ಹೋಂಡಾ ಕಂಪೆನಿ ಭಾರತದಲ್ಲಿ ಮೋಟಾರ್ ಸೈಕಲ್‌ಗಳನ್ನು ಪರಿಚಯಿಸಿದ್ದೇ ತಡ, ಅತಿ ನಯವಾದ ಎಂಜಿನ್, ಟ್ರಾನ್ಸ್‌ಮಿಷನ್, ರೈಡಿಂಗ್ ಅನುಭವವನ್ನು ಸವಾರ ಪಡೆಯಲು ಆರಂಭಿಸಿದ. ಅದಕ್ಕೂ ಮುಂಚೆ ಹೋಂಡಾ ತನ್ನ ತಂತ್ರಜ್ಞಾನವನ್ನು ಹೀರೊ ಹೋಂಡಾ ಬೈಕ್‌ಗಳ ಮೂಲಕ ತೋರಿಸಿತ್ತು. ಹೀರೊ ಯಶಸ್ಸು ಪಡೆದಿದ್ದೇ ಹೀರೊ ಹೋಂಡಾ ಸಿಡಿ 100 ಹಾಗೂ ಸ್ಪ್ಲೆಂಡರ್ ಬೈಕ್‌ಗಳ ಮೂಲಕ.
ಅದರಲ್ಲಿ ಬಳಕೆ ಆಗಿದ್ದು ಹೋಂಡಾ ತಂತ್ರಜ್ಞಾನ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಹೋಂಡಾ ಸ್ವತಂತ್ರವಾಗಿ ಭಾರತದಲ್ಲಿ ಬೈಕ್ ಹಾಗೂ ಸ್ಕೂಟರ್ ತಯಾರಿಸಲು ಆರಂಭಿಸಿದ ಮೇಲೆ ಹೋಂಡಾದ ಯೂನಿಕಾರ್ನ್ ಉತ್ತಮ ಯಶಸ್ಸು ಪಡೆಯಿತು. ಯೂನಿಕಾರ್ನ್ ಬೈಕ್ ಅನ್ನೇ ಆಗಾಗ ಸುಧಾರಿಸಿ ಮರು ಬಿಡುಗಡೆಯೂ ಆಗುತ್ತಿತ್ತು. ಯೂನಿಕಾರ್ನ್ ಡ್ಯಾಜ್ಲರ್ ಅದಕ್ಕೆ ಉದಾಹರಣೆ. 150 ಸಿಸಿಯ ಆಧುನಿಕ ನೋಟವನ್ನು ಹೊಂದಿದ್ದ ಬೈಕ್ ಅದು.
ಈಗ ಮತ್ತಷ್ಟು ಸುಧಾರಿತ ಬೈಕ್ ಹೊರಬಂದಿದೆ. 150 ಸಿಸಿಯ ಮತ್ತಷ್ಟು ಆಧುನಿಕ ನೋಟದ ಜತೆಗೆ ಸ್ವಲ್ಪ ಗಡಸು ಸವಾರಿಗೆ ಹೇಳಿ ಮಾಡಿಸಿದ ಹೊಸ ಹೋಂಡಾ ಸಿಬಿ ಟ್ರಿಗರ್ ಬೈಕ್ ಪರಿಚಿತಗೊಂಡಿದೆ. ಇದು ತನ್ನದೇ ಆದ ಅಂತರರಾಷ್ಟ್ರೀಯ ಮಾರುಕಟ್ಟೆ ಬೈಕ್ ಆದ ಸಿಬಿ1000 ಆರ್ ಬೈಕ್‌ನ ಕಿರುಮಾದರಿ ಎನ್ನಬಹುದು. ನೋಡಲು ಕೊಂಚ ಹಾಗೆಯೇ ಇದೆ. ಯುವಜನಾಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊರಬಂದಿರುವ ಬೈಕ್ ಇದು. ಆದರೆ ಎಲ್ಲ ವರ್ಗದವರೂ ಬಳಸುವಂತೆ ಇದೆ. ಎಂತಹ ರಸ್ತೆಗಳಿಗೂ ಸರಿಸಾಟಿ ಎಂಬಂಥ ನಿರ್ಮಾಣ ಇದರದ್ದಾಗಿದೆ.
