ADVERTISEMENT

ತಂತ್ರೋಪನಿಷತ್ತು

ಕ್ರೋಮ್‌; ಉಪಯುಕ್ತ ಮಾಹಿತಿ

ಜೋಮನ್ ವರ್ಗಿಸ್
Published 16 ಮಾರ್ಚ್ 2016, 19:30 IST
Last Updated 16 ಮಾರ್ಚ್ 2016, 19:30 IST

ಇಂಟರ್‌ನೆಟ್‌ ಜಾಲಾಡಲು ಹೆಚ್ಚಾಗಿ ಕ್ರೋಮ್‌ ಬ್ರೌಸರ್‌ ಬಳಸುತ್ತಿದ್ದೀರಿ ಎಂದರೆ ಅದನ್ನು ಜಾಣತನದಿಂದ ಬಳಸುವುದು ಹೇಗೆ ಎನ್ನುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

1. ಅಡ್ರೆಸ್‌ಬಾರ್‌ನಲ್ಲೇ ಲೆಕ್ಕ ಮಾಡಿ: ಪ್ರತಿ ನಿತ್ಯ ಕ್ರೋಮ್ ಬ್ರೌಸರ್‌ ಬಳಸುತ್ತಿರುವವರು ಅಡ್ರೆಸ್‌ ಬಾರ್ ಅನ್ನೇ ಕ್ಯಾಲ್ಕುಲೇಟರ್‌ನಂತೆ ಬಳಸಬಹುದು. ಕ್ರೋಮ್ ಬ್ರೌಸರ್‌ ತೆರೆದು ಸರ್ಚ್‌ ಬಾಕ್ಸ್‌ನಲ್ಲಿ ನಿಮಗೆ ಬೇಕಿರುವ ಅಂಕಿ ಸಂಖ್ಯೆ ನಮೂದಿಸಿದರೆ ಸಾಕು. ತಾನೇ ಲೆಕ್ಕ ಮಾಡಿ ಮುಂದಿಡುತ್ತದೆ. ಉದಾಹರಣೆಗೆ 5X10 ಎಂದು ಟೈಪ್‌ ಮಾಡಿ, ಮರು ಕ್ಷಣವೇ ಉತ್ತರ ಬರುತ್ತದೆ. ಲೆಕ್ಕದ ಜೊತೆ ಬೇರೆ ಬೇರೆ ರೀತಿಯ ಅಳತೆ, ತೂಕ, ವಿವಿಧ ಕರೆನ್ಸಿಗಳ ವಿನಿಮಯ ಮೌಲ್ಯವನ್ನೂ ಕ್ಷಣಾರ್ಧದಲ್ಲಿ ನೋಡಬಹುದು.

* ಹೊಸ ಪಿಸಿಗೆ ಬದಲಾಗಿದ್ದೀರಿ. ಹಳೆಯ ಪಿಸಿಯಲ್ಲಿ ಇಟ್ಟಿದ್ದ ಎಲ್ಲ ಬುಕ್‌ಮಾರ್ಕ್‌, ಸೆಟ್ಟಿಂಗ್ಸ್‌, ಪಾಸ್‌ವರ್ಡ್‌ಗಳು ಬೇಕೇ? ಚಿಂತೆ ಬಿಡಿ. ಜಿ–ಮೇಲ್‌ ಅಕೌಂಟ್‌ ಮೂಲಕ ಕ್ರೋಮ್‌ಗೆ ಸೈನ್‌ ಇನ್‌ ಆಗಿ. ಇದು ನಿಮ್ಮ ಎಲ್ಲ ಬುಕ್‌ಮಾರ್ಕ್‌ಗಳನ್ನು ಕ್ಲೌಡ್‌ನಲ್ಲಿ ಸೇವ್‌ ಮಾಡಿ ಇಟ್ಟುಕೊಳ್ಳುತ್ತದೆ.

ನೀವು ಯಾವ ಪಿಸಿ ಬಳಸುತ್ತೀರೋ, ಅದರಲ್ಲಿ ಕ್ರೋಮ್‌ ಬ್ರೌಸರ್‌ಗೆ ಜಿ–ಮೇಲ್‌ ಮೂಲಕ ಲಾಗಿನ್‌ ಆದರೆ ಎಲ್ಲ  ಹಳೆ ಬುಕ್‌ಮಾರ್ಕ್‌ಗಳು ಲಭಿಸುತ್ತವೆ.  ಆಂಡ್ರಾಯ್ಡ್‌ ಡಿವೈಸ್‌ನಲ್ಲೂ ಕ್ರೋಮ್‌ ಬಳಸುತ್ತಿರುವವರು ಈ ಸೌಲಭ್ಯ ಪಡೆಯಬಹುದು.

