗೆಬಗೆಯ ಟ್ರೆಡ್‌ಗಳು, ಗುಣಮಟ್ಟದ ರಬ್ಬರ್, ಸ್ಟೀಲ್‌ನ ತಂತಿಗಳನ್ನು ಬಳಸಿ ಅವುಗಳ ಕಾರ್ಯಕ್ಷಮತೆಗೆ ತಕ್ಕಂತೆ ತಯಾರಿಸಲಾಗುತ್ತದೆ. ಟೈರ್‌ನ ಸಾಮರ್ಥ್ಯವನ್ನು ಮೀರಿದ ವೇಗ ಗಂಡಾಂತರಕ್ಕೆ ಕಾರಣವಾಗಬಹುದು. ಹೀಗಾಗಿ ಕಾರಿನ ಸಾಮರ್ಥ್ಯ ಅರಿತು ಟೈರ್ ಆಯ್ಕೆ ಮಾಡುವುದು ಸೂಕ್ತ.

ರೇಡಿಯಲ್ ಟೈರ್
ಕಾರು ಖರೀದಿಸುವವರು `ಟೈರ್ ರೇಡಿಯಲ್ಲಾ?~ ಎಂಬ ಪ್ರಶ್ನೆಯನ್ನು ಮುಂದಿಡುವುದು ಸಾಮಾನ್ಯ. ನೈಲಾನ್ ಪೈಲ್ಸ್ ಸರಿಯಾದ ರೀತಿಯಲ್ಲಿ ಜೋಡಿಸಿರುವ ಕ್ರಮವೇ ರೇಡಿಯಲ್ ಟೈರ್‌ನ ಗುಣಲಕ್ಷಣ. ಟೈರ್ 90 ಡಿಗ್ರಿ ಕೋನಕ್ಕೆ ಬಾಗಿದಾಗಲೂ ಸರಿಯಾದ ಅಂತರದಲ್ಲಿ ಜೋಡಿಸಿರುವ ಈ ಪೈಲ್ಸ್ ರಸ್ತೆಯ ಹಿಡಿತವನ್ನು ಸಾಧಿಸುತ್ತವೆ. ಹೀಗಾಗಿ ಪ್ರತಿ ತಿರುವಿನಲ್ಲೂ ಚಕ್ರ ಯಾವುದೇ ರೀತಿಯ ತಡೆ ಎದುರಿಸದು. ಇದರಿಂದ ಇಂಧನ ಕ್ಷಮತೆ ಹೆಚ್ಚಾಗಲಿದೆ. ಜತೆಗೆ ರೇಡಿಯಲ್ ಟೈರ್‌ನಲ್ಲಿರುವ ಪೈಲ್ಸ್ ಸ್ಪ್ರಿಂಗ್‌ನಂತೆ ಕೆಲಸ ಮಾಡುತ್ತವೆ. ಇದರಿಂದ ಹಳ್ಳ ದಿಣ್ಣೆ ರಸ್ತೆಗಳ ಸವಾರಿಯನ್ನು ಆರಾಮವಾಗಿಸಲಿದೆ.

ಸಾಮಾನ್ಯ ಟೈರ್‌ಗಳಂತೆ ರೇಡಿಯಲ್ ಟೈರ್‌ನ ಬದಿಗಳು ಹೆಚ್ಚು ಕಡಿದಾಗಿರದೆ ಬಾಗಿರುತ್ತದೆ. ಇದರಿಂದ ಎಂಥದ್ದೇ ರಸ್ತೆಯಲ್ಲೂ ಸಲೀಸಾಗಿ ಸಾಗುವ ಗುಣ ಹೊಂದಿದೆ. ಸ್ಟೆಬಿಲೈಸರ್ ಬೆಲ್ಟ್‌ಗಳನ್ನು ಟೈರ್‌ನ ಟ್ರಡ್‌ಗಳ ಕೆಳ ಭಾಗದಲ್ಲಿ ಅಳವಡಿಸಿರುವುದರಿಂದ ಚಕ್ರ ಯಾವುದೇ ಬದಿಗೆ ತಿರುಗಿದರೂ ಬಿಗಿ ಹಿಡಿತ ಸಿಗಲಿದೆ. ಈ ಬೆಲ್ಟ್‌ಗಳು ಸ್ಟೀಲ್, ಪಾಲಿಸ್ಟರ್, ಕೆಲ್ವಾರ್‌ನಿಂದ ತಯಾರಿಸಲಾಗಿರುತ್ತದೆ.