ನೋಟ ಸೂಪರ್
ತಾಂತ್ರಿಕ ಮಾಹಿತಿ ಎಂಜಿನ್: 4 ಸ್ಟ್ರೋಕ್,ಸಿಂಗಲ್‌ಸಿಲಿಂಡರ್, 149.1 ಸಿಸಿ ಬಿಎಚ್‌ಪಿ: 14 (8500 ಆರ್‌ಪಿಎಂ) ಟಾರ್ಕ್: 1.27 ಕೆಜಿಎಂ (6500 ಆರ್‌ಪಿಎಂ) ಗಿಯರ್: 5 ಸ್ಪೀಡ್ ಗಿಯರ್ ಬಾಕ್ಸ್ ಉದ್ದ: 2045 ಎಂಎಂ ಅಗಲ: 757 ಎಂಎಂ ಎತ್ತರ: 1060 ಎಂಎಂ ವ್ಹೀಲ್‌ಬೇಸ್: 1325 ಎಂಎಂ ಬ್ರೇಕ್: ಡಿಸ್ಕ್, 240 ಎಂಎಂ (ಎದುರು), 220 ಎಂಎಂ (ಹಿಂಭಾಗ) |
ಟ್ರಿಗರ್ ಕೊಂಚ ಯಮಹಾದ ಎಫ್ ಜಡ್ ಸರಣಿ ಬೈಕ್‌ಗಳನ್ನು ಹೋಲುತ್ತದೆ ಎಂಬ ಅನುಮಾನ ಹುಟ್ಟಿಸುತ್ತದೆ. ಏಕೆಂದರೆ ಅದರ ಬಿಕನಿ ಫೇರಿಂಗ್‌ಗಳು, ಪೆಟ್ರೋಲ್ ಟ್ಯಾಂಕ್, ಸೀಟಿಂಗ್ ಪೊಸಿಷನ್ ಇದನ್ನು ನೆನಪಿಸುತ್ತವೆ. ಟ್ರಿಗರ್‌ನ ಆಕರ್ಷಣೆ ಅದರ ಹೆಡ್‌ಲ್ಯಾಂಪ್.
ಎದುರಿನ ಬಿಕನಿ ಫೇರಿಂಗ್‌ನ ಜತೆ ಅಂತರ್ದಾನ ಆಗಿರುವ ಟ್ರಿಗರ್‌ನ ಹೆಡ್‌ಲೈಟ್ ನೋಡಲು ಆಕರ್ಷಕವಾಗಿದೆ. ಕೆತ್ತನೆ ಮಾಡಿದಂತಿರುವ ಪೆಟ್ರೋಲ್ ಟ್ಯಾಂಕ್ ಹಾಗೂ ಅದರ ಜತೆಗೆ ಜೋಡಿತಗೊಂಡಿರುವ ಏರ್ ಸ್ಕೂಪ್‌ಗಳು ಆಕರ್ಷಕ ನೋಟವನ್ನು ನೀಡಿವೆ.
ಜತೆಗೆ ಹಿನ್ನೆಲೆ ಬೆಳಕು ಇರುವ ಮೀಟರ್ ಕನ್ಸೋಲ್ ಟ್ರಿಗರ್‌ಗೆ ಇದೆ. ಸ್ಪೀಡೋಮೀಟರ್, ಓಡೋಮೀಟರ್, ಟ್ರಿಪ್‌ಮೀಟರ್, ಟ್ಯಾಕೋಮೀಟರ್‌ಗಳಿವೆ. ಇವುಗಳ ಜತೆಗೆ ಇಂಧನ ಮಟ್ಟ ತೋರಿಸುವ ಮೀಟರ್, ಗಡಿಯಾರಗಳು ಎಲ್‌ಸಿಡಿ ಪರದೆಯ ಮೇಲೆ ಮೂಡಿ ಮಾಡರ್ನ್ ಅನುಭವವನ್ನು ಬೈಕ್‌ಗೆ ನೀಡುತ್ತವೆ.
ಅತ್ಯುತ್ತಮ ಗುಣಮಟ್ಟದ ನಿಯಂತ್ರಣ ಬಟನ್‌ಗಳು ಗಮನ ಸೆಳೆಯುತ್ತವೆ. ಹೆಡ್‌ಲೈಟ್, ಸಿಗ್ನಲ್ ಇಂಡಿಕೇಟರ್, ಪಾಸ್‌ಲೈಟ್ ಬಟನ್‌ಗಳು ಬಳಕೆದಾರ ಸ್ನೇಹಿಯಾಗಿವೆ. ಹ್ಯಾಂಡಲ್‌ನ ಗ್ರಿಪ್ ಸಹ ನಯವಾಗಿ ಕೈಗಳಿಗೆ ಮುದ ನೀಡುತ್ತವೆ. ಅಬ್ಬರ ಅನ್ನಿಸದ ಬೈಕ್‌ನ ಗ್ರಾಫಿಕ್ ಸ್ಟಿಕರ್‌ಗಳು ಉತ್ತಮವಾಗಿವೆ.