* ಯಾವುದಾದರೂ ವೆಬ್‌ಸೈಟ್‌ ಅನ್ನು ಪ್ರತಿ ನಿತ್ಯ ಬಳಸುತ್ತಿದ್ದರೆ ಅಂಥ ತಾಣವನ್ನು ಅಪ್ಲಿಕೇಷನ್‌ ರೀತಿ ಡೆಸ್ಕ್‌ಟಾಪ್‌ಗೆ ಪಿನ್‌ ಮಾಡಬಹುದು. ಕ್ರೋಮ್‌ ಸೆಟ್ಟಿಂಗ್ಸ್‌ಗೆ ಹೋಗಿ, ಮೋರ್‌ ಟೂಲ್ಸ್‌ ಆಯ್ಕೆಯಡಿ ‘ಆ್ಯಡ್‌ ಟು ಡೆಸ್ಕ್‌ಟಾಪ್‌’ ಮೇಲೆ ಕ್ಲಿಕ್‌ ಮಾಡಿದರೆ ಸಾಕು.

ಇಡೀ ವೆಬ್‌ ಪುಟವನ್ನು ಸ್ಕ್ರಾಲ್‌ ಮಾಡುತ್ತಾ ಓದುವುದು ಬೇಸರ ಎನಿಸಿದರೆ ಶಿಫ್ಟ್‌ ಹಿಡಿದು ಸ್ಪೇಸ್‌ಬಾರ್ ಒತ್ತಿ, ಒಮ್ಮೆಲೇ ವೆಬ್‌ಪುಟದ ಮೇಲ್ಭಾಗಕ್ಕೆ, ಮೇಲಿನಿಂದ ಕೆಳಭಾಗಕ್ಕೆ ಹೋಗಬಹುದು. ಅಚಾನಕ್ಕಾಗಿ ಯಾವುದಾದರೂ ಟ್ಯಾಬ್‌ ಕ್ಲೋಸ್ ಆದರೆ ಮರಳಿ ಪಡೆಯಲು Ctrl+Shift+T ಶಾರ್ಟ್‌ಕಟ್‌ ಬಳಸಿ.

* 12ಕ್ಕೂ ಹೆಚ್ಚು ಕೀಬೋರ್ಡ್‌ ಶಾರ್ಟ್‌ಕಟ್‌ಗಳನ್ನು ಕ್ರೋಮ್‌ ಬೆಂಬಲಿಸುತ್ತದೆ. ಹೊಸ ವಿಂಡೋ ತೆರೆಯಲು Ctrl+Shift+N, ರೀಸೆಂಟ್‌ ಡೌನ್‌ಲೋಡ್‌ ನೋಡಲು Ctr*+J, ಕ್ರೋಮ್‌ ಟಾಸ್ಕ್‌ ಮ್ಯಾನೇಜರ್‌ ತೆರೆಯಲು Shift+Esc, ವೆಬ್‌ಪೇಜ್ ಕ್ರ್ಯಾಶ್‌ ಆದರೆ ಮತ್ತೆ ಪುಟ ಲೋಡ್‌ ಆಗಲು Ctrl/Shift+F5 ಶಾರ್ಟ್‌ಕಟ್‌ ಬಳಸಬಹುದು.

*ಬಳಕೆದಾರ ಸ್ನೇಹಿ ಹೋಮ್‌ ಪೇಜ್‌ಗಾಗಿ Momentum ಎನ್ನುವ ಅಪ್ಲಿಕೇಷನ್‌ ಅನ್ನು ಕ್ರೋಮ್‌ ವೆಬ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಟು–ಡು ಲಿಸ್ಟ್‌ ಸಿದ್ಧಪಡಿಸಲು ಇದು ಅತ್ಯುತ್ತಮ ಆ್ಯಪ್‌. ಹಲವು ವಾಲ್‌ಪೇಪರ್‌ಗಳೂ ಇದರಲ್ಲಿವೆ.