ಟ್ಯೂಬ್‌ಲೆಸ್ ಟೈರ್
ಟೈರ್‌ಗಳಲ್ಲೂ ಸಾಕಷ್ಟು ಅನ್ವೇಷಣೆಗಳಾಗಿವೆ. ಸಾಕಷ್ಟು ನಿರ್ಲಕ್ಷ್ಯಕ್ಕೊಳಗಾಗುವ ಟೈರ್‌ಗಳ ಗುಣಮಟ್ಟದ ಜತೆಗೆ ಕಾರಿನಲ್ಲಿ ಕೂತವರ ಆರಾಮ ಹಾಗೂ ಜೇಬಿನ ಹಿತವನ್ನೂ ಕಾಪಾಡುವ ದೃಷ್ಟಿಯಿಂದ ಟ್ಯೂಬ್‌ಲೆಸ್ ಟೈರ್‌ಗಳು ಪರಿಚಯಗೊಂಡವು. ಹೆಸರೇ ಹೇಳುವಂತೆ ಈ ಹಿಂದೆ ಇದ್ದ ಟೈರ್‌ಗಳಂತೆ ಇದರಲ್ಲಿ ಟ್ಯೂಬ್ ಇರುವುದಿಲ್ಲ. ಟ್ಯೂಬ್‌ಗಳ ಬಳಕೆಯಲ್ಲಿ ಸಾಕಷ್ಟು ಲೋಪ ಹಾಗೂ ನಷ್ಟ ಇದ್ದದ್ದರಿಂದ ಟ್ಯೂಬ್ ಇಲ್ಲದ ಟೈರ್‌ನ ಅಭಿವೃದ್ಧಿ ಮಾಡಲಾಯಿತು.

ಟ್ಯೂಬ್ ಇರದ ಟೈರ್‌ನ ತಯಾರಿಕಾ ಗುಣಮಟ್ಟ ಉತ್ತಮವಾಗಿರುವುದೇ ಇದರ ವಿಶಿಷ್ಟ ಗುಣಗಳಲ್ಲೊಂದು. ಈ ಹಿಂದೆ ಇದ್ದ ಟ್ಯೂಬ್ ಇರುವ ಟೈರ್‌ಗಳಲ್ಲಿ, ಟೈರ್ ಹಾಗೂ ಟ್ಯೂಬ್ ನಡುವೆ ಘರ್ಷಣೆ ಏರ್ಪಟ್ಟು ಶಾಖ ಉತ್ಪತ್ತಿಯಾಗುತ್ತಿತ್ತು. ಇದರಿಂದ ಟ್ಯೂಬ್ ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ಟ್ಯೂಬ್ ಇರದ ಟೈರ್‌ಗಳಲ್ಲಿ ಒಳಪದರವೇ ಟ್ಯೂಬ್‌ನಂತೆ ಕೆಲಸ ಮಾಡುತ್ತದೆ. ಇದನ್ನು ಹಾಲೊಬಟ್ಲಿ/ ಕ್ಲೊರೊಬಟ್ಲಿ ಎಂಬ ವಸ್ತುವಿನಿಂದ ತಯಾರಿಸಲಾಗುತ್ತದೆ. ಇದು ಶಾಖ ನಿರೋಧಕ ಹಾಗೆಯೇ ಗಾಳಿಯು ಇಡೀ ಟೈರ್ ತುಂಬಾ ತುಂಬಿಕೊಂಡಿರುವುದರಿಂದ ಚಕ್ರ ರಸ್ತೆಯನ್ನು ಸರಿಯಾಗಿ ಬಿಗಿದಪ್ಪಿ ಚಲಿಸಲಿದೆ. ಇದರಿಂದ ಇಂಧನ ಕ್ಷಮತೆ ಹಾಗೂ ಪ್ರಯಾಣವೂ ಹಾಯಾಗಿರುತ್ತದೆ.