ಟ್ರಿಗರ್ ಮಸ್ಕುಲರ್ ದೇಹವನ್ನು ಹೊಂದಿದೆ. 6 ಸ್ಪೋಕ್‌ಗಳ ಅಲಾಯ್ ವ್ಹೀಲ್ ಒಳಗೊಂಡಿದೆ. ಟ್ರಿಗರ್ ಬ್ಲಾಕ್‌ಬ್ಯೂಟಿ. ಕಪ್ಪು ಬಣ್ಣದ ಎಂಜಿನ್ ಹಾಗೂ ಫ್ರೇಂ ಇದಕ್ಕೆ ಕಾರಣವಾಗಿವೆ. ಬೈಕ್‌ನ ಒಟ್ಟಾರೆ ಗುಣಮಟ್ಟ, ಫಿನಿಷ್‌ಗಳನ್ನು ಸಾಧಾರಣ ಎನ್ನಬಹುದು.
ಎಂಜಿನ್ ವೈಖರಿ
ಟ್ರಿಗರ್‌ನಲ್ಲಿ 150 ಸಿಸಿಯ 4 ಸ್ಟ್ರೋಕ್ ಎಂಜಿನ್ ಇದೆ. ಸಿಂಗಲ್ ಸಿಲಿಂಡರ್ ಎಂಜಿನ್ ಇದಾಗಿದ್ದು, ಪೆಟ್ರೋಲ್ ಟ್ಯಾಂಕ್‌ಗೆ ಜೋಡಿತಗೊಂಡಿರುವ ಏರ್ ಸ್ಕೂಪ್‌ಗಳು ಎಂಜಿನ್ ಅನ್ನು ತಂಪಾಗಿಸುತ್ತವೆ. ಯೂನಿಕಾರ್ನ್‌ನಂತೆಯೇ ನಯವಾದ ಗಿಯರ್ ಶಿಫ್ಟ್ ಇಲ್ಲಿದೆ. ಒಟ್ಟು 5 ಗಿಯರ್‌ಗಳಿದ್ದು, 1 ಗಿಯರ್ ಕೆಳಗೆ, ಬಾಕಿ ನಾಲ್ಕು ಗಿಯರ್‌ಗಳು ಮೇಲಕ್ಕೆ ಬಳಕೆಯಾಗುತ್ತವೆ. ಇದರಲ್ಲಿ ಬಳಕೆಯಾಗಿರುವುದು ಚಿಕ್ಕ ಮಾದರಿಯ ಒತ್ತುವ ಹಾಗೂ ಮೇಲಕ್ಕೆತ್ತುವ ಗಿಯರ್ ಲಿವರ್.
ದೊಡ್ಡ ಬೈಕ್‌ಗಳಲ್ಲಿ ಹಿಂದಕ್ಕೆ ಅದುಮುವ ಮಾದರಿಯ ಲಿವರ್ ಇರುತ್ತದೆ. ಸರಾಗವಾದ ಗಿಯರ್ ಇರುವ ಕಾರಣ ನಗರ ಸವಾರಿಗೆ ಹೇಳಿ ಮಾಡಿಸಿದಂತಿದೆ. ಕಾರ್ಬುರೇಟರ್ ಉಳ್ಳ ಬೈಕ್ ಇದಾಗಿದ್ದು, 14 ಬಿಎಚ್‌ಪಿ ಶಕ್ತಿ (8500 ಆರ್‌ಪಿಎಂ) ಇದೆ. 1.27 ಕೆಜಿಎಂ ಟಾರ್ಕ್ (6500 ಆರ್‌ಪಿಎಂ) ಇದೆ. ಹಾಗಾಗಿ ದೂರದ ಪ್ರಯಾಣಕ್ಕೂ ಹೇಳಿ ಮಾಡಿಸಿದಂತೆ ಇರುತ್ತದೆ. ದಿನಬಳಕೆಗೆ ಹೇಳಿ ಮಾಡಿಸಿರುವ ಬೈಕ್ ಇದು.