* ಗೂಗಲ್‌ನಲ್ಲಿ ಯಾವುದೋ ಚಿತ್ರ ಹುಡುಕುತ್ತಿದ್ದೀರಿ, ಕೊನೆಗೂ ಚಿತ್ರ ಸಿಕ್ಕಿತು. ಆದರೆ, ನಿಮಗೆ ಅದೇ ಮಾದರಿಯ ಇನ್ನಷ್ಟು ಚಿತ್ರಗಳು ಬೇಕು ಎಂದಿದ್ದರೆ,  ಚಿತ್ರದ ಮೇಲೆ ಮೌಸ್‌ ಇರಿಸಿ, ರೈಟ್‌ ಕ್ಲಿಕ್‌ ಮಾಡಿ, ‘ಸರ್ಚ್‌ ಗೂಗಲ್‌ ಫಾರ್ ಇಮೇಜ್‌’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಹೊಸ ವಿಂಡೋ ತೆರೆದುಕೊಳ್ಳುತ್ತದೆ. ನಿಮಗೆ ಬೇಕಿರುವ ಅದೇ ಮಾದರಿಯ ನೂರಾರು ಚಿತ್ರಗಳು ಕಾಣಿಸುತ್ತವೆ. 

* ಕ್ರೋಮ್‌ ಹೆಚ್ಚು ರ್‍ಯಾಮ್‌ ಮೆಮೊರಿ ಬಳಸುವುದನ್ನು ತಡೆಯಲು Shift+Esc ಗುಂಡಿ ಒತ್ತಿ. ಟಾಸ್ಕ್‌ ಮ್ಯಾನೇಜರ್‌ ತೆರೆದುಕೊಳ್ಳುತ್ತದೆ. ಬೇಡದಿರುವ ಪ್ಲಗ್‌ ಇನ್‌, ಎಕ್ಸ್‌ಟೆನ್ಷನ್‌ಗಳನ್ನು ಡಿಲೀಟ್‌ ಮಾಡಿ.

* ಆನ್‌ಲೈನ್‌ನಲ್ಲಿ ಯಾವುದೋ ಪಠ್ಯ ಓದುತ್ತಿರುತ್ತೀರಿ. ತಕ್ಷಣಕ್ಕೆ ಕೆಲವು ಪದದ ಅರ್ಥ ತಿಳಿಯುವುದಿಲ್ಲ. ಚಿಂತೆ ಬಿಡಿ. ಇದಕ್ಕಾಗಿ ವೆಬ್‌ಸ್ಟೋರ್‌ನಿಂದ ಕ್ರೋಮ್‌ ಡಿಕ್ಷನರಿ ಡೌನ್‌ಲೋಡ್‌ ಮಾಡಿಇನ್‌ಸ್ಟಾಲ್‌ ಮಾಡಿಕೊಳ್ಳಿ. ಒಮ್ಮೆ ಇನ್‌ಸ್ಟಾಲ್‌ ಆದರೆ,  ಅರ್ಥವಾಗದ ಪದವನ್ನು ಕರ್ಸರ್‌ನಿಂದ ಸೆಲೆಕ್ಟ್‌ ಮಾಡಿದ ಕೂಡಲೇ ಅದರ ಅರ್ಥ ಪಾಪ್‌ ಅಪ್‌ ವಿಂಡೋದಲ್ಲಿ ಕಾಣುತ್ತದೆ.

* ಕಂಪ್ಯೂಟರ್‌ಗೆ ಮೈಕ್ರೋಫೋನ್‌ ಸಂಪರ್ಕ ಇದ್ದರೆ, ಗೂಗಲ್‌ನ ಅಧಿಕೃತ ವಾಯ್ಸ್‌ ಸರ್ಚ್‌ ಎಕ್ಸ್‌ಟೆನ್ಷನ್ಸ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಇನ್‌ಸ್ಟಾಲ್‌ ಆದ ನಂತರ ಗೂಗಲ್‌ ಸರ್ಚ್‌ ಬಾರ್‌ ತೆರೆದು ಏನು ಹುಡುಕಬೇಕೋ ಅದನ್ನು ಹೇಳಿದರೆ (ಒ.ಕೆ ಗೂಗಲ್‌) ಸಾಕು ಗೂಗಲ್‌ ಹುಡುಕಿಕೊಡುತ್ತದೆ. ಟೈಪಿಸುವ ಅಗತ್ಯವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.