ಟ್ಯೂಬ್ ಇರದ ಟೈರ್ ಅನ್ನು ಟ್ಯೂಬ್ ಇರುವ ಟೈರ್‌ನೊಂದಿಗೆ ಹೋಲಿಸಿದಾಗ, ಕಾರೊಂದು ಪ್ರತಿ ಗಂಟೆಗೆ ನೂರು ಕಿಲೋ ಮೀಟರ್ ವೇಗದಲ್ಲಿ ಚಲಿಸುವಾಗ ಸಾಕಷ್ಟು ಶಾಖ ಉತ್ಪತ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಟೈರ್‌ನಲ್ಲಿರುವ ಟ್ಯೂಬ್ ಶಾಖದಿಂದ ಮೆತ್ತಗಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಒಂದು ಚೂಪಾದ ವಸ್ತು ಚುಚ್ಚಿದರೆ ಟೈರ್ ಸಿಡಿಯುವ ಸಾಧ್ಯತೆ ಹೆಚ್ಚು. ಆದರೆ ಟ್ಯೂಬ್ ಇರದ ಟೈರ್‌ನಲ್ಲಿ ಈ ಸಾಧ್ಯತೆ ಕಡಿಮೆ. ಏಕೆಂದರೆ ಟೈರ್ ಹೊಕ್ಕ ಚೂಪಾದ ವಸ್ತುವಿನಿಂದ ಸಣ್ಣ ಪ್ರಮಾಣದಲ್ಲಿ ಗಾಳಿ ಹೊರಹೋಗಬಹುದೇ ವಿನಃ ಟೈರ್ ಸಿಡಿಯುವ ಸಾಧ್ಯತೆ ಕಡಿಮೆ ಹಾಗೂ ಚಾಲಕನ ನಿಯಂತ್ರಣ ತಪ್ಪದು.

ಟ್ಯೂಬ್‌ಲೆಸ್ ಟೈರ್‌ನ ಕೆಲವೊಂದು ಉಪಯೋಗಗಳು ಹೀಗಿವೆ. ಟ್ಯೂಬ್ ಇರುವ ಟೈರ್‌ಗೆ ಹೋಲಿಸಿದಲ್ಲಿ ಟ್ಯೂಬ್ ಇಲ್ಲದ್ದು ಕಡಿಮೆ ತೂಕವಿರುತ್ತದೆ. ಪಂಕ್ಚರ್ ಆದ ಸಂದರ್ಭದಲ್ಲಿ ಟೈರ್ ಅನ್ನು ರಿಮ್‌ನಿಂದ ತೆಗೆಯುವ ಗೋಜು ಟ್ಯೂಬ್‌ಲೆಸ್ ಟೈರ್‌ನಲ್ಲಿ ಇರದು. ರಿಮ್‌ನೊಂದಿಗೆ ಹೊಂದಿಕೊಂಡಂತೆ ಮೊಳೆ ಅಥವಾ ಟೈರ್‌ಗೆ ಚುಚ್ಚಿಕೊಂಡ ಯಾವುದೇ ರೀತಿಯ ವಸ್ತುವನ್ನು ತೆಗೆಯಬಹುದು. ಟ್ಯೂಬ್‌ಲೆಸ್ ಪಂಕ್ಚರ್ ಸಾಧನ ಇದ್ದಲ್ಲಿ ಪಂಕ್ಚರ್ ಅಂಗಡಿ ಹುಡುಕುವ ಸಮಸ್ಯೆ ಇರದು. ಇಷ್ಟೆಲ್ಲಾ ಉಪಯೋಗವಿರುವ ಟೈರ್ ಭಾರತೀಯ ಮಾರುಕಟ್ಟೆಯಲ್ಲಿ ಇನ್ನೂ ವ್ಯಾಪಕವಾಗಿಲ್ಲ.