ಒಟ್ಟು 137 ಕೆ.ಜಿ ತೂಕ ಇರುವ ಈ ಬೈಕ್, ಡೌನ್‌ಟ್ಯೂಬ್ ಕೊಳವೆ ಮಾದರಿಯ ಫ್ರೇಂ ಹೊಂದಿದೆ. ಈ ತೂಕಕ್ಕೆ ಇದು ಸಾಕು. ಹಿಂಭಾಗದಲ್ಲಿ ಚಕ್ರಕ್ಕಾಗಿ ಚೌಕಾಕಾರದ ಸ್ವಿಂಗ್ ಆರ್ಮ್ ಇದೆ. ಎದುರಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮಾನೋ ಶಾಕ್ ಅಬ್ಸಾರ್ಬರ್ ಇದೆ. ಇದು ಸಹ ಯೂನಿಕಾರ್ನ್‌ನ ಮಾದರಿಯೇ ಆಗಿದೆ. ಎತ್ತರದ ನಿಲುವು ಹೊಂದಿರುವ ಟ್ರಿಗರ್, ಸವಾರನಿಗೆ ದೊಡ್ಡ ಬೈಕ್ ಅನುಭವ ನೀಡುತ್ತದೆ. ವಿಶಾಲ ಹ್ಯಾಂಡಲ್‌ಬಾರ್‌ಗಳು ಅನುಕೂಲಕರ ಸವಾರಿಗೆ ಹೇಳಿ ಮಾಡಿಸಿದಂತಿವೆ.
ಹಾಗಾಗಿ ರೈಡಿಂಗ್ ಕ್ವಾಲಿಟಿ ಡೀಸೆಂಟ್ ಎಂದು ಹೇಳಬಹುದು. ಬೈಕ್‌ನ ಎರಡೂ ಚಕ್ರಗಳಿಗೆ ಟ್ಯೂಬ್ ರಹಿತ ಟಯರ್‌ಗಳನ್ನು ನೀಡಲಾಗಿದೆ. ಅತ್ಯುತ್ತಮ ರಸ್ತೆ ಹಿಡಿತ, ವೇಗದ ಸವಾರಿಗೆ ಹೇಳಿ ಮಾಡಿಸಿದಂತೆ ಇವೆ. ಎದುರಲ್ಲಿ 240 ಎಂಎಂ ಹಾಗೂ ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಇದ್ದು, ಅತ್ಯುತ್ತಮ ಸುರಕ್ಷೆ ನೀಡುತ್ತವೆ.
ವಿಶೇಷ ಎಂಬಂತೆ, ಇದರಲ್ಲಿ ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ) ಸೌಲಭ್ಯ ನೀಡಲಾಗಿದೆ. ಅಂದರೆ, ಹಿಂಭಾಗದ ಬ್ರೇಕ್ ಒತ್ತಿದರೆ, ಎದುರಿನ ಬ್ರೇಕ್ ಸಹ ಬಳಕೆಯಾಗುತ್ತದೆ. ಹಾಗೆಂದು ಎದುರಿನ ಬ್ರೇಕ್ ನಿಯಂತ್ರಣ ಇಲ್ಲ ಎಂದಲ್ಲ, ಅದು ಸ್ವತಂತ್ರವಾಗಿ ಬಳಸುವಂತಹ ಸೌಲಭ್ಯ ಇದೆ.
ಹೋಂಡಾ ಟ್ರಿಗರ್ 3 ಅವತರಣಿಕೆಗಳಲ್ಲಿ ಬರುತ್ತದೆ. ಸಾಧಾರಣ ಟ್ರಿಗರ್ ಬೆಲೆ (ಎಕ್ಸ್‌ಶೋರೂಂ) 67,384 ರೂಪಾಯಿಗಳು, ಡಿಎಲ್‌ಎಕ್ಸ್ 70,384 ರೂಪಾಯಿಗಳು, ಟಾಪ್ ಎಂಡ್ 76,884 ರೂಪಾಯಿಗಳು.
ಇದರ ಆಕರ್ಷಕ ಬೆಲೆಯೇ ಬೈಕ್‌ಗೆ ಯಶಸ್ಸನ್ನು ನೀಡುತ್ತದೆ ಎನ್ನಬಹುದು. ದುಬಾರಿ ಯಮಹಾ ಬೈಕ್‌ಗಳಿಗೆ ಸಮಾನವಾದ ಬೈಕ್ ಇದಾಗಿದ್ದು, ಬಜಾಜ್‌ನ ಪಲ್ಸರ್ 150 ಡಿಟಿಎಸ್-ಐ, ಯಮಹಾ ಎಫ್‌ಜಡ್, ಟಿವಿಎಸ್ ಸ್ಪೋರ್ಟಿ ಅಪಾಚೆಗಳನ್ನು ಮೀರಿಸಬಲ್ಲ ಸಾಮರ್ಥ್ಯ ಹೊಂದಿದೆ.
- ನೇಸರ ಕಾಡನಕುಪ್ಪೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.