ಟೈರ್ ಇದೆ ಎಂದರೆ ಪಂಕ್ಚರ್ ಭಯ ಇದ್ದದ್ದೇ. ಟೈರ್‌ನಲ್ಲಿ ಇಷ್ಟೆಲ್ಲಾ ಆವಿಷ್ಕಾರಗಳು ನಡೆದರೂ ಪಂಕ್ಚರ್ ಆಗದ ಟೈರ್ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಟೈರ್ ಒಳಗೆ ರಾಸಾಯನಿಕ ತುಂಬಿ ಪಂಕ್ಚರ್ ಆಗದಂತೆ ತಡೆಯಬಹುದಾಗಿದೆ.

ಯುರೋಪ್‌ನ ಪ್ರಸಿದ್ಧ ಒಕೊ ಸಮೂಹವು ಇಂಥದ್ದೊಂದು ರಾಸಾಯನಿಕವನ್ನು ಅಭಿವೃದ್ಧಿಪಡಿಸಿದೆ. ಯುರೋಪ್ ಹಾಗೂ ವಿಶ್ವಸಂಸ್ಥೆ ಭದ್ರತಾ ವಾಹನಗಳಿಗೆ ಪಂಕ್ಚರ್ ಆಗದ ರಾಸಾಯನಿಕ ನೀಡುತ್ತಿರುವ ಪ್ರಮುಖ ಸಂಸ್ಥೆ ಇದಾಗಿದೆ. ವಿವಿಧ ಮಾದರಿಯ ವಾಹನಗಳ ಚಕ್ರಗಳ ಮೇಲೆ ಒಕೊ ಸೀಲೆಂಟ್ ಬಳಸಿ ಯಶಸ್ವಿಯಾದ ಬೆನ್ನಲ್ಲೇ ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಒಕೊ ಸೀಲೆಂಟ್ ಲಭ್ಯ.

ಸೀಲೆಂಟ್ ಎಂಬ ದ್ರವವನ್ನು ಟೈರ್ ಅಥವಾ ಟ್ಯೂಬ್ ಒಳಗೆ ಸುರಿಯಲಾಗುತ್ತದೆ. ಪಂಕ್ಚರ್ ಆದ ಸಂದರ್ಭದಲ್ಲಿ ಈ ರಾಸಾಯನಿಕ ತನ್ನಿಂತಾನೆ ಪಂಕ್ಚರ್ ಆದ ಜಾಗವನ್ನು ಸೀಲ್ ಮಾಡಿ ಗಾಳಿ ಹೊರಹೋಗದಂತೆ ತಡೆಯುತ್ತದೆ. ಇದನ್ನು ಒಮ್ಮೆ ಭರಿಸಿದರೆ ಸಾಕು ಟೈರ್ ಬದಲಿಸುವವರೆಗೂ ಪಂಕ್ಚರ್ ಆಗದು. ಒಕೊ ಸಂಸ್ಥೆಯ ಈ ಸೀಲೆಂಟ್ ಪ್ರತಿ ಗಂಟೆಗೆ 50-110 ಕಿ.ಮೀ. ವೇಗದಲ್ಲಿ ಸಾಗುವ ಬೃಹತ್ ಟ್ರಕ್, ಬಸ್, ವ್ಯಾನ್‌ಗಳು ಹಾಗೂ ಅತಿ ವೇಗದಲ್ಲಿ ಚಲಿಸುವ ಮೋಟಾರು ಕಾರು, ಬೈಕ್ ಇತ್ಯಾದಿ ವಾಹನಗಳಿಗೆ ಅವುಗಳ ವೇಗಕ್ಕೆ ಅನುಸಾರವಾಗಿ ಸೀಲೆಂಟ್ ಸಿದ್ಧಪಡಿಸಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಭಾರೀ ಪ್ರಸಿದ್ಧಿಪಡೆದಿರುವ ಒಕೊ, ಭಾರತದಲ್ಲಿ ದರಿಯಾಗಂಜ್‌ನಲ್ಲಿರುವ ಮೆಟಲೈಟ್ ರೋಡ್ ಕೇರ್ ಸಂಸ್ಥೆಯು ಮಾರಾಟ ಮಾಡುತ್ತಿದೆ. (011-23270084/ 23272233)

 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.